ಶಿರಸಿ: ಪೂರ್ವ ನಿಗದಿತ ಪ್ರಯಾಣ ಹಾಗೂ ಸಂಸತ್ತಿನ ಕಲಾಪಗಳ ಕಾರಣದಿಂದ ವಿಧಾ ಪರಿಷತ್ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು ಸಂಸದ ಅನಂತಕುಮಾರ ಹೆಗಡೆ ಸ್ಪಷ್ಟಪಡಿಸಿದ್ದಾರೆ.
ವಿಧಾನ ಪರಿಷತ್ ಚುನಾವಣೆ ಘೋಷಣೆಯಾದಾಗಿನಿಂದ ಪೂರ್ವ ನಿಗದಿತ ಬೆಂಗಳೂರು, ಮೈಸೂರು ಹಾಗೂ ತಮಿಳುನಾಡು ಪ್ರವಾಸದಲ್ಲಿದ್ದೇನೆ. ನವೆಂಬರ್ 29 ರಿಂದ ಸಂಸತ್ತಿನ ಚಳಿಗಾಲದ ಅಧಿವೇಶನ ಪ್ರಾರಂಭವಾಗಿದೆ. ಸಂಸತ್ತಿನ ಕಲಾಪಗಳಲ್ಲಿ ಭಾಗವಹಿಸುತ್ತಿರುವುದರಿಂದ ಅನಿವಾರ್ಯವಾಗಿ ಉತ್ತರ ಕನ್ನಡ ವಿಧಾನ ಪರಿಷತ್ ಚುನಾವಣೆಯ ಬಿಜೆಪಿ ಅಭ್ಯರ್ಥಿ ಗಣಪತಿ ಉಳ್ವೇಕರ್ ಪರವಾಗಿ ಮತ ಪ್ರಚಾರಕ್ಕೆ ಬರಲು ಸಾಧ್ಯವಾಗಿರುವುದಿಲ್ಲ ಎಂದು ತಿಳಿಸಿದ್ದಾರೆ.
ಈಗಾಗಲೇ ಈ ವಿಷಯವನ್ನು ಜಿಲ್ಲೆಯ ಎಲ್ಲಾ ಮುಖಂಡರಿಗೂ ತಿಳಿಸಲಾಗಿದೆ. ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲು ಪಕ್ಷದ ಮುಖಂಡರು ಸಾಮೂಹಿಕ ಜವಾಬ್ದಾರಿಯನ್ನು ಸ್ವೀಕರಿಸಲು ಸೂಚಿಸಿರುತ್ತೇನೆ ಎಂದ ಅವರು, ಅಭ್ಯರ್ಥಿ ಗಣಪತಿ ಉಳ್ವೇಕರ್ ಇವರ ಗೆಲುವು ನಿಶ್ಚಿತ. ಈಗಾಗಲೇ ಜಿಲ್ಲೆಯ ಶಾಸಕರು, ಉಸ್ತುವಾರಿ ಮಂತ್ರಿಗಳು ಹಾಗೂ ಇನ್ನೀತರ ಮುಖಂಡರುಗಳು ಬಿಜೆಪಿ ಅಭ್ಯರ್ಥಿಯ ಗೆಲುವಿಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದಿದ್ದಾರೆ.
ರಾಜ್ಯ ಹಾಗೂ ಕೇಂದ್ರ ಸರಕಾರದ ಅಭಿವೃದ್ಧಿ ಕಾರ್ಯಗಳೇ ಅಭ್ಯರ್ಥಿ ಗೆಲುವಿಗೆ ಪೂರಕವಾಗಲಿವೆ. ಈ ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಮತದಾರರಾಗಿದ್ದು, ಅವರೆಲ್ಲರೂ ಜಿಲ್ಲೆಯ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಬಿಜೆಪಿ ಪಕ್ಷದ ಅಭ್ಯರ್ಥಿಯ ಪರವಾಗಿ ಮತವನ್ನು ಚಲಾಯಿಸಲಿದ್ದು, ಈ ಬಾರಿ ಗಣಪತಿ ಉಳ್ವೇಕರ್ ಇವರು ಮೇಲ್ಮನೆಯನ್ನು ಪ್ರವೇಶಿಸುವುದು ನಿಶ್ಚಿತ ಎಂದರು.
ಜಿಲ್ಲೆಯ ಪ್ರಬುದ್ಧ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು ಬಿಜೆಪಿ ಅಭ್ಯರ್ಥಿಯ ಪರವಾಗಿ ಮತವನ್ನು ಚಲಾಯಿಸಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಉಳ್ವೇಕರ್ ಇವರನ್ನು ಬಹುಮತದಿಂದ ಆರಿಸಿ ತರಬೇಕೆಂದು ಮತದಾರರಲ್ಲಿ ವಿನಂತಿಸಿಕೊಳ್ಳುವುದಾಗಿಯೂ ತಿಳಿಸಿದರು.