Advertisement
ಅಂಡಮಾನ್ ಬಂಗಾಲ ಉಪಸಾಗರದ ಮಧ್ಯ ಹಲವು ದ್ವೀಪಗಳ ಮಧ್ಯದಲ್ಲಿ ತುಸು ದೊಡ್ಡದಾದ ದ್ವೀಪ. ಸುತ್ತಲೂ ಹಸಿರು, ನೀಲಿ ಪ್ರತಿಫಲಿಸುವ ಶುಭ್ರ ಸಮುದ್ರ. ಹಿಂದೊಮ್ಮೆ ಬ್ರಿಟಿಶ್ ಆಳ್ವಿಕೆ ಇದ್ದಾಗ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರನ್ನು ಇಲ್ಲಿನ ಸೆಲ್ಯುಲರ್ ಜೈಲಿಗೆ ತಳ್ಳಿ ಹಿಂಸಿಸಲಾಗುತ್ತಿತ್ತು. ಅದರಲ್ಲಿಯೂ ಡೇವಿಡ್ ಬ್ಯಾರಿ ಎಂಬ ಬ್ರಿಟಿಷ್ ಅಧಿಕಾರಿಯಂತೂ ಕ್ರಾಂತಿಕಾರಿಗಳಿಗೆ ಅತ್ಯಂತ ಕಠಿಣ ಸಜೆ ನೀಡುತ್ತಿದ್ದನು. ಆತನೂ ರೋಗಕ್ಕೆ ತುತ್ತಾಗಿ 1920ರಲ್ಲಿ ಕಲ್ಕತ್ತೆಯಲ್ಲಿ ನಿಧನ ಹೊಂದಿದನು. ಸಾವರ್ಕರ್ ಅಂತೂ ಎಷ್ಟೇ ಕಷ್ಟಕೊಟ್ಟರೂ ಧೃತಿಗೆಡುತ್ತಿರಲಿಲ್ಲ. “”ಹಾಡಲು ಬಂದಿದ್ದರೆ ಇಲ್ಲಿ ಬರುವ ಬುಲ್‌ಬುಲ್ ಪಕ್ಷಿಗಳಿಗೆಲ್ಲ ಕ್ರಾಂತಿಗೀತೆ ಕಲಿಸುತ್ತಿದ್ದೆ. ಅವುಗಳಿಗೇನೂ ಬೇಡಿ ಹಾಕಲಾಗುವುದಿಲ್ಲವಲ್ಲ ! ಆ ಗೀತೆಗಳು ಈ ಜೈಲಿನ ಎಲ್ಲೆಡೆ ಇರುವ ನನ್ನ ಸಹ ಸ್ವಾತಂತ್ರ್ಯ ಸೇನಾನಿಗಳನ್ನು ಹುರಿದುಂಬಿಸುತ್ತಿದ್ದವು” ಎನ್ನುತ್ತಿದ್ದರಂತೆ. ಅವರ ಸೋದರ ಗಣೇಶ್ ಸಾವರ್ಕರ್ “ಕರಿನೀರಲ್ಲವಿದು (ಕಾಲಾಪಾನಿ) ಪವಿತ್ರ ತೀರ್ಥವಿದು; ಪ್ರಕೃತಿಯ ಸೊಬಗಿದೆ, ಕ್ರಾಂತಿಕಾರಿಗಳ ಸಾಹಸವಿದೆ’ ಎಂದಿದ್ದರು. ಸುತ್ತಲೂ ಸಾವಿರ ಕಿ. ಮೀ. ಗಟ್ಟಲೆ ಸಮುದ್ರ, ಅಲ್ಲಲ್ಲಿ ಕಾಡುಗಳು ಹಾಗೂ ಜರಾವಾ ಕಾಡುಜನರು. ಹೀಗಾಗಿ, ತಪ್ಪಿಸಿಕೊಳ್ಳಲು ಸಾಧ್ಯವೇ ಇರದಿದ್ದ ಕಠಿಣ ಶಿಕ್ಷೆಯಿಂದಾಗಿಯೂ ಕಾಲಾಪಾನಿ ಶಿಕ್ಷೆ ಎಂಬ ಹೆಸರು ಬಂದಿತ್ತು. ಇನ್ನೊಬ್ಬ ಕ್ರಾಂತಿಕಾರಿ ಉಲ್ಲಾಸಕರ್ ಗಲ್ಲಿಗೇರಿಸಲ್ಪಟ್ಟರು. ಇವತ್ತು ದೇಶ ಸ್ವತಂತ್ರಗೊಂಡಿರುವುದು ಅವರೆಲ್ಲರ ತ್ಯಾಗ-ಬಲಿದಾನಗಳ ಕೊಡುಗೆ.
ರಾಮಾಯಣ ಕಾಲದಲ್ಲಿ ಹನುಮಂತ ಇಲ್ಲಿನ ಮೂಲಕ ಲಂಕೆಗೆ ಹೋಗುವ ಯೋಜನೆ ಹಾಕಿಕೊಂಡಿದ್ದ ಎಂದು ಹೇಳಲಾಗುತ್ತದೆ. ಆಗ ಹಂಡುಮಾನ್ (ಹನುಮಾನ್) ಆಗಿ ಅದೇ ಅಂಡಮಾನ್ ಆಗಿದೆ ಎನ್ನುತ್ತವೆ ಹಲವು ಉಲ್ಲೇಖಗಳು. ಈ ಅಂಡಮಾನ್‌ನ ರಾಜಧಾನಿ ಪೋರ್ಟಬ್ಲೇರ್. ಸೆಲ್ಯುಲರ್ ಜೈಲ್ ಇಲ್ಲೇ ಇರುವುದು. ಇಲ್ಲಿ ಸಂಜೆ ಧ್ವನಿ-ಬೆಳಕು ಕಾರ್ಯಕ್ರಮವಿರುತ್ತದೆ. ಒಂದೆಡೆ ಆಲದ ಮರ, ಹುತಾತ್ಮ ಜ್ಯೋತಿ ಸ್ತಂಭ, ಮತ್ತೂಂದೆಡೆ ಗಲ್ಲುಶಿಕ್ಷೆ ಮನೆ. ಇನ್ನೊಂದೆಡೆ ಎಣ್ಣೆಯ ಗಾಣಕ್ಕೆ ದನದಂತೆ ಕ್ರಾಂತಿಕಾರಿಗಳನ್ನು ಸರಪಣಿಗಳ ಮೂಲಕ ಕಟ್ಟಿ ಎಳೆಯುತ್ತಿರುವ ದೃಶ್ಯ. ಫಲಕಗಳಲ್ಲಿ ಅಲ್ಲಿ ತಂದಿರಿಸಲಾಗಿದ್ದ ಮಹಾನ್ ಸ್ವಾತಂತ್ರ್ಯ ಸೇನಾನಿಗಳ ಹೆಸರುಗಳು. ಜೈಲಿನ ಎರಡನೇ ಮಹಡಿಯ ಕೊನೆಯಲ್ಲಿ ವೀರ ಸಾವರ್ಕರರ ಜೈಲು ಕೊಠಡಿ. ಅವರಿಗೆಲ್ಲಾ ಕಠಿಣ ಕೆಲಸಕೊಟ್ಟು ಹಿಂಸಿಸಲಾಗುತ್ತಿತ್ತು. ಹಲವರು ಗಲ್ಲಿಗೇರಿಸಲ್ಪಟ್ಟರು. ನಂತರ ಸ್ವಾತಂತ್ರ್ಯ ಬಂದು ಎಲ್ಲರೂ ಬಿಡುಗಡೆಗೊಂಡರು. ಆ ನಂತರ ಮೊರಾರ್ಜಿ ದೇಸಾಯಿಯವರು ಪ್ರಧಾನಿಯಾಗಿದ್ದಾಗ ಇದನ್ನು ರಾಷ್ಟ್ರೀಯ ಸ್ಮಾರಕವಾಗಿ ಘೋಷಿಸಲಾಯ್ತು. ನಿಜಕ್ಕೂ ರಾಷ್ಟ್ರಕ್ಕೆ ಸ್ವಾತಂತ್ರ್ಯ ಲಭಿಸಲು ಅವರೆಲ್ಲ ತಮ್ಮ ಜೀವವನ್ನೇ ಧಾರೆಯೆರೆದರು. ಅವರನ್ನು ಎಷ್ಟು ಸ್ಮರಿಸಿದರೂ ಕಡಿಮೆಯೇ. ಪೋರ್ಟ್‌ಬ್ಲೇರ್ ವಿಮಾನ ನಿಲ್ದಾಣಕ್ಕೆ ವೀರ ಸಾವರ್ಕರರ ಹೆಸರನ್ನೇ ಇಡಲಾಗಿದೆ. ಆ ಧ್ವನಿ-ಬೆಳಕಿನ ಕಾರ್ಯಕ್ರಮದ ಒಂದು ಪ್ರಮುಖ ಪಾತ್ರವಾಗಿರುವ ಆಲದ ಮರ 1998ರಲ್ಲಿ ಬುಡಮೇಲಾದದ್ದು, ಪುನಃ ನಿಲ್ಲಿಸಲಾಗಿದ್ದು, ಮತ್ತೆ ದಶಕಗಳ ಕಾಲ ಹಳೆ ನೆನಪುಗಳಿಗೆ ಸಾಕ್ಷಿ ಹೇಳುತ್ತಿದೆ. ಧ್ವನಿ-ಬೆಳಕು ಕಾರ್ಯಕ್ರಮ ಅತ್ಯುತ್ತಮವಾಗಿದ್ದು ಅಂದಿನ ಪರಿಸ್ಥಿತಿಯನ್ನು ಮರು ಸೃಷ್ಟಿಸುವಲ್ಲಿ ಯಶಸ್ವಿಯಾಗಿದೆ. ಕಾರ್ಯಕ್ರಮ ಮುಗಿಯುವಷ್ಟರಲ್ಲಿ ಎಲ್ಲರ ಕಣ್ಣುಗಳು, ಸ್ವಾತಂತ್ರ್ಯ ಸೇನೆಗಳ (ಸೇನಾನಿಗಳ) ಬಲಿದಾನ, ತ್ಯಾಗ ನೆನೆದು ತೇವಗೊಂಡಿರುತ್ತವೆ. ಸುನಾಮಿ ಬಂದದ್ದು ಡಿಸೆಂಬರ್ 26, 2004. ಇದು ಅಂಡಮಾನ್-ನಿಕೋಬಾರ್ ದ್ವೀಪದ ಸಮೂಹದ ಮಟ್ಟಿಗೆ ಅತ್ಯಂತ ಕರಾಳ ದಿನ. ಹಾಗೆ ನೋಡಿದರೆ ಪಕ್ಕದ ಇಂಡೋನೇಶ್ಯಾದಲ್ಲಿ ಸಾವು-ನೋವಿನ ಪ್ರಮಾಣ ಇನ್ನೂ ಹೆಚ್ಚು. ಆ ಸಂದರ್ಭದಲ್ಲಿಯೂ ನನ್ನ ಹಲವು ಸಹೋದ್ಯೋಗಿ ಮಿತ್ರರು ಆ ಪ್ರವಾಹ, ಪ್ರಕೃತಿಯ ಮುನಿಸಿಗೆ ಸಾಕ್ಷಿಯಾಗಿದ್ದರು.
Related Articles
Advertisement