Advertisement
ನಮ್ಮ ಪ್ರಿನ್ಸಿಪಾಲರು ಮತ್ತು ನಾನು ರಾತ್ರಿ ವಸತಿಗೃಹದಲ್ಲಿ ಮೂರ್ತಿಯವರನ್ನು ಭೇಟಿ ಮಾಡಿ ಮಾರನೆಯ ದಿನ ಹೈಸ್ಕೂಲ್ ಮಕ್ಕಳಿಗೆ ಮಾತಾಡಬೇಕೆಂದು ಕೋರಿದೆವು. ಅನಂತಮೂರ್ತಿ ಒಪ್ಪಿಕೊಂಡರು. “”ನಾಳೆ ಬೆಳಿಗ್ಗೆ ಕಾರ್ಯಕ್ರಮ ಇಟ್ಟುಕೊಳ್ಳಿ” ಎಂದರು. “”ಸರ್…! ಪಕ್ಕದಲ್ಲೇ ನಮ್ಮ ಮನೆ! ದಯವಿಟ್ಟು ಹತ್ತು ನಿಮಿಷ ಮನೆಗೆ ಬನ್ನಿ” ಎಂದು ಕೇಳಿದೆ. “”ಓಹೋ! ಅದಕ್ಕೇನಂತೆ. ನಡಿಯಿರಿ ಹೋಗೋಣ” ಎಂದು ಮೂರ್ತಿಗಳು ನಾನಿದ್ದ ಮನೆಗೆ ಬಂದರು. ನನ್ನ ಪತ್ನಿ, ತಾಯಿ, ಅಜ್ಜಿಯರನ್ನು ಅವರಿಗೆ ಪರಿಚಯ ಮಾಡಿಸಿದೆ. ನನ್ನ ಕೋಣೆಯಲ್ಲಿ ಜೋಡಿಸಿಟ್ಟಿದ್ದ ಪುಸ್ತಕಗಳ ಶ್ರೇಣಿ ಅವರಿಗೆ ಸಂತೋಷ ಉಂಟು ಮಾಡಿತು. “”ಏನಪ್ಪಾ… ನೀವು ಸಾಹಿತ್ಯದ ಅಧ್ಯಾಪಕರಾ?” ಎಂದು ಕೇಳಿದರು. “”ಸರ್, ನಾನು ಸಾಹಿತ್ಯದ ಅಧ್ಯಾಪಕನಲ್ಲ ಕ್ರಾಫ್ಟ್ ಟೀಚರ್. ಸಾಹಿತ್ಯ ನನ್ನ ಹುಚ್ಚು ಅಷ್ಟೆ” ಎಂದೆ. ಅವರಿಗೆ ಇನ್ನೂ ಆಶ್ಚರ್ಯ! ನನ್ನ ಕೋಣೆಯಲ್ಲಿದ್ದ ಪುಸ್ತಕಗಳ ಮೇಲೆ ಕಣ್ಣಾಡಿಸಿದರು. ಅವರ ಸಂಸ್ಕಾರ ಕಾದಂಬರಿ, ಆಗಷ್ಟೇ ಬಂದಿದ್ದ ಪದ್ಯಗಳ ಸಂಗ್ರಹ ಕೂಡ ಅಲ್ಲಿ ಇದ್ದವು. ಸಾಕ್ಷಿ, ಸಂಕ್ರಮಣ, ಲಹರಿ, ಕವಿತಾ ಮೊದಲಾದ ಸಾಹಿತ್ಯಕ ಪತ್ರಿಕೆಗಳು, ಗೋಪಾಲಕೃಷ್ಣ ಅಡಿಗರಿಂದ ಎ. ಕೆ. ರಾಮಾನುಜನ್ ಅವರವರೆಗೆ ಅನೇಕ ಕಾವ್ಯ ಸಂಗ್ರಹಗಳು ಅಲ್ಲಿದ್ದವು. ಪಂಪ-ಕುಮಾರವ್ಯಾಸಾದಿ ಹಳೆಯ ಕವಿಗಳೂ ಸಹಪಂಕ್ತಿಯಲ್ಲಿದ್ದರು! ಅನಂತಮೂರ್ತಿ “ಭೇಷ್’ ಎಂದು ನನ್ನ ಬೆನ್ನು ತಟ್ಟಿದರು. ಕಾಫಿ ಸೇವನೆಯಾದ ಮೇಲೆ ಇಬ್ಬರೂ ಆಶ್ರಮ ನೋಡಲು ಹೊರಟೆವು. ಹೋಗುವಾಗ ಅನಂತಮೂರ್ತಿ, “”ನಾಳೆ ಹುಡುಗರಿಗೆ ಏನು ಮಾತಾಡಲಿ?” ಎಂದು ಕೇಳಿದರು! “”ಏನು ಬೇಕಾದರೂ ಮಾತಾಡಿ. ಹಳ್ಳಿಯ ಹುಡುಗರಾದರೂ ಅನೇಕರಿಗೆ ಸಾಹಿತ್ಯದ ಬಗ್ಗೆ ಒಳ್ಳೆಯ ಆಸಕ್ತಿಯಿದೆ. ಅಂಥ ವಾತಾವರಣ ನಮ್ಮ ಶಾಲೆಯಲ್ಲಿದೆ” ಎಂದೆ. “”ಹಾಗಾದರೆ ಅಡಿಗರ ಶ್ರೀರಾಮನವಮಿಯ ದಿವಸ ಪದ್ಯವನ್ನು ಕುರಿತೇ ಮಾತಾಡುತ್ತೇನೆ” ಎಂದರು. ನಾನು ಆ ಪದ್ಯ ಓದಿದ್ದೆ. ಎನ್‌ಎಸ್‌ಸಿಯೊಂದಿಗೆ ಆ ಪದ್ಯದ ಬಗ್ಗೆ ಚರ್ಚೆಯನ್ನೂ ಮಾಡಿದ್ದೆ. ಆ ಬಿಕ್ಕಟ್ಟಾದ ಪದ್ಯದ ಕುರಿತು ಹೈಸ್ಕೂಲ್ ಮಕ್ಕಳಿಗೆ ಇವರು ಏನು ಹೇಳುತ್ತಾರೆ ಎಂದು ನನಗೆ ಕುತೂಹಲ. ಅತಿಥಿಗೃಹಕ್ಕೆ ಹಿಂದಿರುಗುವಾಗ ನನ್ನ ಲೈಬ್ರೆರಿಯಿಂದ ಆ ಪದ್ಯ ಪಡೆದು, ಅನಂತಮೂರ್ತಿ ಮಲಗಲಿಕ್ಕೆ ಹೋದರು.
.
.
ಅನಂತಮೂರ್ತಿ ಮೈಸೂರಿನ ಟಿ. ಕೆ. ಲೇಔಟ್‌ನಲ್ಲಿ ಅಭಯ ಎಂಬ ತಮ್ಮ ಮನೆಯಲ್ಲಿ ವಾಸಮಾಡುತ್ತಿದ್ದಾಗ ನಾನು ಬಿ. ಆರ್.ಲಕ್ಷ್ಮಣರಾವ್ ಮತ್ತು ನರಹಳ್ಳಿ ಸುಬ್ರಹ್ಮಣ್ಯಅದೆಷ್ಟು ಬಾರಿ ಅವರನ್ನು ಕಾಣಲು ಮೈಸೂರಿಗೆ ಹೋಗಿದ್ದೆವೋ. 1980ರಲ್ಲಿ ನನ್ನ ಕ್ರಿಯಾಪರ್ವ ಸಂಗ್ರಹಕ್ಕೆ ಅನಂತಮೂರ್ತಿ ಮುನ್ನುಡಿ ಬರೆದರು. ನನ್ನ ಕಾವ್ಯಜೀವಿತದಲ್ಲಿ ಅದೊಂದು ನೆನಪಿಡಬೇಕಾದ ಸಂಗತಿ. ಮುನ್ನುಡಿ ಬರೆದ ಮೇಲೆ, ಬೆಂಗಳೂರಿಗೆ ಅದ್ಯಾವ ಕಾರಣಕ್ಕೋ ಬಂದಿದ್ದ ಅನಂತಮೂರ್ತಿ ನಮ್ಮ ಮನೆಯ ಸಮೀಪದಲ್ಲೇ ಇದ್ದ ಕಿ. ರಂ. ನಾಗರಾಜ ಅವರ ಮನೆಯಲ್ಲಿ ಉಳಿದಿದ್ದರು. ಅನಂತಮೂರ್ತಿ ಮತ್ತು ಕಿ. ರಂ. ನಮ್ಮ ಮನೆಗೆ ಬಂದು ಮುನ್ನುಡಿ ಕೊಟ್ಟು ಹೋಗಿದ್ದಾರೆ. ಕಾಲೇಜಿನಿಂದ ಬಂದ ನನಗೆ ಮನೆಯವರು ಈ ವಿಷಯ ತಿಳಿಸಿದಾಗ, “”ಅಯ್ಯೋ! ಎಂಥ ಕೆಲಸವಾಯಿತು! ಅನಂತಮೂರ್ತಿ ಬಂದಾಗ ನಾನು ಮನೆಯಲ್ಲಿ ಇರಲಿಲ್ಲವಲ್ಲ” ಎಂದು ಬೇಸರ ಪಟ್ಟಾಗ, “”ಅವರು ಕಿರಂ ಮನೆಯಲ್ಲಿ ಇರುತ್ತಾರಂತೆ. ಬಿಡುವಿದ್ದರೆ ಅವರನ್ನು ಅಲ್ಲಿಗೆ ಕಳಿಸು ಎಂದರು” ಎಂದು ನನ್ನ ಪತ್ನಿ ಹೇಳಿದಳು. ಆಗ ನನ್ನ ಬಳಿ “ಸುವೇಗ’ ಎಂಬ ಪುಟ್ಟ ವಾಹನವಿತ್ತು. ನಾನು ಕಿರಂ ಮನೆಗೆ ದೌಡಾಯಿಸಿದೆ. ರಾತ್ರಿ ಅದೆಷ್ಟೊ ಹೊತ್ತು ಅನಂತಮೂರ್ತಿ, ಕಿ. ರಂ. ಮತ್ತು ನಾನು ಸಾಹಿತ್ಯ, ರಾಜಕೀಯ- ಅದೂ ಇದೂ ಎಂದು ಏನೆಲ್ಲ ಮಾತಾಡಿದೆವು! ಗೋಷ್ಠಿ ಮುಗಿದಾಗ ಸರಿರಾತ್ರಿಯೇ ಆಗಿಹೋಗಿತ್ತು. ಅನಂತಮೂರ್ತಿಯವರ ಕೈಬರಹದ ಮುನ್ನುಡಿಯ ಪ್ರತಿ ಈಗಲೂ ನನ್ನ ಬಳಿ ಇದೆ. ಅದರಲ್ಲಿ ಅವರು ಎಚ್. ಎಸ್. ಶಿವಪ್ರಕಾಶರ ಕಾವ್ಯದ ಬಗ್ಗೆ ಬರೆದ ಕೆಲವು ಹೊಸದಾಗಿ ಸೇರಿಸಿದ ಸಾಲುಗಳ ದಾಖಲೆಯೂ ಇದೆ. ಪ್ರಾಯಃ ನನಗೆ ಮುನ್ನುಡಿ ಕೊಡುವ ಮುನ್ನ ಅನಂತಮೂರ್ತಿ ಅದನ್ನು ಕಿರಂಗೆ ಓದಿಸಿರಬೇಕು. ಆಗ ಹೊಸದಾಗಿ ಪ್ರವರ್ಧಮಾನಕ್ಕೆ ಬರುತ್ತಿದ್ದ ಗೆಳೆಯ ಶಿವಪ್ರಕಾಶರ ಕಾವ್ಯದ ಬಗ್ಗೆ ಕೆಲವು ಸಾಲುಗಳನ್ನು ಅನಂತಮೂರ್ತಿ ಸೇರಿಸಿರಬೇಕು. ನಾನು ಹರಿಗೋಲು ಎಂಬ ಆತ್ಮಕಥನಾತ್ಮಕವಾದ ದೀರ್ಘ ಪದ್ಯ ಬರೆದಿದ್ದ ಸಂದರ್ಭ. ಅದನ್ನು ಅನಂತಮೂರ್ತಿಯವರಿಗೆ ಓದಬೇಕೆಂದು ನಾನು ಮತ್ತು ಲಕ್ಷ್ಮಣ ರಾವ್ ಮೈಸೂರಿಗೆ ಹೋದೆವು. ಅನಂತಮೂರ್ತಿಯವರ ಗೆಳೆಯರೊಬ್ಬರ ಮನೆಯಲ್ಲಿ ಕೆಲವೇ ಸಾಹಿತ್ಯಾಸಕ್ತರೆದುರು ಕವಿತೆಯ ವಾಚನ ನಡೆಯಿತು. ದೇಹಾಲಸ್ಯವಿದ್ದರೂ ಅನಂತಮೂರ್ತಿ ಕವಿತೆಯನ್ನು ಆಸಕ್ತಿಯಿಂದ ಕೇಳಿದರು. ಆಗಾಗ ಹೊರಬರುತ್ತಿದ್ದ ಅವರ ಉದ್ಗಾರ, “ಆ ಸಾಲುಗಳನ್ನು ಇನ್ನೊಮ್ಮೆ ಓದಿ’ ಎಂದು ಹೇಳುತ್ತಿದ್ದುದು, ಕವಿತೆಯ ವಾಚನ ಮುಗಿದ ಮೇಲೂ ಆಪ್ತ ಗೋಷ್ಠಿಯಲ್ಲಿ ಬಹಳ ಸಮಯ ನಮ್ಮೊಂದಿಗೆ ಕಳೆದಿದ್ದು ನಾನು ಯಾವತ್ತೂ ಮರೆಯಲಾರೆ.
Related Articles
.
.
ಹಿರಿಯಣ್ಣನಂತೆ ಅನಂತಮೂರ್ತಿ ಕೊನೆಯವರೆಗೂ ನನ್ನನ್ನು ನೋಡಿಕೊಂಡರು. ಅವರ ಕಥೆ-ಕವಿತೆಗಳನ್ನು ನಾನು ಹಚ್ಚಿಕೊಂಡು ಓದುತ್ತಿದ್ದೆ. ಸಂಸ್ಕಾರ ಕಾದಂಬರಿಯ ಬಗ್ಗೆ ನಾನು ಬರೆದ ಸಾನೆಟ್ ಮೂರ್ತಿಯವರಿಗೆ ತುಂಬ ಇಷ್ಟವಾಗಿತ್ತು. ಅದೆಷ್ಟು ಅರ್ಥಪೂರ್ಣ ಗಳಿಗೆಗಳನ್ನು ಅವರೊಂದಿಗೆ ಕಳೆದಿದ್ದೇನೆ. ಹೆಗ್ಗೊàಡಿನಲ್ಲಿ ನಡೆಯುವ ಸಾಂಸ್ಕೃತಿಕ ಶಿಬಿರಗಳಲ್ಲಿ ಅವರ ಮಾತುಗಳನ್ನು ಕೇಳಿದ್ದೇನೆ. ಖಾಸಗಿ ಮಾತುಕತೆಯಲ್ಲಿ ಅವರೊಂದಿಗೆ ಅದೆಷ್ಟೋ ಬಾರಿ ತೊಡಗಿದ್ದೇನೆ. ಪ್ರತಿಬಾರಿಯೂ ಅವರ ಸೂಕ್ಷ್ಮ ಚಿಂತನೆಗಳು ನನ್ನ ಮನಸ್ಸಿನ ಆಳಕ್ಕೆ ಹೊಕ್ಕಿವೆ.
Advertisement
ಕೊನೆಕೊನೆಗೆ ಅವರ ಆರೋಗ್ಯ ಕುಂಠಿತವಾಗಿತ್ತಲ್ಲ! ಒಂದು ಬೆಳಿಗ್ಗೆ ಅವರಿಂದ ದೂರವಾಣಿ. “”ನಿನ್ನ ಉತ್ತರಾಯಣ ಪದ್ಯ ಓದುತ್ತಿದ್ದೇನೆ! ಅರ್ಧ ಸೀರೆಯ ಪ್ರಸಂಗ ಬರುತ್ತದಲ್ಲ… ಏನು ಅದು” ಎಂದು ಕೇಳುತ್ತಾರೆ. ಅದು ನಳ-ದಮಯಂತಿ ಪ್ರಸಂಗದ ಸೂಚನೆ ಎಂದಾಗ, “”ಆಹಾ! ಹಾಗೇ ಅಂದುಕೊಂಡೆ” ಎಂದು ಉದ್ಗಾರ ತೆಗೆಯುತ್ತಾರೆ. “”ನೀನೀಗ ಆತ್ಮಸಿದ್ಧಿಯ ಹಾದಿಯಲ್ಲಿದ್ದೀಯ” ಎಂದರು. ಏನು ಹೇಳಬೇಕೋ ತಿಳಿಯದೆ ನಾನು ಮೌನವಹಿಸಿದೆ. “”ನಿನ್ನ ಆಪ್ತಗೀತೆಯೂ ನನಗೆ ತುಂಬ ಇಷ್ಟವಾಗಿದೆ” ಎಂದರು. ನಾನು ಒಂದು ಕ್ಷಣ ತಡೆದು, “”ಸರ್, ಮನೆಯಿಂದ ಮಾತಾಡುತ್ತಿದ್ದೀರಾ? ತಿಂಡಿ ಆಯಿತಾ?” ಕೇಳಿದೆ. ಅನಂತಮೂರ್ತಿಯವರ ಉತ್ತರ ನನ್ನನ್ನು ದಂಗುಬಡಿಸಿತ್ತು. “”ನರ್ಸಿಂಗ್ ಹೋಮ್‌ನಲ್ಲಿ ಇದ್ದೇನಯ್ನಾ! ಡಯಾಲಿಸಿಸ್ ಆಗ್ತಾ ಇದೆ!”
ಅನಂತಮೂರ್ತಿ ತಮ್ಮ ಹೊಸ ಕವಿತೆಗಳ ಬಗ್ಗೆ ಮುನ್ನುಡಿ ಬರೆಯಲು ನನ್ನನ್ನು ಕೇಳಿದರು. ದೀರ್ಘವಾದ ಮುನ್ನುಡಿ ಬರೆದೆ. ಅವರಿಗದು ತುಂಬಾ ಇಷ್ಟವಾಯಿತು. ಆಮೇಲೆ ಅನೇಕ ಬಾರಿ “”ತುಂಬಾ ಚೆನ್ನಾಗಿ ಬರೆದಿದ್ದೀಯ!” ಎನ್ನುತ್ತಿದ್ದರು. ನಮ್ಮಲ್ಲಿ ಪತ್ರವ್ಯವಹಾರ ಕಮ್ಮಿಯಾಗಿತ್ತು. ಅವರು ಬೆಂಗಳೂರಿಗೆ ಬಂದಮೇಲೆ ಮತ್ತೆ ಮತ್ತೆ ದೂರವಾಣಿಯ ಮೂಲಕ ಮಾತಾಡುತ್ತಿದ್ದೆವು. “”ಹೊಸ ಕವಿತೆ ಬರೆದಿದ್ದೀಯಂತೆ. ವಿಜಯಶಂಕರ್ ಹೇಳಿದರು. ನನಗೆ ಕಳಿಸೇ ಇಲ್ಲವಲ್ಲ” ಎಂದು ಒಮ್ಮೆ ಆಕ್ಷೇಪಿಸಿದರು.ಅವರಷ್ಟು ಕಾವ್ಯವನ್ನು ಹಚ್ಚಿಕೊಂಡ ವ್ಯಕ್ತಿಗಳು ಅಪರೂಪ. ಅಡಿಗರ ಕಾವ್ಯದ ಬಗ್ಗೆ ಅವರಷ್ಟು ಘನವಾಗಿ ಬರೆದ ವಿಮರ್ಶಕರೂ ವಿರಳವೇ.
.
.
ನಮ್ಮ ದೇಶ ಯಾವ ದಿಕ್ಕಲ್ಲಿ ಸಾಗಬೇಕೆಂದು ಅನಂತಮೂರ್ತಿ ಸದಾ ಚಿಂತಿಸುತ್ತಿದ್ದರು. ಅನೇಕರಿಗೆ ಅಪಥ್ಯವಾಗುವ ನಿಷ್ಠುರ ಮಾತುಗಳನ್ನು ಸಭೆಗಳಲ್ಲಿ ಆಡುತ್ತಿದ್ದರು. ಲೇಖನಗಳಲ್ಲಿ ಬರೆಯುತ್ತಿದ್ದರು. ಚರ್ಚೆಗೆ ಅವರು ಸದಾ ಮುಕ್ತರಾಗಿದ್ದರು. ಸಾಹಿತ್ಯ ಚರ್ಚೆ ಮತ್ತು ಒಟ್ಟೊಟ್ಟಿಗೇ ಸಾಮಾಜಿಕ, ರಾಜಕೀಯ ಚರ್ಚೆ ಅವರ ಅಂತರಂಗ ಬಹಿರಂಗಗಳಲ್ಲಿ ಸದಾ ನಡೆಯುತ್ತ ಇತ್ತು. ತಮ್ಮ ವಿಚಾರಗಳಲ್ಲಿ ತಾವೇ ಮುಳುಗಿಹೋಗುತ್ತಿದ್ದರು. ಒಮ್ಮೆ ಒಂದು ವಿಷಯದಲ್ಲಿ ಮಗ್ನರಾದರೆಂದರೆ ತಮ್ಮ ಬಳಿ ಬರುವವರಿಗೆಲ್ಲ ಆ ಕುರಿತೇ ಮಾತಾಡುತ್ತಿದ್ದರು. ಎದುರು ಕುಳಿತವರು ಏನೋ ಅಂದರೆ ಅನಂತಮೂರ್ತಿ ಆ ಕ್ಷಣ ತಮ್ಮ ಮುಂದಿನ ವಾಕ್ಯದ ಬಗ್ಗೆ ಯೋಚಿಸುತ್ತ ಇರುತ್ತಿದ್ದರು. ಎದುರು ಕೂತವರ ಮಾತು ಅವರ ಕಿವಿಗೇ ಬೀಳುತ್ತಿರಲಿಲ್ಲ! ಅವರ ಆರೋಗ್ಯ ತುಂಬ ಕ್ಷೀಣಿಸಿದ ದಿನಗಳು. ವ್ಯಗ್ರವಾದ ಟೀಕೆಗಳು ಅವರನ್ನು ಘಾಸಿಪಡಿಸಿದ್ದವು. ಆದರೆ, ಪ್ರವಾಹದ ವಿರುದ್ಧ ಈಜುವ ಹಠ ಕೊನೆಯವರೆಗೂ ಬಿಟ್ಟುಕೊಡಲಿಲ್ಲ. ಅವರು ನಡೆಸಿದ ರಾಜಕೀಯ, ಸಾಹಿತ್ಯಕ ವಾಗ್ವಾದಗಳು ಇಡೀ ಸಮೂಹದ ಸ್ವೀಕೃತ ವಿಚಾರಗಳನ್ನು ಪ್ರಭಾವಿಸುವಷ್ಟು ತೀವ್ರವಾಗಿರುತ್ತಿದ್ದವು. ಅವರು ಜಗತ್ತನ್ನಷ್ಟೇ ಅಲ್ಲ, ತಮ್ಮನ್ನು ತಾವೇ ಎದುರುಹಾಕಿಕೊಂಡು ಹೋರಾಡುತ್ತಿದ್ದರು. ಈ ಆತ್ಮಯುದ್ಧ ಈ ಸಮಾಜದಲ್ಲಿ ಅಪರೂಪದ್ದು. ತಮ್ಮ ಕಡು ಟೀಕಾಕಾರರ ಸ್ನೇಹವನ್ನೂ ಅವರು ಕಳೆದುಕೊಳ್ಳಲು ಸಿದ್ಧರಿರಲಿಲ್ಲ. ಟೀಕಿಸಿದವರಿಗೂ ಮೂರ್ತಿಯವರ ಮುನ್ನುಡಿಯ ವಿಮರ್ಶೆ ಬೇಕಾಗುತ್ತಿತ್ತು. ವ್ಯಂಗ್ಯವಿಲ್ಲದೆ ಅಂಥ ಮುನ್ನುಡಿಯ ಜವಾಬ್ದಾರಿಯನ್ನೂ ಅವರು ನಿರ್ವಹಿಸುತ್ತಿದ್ದರು. ಸುಮತೀಂದ್ರ ನಾಡಿಗರ ದಾಂಪತ್ಯಗೀತೆಯ ಬಗ್ಗೆ ಅನಂತಮೂರ್ತಿ ಹಚ್ಚಿಕೊಂಡು ಬರೆದ ಸೊಗಸಾದ ಮುನ್ನುಡಿಯ ಮಾತುಗಳು ನನಗೆ ನೆನಪಾಗುತ್ತಿವೆ.
.
.
ಅವರು ಕೊನೆಗಾಲದಲ್ಲಿ ಬರೆದ ಹಿಂದ್‌ಸ್ವರಾಜ್ ಬಗೆಗಿನ ಕೃತಿಯನ್ನು ನಾನು ಮತ್ತೆ ಮತ್ತೆ ಓದುತ್ತೇನೆ. ಹಾಗೇ ಅವರು ಮಾಡಿದ ವರ್ಡ್ಸ್‌ವರ್ತ್, ಬ್ಲೇಕ್, ಯೇಟ್ಸ್ ಮೊದಲಾದವರ ಅನುವಾದಗಳನ್ನು. ನಾನು ಪಂಪನ ವಿಕ್ರಮಾರ್ಜುನ ವಿಜಯದ ಆಯ್ದ ಭಾಗದ ತಿಳಿಗನ್ನಡ ಅವತರಣ ಸಿದ್ಧಪಡಿಸಿದ್ದೆ. ಅಭಿನವ ರವಿಕುಮಾರ್ ಅದನ್ನು ತುಂಬ ಸುಂದರವಾಗಿ ಪ್ರಕಟಿಸಿದ್ದರು. ಆ ಕೃತಿಯನ್ನು ಅನಂತಮೂರ್ತಿ ಬಿಡುಗಡೆ ಮಾಡಬೇಕೆಂಬುದು ನನ್ನ ಆಸೆ! ಆದರೆ, ಅನಂತಮೂರ್ತಿಯವರ ಆರೋಗ್ಯ ಸಭೆ-ಸಮಾರಂಭದಲ್ಲಿ ಭಾಗವಹಿಸುವಷ್ಟು ಚೆನ್ನಾಗಿರಲಿಲ್ಲ. ನನ್ನ ಮೇಷ್ಟ್ರಾದ ಡಾ. ಹಂಪನಾ ಅವರನ್ನು ಪುಸ್ತಕ ಬಿಡುಗಡೆ ಮಾಡಿಕೊಡಲು ಕೋರಿದ್ದೆ. ಅವರು ಪುಸ್ತಕ ಬಿಡುಗಡೆ ಮಾಡಿ ಪಂಪನ ಬಗ್ಗೆ ತಮ್ಮ ವಿದ್ವತೂ³ರ್ಣ ಮಾತುಗಳನ್ನು ಆಡುತ್ತಿರುವಾಗ ಒಮ್ಮೆಗೇ ಅನಂತಮೂರ್ತಿ ಪರಿಷತ್ತಿನ ಸಭಾಂಗಣದ ಬಾಗಿಲ ಬಳಿ ಪ್ರತ್ಯಕ್ಷರಾಗಿಬಿಡೋದೆ ! ನನ್ನ ಕೋರಿಕೆ ಮನ್ನಿಸಿ ನಿಧಾನಕ್ಕೆ ವೇದಿಕೆಯ ಮೇಲೆ ಬಂದರು. ಕೆಲವೇ ನಿಮಿಷ ಮಾತಾಡಿದರು. ಆ ಕೆಲವೇ ಮಾತುಗಳು ನನ್ನಲ್ಲಿ ಸಾರ್ಥಕ್ಯ ಭಾವವನ್ನು ಉದ್ದೀಪಿಸಿದವು. “ನಮ್ಮ ಪ್ರೀತಿಯ ಎಚ್ಚೆಸ್ವಿ ನಮಗೆ ಗೊತ್ತಿಲ್ಲದಂತೆ ಯಾವುದು ಯಾವಾಗಲೂ ಇತ್ತೋ ಅದು ಮಗುವಿನ ಕಣ್ಣಿಗೂ ಸಿಗಬೇಕು ಎಂಬ ಆಸೆಯಿಂದ ಪದಬಂಧ ಬಿಡುಗಡೆಯ ಆಟ ಆಡಿ, ಇಲ್ಲಿ ಬಿಚ್ಚಿ , ಅಲ್ಲಿ ಬದಲಾಯಿಸಿ, ಬದಲಾಗಿಲ್ಲ ಎಂದು ಎನ್ನಿಸುವಂತೆಯೂ ಬದಲಾಯಿಸಿ, ಉಭಯಕವಿಯಾಗಿ ನಮಗೆ ಸಲ್ಲುತ್ತಾರೆ! ಕುಬjನಾಗದಂತೆ ಪಂಪ ಇಲ್ಲಿ ಆಧುನಿಕನಾಗಿದ್ದಾನೆ!’
ಒಬ್ಬ ಲೇಖಕ ಇದಕ್ಕಿಂತ ಇನ್ನಾವ ದೊಡ್ಡ ಮಾತನ್ನು ವಿಮರ್ಶೆಯ ವಲಯದಿಂದ ನಿರೀಕ್ಷಿಸಬಹುದು? ಎಚ್. ಎಸ್. ವೆಂಕಟೇಶಮೂರ್ತಿ