ಅಂಡಮಾನ್‌ನ ಮುಖ್ಯ ಕೇಂದ್ರ ಪೋರ್ಟ್‌ಬ್ಲೇರ್‌ನಿಂದ ಚಿಡಿಯಾ ಟಾಪು 25 ಕಿ.ಮೀ. ದೂರದಲ್ಲಿದೆ. ಈ ಸ್ಥಳ ತಲುಪಲು ಸುಮಾರು 45 ನಿಮಿಷ ಬೇಕು. ಇಲ್ಲಿನ ಬೀಚ್ ಅರ್ಧ ಚಂದ್ರಾಕೃತಿಯಲ್ಲಿದ್ದು, ಸುತ್ತಲೂ ಭಾರೀ ಗಾತ್ರದ ವೃಕ್ಷಗಳು ಆವರಿಸಿವೆ.
ರೂತ್ ಐಲ್ಯಾಂಡಿನ ಶಿಖರಕ್ಕೆ ದಿನದ ಕಡೆಯ ಮುತ್ತನ್ನಿಟ್ಟ ಸೂರ್ಯ ನಭದಲ್ಲಿ ಬಣ್ಣದೋಕಳಿಯನ್ನು ಬಳಿದಿದ್ದ. ಹಿಂದೂ ಮಹಾಸಾಗರವು ರವಿಯ ಪ್ರಭೆಯಿಂದ ಹೊರಬರಲಾರದೆ, ನೀಲಿ ಸೀರೆಯನ್ನು ಕಳಚಿ ಬಂಗಾರದ ಸೀರೆಯನ್ನು ಉಟ್ಟಂತೆ ಕಾಣಿಸುತ್ತಿತ್ತು. ಹಿನ್ನೆಲೆಯಲ್ಲಿ ಖಗಗಳ ಸುಶ್ರಾವ್ಯ ಕಲರವ ಜೊತೆ ಸಾಗರದ ಅಲೆಗಳ ಲಹರಿ ಕಿವಿಗಳಿಗೆ ಮಾರ್ದನಿಸುತ್ತಿತ್ತು. ಇದು ಭೂಲೋಕವೋ, ಗಾಂಧರ್ವ ಲೋಕವೋ ಎಂಬ ಅನುಮಾನ ನಮ್ಮ ಕಂಗಳಿಗೆ. ಹೀಗೆ ಭೂಮಿ, ಭಾನು ಮತ್ತು ಸಾಗರಗಳ ನಡುವೆ ಸೂರ್ಯ ತನ್ನ ನಿತ್ಯ ಕಾಯಕದಲ್ಲಿ ಸೃಷ್ಟಿಸಿದ ಅದ್ಭುತ ಸಮಾಗಮದ ತಾಣವೇ “ಚಿಡಿಯಾ ಟಾಪು’!
ಅಂಡಮಾನ್‌ನ ಮುಖ್ಯ ಕೇಂದ್ರ ಪೋರ್ಟ್‌ಬ್ಲೇರ್‌ನಿಂದ ಚಿಡಿಯಾ ಟಾಪು 25 ಕಿ.ಮೀ. ದೂರದಲ್ಲಿದೆ. ಈ ಸ್ಥಳ ತಲುಪಲು ಸುಮಾರು 45 ನಿಮಿಷ ಬೇಕು. ಇನ್ನು ಚಿಡಿಯಾ ತಲುಪಲು ಹೋಗುವ ಮಾರ್ಗವಂತೂ ಚಿಡಿಯಾ ಟಾಪುವಿನ ಸೂರ್ಯಸ್ತದಂತೆಯೇ ಅವರ್ಣನೀಯ. ಚಿಡಿಯ ಟಾಪು ಹೋಗುವ ಮಾರ್ಗ ಮಧ್ಯದಲ್ಲಿ ಹಲವು ಪರ್ವತ ಶ್ರೇಣಿಗಳು ಸಿಗುತ್ತವೆ. ಸಂಚಾರ ದಟ್ಟಣೆಯಿಲ್ಲದ ರಸ್ತೆಗಳು ಬಹಳ ಶುಚಿಯಾಗಿಯೂ ಇವೆ. ಪೌರ ಕಾರ್ಮಿಕರ ನೆರವಿಲ್ಲದೆ ಸ್ವತ್ಛವಾಗಿರುವ ರಸ್ತೆಗಳು ಇವು ಎಂಬುದು ವಿಶೇಷ. ರಸ್ತೆಗೆ ಚಾಮರ ಹೊದಿಸಿದಂತೆ ತಂಗಾಳಿ ಬೀಸುತ್ತಾ ಬಾನನ್ನು ಚುಂಬಿಸಲು ಪಣ ತೊಟ್ಟಂತಿರುವ ಮರಗಳು, ಪಯಣಿಗರ ಆಯಾಸವನ್ನು ತಣಿಸುತ್ತಿದ್ದವು. ದಾರಿಯುದ್ದಕ್ಕೂ ಸಣ್ಣ ನೀರಿನ ತೊರೆಗಳು, ಮುಖಾರವಿಂದಕ್ಕೆ ಮುತ್ತಿಡುವ ತುಂತುರು ಮಳೆ ಹನಿಯ ಸಿಂಚನ ಮನಸ್ಸಿನಲ್ಲಿ ಆಹ್ಲಾದತೆಯನ್ನು ತುಂಬಿದ್ದವು. ಈ ಸ್ವರ್ಗ ಸೃಷ್ಟಿಯ ರಸ್ತೆಗಳಲ್ಲಿ ನಾಲ್ಕು ಚಕ್ರದ ವಾಹನದಲ್ಲಿ ಸವಾರಿ ಮಾಡುವ ಅನುಭವ ಎಂಥವರಿಗೂ ಅನುಪಮ ಅನುಭವ ನೀಡುವುದರಲ್ಲಿ ಅನುಮಾನವೇ ಇಲ್ಲ. ಈ ಅದ್ಭುತ ಪಯಣವನ್ನು ಅನುಭವಿಸುತ್ತಲೇ ಚಿಡಿಯಾ ಟಾಪುವನ್ನು ತಲುಪಬಹುದು.
ಇಲ್ಲಿನ ಬೀಚ್ ಅರ್ಧ ಚಂದ್ರಾಕೃತಿಯಲ್ಲಿದ್ದು, ಸುತ್ತಲೂ ಭಾರೀ ಗಾತ್ರದ ವೃಕ್ಷಗಳು ಆವರಿಸಿವೆ. 2004ರ ಸುನಾಮಿಗಿಂತ ಮುಂಚೆ ಈ ಸ್ಥಳದಲ್ಲಿ ವೈವಿಧ್ಯಮಯ ಪಕ್ಷಿ ಸಂಕುಲ ನೆಲೆಸಿತ್ತು. ಹಾಗಾಗಿ ಈ ಸ್ಥಳಕ್ಕೆ “ಚಿಡಿಯಾ ಟಾಪು’ ಎಂಬ ಹೆಸರು ಬಂದಿದೆ. ಸುನಾಮಿಯ ನಂತರ ಸಾಕಷ್ಟು ಪ್ರಭೇದಗಳು ನಾಶವಾದವು. ಕೆಲವು ವಲಸೆ ಹೋದವು. ಮತ್ತೆ ಕೆಲವು ಇಲ್ಲಿಯೇ ನೆಲಸಿವೆ. ಇಂದಿಗೂ ಸುಮಾರು 50ಕ್ಕೂ ಹೆಚ್ಚು ಪ್ರಭೇದದ ಪಕ್ಷಿ ಸಂಕುಲ ಇಲ್ಲಿ ಕಾಣಬಹುದು. ಸುನಾಮಿಯ ಸಂಕೇತವಾಗಿ, ಅಂದು ನೆಲಕ್ಕುರುಳಿದ ಭಾರೀ ಗಾತ್ರದ ವೃಕ್ಷಗಳನ್ನು ನಾವು ಇಂದಿಗೂ ಕಾಣಬಹುದು. ಬಹುತೇಕ ಪ್ರವಾಸಿಗರು ಈ ವೃಕ್ಷಗಳ ಮೇಲೆ ನಿಂತು ಕ್ಯಾಮೆರಾ ಕ್ಲಿಕ್ಕಿಸುವುದರಲ್ಲಿ ತಲ್ಲೀನರಾಗುತ್ತಾರೆ. ಮತ್ತೆ ಕೆಲವರು ಪಕ್ಷಿ ವೀಕ್ಷಣೆ, ಸಸ್ಯ ವೀಕ್ಷಣೆ, ಹವಳ ಹಾಗೂ ಕಪ್ಪೆಚಿಪ್ಪು ಸಂಗ್ರಹದಲ್ಲಿ ತೊಡಗುತ್ತಾರೆ. ಇಲ್ಲಿನ ಬೆಟ್ಟದ ಮೇಲೆ ಸರ್ಕಾರಿ ವಿಶ್ರಾಂತಿ ಗೃಹವಿದೆ. ಇಲ್ಲಿಂದ ಕಾಣುವ ಚಿಡಿಯಾ ಟಾಪು ಸುತ್ತಮುತ್ತಲಿನ ದ್ವೀಪಗಳ ದೃಶ್ಯ ನಯನ ಮನೋಹರ. ಬೀಚಿನಲ್ಲಿ “ಮೊಸಳೆಗಳು ಇವೆ ಎಚ್ಚರಿಕೆ’ ಎಂಬ ಬೋರ್ಡ್ ಬಹಳ ಗಮನ ಸೆಳೆಯಿತು. ಬೋರ್ಡನ್ನು ನೋಡಿದ ಮೇಲೆ ನೀರಿಗೆ ಇಳಿಯೋದಿಕ್ಕೆ ನನಗೆ ಹೆದರಿಕೆ ಆಯಿತು. ಆದರೆ, ಅನೇಕರು ಇದಕ್ಕೆ ಸೊಪ್ಪು ಹಾಕದೆ ಧೈರ್ಯ ಮಾಡಿ ನೀರಿಗಿಳಿದು ಆಟ ಆಡುತ್ತಾರೆ. ಇದನ್ನು ನೋಡಿ ನನಗೆ ಇಲ್ಲಿನ ಮೊಸಳೆಗಳು ಸಸ್ಯಾಹಾರಿಗಳೇನೋ ಎಂಬ ಅನುಮಾನ ಹುಟ್ಟಿಸಿದವು.
ಸೂರ್ಯಾಸ್ತವಾಗುತ್ತಿದ್ದಂತೆ ಪ್ರವಾಸಿಗರನ್ನು ಸಿಬ್ಬಂದಿ “ಟೈಮ್ ಆಯ್ತು, ಇಲ್ಲಿಂದ ಹೊರಡಿ’ ಎಂದು ಕಳುಹಿಸುತ್ತಾರೆ. ಹಾಗಾಗಿ, ಸೂರ್ಯ ನಿದ್ರೆಗೆ ಜಾರಿದಂತೆ ನಾವೂ ಅಲ್ಲಿಂದ ನಿಧಾನವಾಗಿ ಪೋರ್ಟ್‌ಬ್ಲೇರ್ ಹಾದಿ ಹಿಡಿದೆವು. ಸೂರ್ಯಾಸ್ತದ ಮಾಯೆಯ ಅದ್ಭುತ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಒಂದು ತಾಸು ಮುಂಚೆಯೇ ಚಿಡಿಯಾ ಟಾಪುವನ್ನು ತಲುಪಬೇಕು. ಪೋರ್ಟ್‌ಬ್ಲೇರ್‌ನಿಂದ ಯಾವುದೇ ಖಾಸಗಿ ವಾಹನ ಮಾಡಿಕೊಂಡು ಇಲ್ಲವೇ ಇಲ್ಲಿನ ಸಾರಿಗೆ ಬಳಸಿ ಚಿಡಿಯಾ ಟಾಪು ತಲುಪಬಹುದು.ಇಲ್ಲಿಗೆ ಬರುವವರು ಹೆಚ್ಚಾಗಿ ಪ್ರವಾಸಿಗರೇ ಆಗಿರುವುದರಿಂದ ಖಾಸಗಿ ಕಾರ್ ಇಲ್ಲವೇ ಬೈಕ್ ಬಾಡಿಗೆ ಪಡೆಯುವುದು ಉತ್ತಮ. ಊಟಕ್ಕೆ ಇಲ್ಲಿ ಹೇಳಿಕೊಳ್ಳುವಂಥ ವ್ಯವಸ್ಥೆಯಿಲ್ಲ. ಚುರುಮುರಿ ಇಲ್ಲವೇ ಐಸ್‌ಕ್ರೀಮ್ ಮಾರುವರು ಸಿಗುತ್ತಾರೆ. ಒಂದಿಷ್ಟು ಲಘು ಉಪಹಾರ, ಬಿಸ್ಕತ್ತು ಹಾಗು ಹಣ್ಣುಗಳನ್ನು ತೆಗೆದುಕೊಂಡು ಹೋಗುವುದು ಉತ್ತಮ.
ಇನ್ನು ಇಲ್ಲಿ ವಸತಿಗೆ ಯಾವುದೇ ಅವಕಾಶವಿಲ್ಲ. ಸೂರ್ಯಾಸ್ತವಾಗುತ್ತಿದ್ದಂತೆ ಬೀಚ್ ಅನ್ನು ಖಾಲಿ ಮಾಡಿಸುವ ಸಿಬ್ಬಂದಿ, ಮುಖ್ಯದ್ವಾರದ ಬಾಗಿಲು ಹಾಕುತ್ತಾರೆ. ಹಾಗಾಗಿ ವಸತಿಗಾಗಿ ಪೋರ್ಟ್‌ಬ್ಲೇರ್‌ನ ಮೊರೆ ಹೋಗುವುದು ಅನಿವಾರ್ಯ. ಚಿಡಿಯ ಟಾಪು ಬಯೋಲಾಜಿಕಲ… ಪಾರ್ಕ್, ಮುಂಡ ಪಹರ್ ಮತ್ತು ಹತ್ತಿರದಲ್ಲಿ ಸೈಲ್ವನ್ ಬೀಚ್ ಸಹ ಇದೆ. ಇವುಗಳನ್ನೂ ನೋಡಿ ಆನಂದಿಸಬಹುದು.
– ಮಧುಚಂದ್ರ ಹೆಚ್.ಬಿ., ಭದ್ರಾವತಿ