Advertisement

ದೇಶದಲ್ಲಿ ಅರಾಜಕತೆ, ದ್ವೇಷ ಸೃಷ್ಟಿಗೆ ಯತ್ನ: ವಿಜಯ ಕುಮಾರ

12:12 AM Feb 27, 2020 | Sriram |

ಉಡುಪಿ: ದೇಶದಲ್ಲಿ ಪೌರತ್ವ ಕಾಯ್ದೆ ನೆಪದಲ್ಲಿ ಅರಾಜಕತೆ, ದ್ವೇಷ ಸೃಷ್ಟಿಗೆ ದೇಶದ್ರೋಹಿ ಸಂಘಟನೆಗಳು ನಿರಂತರ ಷಡ್ಯಂತ್ರ ನಡೆಸುತ್ತಿವೆ. ದೇಶದೊಳಗಿನ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಧರ್ಮದ್ರೋಹಿ ಪಿಎಫ್ಐ ಸಂಘಟನೆಯನ್ನು ನಿರ್ಬಂಧಿಸುವಂತೆ ಹಿಂದೂ ಜನಜಾಗೃತಿ ಸಮಿತಿಯ ಸಮನ್ವಯಕಾರ ವಿಜಯ ಕುಮಾರ್‌ ಒತ್ತಾಯಿಸಿದರು.

Advertisement

ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ರಾಷ್ಟ್ರೀಯ ಹಿಂದೂ ಆಂದೋಲನ ಭಾಗವಾಗಿ ಅಜ್ಜರಕಾಡು ಹುತಾತ್ಮ ಸ್ಮಾರಕ ಬಳಿ ಬುಧವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಪಿಎಫ್ಐ ಸಂಘಟನೆ ದೇಶದ ಆಂತರಿಕ ಭದ್ರತೆಗೆ ಆತಂಕ ತರುತ್ತಿದೆ. ದೇಶವಿರೋಧಿ ಕೃತ್ಯಗಳ ಮೂಲಕ ತನ್ನ ಚಟುವಟಿಕೆಯನ್ನು ವಿವಿಧ ರೂಪಗಳಲ್ಲಿ ಅದು ವಿಸ್ತರಿಸುತ್ತಿದೆ. ದೇಶದ್ರೋಹಿ ಚಟುವಟಿಕೆಗಳಿಗೆ ಆರ್ಥಿಕ ನೆರವು ನೀಡುವ ಮೂಲಕ ಅದು ಬೆಂಬಲ ಒದಗಿಸುತ್ತಿದೆ ಎಂದು ಕಿಡಿಕಾರಿದರು.

ಶಾಹಿನ್‌ಭಾಗ್‌ ಪ್ರಕರಣ, ಅಮೂಲ್ಯಾ ಲಿಯೋನ್‌ಳ ಪಾಕಿಸ್ಥಾನ ಪರ‌ ಹೇಳಿಕೆ, ಹುಬ್ಬಳ್ಳಿ, ಕಾಶ್ಮೀರಿ ವಿದ್ಯಾರ್ಥಿಗಳ ಪಾಕ್‌ ಪರ ಜೈಕಾರ, ಶಿಕಾರಿ ಚಲನಚಿತ್ರ ಈ ಎಲ್ಲ ಪ್ರಕರಣಗಳಲ್ಲಿ ದೇಶದ್ರೋಹಿ ಸಂಘಟನೆಗಳ ಕೈವಾಡವಿದೆ. ಇದರ ಹಿಂದೆ ರಾಜಕೀಯ ಪಕ್ಷಗಳ ಪಿತೂರಿಯಿದೆ. ಬಹಿರಂಗವಾಗಿ ದೇಶವಿರೋಧಿ ಹೇಳಿಕೆಗಳನ್ನು ದೇಶದೊಳಗೆ ನೀಡುವು ದನ್ನು ಗಮನಿಸಿದರೆ ಅಂತಾರಾಷ್ಟ್ರೀಯ ಪ್ರಚೋದನೆಗೆ ವಿಪಕ್ಷಗಳು ಕುಮ್ಮಕ್ಕು ನೀಡುತ್ತಿವೆ ಎನ್ನುವುದು ತಿಳಿದು ಬರುತ್ತದೆ. ದೇಶದಲ್ಲಿ ಸುಧಾರಣೆ ತರುವ ಹೊತ್ತಲ್ಲಿ ಇಂತಹ ಕೃತ್ಯ ನಡೆಸುವ ಸಂಘಟನೆ ಹಾಗೂ ವ್ಯಕ್ತಿಗಳ ವಿರುದ್ಧ ಕೇಂದ್ರ ಸರಕಾರ ಶಿಸ್ತು ಕ್ರಮ ಜರಗಿಸಬೇಕು ಎಂದರು.

ದೇಶದಲ್ಲಿ ಹುಟ್ಟಿ ಬೆಳೆದು ಇಲ್ಲಿನ ಸವಲತ್ತು ಪಡೆದು ದೇಶವಿರೋಧಿ ಹೇಳಿಕೆ ನೀಡುತ್ತಿರುವವರನ್ನು ಸುಮ್ಮನೆ ಬಿಡದೆ ಕಠಿನ ಶಿಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು. ಹಿಂದೂ ಜನಜಾಗೃತಿ ಸಮಿತಿ ಸದಸ್ಯರಾದ ಮಟ್ಟಾರು ಸತೀಶ್‌ ಕಿಣಿ, ನವೀನ್‌ ಕುಮಾರ್‌, ವಿಜಯ ಕುಮಾರ್‌, ನಟೇಶ್‌, ಗಣೇಶ ಮೇಸ್ತ, ರಮಾನಂದ ಚಾತ್ರ, ಪವಿತ್ರ ಕುಡ್ವ ಮತ್ತಿತರರು ಉಪಸ್ಥಿತರಿದ್ದರು.

Advertisement

ಮನವಿ
ಪ್ರತಿಭಟನೆಯಲ್ಲಿ ದೇಶದ್ರೋಹಿ ಕೃತ್ಯದಲ್ಲಿ ತೊಡಗಿರುವ ಸಂಘಟನೆಗಳ ವಿರುದ್ಧ ಘೋಷಣೆಗಳನ್ನು ಕೂಗಿದ ಹಿಂದೂ ಜನಜಾಗೃತಿ ಸಮಿತಿ ಸದಸ್ಯರು ಅನಂತರ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಿಗಳಿಗೆ ಕ್ರಮಕ್ಕೆ ಒತ್ತಾಯಿಸುವ ಮನವಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next