Advertisement

ಅನಂತಕುಮಾರ್‌ ಹೆಗಡೆ ಅಣಕು ಸಮಾಧಿ

05:17 PM Feb 06, 2018 | Team Udayavani |

ದಾವಣಗೆರೆ: ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಸಂವಿಧಾನ ಬದಲಾಯಿಸುವ ಹೇಳಿಕೆ ನೀಡಿರುವುದನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್‌ ಎಸ್ಸಿ
ವಿಭಾಗ ಕಾರ್ಯಕರ್ತರು ಸೋಮವಾರ ಅನಂತಕುಮಾರ ಹೆಗಡೆಯವರ ಅಣಕು ಶವಯಾತ್ರೆ, ಸಮಾಧಿ ಮಾಡಿ ಪ್ರತಿಭಟನೆ ನಡೆಸಿದರು.

Advertisement

ಸಂವಿಧಾನ ಬದಲಾಯಿಸುತ್ತೇವೆ. ಆ ಕಾರಣಕ್ಕಾಗಿಯೇ ಅಧಿಕಾರಕ್ಕೆ ಬಂದಿದ್ದೇವೆ ಎಂದು ಹೆಗಡೆ ಸಂವಿಧಾನ ವಿರೋಧಿ ಹೇಳಿಕೆ ನೀಡಿದ್ದಾರೆ. ಕೂಡಲೇ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಬೇಕು ಎಂದು ಒತ್ತಾಯಿಸಿ ಮಹಾನಗರ ಪಾಲಿಕೆಯಿಂದ ಅಂಬೇಡ್ಕರ್‌ ವೃತ್ತ, ಜಯದೇವ ವೃತ್ತ, ಮಹಾತ್ಮಗಾಂಧಿ ವೃತ್ತದ ಮೂಲಕ ಮಹಾನಗರ ಪಾಲಿಕೆವರೆಗೆ ಅಣಕು ಶವಯಾತ್ರೆ ನಡೆಸಿ, ಮಹಾನಗರ ಪಾಲಿಕೆ ಹೊರ ಭಾಗದಲ್ಲಿ ಅನಂತಕುಮಾರ ಹೆಗಡೆ ಸಮಾಧಿ ಮಾಡಿದರು.

ಸ್ವತಂತ್ರ ಭಾರತದಲ್ಲಿ ಡಾ| ಅಂಬೇಡ್ಕರ್‌ ನೇತೃತ್ವದ ಸಮಿತಿ ದೇಶಕ್ಕೆ ಸಂವಿಧಾನ ನೀಡಿದೆ. ಏಕತೆ, ಅಖಂಡತೆ, ಸಮಾನತೆ ಮತ್ತು ಜಾತ್ಯತೀತ
ನೆಲೆಗಟ್ಟಿನ ಮೇಲೆ ಭಾರತದ ಸಾರ್ವಭೌಮತ್ವಕ್ಕೆ ಭದ್ರ ಬುನಾದಿ ಹಾಕಿದವರು. ಇಡೀ ವಿಶ್ವವೇ ಮೆಚ್ಚುವಂತಹ ಸಂವಿಧಾನ ನೀಡಿದ್ದಾರೆ.
ಮಹಾನ್‌ ಮಾನವತವಾದಿಯ ಆಶಯಗಳ ಧಿಕ್ಕರಿಸುವ ನಿಟ್ಟಿನಲ್ಲಿ ಸಂವಿಧಾನ ಬದಲಾವಣೆ ಮಾತುಗಳು ಬಿಜೆಪಿಯ ಮನುವಾದಿ ಮನಸ್ಥಿತಿ
ತೋರಿಸುತ್ತದೆ. ಅದು ಅನಂತಕುಮಾರ ಹೆಗಡೆ ಮೂಲಕ ಪುನರುಚ್ಚಾರವಾಗುತ್ತಿರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆ ಎಂದು ಖಂಡಿಸಿದರು.
ಸಂವಿಧಾನ ಪ್ರಕಾರವೇ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿ, ಸಚಿವರಾಗಿರುವ ಅನಂತಕುಮಾರ ಹೆಗಡೆ ಈಗ ಅದೇ ಸಂವಿಧಾನ ಬದಲಾಯಿಸುವ
ಹೇಳಿಕೆ ನೀಡಿರುವುದು ಸಂವಿಧಾನ ಮತ್ತು ಅಂಬೇಡ್ಕರ್‌ರವರಿಗೆ ಮಾಡಿದ ಅಪಮಾನ. ಕೂಡಲೇ ಅನಂತಕುಮಾರ ಹೆಗಡೆ ದೇಶದ ಜನರ
ಬಹಿರಂಗ ಕ್ಷಮೆ ಕೋರಬೇಕು. ಪ್ರಧಾನಿ ನರೇಂದ್ರ ಮೋದಿ ಅವರು ಅನಂತಕುಮಾರ ಹೆಗಡೆಯನ್ನು ಕೂಡಲೇ ಸಂಪುಟದಿಂದ ವಜಾ ಮಾಡಬೇಕು
ಎಂದು ಒತ್ತಾಯಿಸಿದರು.

ಸಂವಿಧಾನ ಬದಲಾಯಿಸುವ ಹೇಳಿಕೆ ನೀಡಲು ಅವರಿಗೆ ಅಧಿಕಾರ ನೀಡಿದವರು ಯಾರು. ಪ್ರಧಾನಿ ಮೋದಿ ಇಲ್ಲವೇ ಅಮಿತ್‌ ಶಾ ಅವರೇ
ಎಂಬುದನ್ನು ತಿಳಿಸಬೇಕು. ಅನಂತಕುಮಾರ ಹೆಗಡೆ ಹೇಳಿಕೆ ನೋಡಿದರೆ ಅವರಿಗೆ ಹುಚ್ಚು ಹಿಡಿದಿದೆ ಎಂದೆನಿಸುತ್ತದೆ. ಪರಿಶಿಷ್ಟ ಜಾತಿ, ಪಂಗಡ,
ಹಿಂದುಳಿದವರು ಆ ಹುಚ್ಚನ್ನು ಬಿಡಿಸುತ್ತೇವೆ ಎಂದ ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಪ್ರಧಾನಿ ನರೇಂದ್ರ ಮೋದಿಯವರು
ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಕಾಂಗ್ರೆಸ್‌ ಮುಕ್ತ ಕರ್ನಾಟಕ ಮಾಡುವುದಾಗಿ ಹೇಳಿದ್ದಾರೆ. ರಾಜ್ಯದ ಜನರು ಸಿದ್ದರಾಮಯ್ಯ ಸರ್ಕಾರದ ಜೊತೆಗೆ
ಇದ್ದಾರೆ. ಕಾಂಗ್ರೆಸ್‌ ಮುಕ್ತ ಕರ್ನಾಟಕ ಮಾಡಲಿಕ್ಕೆ ಸಾಧ್ಯವೇ ಇಲ್ಲ ಎಂದರು.

ಬಿಜೆಪಿಯವರಿಗೆ ನಿಜವಾಗಿಯೂ ಪೌರುಷ ಇದ್ದರೆ ದಾವಣಗೆರೆಯ ಅಶೋಕ ಟಾಕೀಸ್‌ ಹತ್ತಿರ ರೈಲ್ವೆ ಗೇಟ್‌ ಮಾಡಿಸಲಿ. ಎಂಪಿ ಸಿದ್ದೇಶ್ವರ್‌ ಈವರೆಗೆ
ಒಂದೇ ಒಂದು ಬಾರಿ ನಗರಪಾಲಿಕೆ ಸಭೆಯಲ್ಲಿ ಭಾಗವಹಿಸಿಲ್ಲ. ದಾವಣಗೆರೆ ಅಭಿವೃದ್ಧಿಯ ಬಗ್ಗೆ ಮಾತನಾಡಿಲ್ಲ. ಒಂದು ಗುಂಡಿ ಮುಚ್ಚಿಸುವ
ಕೆಲಸವನ್ನೂ ಮಾಡಿಲ್ಲ ಎಂದು ದೂರಿದರು. ಜಿಲ್ಲಾ ಕಾಂಗ್ರೆಸ್‌ ಎಸ್ಸಿ ವಿಭಾಗ ಅಧ್ಯಕ್ಷ ಬಿ.ಎಚ್‌. ವೀರಭದ್ರಪ್ಪ, ನಗರಸಭೆ ಮಾಜಿ ಅಧ್ಯಕ್ಷ ಬಿ.
ವೀರಣ್ಣ, ರಾಮಯ್ಯ, ಜಯಣ್ಣ, ಸಿ. ಬಸವರಾಜ್‌, ನಾಗರಾಜನಾಯ್ಕ, ರಾಜೇಶ್‌, ವಿಶ್ವನಾಥ್‌, ಟಿ. ರಮೇಶ್‌, ಬೇತೂರು ಮಂಜುನಾಥ್‌, ಅವಿನಾಶ್‌,
ಭಾಗ್ಯದೇವಿ, ಶ್ಯಾಮ್‌, ಬಿ.ಎಂ. ಈಶ್ವರ್‌, ಬಿ.ಎಂ. ರಾಮಸ್ವಾಮಿ, ಮಂಜಪ್ಪ ಹಲಗೇರಿ ಇದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next