Advertisement

ಐಟಿ ಮುಂಚೂಣಿಯಲ್ಲಿ ಸಂಸ್ಕೃತ :ಸಚಿವ ಅನಂತಕುಮಾರ್‌ ಹೆಗಡೆ ವಿಶ್ವಾಸ

09:53 AM Dec 11, 2018 | |

ಸುರತ್ಕಲ್‌: ಸಂಸ್ಕೃತ ಅತ್ಯಂತ ಶ್ರೀಮಂತ ಭಾಷೆ. ಇದರ ಪ್ರತಿಯೊಂದು ಶಬ್ದವೂ ಕೋಡ್‌ ವರ್ಡ್‌ಗೆ ಸಮಾನವಾಗಿದ್ದು, ಭವಿಷ್ಯದಲ್ಲಿ ಕಂಪ್ಯೂಟರ್‌, ರೋಬೋಟ್‌ ಸಹಿತ ತಂತ್ರಜ್ಞಾನ ಆಧರಿತವಾಗಿರುವ ಐಟಿ ವಲಯದಲ್ಲಿ ಸಂಸ್ಕೃತ ಮುಂಚೂಣಿಯಲ್ಲಿ ಇರಲಿದೆ ಎಂದು ಕೇಂದ್ರ ಕೌಶಲ ಅಭಿವೃದ್ಧಿ, ಉದ್ಯಮಶೀಲತೆ ಇಲಾಖೆಯ ಸಚಿವ ಅನಂತ್‌ ಕುಮಾರ್‌ ಹೆಗಡೆ ಹೇಳಿದರು.

Advertisement

ಮಂಗಳೂರಿನ ಮುಕ್ಕದಲ್ಲಿರುವ ಶ್ರೀನಿವಾಸ ವಿಶ್ವವಿದ್ಯಾಲಯದ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌ ಆ್ಯಂಡ್‌ ಟೆಕ್ನಾಲಜಿಯಲ್ಲಿ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರನ್ನು ಉದ್ದೇಶಿಸಿ, “ಸ್ಕಿಲ್‌ ಇನ್‌ ಹೈಯರ್‌ ಎಜುಕೇಶನ್‌’ ಕುರಿತು ಅವರು ಮಾತನಾಡಿದರು.

ತಂತ್ರಜ್ಞಾನದಲ್ಲಿ ಸಂಸ್ಕೃತ ಭಾಷೆ ಬಳಕೆಯ ಕುರಿತು ಸ್ವತಃ ಐಟಿ ತಜ್ಞರೇ ಸಾಧ್ಯತೆಗಳನ್ನು ಗುರುತಿಸಿದ್ದಾರೆ. ವಿದ್ಯಾರ್ಥಿಗಳ ಮನದಲ್ಲಿ ಹೊಸ ಚಿಂತನೆ, ಆವಿಷ್ಕಾರದ ಯೋಜನೆ ಯನ್ನು ಹುಟ್ಟು ಹಾಕಲು ಉಪನ್ಯಾಸಕ ವರ್ಗ ಪ್ರೇರೇಪಿಸುವ ಕೆಲಸ ಮಾಡಬೇಕು ಎಂದರು.

ದೇಶದ ವಿಜ್ಞಾನ, ತಂತ್ರಜ್ಞಾನ ಕಾಲೇಜುಗಳು, ಯುವಶಕ್ತಿ ಹೊಸ ಹೊಸ ಆವಿಷ್ಕಾರ ಮಾಡಲು ಮುಂದಾದಲ್ಲಿ ಭಾರತ ಸರಕಾರ ಸಹಾಯಹಸ್ತ ಚಾಚಲು ಸದಾ ಸಿದ್ಧ ಎಂದು ಅನಂತಕುಮಾರ್‌ ಹೆಗಡೆ ಭರವಸೆ ನೀಡಿದರು.
ಭಾರತದ ಪ್ರತಿಭೆಗಳು ಅನ್ಯ ದೇಶ ಗಳಲ್ಲಿ ಸಾಧನೆ ಮಾಡುತ್ತಿದ್ದಾರೆ. ನಮ್ಮ ಪ್ರತಿಭೆಗಳನ್ನು ಬೆಳೆಸಿ ನಮ್ಮಲ್ಲೇ ಉಳಿಸಿಕೊಳ್ಳಲು ಕೌಶಲಾಭಿವೃದ್ಧಿಯ ಅಗತ್ಯ ಇದೆ ಎಂದು ಇದೇ ಸಂದರ್ಭದಲ್ಲಿ ಸಚಿವರು ತಿಳಿಸಿದರು.
ವಿಶ್ವವಿದ್ಯಾಲಯದ ಕುಲಪತಿ ಸಿ.ಎ.ಎ. ರಾಘವೇಂದ್ರ ರಾವ್‌ ಅಧ್ಯಕ್ಷತೆ ವಹಿಸಿದ್ದರು. ಯಕ್ಷಗಾನದ ಮೂಲಕ ಕೇಂದ್ರ ಸಚಿವರನ್ನು ಸ್ವಾಗತಿಸಲಾಯಿತು. ಸಹ ಕುಲಪತಿ ಡಾ| ಶ್ರೀನಿವಾಸ ರಾವ್‌ ಸ್ವಾಗತಿಸಿ, ಉಪಕುಲಪತಿ ಡಾ| ಪಿ.ಎಸ್‌. ಐತಾಳ ವಂದಿಸಿದರು. ಡಾ| ಮಂಗಳಾ ಮತ್ತು ಡಾ| ಅಕ್ಷತಾ ಶೆಟ್ಟಿ ನಿರೂಪಿಸಿದರು. ಪ್ರೊ| ಶ್ರೀನಾಥ್‌ ರಾವ್‌ ಪ್ರಸ್ತಾವನೆಗೈದರು.

Advertisement

Udayavani is now on Telegram. Click here to join our channel and stay updated with the latest news.

Next