Advertisement

ಪುರಾತನ ದೇಗುಲಕ್ಕೆ ಬೇಕಿದೆ ಕಾಯಕಲ್ಪ

04:58 PM Sep 30, 2019 | Suhan S |

ಚಿಕ್ಕನಾಯಕನಹಳ್ಳಿ: ತಾಲೂಕಿನ ಶೆಟ್ಟಿಕೆರೆಯಲ್ಲಿನ ಹೊಯ್ಸಳರ ಕಾಲದ ಪುರಾತನ ಯೋಗಮಾಧವ ದೇವಾಲಯ ಅಪರೂಪವಾದ ಶಿಲ್ಪಕಲೆಗಳ ಕೆತ್ತನೆಯಿಂದ ನಿರ್ಮಾಣವಾಗಿದ್ದು, ಪುರಾತತ್ವ ಇಲಾಖೆ ನಿರ್ಲಕ್ಷ್ಯದಿಂದ ಸೌಂದರ್ಯ ಕಳೆದುಕೊಂಡಿದೆ.

Advertisement

ಕ್ರಿ.ಶ. 1261ರಲ್ಲಿ ಹೊಯ್ಸಳರ ದೊರೆ ಮುಮ್ಮಡಿ ವೀರ ನರಸಿಂಹ ದಂಡನಾಯಕ ಗೋಪಾಲ ದಣಾಯಕನಿಂದ ನಿರ್ಮಾಣವಾಗಿರುವ ಯೋಗಮಾಧವ ದೇವಾಲಯ ನಕ್ಷತ್ರಾಕಾರದಲ್ಲಿ ಮೂರು ಅಡಿ ಎತ್ತರವಿದೆ. ಐದು ಸಾಲುಗಳಲ್ಲಿ ಕಲ್ಲಿನ ಕೆತ್ತನೆ ಮಾಡಲಾಗಿದೆ. ದೇವಸ್ಥಾನದ ಗೋಡೆಗಳಲ್ಲಿ ವಿವಿಧ ಆಕಾರದ ಗೋಪುರಗಳು, ಕಲ್ಲಿನ ಕಂಬಗಳು, ಸಣ್ಣ ಸಣ್ಣ ಆಕಾರದಲ್ಲಿ ರೂಪಕೊಂಡಿರುವ ಕೆತ್ತನೆಗಳು ಇವೆ. ಈ ದೇವಾಲಯಕ್ಕೆ ಮೂರು ಗರ್ಭಗುಡಿಗಳು, ಒಳ ಭಾಗದ ನಕ್ಷತ್ರಾಕಾರದ ಗರ್ಭಗುಡಿಗೆ ಉತ್ತರ ದಕ್ಷಿಣ, ಪಶ್ಚಿಮಗಳಲ್ಲಿ ಚತುರ ಸ್ತರ ಭಾಗಗಳು ಸೇರಿಸಲ್ಪಟ್ಟಿವೆ. ಸಣ್ಣ ಸಣ್ಣ ಗೋಪುರಗಳ ಮೂಲಕ ನಾಲ್ಕು ಸಾಲಿನ ಶಿಖರ, ಕಲ್ಲಿನ ಕಳಶ ಹೊಂದಿದ್ದು, ಕಣ್ಮನ ಸೆಳೆಯುತ್ತದೆ.

ಅಪರೂಪದ ವಿಗ್ರಹ: ಗರುಡ ಪೀಠದ ಮೇಲೆ ಒಂಭತ್ತು ಅಡಿ ಎತ್ತರದ ಯೋಗಮಾಧವನ ಸುಂದರ ವಿಗ್ರಹವಿದೆ. ಪದ್ಮಾಸನ ಶೈಲಿಯಲ್ಲಿ ವಿಷ್ಣು ಕುಳಿತಿರುವ ಕೆತ್ತನೆ ಇದ್ದು, ಹಿಂದಿನ ಕೈಗಳಲ್ಲಿ ಚಕ್ರ, ಶಂಖಗಳಿವೆ. ಗರ್ಭಗುಡಿಯ ತೋರಣದಲ್ಲಿ ದಶಾವತಾರಗಳು, ಸಿಂಹಮುಖವಿರುವ ವಿಗ್ರಹವಿದೆ. ಯೋಗಮಾಧವ ಮೂರ್ತಿಗೆ ಸುಂದರವಾದ ಕಿರೀಟ, ಕೈಗೆ ಉಂಗುರಗಳು ಭುಜಕೀರ್ತಿ ಇದೆ. ಇತಿಹಾಸದ ಪ್ರಕಾರ ಇಂತಹ ಮೂರ್ತಿ ನಿರ್ಮಾವಾಗಿರುವುದು ಬಲು ಅಪರೂಪ.

ಪ್ರವಾಸಿ ಸ್ಥಳ: ಹೊಯ್ಸಳರ ಕಾಲದ ಈ ದೇವಾಲಯದಲ್ಲಿ ಶಿಲ್ಪಕಲೆಗಳ ವೈಭವ ಕಾಣಬಹುದು. ಶೆಟ್ಟಿಕೆರೆ ಹೋಬಳಿ ಯಲ್ಲಿರುವ ಯೋಗ ಮಾಧವ ದೇವಾಲಯ ಅದ್ಬುತವಾಗಿದ್ದು, ಪುರಾತತ್ವ ಇಲಾಖೆಯ ನಿರ್ಲಕ್ಷ್ಯದಿಂದ ಅನೇಕ ಜನರಿಗೆ ಈ ದೇವಾಲಯ ಇರುವುದರ ಬಗ್ಗೆ ಮಾಹಿತಿ ಇಲ್ಲವಾಗಿದೆ. ನಶಿಸುತ್ತಿರುವ ಶಿಲ್ಪಕಲೆಗಳ ನಡುವೆ ಈ ದೇವಾಲಯ ಅಭಿವೃದ್ದಿಪಡಿಸಿ ಪ್ರವಾಸಿ ಸ್ಥಳವನ್ನಾಗಿ ಮಾಡಬೇಕಾಗಿದೆ.

ಸೌಕರ್ಯ ಬೇಕಿದೆ: ದೇವಾಲಯದ ಸುತ್ತ ತಡೆಗೊಡೆ ಬೇಕಾಗಿದೆ. ಉದ್ಯಾನವನ, ಅಲಂಕಾರಿಕ ಕಲಾಕೃತಿಗಳು ಸೇರಿ ಪ್ರವಾಸಿ ಸ್ಥಳಕ್ಕೆ ಬೇಕಾಗಿರುವ ಮೂಲಸೌಕರ್ಯ ನೀಡಿದರೆ ದೇವಾಲಯ ಪ್ರೇಕ್ಷಕರನ್ನು ಆಕರ್ಷಿಸುವುದರಲ್ಲಿ ಅನುಮಾನವಿಲ್ಲ.

Advertisement

ಪುರಾತನ ಹೊಯ್ಸಳರ ಕಾಲದ ದೇವಾಲಯ ಉಳಿಸಿಕೊಳ್ಳುವುದು ಹಾಗೂ ಅಭಿವೃದ್ಧಿಪಡಿಸಿಕೊಳ್ಳುವುದು ನಮ್ಮ ಜವಾಬ್ದಾರಿ. ಸರ್ಕಾರ ಈ ದೇವಾಲಯಕ್ಕೆ ಅಗತ್ಯ ಸೌಕರ್ಯ ನೀಡಿ ಸ್ಥಳವನ್ನು ಪ್ರೇಕ್ಷಣಿಯ ಸ್ಥಳವನ್ನಾಗಿ ಮಾಡಬೇಕು.-ಎಂ.ವಿ. ನಾಗರಾಜರಾವ್‌, ಹಿರಿಯ ಸಾಹಿತಿ

 

-ಚೇತನ್

Advertisement

Udayavani is now on Telegram. Click here to join our channel and stay updated with the latest news.

Next