ಕಾಪು: ಅತ್ಯಂತ ಪುರಾತನ ದೇವಸ್ಥಾನ ಗಳಲ್ಲಿ ಒಂದಾಗಿರುವ ಉಂಡಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನವನ್ನು ಜೀರ್ಣೋದ್ಧಾರಗೊಳಿಸುವ ಮೂಲಕ ನವೀನ ದೇವಾಲಯವನ್ನಾಗಿ ಪರಿವರ್ತಿ ಸಲು ದೇವರೇ ನಮಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಇದು ನಮ್ಮೆಲ್ಲರ ಸೌಭಾಗ್ಯವಾಗಿದೆ ಎಂದು ಉಡುಪಿ ಶ್ರೀ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಹೇಳಿದರು.
ಉಡುಪಿಯ ಅಷ್ಟಮಠಗಳಲ್ಲೊಂದಾದ ಶ್ರೀ ಸೋದೆ ವಾದಿರಾಜ ಮಠದ ಆಡಳಿತಕ್ಕೊಳಪಟ್ಟ ಉಂಡಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಮರು ನಿರ್ಮಾಣದ ಪ್ರಯುಕ್ತ ಜೂ. 30ರಂದು ನಡೆದ ಷಡಾಧಾರ – ನಿಧಿ ಕುಂಭ ಪ್ರತಿಷ್ಠಾಪನ ಕಾರ್ಯ ಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
ಸಹಸ್ರಾರು ವರ್ಷಗಳಿಗೊಮ್ಮೆ ಮಾತ್ರ ದೇವಾಲಯ ಮರು ನಿರ್ಮಾಣ, ಷಡಾಧಾರ ಪ್ರತಿಷ್ಠೆಯಂತಹ ಕಾರ್ಯಕ್ರಮಗಳು ನಡೆಯುತ್ತವೆ. ಮುಂದೊಮ್ಮೆ ಯಾವತ್ತಾದರೂ ಜೀರ್ಣೋದ್ಧಾರ ನಡೆದಲ್ಲಿ ಅದಕ್ಕೆ ಬೇಕಾಗುವ ನವರತ್ನ, ಧನ-ಕನಕಾದಿ ವಸ್ತುಗಳನ್ನು ಡೆಪಾಸಿಟ್ ಮಾದರಿಯಲ್ಲಿ ಷಡಾಧಾರದಲ್ಲಿ ಪ್ರತಿಷ್ಠಾಪಿಸಲಾಗಿದೆ ಎಂದು ಹೇಳಿದರು.
ನಿರ್ಮಲ ಭಕ್ತಿಗೆ ಅನುಗ್ರಹ
ಉಂಡಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಆಡಳಿತದಾರ / ಉಡುಪಿ ಶ್ರೀ ಸೋದೆ ಮಠಾಧೀಶ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಮಾತನಾಡಿ, ಭಗವಂತನ ಅನುಗ್ರಹ ಪಡೆಯಲು ಸಂಪತ್ತು, ಜಾತಿ, ವಿದ್ಯೆ ಮುಖ್ಯವಲ್ಲ. ನಿರ್ಮಲವಾದ ಭಕ್ತಿಯಿಂದ ಮಾತ್ರ ಭಗವಂತನನ್ನು ಒಲಿಸಿಕೊಳ್ಳಲು ಸಾಧ್ಯ. ಮುಗ್ಧ ಬಾಲಕನ ಭಕ್ತಿಗೆ ಒಲಿದ ದೇವರು ಉಂಡ ಊರು ಉಂಡಾರಿನ ಶ್ರೀ ದೇಗುಲದ ಜೀರ್ಣೋದ್ಧಾರ ಕಾರ್ಯ ನಮ್ಮ ಜೀವಿತ ಕಾಲದಲ್ಲಿ ಸಿಗಬಹುದಾದ ಶ್ರೇಷ್ಠ ಕಾರ್ಯವಾಗಿದ್ದು, ಇದಕ್ಕೆ ಸರ್ವರ ಸಹಕಾರ ಅಗತ್ಯ ಎಂದರು.
ಪುತ್ತೂರು ಮಧುಸೂದನ ತಂತ್ರಿಯವರ ನೇತೃತ್ವದಲ್ಲಿ, ಅವಧಾನಿ ಸುಬ್ರಹ್ಮಣ್ಯ ಭಟ್ ಗುಂಡಿಬೈಲು ಅವರ ಮಾರ್ಗದರ್ಶದಲ್ಲಿ ಷಡಾಧಾರ ಪ್ರತಿಷ್ಠೆ (ಆಧಾರ ಶಿಲೆ – ನಿಧಿಕುಂಭ – ಪದ್ಮ – ಕೂರ್ಮ – ಯೋಗನಾಳ – ನಪುಂಸಕ ಶಿಲೆ)ಯ ಧಾರ್ಮಿಕ ವಿಧಿಗಳು ನೆರವೇರಿದವು.ಹಿರಿಯರಾದ ಅಂಗಡಿಮಾರು ಕೃಷ್ಣ ಭಟ್, ಪವಿತ್ರಪಾಣಿ ಸುಬ್ಬಣ್ಣ ಭಟ್ ಮೊದಲಾದವರು ಉಪಸ್ಥಿತರಿದ್ದರು.ಅವಧಾನಿ ಸುಬ್ರಹ್ಮಣ್ಯ ಭಟ್ ಗುಂಡಿಬೈಲು ಪ್ರಸ್ತಾವನೆಗೈದರು. ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷ ಡಾ| ರಮೇಶ್ ಮಿತ್ತಂತಾಯ ಸ್ವಾಗತಿಸಿದರು. ಕೋಶಾಧಿಕಾರಿ ವಿ.ಜಿ. ಶೆಟ್ಟಿ ಮಂಡೇಡಿ ವಂದಿಸಿದರು. ಕಾರ್ಯದರ್ಶಿ ಯು. ಕುಮಾರ್ ಕಾರ್ಯಕ್ರಮ ನಿರೂಪಿಸಿದರು.