Advertisement

ಮುಗಿಬಿದ್ದು ಮಾವು ಕೊಂಡರು; ಹಲಸಿನ ಬೆಲೆ ಕೇಳಿ ಬೆಚ್ಚಿ ಬಿದ್ದರು 

12:43 PM May 08, 2017 | Team Udayavani |

ಬೆಂಗಳೂರು: ನಗರದ ಲಾಲ್‌ಬಾಗ್‌ನಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಮಾವು ಹಲಸು ಮೇಳಕ್ಕೆ ರಜಾ ದಿನವಾದ ಭಾನುವಾರ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಾರಾಂತ್ಯದ ಶನಿವಾರ ಮತ್ತು ಭಾನುವಾರಧಿದಂದು ಒಟ್ಟು 100 ಟನ್‌ಗೂ ಅಧಿಕ ಮಾವು ಮಾರಾಟವಾಗಿದ್ದು, ಸುಮಾರು 75ರಿಂದ 80 ಲಕ್ಷ ರೂ. ವಹಿವಾಟು ನಡೆದಿದೆ.

Advertisement

ಅಲ್ಫಾನ್ಸ್‌, ರಸಪೂರಿ ಮತ್ತು ಸಕ್ಕರೆಗುತ್ತಿ ಹಣ್ಣು ಅತಿ ಹೆಚ್ಚು ಮಾರಾಟವಾಗಿದೆ. ಉಳಿದಂತೆ ದಶೇರಿ, ಸಿಂಧೂರ, ಮಲ್ಲಿಕಾ, ಮಲಗೋವಾ, ಕೇಸರ್‌, ನೀಲಂ ಮಾರಾಟವಾಗಿದೆ. ಲಾಲ್‌ಬಾಗ್‌ ವೀಕ್ಷಣೆಗೆಂದು ಬಂದಿದ್ದ ಪ್ರವಾಸಿಗರು ಮತ್ತು ಸ್ಥಳೀಯ ನಿವಾಸಿಗಳು ಶನಿವಾರ ಮತ್ತು ಭಾನುವಾರ ಮಾವು ಖರೀದಿಗೆ ಮುಂದಾಗಿದ್ದರಿಂದ ವಹಿವಾಟು ನಡೆದಿದೆ. 

“ಕಳೆದ ಮೂರು ವರ್ಷಗಳಿಂದ ಲಾಲ್‌ಬಾಗ್‌ನಲ್ಲಿ ಮಾವು ಮೇಳಕ್ಕೆ ಭೇಟಿ ಕೊಡುತ್ತಿದ್ದೇನೆ. ಅತ್ಯುತ್ತಮವಾದ ರಾಸಾಯನಿಕ ಮುಕ್ತ ಮಾವು ಇಲ್ಲಿ ಸಿಗುತ್ತಿದೆ. ಆದರೆ ಕೆಲವು ಹಣ್ಣುಗಳಲ್ಲಿ ಇಥಿಲಿನ್‌ ಹೆಚ್ಚಾಗಿ ಬಳಕೆ ಮಾಡುತ್ತಿದ್ದಾರೆ ಅನ್ನಿಸುತ್ತಿದ್ದು, ಒಂದೆರಡು ದಿನಗಳಾಗುತ್ತಿದ್ದಂತೆ ತಾಜಾ ಹಣ್ಣಿನಂತೆ ಕಾಣುವ ಹಣ್ಣುಗಳು ಸುಕ್ಕುಗಟ್ಟುತ್ತಿವೆ. ಆದ್ದರಿಂದ ಸ್ವಲ್ಪ ಇಥಿಲಿನ್‌ ಬಳಕೆಯನ್ನು ರೈತರು ಕಡಿಮೆ ಮಾಡಬೇಕು,’ ಎನ್ನುತ್ತಾರೆ ಮೇಳಕ್ಕೆ ಭೇಟಿ ನೀಡಿದ್ದ ನೇತ್ರಾ ರಾಮಚಂದ್ರ. 

ದುಬಾರಿ ಹಲಸು
ಹಲಸಿನ ಹಣ್ಣು ಮಾರಾಟಕ್ಕೆಂದೇ ಮೇಳದಲ್ಲಿ ಸುಮಾರು 15 ಮಳಿಗೆಗಳನ್ನು ಮಾವು ಅಭಿವೃದ್ಧಿ ನಿಗಮ ಉಚಿತವಾಗಿ ಹಾಕಿಕೊಟ್ಟಿದೆ. ಇಲ್ಲಿ ಲಾಲ್‌ಬಾಗ್‌ ಮಧುರ, ಸ್ವರ್ಣ ಹಲಸು, ರುದ್ರಾಕ್ಷಿ ಹಲಸು, ಬೈರ ಚಂದ್ರ, ತೇನವರಿಕ, ಏಕದಶಿ ಹಲಸು ಇತ್ಯಾದಿ ತಳಿಯ ಹಲಸುಗಳ ಮಾರಾಟದ ವ್ಯವಸ್ಥೆ ಮಾಡಲಾಗಿದೆ. ಇದುವರೆಗೂ ಸುಮಾರು 3 ಟನ್‌ಗೂ ಅಧಿಕ ಹಲಸಿನ ಹಣ್ಣುಗಳು ಮಾರಾಟವಾಗಿದೆ.

ಇಡೀ ಹಣ್ಣು ಖರೀದಿ ಮಾಡುವವರ ಸಂಖ್ಯೆ ತುಂಬಾ ಕಡಿಮೆಯಿದ್ದು, ರೈತರು ಸ್ಥಳದಲ್ಲಿಯೇ ಹಣ್ಣುಗಳನ್ನು ಕತ್ತರಿಸಿ, 12 ಹಣ್ಣಿನ ತೊಳೆಗಳಿಗೆ 30ರೂ.ನಂತೆ ಮಾರಾಟ ಮಾಡುತ್ತಿದ್ದಾರೆ. ಯಾವುದೇ ತಳಿಯ ಹಣ್ಣಿನ ತೊಳೆಗೂ ಒಂದೇ ರೀತಿಯ ಬೆಲೆ ನಿಗದಿ ಮಾಡಿದ್ದಾರೆ.  ಸಣ್ಣ ಗಾತ್ರದ ಹಲಸಿಗೂ ಸುಮಾರು 150ರಿಂದ 180 ರೂ.ಬೆಲೆಗೆ ರೈತರು ಮಾರಾಟ ಮಾಡುತ್ತಿದ್ದಾರೆ.

Advertisement

ಇದರಿಂದ ಗ್ರಾಹಕರು ಇಡೀ ಒಂದು ಹಲಸು ಖರೀದಿಸಬೇಕು ಎಂಬ ಮನಸ್ಸಿದ್ದರೂ, ಬೆಲೆ ದುಬಾರಿಯಾಯಿತು ಎಂದು ಕೇವಲ ಹಲಸಿನ ಹಣ್ಣಿನ ತೊಳೆಗಳನ್ನು ಕೊಂಡು ತಿನ್ನುತ್ತಿದ್ದಾರೆ. ಮಾವು ಅಭಿವೃದ್ಧಿ ನಿಗಮ ಮಾವಿಗೆ ಬೆಲೆ ನಿಗದಿ ಮಾಡಿದಂತೆ ಹಲಸಿಗೂ ದರ ನಿಗಧಿಪಡಿಸಬೇಕಿತ್ತು. ಸಣ್ಣ, ಮಧ್ಯಮ ಮತ್ತು ದೊಡ್ಡ ಹಣ್ಣಿಗೆ ಇಂತಿಷ್ಟು ಎಂದು ತಳಿಗೆ ಅನು ಗುಣವಾಗಿ ಬೆಲೆ ನಿಗದಿ ಮಾಡಿದ್ದರೆ ಇನ್ನೂ ಹೆಚ್ಚು ವ್ಯಾಪಾರ ಆಗುತ್ತಿತ್ತು ಎಂಬುದು ಮೇಳಕ್ಕೆ ಬಂದಿದ್ದ ಹಲವು ಗ್ರಾಹಕರ ಅಭಿಪ್ರಾಯ.

ಹೊರಗಡೆ 5ರಿಂದ 6 ತೊಳೆ ಹಲಸಿನ ಹಣ್ಣು 10 ರೂ.ನಂತೆ ಸಿಗುತ್ತದೆ. ಆದರೆ ಮೇಳದಲ್ಲಿ ಹಲಸು ದುಬಾರಿ ಯಾಗಿದೆ. ಒಂದು ಪೂರ್ತಿ ಹಣ್ಣು ಖರೀದಿ ಮಾಡಬೇಕು ಎಂದುಕೊಂಡರೂ ಬೆಲೆ ಕೇಳಿ ಆಶ್ಚರ್ಯವಾಯ್ತು. ಇಷ್ಟು ಬೆಲೆಗೆ ಖರೀದಿ ಮಾಡಲು ಇಲ್ಲಿಗೆ ಬರಬೇಕಿರಲಿಲ್ಲ. 
-ಮನೋಹರ್‌ದಾಸ್‌, ಗ್ರಾಹಕ 

ಮೇ.6ರಿಂದ ರಾಮನಗರ ಮತ್ತು ಮಂಡ್ಯದಲ್ಲೂ ಮಾವು ಮತ್ತು ಹಲಸಿನ ಮೇಳ ಆರಂಭವಾಗಿದ್ದು, ರಾಮನಗರದಲ್ಲಿ 10 ಮತ್ತು ಮಂಡ್ಯದಲ್ಲಿ 13 ಟನ್‌ ಮಾವು ಮಾರಾಟವಾಗಿದೆ. ಇದರಿಂದ ಒಟ್ಟು 14 ಲಕ್ಷಕ್ಕೂ ಅಧಿಕ ವಹಿವಾಟು ನಡೆದಿದೆ. ಈ ಎರಡು ಕಡೆಗಳಿಂದ ಸುಮಾರು 100ರಿಂದ 150 ಟನ್‌ ಮಾರಾಟದ ಗುರಿ ಹೊಂದಲಾಗಿದೆ.
-ಕದಿರೇಗೌಡ, ವ್ಯವಸ್ಥಾಪಕ ನಿರ್ದೇಶಕ, ಮಾವು ಅಭಿವೃದ್ಧಿ ನಿಗಮ

Advertisement

Udayavani is now on Telegram. Click here to join our channel and stay updated with the latest news.

Next