Advertisement
ಮಿಲಿಟರಿ ತಾನಾಶಾಹರ ಕೈಯಲ್ಲಿ ಸಿಲುಕಿ ನಲುಗಿದ ದೇಶಗಳ ಜನರ ಕರಾಳ ಬದುಕಿನ ರಕ್ತಸಿಕ್ತ ಇತಿಹಾಸವೇ ನಮ್ಮ ಮುಂದೆ ಇದೆ. ಆಫ್ರಿಕಾದ ಅನೇಕ ದೇಶಗಳು, ಪಾಕಿಸ್ಥಾನ, ಉತ್ತರ ಕೊರಿಯಾ, ಮ್ಯಾನ್ಮಾರ್, ಅಫ್ಘಾನಿಸ್ಥಾನ ಮೊದಲಾದ ನೆರೆಯ ದೇಶಗಳ ಜನರು ಅರಾಜಕತೆಯಿಂದ ನೊಂದು ಬೆಂದಿದ್ದಾರೆ. ಮತಾಂಧರ ಕೈಯ್ಯಲ್ಲಿ ಸಿಲುಕಿ ಒದ್ದಾಡುತ್ತಿರುವ ಅಫ್ಘಾನೀ ಮಹಿಳೆ ಯರು ದಿನನಿತ್ಯ ಕಣ್ಣೀರಿನಲ್ಲಿ ಕೈತೊಳೆಯುತ್ತಿರುವುದನ್ನು ಮಾಧ್ಯಮಗಳಲ್ಲಿ ನೋಡುತ್ತಿದ್ದೇವೆ. ಈ ಗುಂಪಿಗೆ ಈಗ ಬಾಂಗ್ಲಾ ಹೊಸದಾಗಿ ಸೇರ್ಪಡೆಗೊಂಡಿದೆ. ಅದನ್ನೇ ಆದರ್ಶವಾಗಿ ಕಾಣುವವರು ನಮ್ಮಲ್ಲೂ ಕಾಣಿಸಿಕೊಳ್ಳತೊಡಗಿ ದ್ದಾರೆ. ದೇಶಹಿತ ಚಿಂತಕರೇ ಇದರಷ್ಟು ಅಪಾಯಕಾರಿ ಇನ್ನೊಂದಿಲ್ಲ. ದಶಕಗಳಿಂದ ನೆಮ್ಮದಿಯ ಬದುಕು ಕೊಟ್ಟ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯ ಬುಡಕ್ಕೇ ಹಾಕುವ ಕೊಡಲಿಯೇಟು ಅದು…! ಬಾಂಗ್ಲಾದಲ್ಲಾದದ್ದಾದರೂ ಏನು? ಪ್ರಗತಿಯ ಪಥದಲ್ಲಿ ದಾಪು ಗಾಲು ಹಾಕುತ್ತಿದ್ದ ರಾಷ್ಟ್ರವನ್ನು ಕ್ರಾಂತಿಯ ಮನದಲ್ಲಿ ತುಂಬಿಸಿಕೊಂಡಿದ್ದ ಕೆಲವೇ ಕೆಲವು ವಿದ್ಯಾರ್ಥಿಗಳು ಸೇರಿ ಹಳಿ ತಪ್ಪಿಸಿದರು. ವಿದೇಶೀ ಶಕ್ತಿಗಳು ಕುಮ್ಮಕ್ಕು ಕೊಟ್ಟವು. ಅವಕಾಶಕ್ಕಾಗಿ ಕಾಯುತ್ತಿದ್ದ ಮತಾಂಧರು ಪರಿಸ್ಥಿತಿಯನ್ನು ಬಳಸಿಕೊಂಡು ಉರಿಯುವ ಬೆಂಕಿಗೆ ತುಪ್ಪ ಸುರಿದರು. ಅಧಿಕಾರ ವಂಚಿತ ಸಮಯಸಾಧಕರು ಮೈ ಕಾಯಿಸಿಕೊಂಡರು. ಸಾಧಿಸಿದ್ದಾದರೂ ಏನು? ಎಲ್ಲೆಲ್ಲೂ ಅರಾಜಕತೆ. ರಕ್ಷಿಸಬೇಕಿದ್ದ ಸೇನೆ ಅಸಹಾಯಕ ವಾಗಿ ದೇಶದ ಪ್ರಧಾನಿಗೆ ರಾಜಿನಾಮೆ ಕೊಡುವಂತೆ ಸೂಚಿಸಿತು.
Related Articles
Advertisement
ಬಾಂಗ್ಲಾದಲ್ಲಿ ಹಸೀನಾ ಸರಕಾರ ಪತನವಾದ ಅನಂತರ ಉಂಟಾಗಿರುವ ಕ್ಷೋಭೆಯಲ್ಲಿ ಅಮಾಯಕ ನಾಗರಿಕರು ಸಾಯುತ್ತಿರುವ ಗಂಭೀರ ಪರಿಣಾಮವನ್ನು ನಾವೆಲ್ಲ ಕಾಣುತ್ತಿದ್ದೇವೆ. ಆ ದಾರುಣ ದೃಶ್ಯವನ್ನು ನೋಡಿದ ಪ್ರತಿಯೋರ್ವ ದೇಶ ಹಿತ ಚಿಂತಿಸುವ ನಾಗರಿಕನೂ ಹೇ ದೇವರೇ ಅಂತಹ ಸ್ಥಿತಿ ನಮಗೆ ಬಾರದಿರಲಿ ಎಂದು ಪ್ರಾರ್ಥಿಸುತ್ತಿದ್ದಾನೆ. ಆದರೆ ಸ್ವಾರ್ಥ ಚಿಂತನೆಯಲ್ಲೇ ಮುಳುಗಿರುವ ಅಧಿಕಾರದಾಹಿ ರಾಜಕಾರಣಿಗಳು ಮಾತ್ರ ಜನಭಾವನೆಗೆ ವಿರುದ್ಧವಾಗಿಯೇ ಚಿಂತಿಸುತ್ತಿದ್ದಾರೆ.
ಆದರೆ ಭಾರತ ಬಾಂಗ್ಲಾವಲ್ಲ. ಭಾರತ ಒಂದು ವಿಶಾಲ ದೇಶ. ನಮ್ಮ ಪ್ರಜಾಪ್ರಭುತ್ವದ ಬೇರುಗಳನ್ನು ಅಷ್ಟು ಸುಲಭವಾಗಿ ಅಲುಗಾಡಿಸಲು ಸಾಧ್ಯವಿಲ್ಲ. ನಮ್ಮ ಸಂವಿಧಾನಾತ್ಮಕ ಸಂಸ್ಥೆಗಳು ಒಂದು ಇನ್ನೊಂದಕ್ಕೆ ಪೂರಕವಾಗಿಯೂ ರಾಷ್ಟ್ರಹಿತದ ಪ್ರೇರಣೆ-ಬದ್ದತೆಯಾಗಿಟ್ಟುಕೊಂಡು ಜವಾಬ್ದಾರಿಯುತವಾಗಿ ಸುದೀರ್ಘವಾಗಿ ಕಾರ್ಯನಿರ್ವಹಿಸುತ್ತಿವೆ. ನಮ್ಮ ಸಂವಿಧಾನ ವಿಶ್ವದ ಸಫಲ ಸಂವಿಧಾನಗಳಲ್ಲೊಂದು. ಅದರ ಬುನಾದಿಯೂ ಭದ್ರವಾಗಿದೆ. ಪಾಕಿಸ್ಥಾನ, ಬಾಂಗ್ಲಾಗಳಂತೆ ಸಂವಿಧಾನವನ್ನು ಅಮಾನತಿಲ್ಲಿಡುವ, ಮಾರ್ಷಲ್ ಲಾ ಜಾರಿ ಮಾಡುವ, ಸೇನಾ ದಂಗೆ ನಡೆಯುವ ಇತಿಹಾಸ ಈ ಏಳೂವರೆ ದಶಕಗಳಲ್ಲಿ ಭಾರತ ಕಂಡಿಲ್ಲ. ಅದಕ್ಕೆ ಕಾರಣ ನಮ್ಮ ವ್ಯವಸ್ಥೆ ಅಷ್ಟು ಶಕ್ತಿಶಾಲಿಯೂ, ಪ್ರಜಾಪ್ರಭುತ್ವವಾದಿಯಾಗಿಯೂ ಇರುವುದು.
ಭಾರತೀಯ ಸೇನೆಯ ನಿಷ್ಪಕ್ಷಪಾತ ನಿಲುವು, ವೃತ್ತಿಪರತೆ, ನಾಗರಿಕ ನೇತೃತ್ವಕ್ಕೆ ವಿಧೇಯತೆ ಪ್ರಶ್ನಾತೀತ. ಬಾಹ್ಯಶಕ್ತಿಗಳಿಂದ ದೇಶವನ್ನು ರಕ್ಷಿಸುವ ಜತೆಯಲ್ಲಿ ಅಗತ್ಯಬಿದ್ದಾಗ ಆಂತರಿಕ ವಿಪತ್ತುಗಳಿಂದ ದೇಶವನ್ನು ಸಂರಕ್ಷಿಸುವ ನಮ್ಮ ಸೇನೆ ಸದಾ ಪ್ರಜಾಪ್ರಭುತ್ವದ ರಕ್ಷಕನಾಗಿ ನಿಂತಿದೆ. ಸೈನ್ಯ ನೇತೃತ್ವ ಸರಕಾರದೊಂದಿಗಿನ ತನ್ನ ಭಿನ್ನಾಭಿಪ್ರಾಯ, ವಿರೋಧವನ್ನು ವ್ಯಕ್ತಪಡಿಸುವ ಸಭ್ಯ ಸಹಜ ಪ್ರಕ್ರಿಯೆ ಅನುಸರಿಸುತ್ತದೆಯೇ ಹೊರತು ನಾಗರಿಕ ನೇತೃತ್ವಕ್ಕೆ ಎಂದೂ ಸವಾಲೊಡ್ಡಿಲ್ಲ. ಅಂತಹ ಒಂದೇ ಒಂದು ಘಟನೆಯೂ ಸ್ವತಂತ್ರ ಭಾರತದ ಇತಿಹಾಸದಲ್ಲಿ ಇದುವರೆಗೆ ನಡೆದಿಲ್ಲ. ನಮ್ಮ ನೆರೆ ದೇಶಗಳಲ್ಲಿ ಅಂತಹ ಯತ್ನಗಳು ಮತ್ತೆ ಮತ್ತೆ ನಡೆಯುತ್ತಿರುತ್ತದೆ. ಪಾಕಿಸ್ಥಾನದಲ್ಲಂತೂ ಚುನಾಯಿತ ಸರಕಾರವಿದ್ದರೂ ಅದು ಸೇನೆಯ ಮುಖ್ಯಸ್ಥರ ಆಣತಿಯಂತೆ ಶಾಸನ ನಡೆಸಬೇಕಾದ ದುಃಸ್ಥಿತಿ ಇದೆ.
ಸದಾ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಸೇನೆಯ ಹಿಡಿತದಲ್ಲಿರುವ ನಮ್ಮ ನೆರೆ ರಾಷ್ಟ್ರಗಳಲ್ಲಿನ ಸೈನ್ಯ ವ್ಯವಸ್ಥೆಗೂ ನಮ್ಮ ಸೈನ್ಯ ವ್ಯವಸ್ಥೆಗೂ ಅಜಗಜಾಂತರವಿದೆ. ಪಾಕಿಸ್ಥಾನದಲ್ಲಿ ಅಲ್ಲಿನ ಗುಪ್ತಚರ ಸಂಸ್ಥೆ ಮತ್ತು ಗಡಿ ರಕ್ಷಣ ಪಡೆಯಾದ ಪಾಕಿಸ್ಥಾನ ರೇಂಜರ್ ಕೂಡ ಸೇನಾ ಮುಖ್ಯಸ್ಥರ ಅಧೀನದಲ್ಲಿದೆ. ಭಾರತದಲ್ಲಿ ಗುಪ್ತಚರ ವಿಭಾಗ ಸರಕಾರದ ಅಧೀನದಲ್ಲಿದೆ. ಅಷ್ಟೇ ಅಲ್ಲ ನಮ್ಮಲ್ಲಿ ಸೇನೆ ರಕ್ಷಣ ವಿಭಾಗದ ಅಧೀನದಲ್ಲಿದ್ದರೆ ಸುಮಾರು ಆರು ಲಕ್ಷಕ್ಕೂ ಅಧಿಕ ಸಂಖ್ಯಾಬಲವಿರುವ ಬಿಎಸ್‌ಎಫ್, ಸಿಆರ್‌ಪಿಎಫ್, ಸಿಐಎಸ್‌ಎಫ್, ಐಟಿಬಿಪಿ, ಎಸ್‌ಎಸ್‌ಬಿ ಅಸ್ಸಾಂ ರೈಫಲ್ಸ್ ಅರೆ ಸೇನಾಪಡೆಗಳು ಗೃಹ ಸಚಿವರ ಅಧೀನದಲ್ಲಿರುತ್ತದೆ. ಯಾವುದೇ ಸಂಭಾವ್ಯ ಸೇನಾ ಕ್ರಾಂತಿ ಹತ್ತಿಕ್ಕಲು ಕೇಂದ್ರ ಸರಕಾರದ ಬಳಿ ಪರ್ಯಾಯ ಶಕ್ತಿ ಇದೆ.
ಶಿಸ್ತು ದಕ್ಷತೆಯ ಜತೆಯಲ್ಲಿ ಪ್ರಜಾತಂತ್ರದ ಮೌಲ್ಯಗಳು ನಮ್ಮ ಸೇನೆಯಲ್ಲಿ ಮೇಳೈಸಿವೆ. ಚುನಾಯಿತ ಸರಕಾರದೊಂದಿಗೆ ಅದು ಉತ್ತಮ ಸಾಮಂಜಸ್ಯ ಹಾಗೂ ಸಾಮರಸ್ಯ ಕಾಪಾಡಿಕೊಂಡಿದೆ. ಸೇನಾಧ್ಯಕ್ಷರು ಬದಲಾಗುವುದರಿಂದ ಸ್ಥಾಪಿತ ನಿಯಮಗಳು ಬದಲಾಗುವುದಿಲ್ಲ. ಸೇನಾಧ್ಯಕ್ಷರ ನೇಮಕಾತಿ ಕೂಡ ವೃತ್ತಿಪರತೆ, ವರಿಷ್ಠತೆ, ಅರ್ಹತೆ ಆಧಾರದ ಮೇಲೆ ನಡೆಯುತ್ತದೆ. ಸರಕಾರದೊಂದಿಗಿನ ಅದರ ಸಂಬಂಧದಲ್ಲೂ ಯಾವುದೇ ರೀತಿಯ ವ್ಯತ್ಯಾಸವಾಗಲೀ ಏರುಪೇರಾಗಲೀ ನಡೆಯುವುದಿಲ್ಲ. ಸೈನ್ಯ ಕಮಾಂಡರುಗಳಿಗೆ ತಮ್ಮ ಅಧಿಕಾರದ ಇತಿಮಿತಿಯ ಅರಿವು ಚೆನ್ನಾಗಿಯೇ ಇರುತ್ತದೆ.
ಹಾಂ. ಒಂದಂತೂ ನಿಜ ಬಾಂಗ್ಲಾ ಘಟನೆಯಿಂದ ರಸ್ತೆಗಿಳಿದು ಪ್ರತಿಭಟಿಸುವ, ಹಿಂಸಾಚಾರ ನಡೆಸಿ ಸರಕಾರವನ್ನು ಅಸ್ಥಿರಗೊಳಿಸುವ ಕನಸು ಕಾಣುವವರು ಹೆಚ್ಚಾಗಬಹುದು. ನಾಲ್ಕೋ ಐದೋ ಲಕ್ಷ ಜನ ಸೇರಿಸಿ ಬೀದಿಗಿಳಿದು ಹಿಂಸಾಚಾರ ಮಾಡುವ ದುಸ್ಸಾಹಸ ಮಾಡಲು ಯತ್ನಿಸಬಹುದು. ಈ ಹಿನ್ನೆಲೆಯಲ್ಲಿ ಸರಕಾರದ ಗುಪ್ತಚರ ತಂತ್ರ ಇನ್ನಷ್ಟು ಚುರುಕಾಗಿ ಕಾರ್ಯನಿರ್ವಹಿಸುವ ಅಗತ್ಯವಿದೆ. ಇಂತಹ ಆಂದೋಲನಗಳಿಗೆ ಅನುಮತಿ ಕೊಡದಿರುವ ಸರಕಾರದ ನಿರ್ಣಯದ ವಿರುದ್ಧ ತಮ್ಮ ಮುಂದೆ ಬರುವ ಮೊಕದ್ದಮೆಗಳನ್ನು ಬಗೆಹರಿಸುವ ನ್ಯಾಯಾಲಯಗಳು ಹೆಚ್ಚು ಸಂಯಮಶೀಲವಾಗಿರಬೇಕಾದ ಅಗತ್ಯವಿದೆ. ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಎಷ್ಟೇ ಕೆಟ್ಟ ಸರಕಾರವೂ ಅರಾಜಕತೆಗಿಂತ ಉತ್ತಮವೇ ಎನ್ನುವುದನ್ನು ಬಾಂಗ್ಲಾ ಮತ್ತೊಮ್ಮೆ ತೋರಿಸಿಕೊಟ್ಟಿದೆ. ಸೇನೆ ಬಾಹ್ಯವಾಗಿ ದೇಶವನ್ನು ರಕ್ಷಿಸಬಲ್ಲದು. ಆದರೆ ಆಂತರಿಕವಾಗಿ ದೇಶವನ್ನು ರಕ್ಷಿಸುವಲ್ಲಿ ನಾಗರಿಕರ ಪಾತ್ರ ಬಹಳ ಮುಖ್ಯ.
-ಬೈಂದೂರು ಚಂದ್ರಶೇಖರ ನಾವಡ