ಗಂಗಾವತಿ: ಹಿರೇಜಂತಗಲ್ ವಿಪ್ತ ಸೀಮಾದಲ್ಲಿರುವ ವಿಜಯನಗರ ಕಾಲದ ಪುರಾತನ ಅಮೃತೇಶ್ವರ ದೇಗುಲ ಬೀಳುವ ಹಂತ ತಲುಪಿದ್ದು ಸ್ಥಳೀಯರು ಜಲಸಂಪನ್ಮೂಲ ಮತ್ತು ತಾಲೂಕು ಆಡಳಿತದ ಗಮನಕ್ಕೆ ತಂದರೂ ನಿರ್ಲಕ್ಷ್ಯ ವಹಿಸಲಾಗುತ್ತಿದೆ.
ದೇವಘಾಟ ಹತ್ತಿರ ವಿಜಯನಗರ ಕಾಲದಲ್ಲಿ ನಿರ್ಮಿಸಿದ ಪುರಾತನ ಅಮೃತೇಶ್ವರ ಮತ್ತು ಗಣೇಶ ದೇಗುಲವಿದ್ದು ಈ ದೇಗುಲವನ್ನು ಬೆಟ್ಟದಮೇಲೆ ಹತ್ತು ಸಾಲಿನ ಕಲ್ಲಿನ ಬುನಾದಿ ಹಾಕಿ ಮೇಲೆ ದೇಗುವನ್ನು ನಿರ್ಮಿಸಲಾಗಿದೆ. ಇದರ ಕೆಳಗ ವಿಜಯನಗರ ಮೇಲ್ಪಟ್ಟ ಕೆಳಮಟ್ಟದ ಕಾಲುವೆಗಳನ್ನು ನಿರ್ಮಿಸಲಾಗಿದೆ. ಇದೀಗ ಕಾಲುವೆಯ ನೀರು ಸೋರಿಕೆಯ ಪರಿಣಾಮವಾಗಿ ಗೋಡೆಗಳಿಗೆ ಜೋಡಿಸಲಾಗಿದ್ದ ಕಲ್ಲುಗಳು ಕುಸಿದು ಕಾಲುವೆಗೆ ಬಂದಿರುವುದರಿಂದ ಅಮೃತೇಶ್ವರ ದೇಗುಲದ ಕಂಬಳಿಗೆ ಜೋಡಿಸಿರುವ ದೇಗುಲದ ಮೇಲ್ಭಾಗದ ಕಲ್ಲುಗಳು ಜಾರಿ ಕೆಳಗೆ ಬೀಳುವ ಹಂತದ ತಲುಪಿವೆ.
ಇತಿಹಾಸ: ವಿಜಯನಗರ ಸಾಮ್ರಾಜ್ಯದ ಆರಾಧ್ಯದೈವ ಪಂಪಾ ವಿರೂಪಾಕ್ಷೇಶ್ವರ ಮೂರ್ತಿ ಸ್ಥಾಪನೆ ಸಂದರ್ಭದಲ್ಲಿ ಹಂಪಿಗೆ ಎಂಟು ದಿಕ್ಕುಗಳಲ್ಲಿ ವಿವಿಧ ಹೆಸರಿನ ಈಶ್ವರ ಲಿಂಗವನ್ನು ಸ್ಥಾಪಿಸಲಾಗಿದೆ. ಗಂಗಾವತಿ ತಾಲೂಕಿನ ದೇವಘಾಟನಲ್ಲಿ ಅಮೃತೇಶ್ವರ ಏಳುಗುಡ್ಡದ ಸಾಲಿನಲ್ಲಿ ವಾಣಿಭದ್ರೇಶ್ವರ ದೇಗುಲ ನಿರ್ಮಿಸಲಾಗಿದೆ. ಶಿ
ವರಾತ್ರಿ ಸಂದರ್ಭದಲ್ಲಿ ಈಗಲೂ ಭಕ್ತರು ಹಂಪಿ ವಿರೂಪಾಕ್ಷ ಸೇರಿ ಎಂಟು ಈಶ್ವರ ಲಿಂಗಗಳ ದರ್ಶನ ಪಡೆಯುವ ಪದ್ದತಿ ಇದೆ. ಇಂತಹ ಮಹತ್ವದ ದೇಗುಲ ಬೀಳುವ ಹಂತದಲ್ಲಿ ಇದ್ದು ಇದರ ರಕ್ಷಣೆ ಅಗತ್ಯವಾಗಿದೆ.
ನಿರ್ಲಕ್ಷ್ಯ: ಕಾಲುವೆ ಕುಸಿತದಿಂದ ಅಮೃತೇಶ್ವರ ದೇಗುಲ ಬೀಳುವ ಹಂತ ತಲುಪಿದೆ. ಪುರಾತತ್ವ ಮತ್ತು ಪ್ರಾಚ್ಯವಸ್ತು ಇಲಾಖೆ ಹಂಪಿಯಲ್ಲಿ ಮಾತ್ರ ಜೀವಂತವಾಗಿದೆ. ಆನೆಗೊಂದಿ ಗಂಗಾವತಿ ತಾಲೂಕಿನಲ್ಲಿ ಇರುವ ಪುರಾತನ ಸ್ಮಾರಕಗಳು ನಿರ್ಲಕ್ಷ್ಯ ಮಾಡಲಾಗುತ್ತಿದೆ. ಸರಕಾರ ಕೂಡಲೇ ಗಮನಹರಿಸಿ ಅಮೃತೇಶ್ವರ ದೇಗುಲ ಉಳಿಸಬೇಕಿದೆ ಎಂದು ಇತಿಹಾಸ ತಜ್ಞ ಡಾ.ಶರಣಬಸಪ್ಪ ಕೋಲ್ಕಾರ ಒತ್ತಾಯಿಸಿದ್ದಾರೆ