ಚಿಕ್ಕಮಗಳೂರು: ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಹಮ್ಮಿಕೊಂಡಿರುವ ದತ್ತ ಜಯಂತಿ ಅಂಗವಾಗಿ ಗುರುವಾರ ದತ್ತಪೀಠದಲ್ಲಿ ಮಹಿಳೆಯರು ಅನಸೂಯಾ ಜಯಂತಿ ಆಚರಿಸಿದರು. ನಗರದಲ್ಲಿ ಸಂಕೀರ್ತನಾ ಯಾತ್ರೆಯನ್ನು ನಡೆಸಿದ ನಂತರ ದತ್ತಪೀಠಕ್ಕೆ ತೆರಳಿ ದತ್ತಪಾದುಕೆಗಳ ದರ್ಶನ ಪಡೆದ ಸಹಸ್ರಾರು ಮಹಿಳೆಯರು ದತ್ತಪೀಠದ ಪಕ್ಕದಲ್ಲಿ ಹಾಕಲಾದ ಶೆಡ್‌ನಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಅನಸೂಯಾ ಜಯಂತಿ ಅಂಗವಾಗಿ ಗಣಪತಿ ಹೋಮ, ನವಗ್ರಹ ಹೋಮ ಹಾಗೂ ದುರ್ಗಾ ಹೋಮ ನಡೆಯಿತು. ರಘುನಾಥ ಅವಧಾನಿ ಪೌರೋಹಿತ್ಯದಲ್ಲಿ ಹೋಮ ನಡೆಯುತ್ತಿದ್ದ ಸಂದರ್ಭದಲ್ಲಿ ಮಹಿಳೆಯರು ದತ್ತಾತ್ರೇಯರ ಪರ ಹಾಡುಗಳನ್ನು ಹಾಡಿದರು. ನಂತರ ಜಯಂತಿಯಲ್ಲಿ ಪಾಲ್ಗೊಂಡಿದ್ದ ಮಾತೆಯರಿಗೆ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದ ವತಿಯಿಂದ ಅರಿಶಿಣ, ಕುಂಕುಮ ಮತ್ತು ಬಳೆ ವಿತರಿಸಲಾಯಿತು. ನಂತರ ಜಿಲ್ಲಾಡಳಿತ ಹಾಗೂ ಸಂಘ ಪರಿವಾರದ ವತಿಯಿಂದ ಭಕ್ತಾ ದಿಗಳಿಗೆ ಪ್ರಸಾದ ವಿತರಿಸಲಾಯಿತು.
ಪ್ರಸಾದ ಪರೀಕ್ಷಿಸಿ ವಿತರಣೆ:
ಕಾರ್ಯಕ್ರಮದ ಅಂಗವಾಗಿ ಆಗಮಿಸಿದ್ದ ಭಕ್ತಾದಿಗಳಿಗೆ ಲಾಡು ಉಂಡೆ, ಪಲಾವ್ ಮತ್ತು ಮೊಸರನ್ನ ವಿತರಿಸಲಾಯಿತು. ಪ್ರಸಾದ ವಿತರಿಸುವ ಮೊದಲು ಆವತಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಸಂಧ್ಯಾ ಅವರು ಪ್ರಸಾದಗಳನ್ನು ಪರೀಕ್ಷಿಸಿದರು. ವೈದ್ಯರು ಮತ್ತು ಮುಜರಾಯಿ ಇಲಾಖೆ ಸಿಬ್ಬಂದಿ ಮೊದಲು ಪ್ರಸಾದ ಸೇವಿಸಿದ ನಂತರ ಭಕ್ತರಿಗೆ ವಿತರಿಸಲಾಯಿತು. ಸುಳ್ವಾಡಿ ಅವಘಡ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಪ್ರಸಾದ ವಿತರಿಸುವ ಮೊದಲು ಪರೀಕ್ಷಿಸಬೇಕು ಎಂಬ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ದತ್ತಪೀಠದಲ್ಲಿ ಮೊದಲು ಪ್ರಸಾದ ಪರೀಕ್ಷಿಸಿ ನಂತರ ಭಕ್ತರಿಗೆ ವಿತರಿಸಲಾಯಿತು.