ಜಾತಿ ಸಂಪ್ರದಾಯಗಳಿಗೆ ಕೊಡುವಷ್ಟು ಪ್ರಾಮುಖ್ಯತೆಯನ್ನು ನಮ್ಮ ಸಮಾಜ ಶಿಕ್ಷಣಕ್ಕೆ ನೀಡಿಲ್ಲ. ಇನ್ನು ಶಿಕ್ಷಣದ ಕುರಿತು ಅರಿವಿರುವವರು ವಿದ್ಯಾಭ್ಯಾಸ ಕ್ಕೆ ಒತ್ತುಕೊಟ್ಟರು. ಆದರೇ, ಅದರಲ್ಲೂ ತಾರತಮ್ಯ. ಅನಾದಿ ಕಾಲದಿಂದಲೂ ಪುರುಷ ಪ್ರಧಾನ ಪದ್ಧತಿಯನ್ನು ಮೈಗೂಡಿಸಕೊಂಡ ಈ ಸಮಾಜದಲ್ಲಿ ಮಹಿಳೆಯರ ಸಬಲೀಕರಣ ಎಂಬುದು ಕನಸಿನ ಮಾತಾಗಿತ್ತು. ಸ್ವಾತಂತ್ರ್ಯ ಪೂರ್ವದಲ್ಲಿ ಒಬ್ಬ ಮಹಿಳೆ ಅಕ್ಷರಾಭ್ಯಸ ಮಾಡುವುದು ಎನ್ನುವುದು ದೊಡ್ಡ ಸವಾಲೇ ಸರಿ. ಮನೆಯ ಮೂಲೆಗೆ ಸೀಮಿತವಾಗಿದ್ದ ಹೆಣ್ಣು ಸ್ವಾತಂತ್ರ್ಯ ಪೂರ್ವ ಭಾರತದಲ್ಲಿ ವೈದ್ಯಕೀಯ ಶಿಕ್ಷಣವನ್ನು ಕಲಿಯುವುದು ಎನ್ನುವುದು ಒಂದು ಕ್ರಾಂತಿಕಾರಿ ಸಂಗತಿ.
ಇಂತಹ ಕ್ರಾಂತಿಕಾರಿ ಸಂಗತಿಯನ್ನು ಒಳಗೊಂಡ ಸ್ತ್ರೀ ಶಿಕ್ಷಣದ ಕುರಿತಾಗಿ, ಸ್ತ್ರೀ ಧ್ವನಿಯನ್ನು ಎತ್ತಿ ಹಿಡಿದ ಚರಿತ್ರೆಯ ಕಥೆಯೇ ‘ಆನಂದಿ ಗೋಪಾಲ್’. ಭಾರತದ ಮೊದಲ ವೈದ್ಯೆ ಎಂದು ಗುರುತಿಸಿಕೊಂಡಿರುವ ಆನಂದಿ ಗೋಪಾಲ್ ರಾವ್ ಜೋಶಿಯ ಜೀವನಾಧಾರಿತ ವೇ ‘ಆನಂದಿ ಗೋಪಾಲ್’ಮರಾಠಿ ಚಿತ್ರ. ಸಮೀರ ವಿದ್ವಾನ್ ನಿರ್ದೇಶನದಲ್ಲಿ ಮೂಡಿ ಬಂದ ಚಿತ್ರದಲ್ಲಿ ಭಾಗ್ಯಶ್ರೀ ಮಿಲಿಂದ್ ಹಾಗೂ ಲಲಿತ್ ಪ್ರಭಾಕರ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದು, ಮರಾಠಿ ರಂಗಭೂಮಿಯ ಪ್ರಬುದ್ಧ ಕಲಾವಿದರನ್ನ ಒಳಗೊಂಡ ಸ್ತ್ರೀ ಸಂವೇ=ದನೆ ಪ್ರತಿ ಬಿಂಬಿಸುವ ಚಿತ್ರವಾಗಿದೆ.
ತಾನು ಅನುಭವಿಸಿದ ಕಷ್ಟ ಮತ್ಯಾವ ಹೆಣ್ಣು ಅನುಭವಿಸಬಾರದೆಂಬ ವಿಶಾಲವಾದ ಮನಸ್ಸು ಆನಂದಿಯನ್ನು ವೈದ್ಯೆಯಾಗಲು ಪ್ರೇರೆಪಿಸಿದ್ದು ಎನ್ನುವದರಲ್ಲಿ ಅನುಮಾನವಿಲ್ಲ. ಮೌಢ್ಯತೆಯನ್ನು ಪಾಲಿಸುವ, ಪುರುಷ ಪ್ರಧಾನ ಉತ್ತುಂಗದಲ್ಲಿದ್ದ ಆ ಕಾಲದಲ್ಲಿ, ಮುಕ್ತವಾದ ಚಿಂತನೆಗಳನ್ನು ಹೊಂದಿದ ಗೊಪಾಲ್ ರಾವ್ ರ ಪಾತ್ರ ನಿಜಕ್ಕೂ ಶ್ಲಾಘನೀಯ. ಓರ್ವ ಪುರುಷನ ಸಾಧನೆಯ ಹಿಂದೆ ಒಬ್ಬ ಮಹಿಳೆಯ ಪಾತ್ರ ಮುಖ್ಯ ಎನ್ನುವ ಹಾಗೆ ಓರ್ವ ಮಹಿಳೆಯ ಸಾಧನೆಯ ಹಾದಿಯಲ್ಲಿ ಓರ್ವ ಪುರುಷನ ಪಾತ್ರವಿರುತ್ತದೆ ಎಂಬ ಮಾತನ್ನು ನಿಜವಾಗಿಸಿದ ಉದಾಹರಣೆ ಗೊಪಾಲ್ ರಾವ್ ಎಂದರೆ ತಪ್ಪಾಗಲಾರದು.
ಎಂತಹದೆ ಪರಿಸ್ಥಿತಿ ಬಂದೊದಗಿದರು ಇಡೀ ಊರನ್ನೇ ಎದುರಿಸಿ ತನ್ನ ಹೆಂಡತಿಯ ಸಾಧನೆಗೆ ನೆರವಾದ ಇವರ ವ್ಯಕ್ತಿತ್ವ ಎಲ್ಲ ಕಾಲಕ್ಕೂ ಮಾದರಿಯಾಗುವಂತದ್ದು.
ಚಿತ್ರದಲ್ಲಿ ಮೂಡಿಬಂದ ಪ್ರತಿಯೊಂದು ಪಾತ್ರವೂ ಕೂಡಾ ಮನೋಜ್ಞವಾಗಿ ತೆರೆ ಮೇಲೆ ಮೆರದಿದ್ದು, 2.15 ಗಂಟೆಯ ಸಮಯದಲ್ಲಿ ಆನಂದಿಯ ಜೀವನಕ್ಕೆ ಕನ್ನಡಿ ಹಿಡಿದಿದ್ದಾರೆ. ಹದಿನೆಂಟರ ದಶಕದ ಜೀವನ ಶೈಲಿಯ ಮರುನಿರ್ಮಾಣವು ಪ್ರೇಕ್ಷಕರನ್ನು ಸೆಳೆಯುವಂತಿದೆ. ನಿಜವಾದ ಸ್ತ್ರೀ ಸಬಲೀಕರಣ, ಸ್ತ್ರೀ ಸ್ವಾತಂತ್ರ್ಯ , ಸ್ತ್ರೀ ಶಿಕ್ಷಣ, ಸಮಾನತೆಯ ನಿದರ್ಶನ ಆನಂದಿ ಗೋಪಾಲ್.
ಸ್ತ್ರೀ ಪಾತ್ರಗಳ ಸೌಮ್ಯ ವ್ಯಕ್ತಿತ್ವದ ಬದುಕನ್ನು ಕಂಡು ಎತ್ತರದ ಶಿಖರಕ್ಕೇರಿದ ಆನಂದಿ ಅವರ ಬದುಕು ಸಿನೆಮಾಚವಾಗಿ, ದೃಶ್ಯ ಕಾವ್ಯವಾಗಿ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ.
ವಾಣಿ ಭಟ್ಟ
ಎಸ್.ಡಿ.ಎಂ ಕಾಲೇಜು, ಉಜಿರೆ
ಇದನ್ನೂ ಓದಿ : ‘ಪಾನಿಪುರಿ’ ಹೆಸರೇ ಬಾಯಲ್ಲಿ ನೀರೂರಿಸುತ್ತದೆ…