Advertisement

ಆನಂದದ ಅರುಣ ರಾಗ ಮೀರಾ ಕೆ ಪ್ರಭುವಿನ ಕಾಂತಾಸಮ್ಮಿತ

05:15 PM Oct 19, 2017 | |

ಕಾಮಿಡಿ ಅಂದ್ರೆ ಒಂದಿಷ್ಟು ಪಂಚಿಂಗ್‌ ಡೈಲಾಗ್‌ಗಳು. ಕಾಮಿಡಿಯನ್‌ ಸೀರಿಯಸ್‌ ಆದಷ್ಟೂ ಮಜಾ ಕೊಡೋದು ಜಾಸ್ತಿ. ಉಳಿದಂತೆ ಮ್ಯಾನರಿಸಂ ಎಲ್ಲ ಲೆಕ್ಕಕಿಲ್ಲವೇನೋ ಅಂತಿರುವ ಹೊತ್ತಿಗೆ ಅರುಣ್‌ ಸಾಗರ್‌ ನೆನಪಾಗ್ತಾರೆ. ಸಿನಿಮಾ ಬದುಕಿನ ಡೇಒನ್‌ನಿಂದ ಅವರು ವಿಲಕ್ಷಣ ಪಾತ್ರಗಳ ಮೂಲಕ ಗಮನಸೆಳೆದವರು. ಮನೆಯಲ್ಲೂ ಅವರಿರೋದು ಹಾಗೇನಾ? ಹೆ‌ಂಡ್ತಿ ಜತೆಗೆ ಜಗಳ ಆಡಲ್ವಾ, ಅಲ್ಲೂ ನಗಿಸ್ತಾನೇ ಇರ್ತಾರಾ? ಇಂತಹ ಸಣ್ಣ ಸಣ್ಣ ಕುತೂಹಲಗಳನ್ನಿಟ್ಟುಕೊಂಡೇ ಅವರ ಆರ್ಟ್‌ಸ್ಕೂಲ್‌ನತ್ತ ಹೆಜ್ಜೆಹಾಕಿದ್ದು. ಅಲ್‌ ನೋಡಿದ್ರೆ ಅರುಣ್‌ಸಾಗರ್‌ ಐಡೆಂಟಿಟಿ ಹಾಗಿದ್ದ ಉದ್ದ ಜುಟ್ಟಿಗೇ ಕತ್ತರಿಬಿದ್ದಿದೆ! ಚಿಕ್ಕಕೂದಲಿನ ಅರುಣ್‌ ಮತ್ತವರ “ಉದ್ದಜಡೆ’ಯ ಹುಡುಗಿ ಮೀರಾ, ತುಂಟ ಮಗಳು ಅದಿತಿ ಹರಟೆಗೆ ಸಿಕ್ಕರು. 

Advertisement

ಹೀಗಿರ್ತಾರೆ ಮೀರಾ 
“ನಮ್ಮನೆಯೇ ಡ್ರಾಯಿಂಗ್‌ ಸ್ಕೂಲ್‌ ಆಗಿತ್ತು, ನಮ್ಮ ಮುತ್ತಜ್ಜಿ ಮೈಸೂರು ಮಹಾರಾಣಿಗೆ ಡ್ರಾಯಿಂಗ್‌ ಟೀಚರ್‌ ಆಗಿದ್ರು’ ಅಂತ ಹೇಳಿ ಕುತೂಹಲ ಮೂಡಿಸಿದ್ರು ಮೀರಾ.  ಅವರು ಬನಶಂಕರಿಯಲ್ಲಿ ನಡೆಸುತ್ತಿರುವ “ವೃಕ್ಷ’ ಡ್ರಾಯಿಂಗ್‌ಸ್ಕೂಲ್‌ನಲ್ಲಿ ಅವತ್ತು ಮಕ್ಕಳಿರಲಿಲ್ಲ. “ಹ್ಯಾಪಿ ಬರ್ತ್‌ ಡೇ ಮೀರಾ ಮ್ಯಾಮ್‌’ ಎಳೆಯ ಕೈಗಳ ಚಿತ್ರಬರಹವಿದ್ದ ಪೇಪರ್‌ ಗೋಡೆ ಮೇಲಿತ್ತು. ಎದುರಿದ್ದ ಗೋಡೆಯಲ್ಲಿ ಬುದ್ಧ ನಗುತ್ತಿದ್ದ. ಹರೆಯದ ಹುಡುಗಿ ಮಾಳಿಗೆಯ ಚಿಕ್ಕ ಕಿಟಕಿಯಿಂದ ಹೊರಗಿಣುಕುತ್ತಿದ್ದಳು. ಚೆಂದದ ಹೂಗಳು ನಗುತ್ತಿದ್ದವು. ಕಾರ್ನಾಡ್‌ ಪೆನ್‌ ಹಿಡಿದು ಯೋಚನೆಗೆ ಬಿದ್ದಂತಿದ್ದರು. ಬಿ.ವಿ ಕಾರಂತ್‌, ತಿಮ್ಮಕ್ಕ ಮೊದಲಾದವರು ರೇಖೆಗಳಲ್ಲಿ ವಿಭಿನ್ನ ಭಾವ ಭಂಗಿಗಳಲ್ಲಿದ್ದರು. ಮಕ್ಕಳು ನೆಲದಲ್ಲಿ ಕೂತು ಡ್ರಾಯಿಂಗ್‌ಶೀಟ್‌ ಇಡುವ ಪುಟ್ಟ ಟೇಬಲ್‌ನಲ್ಲಿ ಕೂತು ಮೀರ ಸಣ್ಣನಗೆಯಲ್ಲಿ ಮಾತಾಡ್ತಿದ್ದರು. ಚಿತ್ರಕಲೆ ಮೀರಾಗೆ ಮುತ್ತಜ್ಜಿಯಿಂದ ಬಳುವಳಿಯಾಗಿ ಬಂದದ್ದು. ಅವರಿದ್ದ ಮನೆಯೇ ಡ್ರಾಯಿಂಗ್‌ ಸ್ಕೂಲ್‌ ಆಗಿತ್ತಂತೆ. ಅಜ್ಜಿ ಆಸುಪಾಸಿನ ಮಕ್ಕಳಿಗೆಲ್ಲ ಡ್ರಾಯಿಂಗ್‌ ಹೇಳ್ಕೊಡ್ತಿದ್ರು. ಬುದ್ಧಿಬಂದಾಗಿನಿಂದ ಮೀರಾಗೂ ಚಿತ್ರಕಲೆಯಲ್ಲಿ ಆಸಕ್ತಿ. ಐದನೇ ಕ್ಲಾಸ್‌ನಲ್ಲಿರುವಾಗಲೇ ಕೊಬ್ಬರಿಯಲ್ಲಿ ಆರ್ಟ್‌ ಮಾಡುತ್ತಿದ್ದರು.ಮುಂದೆ ಚಿತ್ರಕಲಾ ಪರಿಷತ್‌ನಲ್ಲಿ ಪದವಿ ಪಡೆದರು.  

ತಪ್ಪಾದ್ರೆ ಹರಿದು ಎಸೀತಾರೆ!
ರಿಯಲಿಸ್ಟಿಕ್‌ ಮಾದರಿಯ ಡ್ರಾಯಿಂಗ್‌ ಇವರಿಗಿಷ್ಟ. “ಒಂದು ಸಬೆjಕ್ಟ್‌ನ° ಸಾಮಾನ್ಯರು ನೋಡೋದಕ್ಕೂ ಕಲಾವಿದರು ನೋಡೋದಕ್ಕೂ ಭಿನ್ನತೆ ಇರತ್ತೆ.ಸಾಮಾನ್ಯರು ಬರೀ ಬಣ್ಣಗಳನ್ನು ನೋಡ್ತಾ ಹೋದ್ರೆ ನಾವು ಅದರ ಶೇಡ್‌ಗಳನ್ನೂ ಗಮನಿಸ್ತೀವಿ, ಸಣ್ಣ ಸಣ್ಣ ಡೀಟೈಲ್‌ಗ‌ಳನ್ನೂ ಚಿತ್ರದಲ್ಲಿ ಮೂಡಿಸ್ತೀವಿ. ಅರುಣ್‌ ಕಲಾನಿರ್ದೇಶಕ ಆಗಿದ್ದಾಗ ನಾನು ಆರ್ಟ್‌ವರ್ಕ್‌ ಮಾಡ್ತಿದ್ದೆ. ಅರುಣ್‌ ಪೇಪರ್‌ ಮೇಲೆ ಸ್ಕೆಚ್‌ ಹಾಕಿ, ಹೀಗೀಗೆ ಬೇಕು ಅಂತ ಹೇಳಿ ಹೋಗ್ತಿದ್ರು. ನನ್ನ ಕಲ್ಪನೆಯಲ್ಲಿ ಅದಕ್ಕೆ ತಕ್ಕಂಥ ಚಿತ್ರ ಬರೆಯುತ್ತಿದ್ದೆ. ಒಂದೆಲ್ಲ ಸಾಕಾಗ್ತಿರಲಿಲ್ಲ. ಒಂದೇ ವಿಷಯದ ಬೇರೆ ಬೇರೆ ಆಯಾಮಗಳ ನಾಲ್ಕು ಡ್ರಾಯಿಂಗ್‌ ಮಾಡ್ಬೇಕು. ಆದಷ್ಟೂ ಕಾಂಪ್ಲೆಕ್ಸ್‌ ಆಗಿರಲಿ, ಮತ್ತೆ ಸರಳಗೊಳಿಸುತ್ತಾ ಹೋಗಬಹುದು ಅನ್ನೋ ಅರುಣ್‌ ಮಾತಿನಂತೆ ಚಿತ್ರ ಬರೆಯುತ್ತಿದ್ದೆ. ನಮ್ಮಿಬ್ಬರಲ್ಲಿ ಅವತ್ತೂ ಇವತ್ತೂ ಭಿನ್ನಾಭಿಪ್ರಾಯ ಅಂತ ಬಂದ್ರೆ ಅದು ಡ್ರಾಯಿಂಗ್‌ ವಿಚಾರಕ್ಕೆ. ಅರುಣ್‌ ಪಫೆìಕ್ಷನಿಸ್ಟ್‌. ಕಾನ್ಸೆಪುr ಅವರ ನಿರೀಕ್ಷೆಗೆ ತಕ್ಕಹಾಗೆ ಬರಲಿಲ್ಲ ಅಂದ್ರೆ ಮುಲಾಜಿಲ್ಲದೇ ಹರಿದುಹಾಕ್ತಿದ್ರು. ಕರೆಕ್ಟಾಗಿ ಬರುವತನಕ ಬಿಡ್ತಿರಲಿಲ್ಲ’  ದಾಂಪತ್ಯದ ಮೊದ ಮೊದಲ ದಿನಗಳ ನೆನೆಪನ್ನು ಹೆಕ್ಕಿಟ್ಟರು ಮೀರಾ.

Advertisement

ಹೀಗಿತ್ತು ಮೊದಲ ಮಧುರ ಪ್ರೇಮ 
 ಇವರ ಮದುವೆಯಾದದ್ದು ಆಕಸ್ಮಿಕ. ಮೀರಾ ಚಿತ್ರಕಲಾ ಪರಿಷತ್‌ನಿಂದ ರಂಗಾಯಣಕ್ಕೆ ಹೋಗಿದ್ದಾಗ ಅರುಣ್‌ ಇವರನ್ನು ನೋಡಿದ್ರು. ಮೊದಲ ನೋಟದಲ್ಲೇ ಪ್ರೀತಿ ಹಕ್ಕಿ ಗರಿಬಿಚ್ಚಿದ್ದು. ಈ ಉದ್ದ ಜಡೆಯ ಹುಡುಗಿ ಹೆಂಡ್ತಿಯಾಗಿದ್ರೆ ಎಷ್ಟು ಚೆನ್ನಾಗಿರಿ¤ತ್ತು ಅನ್ನಿಸಿದ್ದು. ಇಷ್ಟೆಲ್ಲ ಆದ್ಮೇಲೆ ಪರಿಚಯವಾಗಿ ಇವರಿಬ್ಬರ ನಡುವೆ ಗೆಳೆತನ ಬೆಳೆಯಿತು. ಕರ್ನಾಟಕ ಶಾಸ್ತ್ರೀಯ ಸಂಗೀತವೇ ಗ್ರೇಟ್‌ ಅಂದುಕೊಳ್ಳುತ್ತಿದ್ದಾಗ ಹಿಂದೂಸ್ತಾನಿ ಸಂಗೀತದ ಪರಿಚಯ ಮಾಡಿಸಿದ್ದು ಅರುಣ್‌. ಇದೆಲ್ಲ ಪಕ್ಕಕ್ಕಿಟ್ಟು ನೋಡಿದ್ರೆ ಕಾಮನ್‌ ಅನಿಸುವ ಸಾಕಷ್ಟು ವಿಚಾರಗಳು ಇವರ ಬಳಿ ಇದ್ದವು. ಸಣ್ಣಪುಟ್ಟ ಗೊಂದಲ, ಮಾತುಕತೆ ಎಲ್ಲ ಮುಗಿದು ಒನ್‌ಫೈನ್‌ಡೇ ಇವರಿಬ್ಬರ ದಾಂಪತ್ಯ ಶುರುವಾಯ್ತು 10*12ನ ಪುಟಾಣಿ ಮನೆಯಲ್ಲಿ. 

ಪುಟ್ಟ ಮನೆಯಲ್ಲಿ ಕನಸಿನ ಸಂಸಾರ
ಮೊದಮೊದಲು ಮೀರಾ ಮಾಡ್ತಿದ್ದ ಚಿತ್ರಗಳಿಂದಲೇ ಸಂಸಾರ ನಡೆಯುತ್ತಿದ್ದದ್ದು. ಮನೆಯಲ್ಲಿ ಅಡುಗೆಯಿಂದ ಹಿಡಿದು ಕಸ ಹೊಡೆಯೋತನಕ ಎಲ್ಲ ಕೆಲಸ ಅರುಣ್‌ದು. ಮೀರಾ ಬೆಳ್ಳಂಬೆಳಗ್ಗೆ ಕೆಲಸಕ್ಕೆ ಹೋದರೆ ಅಪ್ಪಟ ಗೃಹಸ್ಥನಂತೆ ಅರುಣ್‌ ಮನೆಗೆಲಸದಲ್ಲಿ ಮುಳುಗಿಬಿಡುತ್ತಿದ್ದ ದಿನಗಳು. ಮುಂದೆ “ಭೂಮಿಗೀತ’ಕ್ಕೆ ಅರುಣ್‌ ಕಲಾನಿರ್ದೇಶಕರಾದಾಗ ಅವರ ಕಲ್ಪನೆಯನ್ನು ಗ್ರಹಿಸಿ ಕ್ಯಾನಾಸ್‌ನಲ್ಲಿ ಮೂಡಿಸಿ ಅರುಣ್‌ ಮುಂದಿನ ಬದುಕು ಸುಗಮಗೊಳಿಸಿದ್ದು ಮೀರಾ. ಇಂದು ಇವರು ನಡೆಸೋ ಡ್ರಾಯಿಂಗ್‌ ಸ್ಕೂಲ್‌ನಲ್ಲಿ 50 ಮಂದಿ ವಿದ್ಯಾರ್ಥಿಗಳಿದ್ದಾರೆ.  ಮಕ್ಕಳು ಹುಟ್ಟಿದ ಬಳಿಕವೂ ಕಲೆಯಿಂದ ಮೀರಾ ಹಿಂತೆಗೆಯದಂತೆ ಮಾಡಿದ್ದು ಅರುಣ್‌.

ಕೀಟಲೆ ಮಾಡೋ ಅಪ್ಪ -ಕಿರಿಚೋ ಮಗ್ಳು 
“ಮನೆಯಲ್ಲಿ ಅರುಣ್‌ ಇದ್ರೆ ಮಗಳಿಗೆ ಏನಾದ್ರೂ ಕೀಟಲೆ ಮಾಡ್ತಾನೇ ಇರ್ತಾರೆ. ಅವಳು ಜೋರಾಗಿ ಕಿರಿಚಾ¤ ಇರ್ತಾಳೆ. ಅಕ್ಕಪಕ್ಕದ ಮನೆಗಳೆಲ್ಲ ಸೈಲೆಂಟಾಗಿದ್ರೆ ನಮ್ಮನೆಯಲ್ಲಿ ಮಾತ್ರ ಗದ್ದಲ. ಅದಿಲ್ಲ ಅಂದ್ರೆ ನಾಯಿಗಳ ಗಲಾಟೆ. ಮನೆಯ ಸುತ್ತ  ಹತ್ತು-ಹದಿನೈದು ಬೀದಿನಾಯಿಗಳು ಇರುತ್ತವೆ. ಮಗ ಗಾಯಗೊಂಡ ನಾಯಿಗಳನ್ನೆಲ್ಲ ಮನೆಗೆ ತಂದ್ರೆ ಮಗಳು ಅದರ ಆರೈಕೆ ಮಾಡ್ತಾಳೆ. ಕೆಲವೊಮ್ಮೆ ಡಾಕ್ಟರ್‌ ಶಾಪ್‌ಗೆ ನಾಯಿಗಳನ್ನು ಹೊತ್ಕೊಂಡು ಹೊರಡ್ತೀವಿ’ ಅಂತಾರೆ ಮೀರಾ.  ಇತ್ತೀಚೆಗೆ ಮೀರಾ ಒಂದಿಷ್ಟು ಸೋಶಿಯಲ್‌ ವರ್ಕ್‌ಗಳಲ್ಲೂ ತೊಡಗಿಸಿಕೊಂಡಿದ್ದಾರೆ. ತಮ್ಮ ಪರಿಸರದ ಕಸ ವಿಲೇವಾರಿ ಸಮಸ್ಯೆಯನ್ನು ವಾರಿಗೆಯವರ ಜತೆ ಸೇರಿ ಪರಿಹರಿಸಿಕೊಂಡಿದ್ದಾರೆ. ಅಕ್ಕಪಕ್ಕದವರೊಂದಿಗೆ ಸೇರಿ “ಶುಭ್ರ’ ಅನ್ನೋ ಗುಂಪಿನ ಮೂಲಕ ಕಸದ ಸಮಸ್ಯೆಗೆ ಮುಕ್ತಿ ಕಾಣಿಸಿದ್ದಾರೆ. 

ಅರುಣ್‌ ಸಾಗರ್‌ ಮನೆಯಲ್ಲಿ ಸಾಹಸಿ ಸೂರ್ಯ
“ನನ್‌ ಮಗ ಹಾವು ಹಿಡೀತಾನೆ ಗೊತ್ತಾ?’ ಅಂದ್ರು ಅರುಣ್‌ ಸಾಗರ್‌.  “ಎಲ್ಲಿ?’ ಅಂದ್ರೆ,  “ಎಲ್‌ ಬೇಕಿದ್ರೂ ..ಆಸುಪಾಸಲ್ಲಿ ಹಾವು ನುಗ್ಗಿದ್ರೆ ಅವನನ್ನ ಕರೀತಾರೆ. ಅವ್ನು ಹೋಗಿ ಹಾವು ಹಿಡೀತಾನೆ. ಕಾಳಿಂಗ ಸರ್ಪನೂ ಹಿಡಿದಿದ್ದಾನೆ’ ಅಂದಾಗ ಬೆರಗಾಗುವ ಸರದಿ ನಮ್ಮದು.  ಎಂಟುವರ್ಷಗಳಿಂದ ಬೆಳೆಸಿದ್ದ ಜುಟ್ಟನ್ನ ಕತ್ತರಿಸಿ ಸ್ಮಾರ್ಟ್‌ ಗೆಟಪ್‌ನಲ್ಲಿದ್ರು ಅರುಣ್‌. ಶೂಟಿಂಗ್‌ಗೆ ಹೋದವರು ಆ ದಿನ ಮುಂಜಾನೆ ನಾಲ್ಕಕ್ಕೆ ಮನೆತಲುಪಿದರೂ ನಿದ್ದೆಯಿಲ್ಲದ ಮುಖದಲ್ಲಿ ಲವಲವಿಕೆಗೆ ಕೊರತೆ ಇರಲಿಲ್ಲ.  “ಸೂರ್ಯ ಈಗ ಮೈಸೂರಲ್ಲಿ ಒಂದು ಕೋರ್ಸ್‌ಗೆ ಸೇರ್ಕೂಂಡಿದ್ದಾನೆ. ಇಲ್ಲಾಂದ್ರೆ ಇಲ್ಲೇ ಇರಿ¤ದ್ದ. ಈಗ ಪಿಯುಸಿ ಮಾಡ್ತಿದ್ದಾನೆ. ಮಲೆನಾಡ ನನ್ನೂರಿಗೆ  ಹೋದ್ರೆ ಮನೆಯಲ್ಲಿ ಯಾವ್ಯೂವುದೋ ಹಾವುಗಳನ್ನ ಹಿಡಿದಿಟ್ಟಿರ್ತಾನೆ. ನಮ್ಮಮ್ಮ ಹಾವು ನೋಡಿ ಕ್ಷಣಕ್ಕೊಮ್ಮೆ ಅಯ್ಯಯ್ಯೋ ಅಂತ ಕಿರಿಚುತ್ತಿರುತ್ತಾರೆ. ಊರಿನ ಹುಡುಗರಿಗೆಲ್ಲ ಇವ ಕಿಂದರಿಜೋಗಿ ಹಾಗೆ. ಅವನಿಗೆ ಕಾಗೆ, ನಾಯಿಗಳಿಂದ ಹಿಡಿದು ಎಲ್ಲ ಪ್ರಾಣಿಗಳ ಬಗ್ಗೆಯೂ ಪ್ರೀತಿ. ನಮ್ಮನೆಯ ಆಸುಪಾಸಲ್ಲಿ ಬಾಲ ತುಂಡಾದ, ಬೆನ್ನಲ್ಲಿ, ಹಿಂಭಾಗ ಗಾಯವಾದ ನಾಯಿಗಳದ್ದೇ ಓಡಾಟ. ನನ್ನ ಇಬ್ಬರು ಮಕ್ಕಳು ಅವುಗಳ ಗಾಯಕ್ಕೆ ಔಷಧಿ ಹಚ್ಚುತ್ತಿರುತ್ತಾರೆ ‘ ಅಂದ್ರು.  

ಮಗನ ವಯಸ್ಸಲ್ಲಿ ನಾನು ಹೇಗಿದ್ದೆ?
ಈ ಪ್ರಶ್ನೆ ತಮ್ಮನ್ನ ತಾವೇ ಕೇಳ್ಕೊಂಡ ಹಾಗಿತ್ತು.  “ಸಾಗರ ..ಪುಟ್ಟ ಪ್ರದೇಶ, ಆದರೆ ದೊಡ್ಡ ಜಗತ್ತು. ಹರಿದ ಚೆಡ್ಡಿ ಮೇಲೆಳೆದುಕೊಂದು ನಾಟಕ ಕಂಪೆನಿ ಟೆಂಟ್‌ ಹಾಕಿದ್ದ ಮೈದಾನದೆದುರು ನಿಂತಿರುತ್ತಿದ್ದೆ. ನಮ್ಮ ಮನೆ ಹತ್ತಿರದಲ್ಲೇ ಎರಡು ದೊಡ್ಡ ದೊಡ್ಡ ಮೈದಾನಗಳಿದ್ದವು. ಅಲ್ಲಿಗೆ ಕಂಪೆನಿ ನಾಟಕಗಳು ಬರಿ¤ದ್ದವು, ಆ ಕಂಪೆನಿಯವರು ನಮ್ಮಲ್ಲಿ ಸಹಾಯ ಕೇಳ್ತಿದ್ರು, ಅವರಿಗೆ ಸಹಾಯ ಮಾಡ್ತಾ ನಾವು ಕೆಲಸ ಕಲೀತಿದ್ವಿ. ಸೈನ್‌ಬೋರ್ಡ್‌ ಬರಿಯೋದು, ಸೆಟ್‌ ಹಾಕೋದು, ಆಟೋದಲ್ಲಿ ಅನೌನ್ಸ್‌ ಮಾಡ್ಕೊಂಡು ಊರಿಡೀ ಸುತ್ತೋದು. ಯಕ್ಷಗಾನ ಬಂದ್ರೆ ಬ್ಲ್ಯಾಕ್‌ನಲ್ಲಿ ಟಿಕೆಟ್‌ ಮಾರೋದು, ಉಳಿದ ಸಮಯದಲ್ಲಿ ಮಂಡಕ್ಕಿ ಮಾರಿ¤ದ್ದೆ, ಮೈಲಿಗಲ್ಲು ಬರೀತಿದ್ದೆ, ಮೂವತ್ತು ಮಾರ್ಕಿನ ಬೀಡಿಗಳಿಗೆ ಕುಣಿಯುತ್ತಿದ್ದೆ. ಕೈಗೆ ಸಿಗೋ ಕಾಸಲ್ಲಿ ಸ್ವಲ್ಪ ಅಮ್ಮನಿಗೆ ಕೊಡೋದು ಉಳಿದಿದ್ದರಲ್ಲಿ ನಾನು ಮಜಾ ಮಾಡೋದು!’ ಹುಡುಗನ ಹಿಗ್ಗಿನಿಂದ ಮಾತಾಡ್ತಿದ್ರು ಅರುಣ್‌. ಮುಂದೆ ರಂಗಾಯಣಕ್ಕೆ ಸೇರಿದಾಗ ಬಿ.ವಿ ಕಾರಂತರು ಹೇಳ್ತಿದ್ರಂತೆ, ” ನಾನೇ ಹುಚ್ಚ ಅಂದ್ರೆ ನನಗಿಂತ ದೊಡ್ಡ ಹುಚ್ಚ ಅರುಣ್‌’ ಅಂತ! 

ಮೀರಾ ಮಾಧವ ..
“ಬಹುಶಃ ಮೀರ ಸಿಗದಿದ್ರೆ ಇಷ್ಟೊತ್ತಿಗೆ ನಾನು ಎಲ್ಲೆಲ್ಲೋ ಇರ್ತಿದ್ದೆ. ಹಾಗೆ ಮಾಡ್ಬೇಕು, ಹೀಗೆ ಮಾಡ್ಬೇಕು, ಇಡೀ ಜಗತ್ತೆಲ್ಲ ಸುತ್ತಬೇಕು ..ಹೀಗೇ ಏನೇನೋ ಕನಸುಗಳು. ಇವಳು ಬರದಿದ್ರೆ ಹೆಂಡ್ತಿ ಮಕ್ಕಳು ಸಂಸಾರ ಅಂತೇನೂ ಇರ್ತಿರಲಿಲ್ಲ. ಆದರೆ ಹತ್ತಾರು ಗರ್ಲ್ಫ್ರೆಂಡ್ಸ್‌ ಖಂಡಿತಾ ಇರ್ತಿದ್ರು’  ಅಂದು ಜೋರಾಗಿ ನಕ್ಕರು ಅರುಣ್‌. ಅವರ ಪುಣ್ಯಕ್ಕೆ ಮೀರಾ ದೂರದಲ್ಲಿದ್ದರು! “ಮದುವೆಯಾದ ಹೊಸತರಲ್ಲಿ ಭಾನುವಾರ ಬಂದ್ರೆ ನಮ್ಮದೇ ಲೋಕ. ಇಬ್ಬರೂ ಕೈಕೈ ಹಿಟ್ಕೊಂಡು ಬೆಂಗಳೂರಿನ ಅಷ್ಟೂ ಗ್ಯಾಲರಿಗಳನ್ನು ಕಾಲ್ನಡಿಗೆಯಲ್ಲಿ ಸುತ್ತುತ್ತಿದ್ವಿ. ಜಯನಗರದಿಂದ ಹೊರಟು ಎಂಜಿ ರೋಡ್‌ ಮೂಲಕ ವೆಂಕಟಪ್ಪ ಆರ್ಟ್‌ ಗ್ಯಾಲರಿ ಎಲ್ಲ ನೋಡ್ಕೊಂಡು ಶಿವಾನಂದ ಸರ್ಕಲ್‌ನ ಚಿತ್ರಕಲಾ ಪರಿಷತ್‌ವರೆಗೂ ನಡ್ಕೊಂಡು ಹೋಗೋದು. ಎಲ್ಲ ನೋಡ್ಕೊಂಡು ಮತ್ತೆ ನಡ್ಕೊಂಡು ಬರುವಾಗ ಅವಳು ಅಟೋದಲ್ಲಿ ಹೋಗೋಣ ಅಂತಿದ್ಲು. ಆಗ ಕೈಯಲ್ಲಿ ದುಡ್ಡೆಷ್ಟಿದೆ ಅಂತ ಎಣಿಸ್ತಿದ್ದೆ. ಆಗೆಲ್ಲ ಮೀಟರ್‌ಗೆ ಬಹಳ ಕಡಿಮೆ. ಕೈಯಲ್ಲಿ ಆರು ರೂಪಾಯಿ ಉಳಿಸ್ಕೊಂಡು ಉಳಿದ ದುಡ್ಡಲ್ಲಿ ಎಷ್ಟು ದೂರ ಹೋಗಲಿಕ್ಕಾಗತ್ತೋ ಅಷ್ಟು ದೂರ ಹೋಗೋದು. ನಂಗೆ ಖಾಲಿ ದೋಸೆ ಅಂದ್ರೆ ಪ್ರಾಣ. ಅಟೋಗೆ ಅಂತ ತೆಗೆದಿಟ್ಟ ಕಾಸು ಮುಗಿಯುತ್ತಿದ್ದ ಎಲ್ಲಿಗೆ ಮುಗಿಯತ್ತೋ ಅಲ್ಲೇ ಇಳಿದು  ಆರುರೂಪಾಯಿಗೆ ಇಬ್ಬರೂ ಖಾಲಿದೋಸೆ ತಿಂದು ಮತ್ತೆ ನಡ್ಕೊಂಡು ಹೋಗೋದು. ಆಗ ಸಣ್ಣ ಮನೆ, ಚಿಕ್ಕ ಚಿಕ್ಕ ಆಸೆಗಳು. ಎಷ್ಟೊಂದು ಖುಷಿ’ ಅಂದಾಗ ಅರುಣ್‌ ಕಣ್ಣಲ್ಲಿ ಮಿಂಚು. ಕನಸು ನನಸಿನ ದಾರಿ  ಸಮುದ್ರದ ಭೋರ್ಗರೆತ ಕೇಳುತ್ತಾ, ಕಡಲಂಚಿನ ಗಾಳಿಯಲ್ಲಿ ಬದುಕುವ ಅರುಣ್‌ ಕನಸು ಬಹಳ ಹಿಂದಿನದು. ಸಮುದ್ರ ದಂಡೆಯಲ್ಲಿ ಗೂಡು ಕಟ್ಟುವ ಅವರ ಕನಸು ನನಸಾಗುವ ಹಾಗಿದೆಯಂತೆ.  ಎಲ್ಲಿರೋದು ಆ ಜಾಗ? ಅಂದ್ರೆ ಸುತರಾಂ ಗುಟ್ಟುಬಿಡಲಿಲ್ಲ. ಅಲ್ಲೊಂದು ಸಣ್ಣ ಕುಟೀರ ಕಟ್ಟಿ ಮನಸೋ ಇಚ್ಛೆ ಬದುಕುವ ಹಂಬಲ ಅವರದ್ದು. ಅದಕ್ಕೊಂದು ಚೆಂದದ ಹೆಸರೂ ಇಟ್ಟಾಗಿದೆ, “ಗಾಂಧಿ ಸ್ಕೂಲ್‌’ ಅಂತ. 

ಫ್ಯಾಮಿಲಿಗೆ ಟೈಂ
ಕೆಲಸದ ಒತ್ತಡದಲ್ಲಿ ಮಗನ ಬಾಲ್ಯ ಕಳೆದೇ ಹೋಯ್ತು ಅಂದಾಗ ಅರುಣ್‌ಗೆ ಸ್ವಲ್ಪ ಬೇಸರವಾಗುತ್ತದೆ. ಮೀರಾ ಮೊದಲ ಪ್ರಗ್ನೆನ್ಸಿ ವೇಳೆ ಅರುಣ್‌ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ರು. ಬೇರೆ ದಾರಿಯಿಲ್ಲದೇ ಮೀರಾ ಅವರೊಬ್ಬರೇ ಆಸ್ಪತ್ರೆಗೆ ಸೇರ್ಬೇಕಾಯ್ತಂತೆ. ಆದ್ರೆ ಈ ಬಗ್ಗೆ ಮೀರಾಗೆ ಕೋಪ, ಬೇಸರ ಇಲ್ಲ. “ನಮ್ಮಿಬ್ಬರಲ್ಲಿ ಅಂಥ ಸಮಸ್ಯೆ ಯಾವತ್ತೂ ಬಂದಿಲ್ಲ. ಅವಳಿಗೆ ನಮ್ಮ ಪರಿಸ್ಥಿತಿ ಗೊತ್ತು. ನಾವಿಬ್ಬರೂ ಅಂತಹದ್ದೊಂದು ಹೊಂದಾಣಿಕೆಯಿಂದಲೇ ಬದುಕು ಆರಂಭಿಸಿದವರು. ಆದರೂ ನನಗೇ ಕೆಲವೊಮ್ಮೆ ಬೇಸರವಾಗತ್ತೆ ಮಗನಿಗೆ ಸಮಯ ಕೊಡಲಿಕ್ಕಾಗಲಿಲ್ವಲ್ಲ ಅಂತ. ಆದ್ರೆ ಮಗಳ ವಿಷಯದಲ್ಲಿ ಹಾಗಾಗಲಿಲ್ಲ. ಅವಳ ಬಾಲ್ಯವನ್ನು ನಾವು ಆನಂದಿಸಿದ್ದೇವೆ. ಈಗಲೂ ಮನೆಯಲ್ಲಿದ್ದರೆ ಅವಳಿಗೆ ಕೀಟಲೆ ಮಾಡ್ತಾ ಇರೋದೆ ..’

ಅರುಣ್‌ ಮಾತಾಡ್ತಿರುವ ಹಾಗೆ ಯಿಯರ್‌ಫೋನ್‌ ಕಿವಿಗೆ ಸಿಕ್ಕಿಸಿಕೊಂಡು ತುಂಟಕಣ್ಣಿನ ಪುಟ್ಟ ಹುಡುಗಿ ಬಂದಳು. ಅವಳು ರಘುದೀಕ್ಷಿತ್‌ ಅಭಿಮಾನಿ ಅದಿತಿ. ಅರುಣ್‌-ಮೀರಾ ಮಗಳು. ಅಪ್ಪನ ಜುಟ್ಟಿಲ್ಲದ ಕೂದಲನ್ನು ಕೆದರಿ ಹಾಕಿ ತುಂಟಾಟಕ್ಕೆ ಶುರುವಿಟ್ಟಳು. ಗಾಳಿಗೆ ಅವಳ ಉದ್ದ ಚೆಂದದ ಕೂದಲು ಮುಖದ ಜತೆಗೆ ಕಣ್ಣಾಮುಚ್ಚಾಲೆಯಾಡುತ್ತಿರುವಾಗಲೇ, ಅರುಣ್‌, “ಏ ಪುಟ್ಟಿ ..’ ಅಂತ ಕೂಗಿದರು. ಮೀರಾ, ಅದಿತಿ ಇಬ್ಬರೂ ತಿರುಗಿ ನೋಡಿದರು!

ಕೋಟ್‌
ನಾನು ಬದುಕನ್ನ ಆನಂದಿಸೋ ಬಗೆಯೇ ಭಿನ್ನ. ಸಿನಿಮಾದಲ್ಲಾಗಲಿ, ಉಳಿದ ಕಡೆಯಾಗಲಿ ನನಗೆ ಸ್ಪಾರ್ಕ್‌ ಆಗಲಿಕ್ಕೆ ಇಷ್ಟ ಇಲ್ಲ. ಬೆಳಕು ಆಗಿರಬೇಕೆನ್ನುವ ಆಸೆ. ಹುಟ್ಟಾ ಲೇಬರ್‌ ನಾನು. ಬದುಕು ದುಡಿತದ ಪಾಠ ಕಲಿಸಿದೆ. ಹಾಗಾಗಿ ಎಂದೂ ಹೊಟ್ಟೆಗಿಲ್ಲದ ಸ್ಥಿತಿಗಿಳಿಯಲ್ಲ.
– ಅರುಣ್‌ ಸಾಗರ್‌, ನಟ

ನಾನು ಮಾಡಿದ ಅಡುಗೆಯನ್ನು ಅರುಣ್‌ಗೆ ಬಡಿಸಿದ್ರೆ, ಒಂದು ತುತ್ತು ತಿನ್ನಲಿಕ್ಕಿಲ್ಲ,  ಏನ್‌ ರುಚಿಯಾಗಿದೆ, ಸೂಪರ್‌! ಅಂದಿºಟಾ¤ರೆ. ಇನ್ನು ಚೆನ್ನಾಗಿಲ್ಲ ಅಂದ್ರೆ ಎಲ್ಲಿ ಚೆನ್ನಾಗಿ ಮಾಡ್ತೀನಿ ಅಂತ ಅಡುಗೆ ಮನೆಯಲ್ಲೇ ಕೂತುಬಿಡ್ತೀನೋ ಅಂತ ಅವರಿಗೆ ಗಾಬರಿ. ಅಡುಗೆ ಮಾಡೋ ಟೈಂನಲ್ಲಿ ಏನಾದ್ರೂ ಆರ್ಟ್‌ವರ್ಕ್‌ ಮಾಡºಹುದಲ್ಲಾ. ಇನ್ನು ಸ್ವಲ್ಪ ವರ್ಷ ಮಾಡ್ಕೊಂಡ್ರೆ ಆಯ್ತು. ಆಮೇಲೆ ಇದೇ ಅವಕಾಶ, ಯೋಚನೆಗಳು ಇರುತ್ತವೆ ಅಂತ ಹೇಳಕ್ಕಾಗಲ್ಲ. ಅಡುಗೆ ಕೆಲಸವನ್ನು ಅಡುಗೆಯವರು ಮಾಡಲಿ. ಅವರಿಗದು ಹೊಟ್ಟೆಪಾಡು. ನಮ್ಮಹೊಟ್ಟೆಪಾಡಿಗೆ ಬೇರೆ ದಾರಿಯಿರುವಾಗ ಅವರ ಉದ್ಯೋಗಕ್ಕೆ ನಾವ್ಯಾಕೆ ಕಲ್ಲು ಹಾಕ್ಬೇಕು ಅಂತ ಅರುಣ್‌ ಯೋಚನೆ. 
– ಮೀರಾ ಅರುಣ್‌, ಪತ್ನಿ

ಬರಹ: ಪ್ರಿಯಾ ಕೆರ್ವಾಶೆ; ಚಿತ್ರಗಳು: ಡಿ.ಸಿ. ನಾಗೇಶ್‌

Advertisement

Udayavani is now on Telegram. Click here to join our channel and stay updated with the latest news.

Next