ಬೆಂಗಳೂರು : ಮಸೀದಿ ಆಗಲಿ ಯಾರೇ ಆಗಲಿ ಸುಪ್ರೀಂ ಕೋರ್ಟ್ ಆದೇಶ ಪಾಲನೆ ಮಾಡಬೇಕು. ಶಬ್ದ ಮಾಲಿನ್ಯ ಮಾಡಿದವರು ಯಾರೇ ಆಗಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಖಾತೆ ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.
ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಸಾರ್ವಜನಿಕ ಧ್ವನಿ ವರ್ಧಕ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಆದೇಶವಿದೆ. ಸುಪ್ರೀಂ ಕೋರ್ಟ್ ಈ ಹಿಂದೆ ನೀಡಿರುವ ಆದೇಶವನ್ನು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಜಾರಿ ಮಾಡುವ ಕೆಲಸ ಆಗುತ್ತಿದೆ. ಮುಖ್ಯಮಂತ್ರಿಗಳು ಈ ಸಂಬಂಧ ಸಭೆ ನಡೆಸಿದ್ದು, ಕೆಲವೊಂದು ಸೂಚನೆಗಳನ್ನು ನೀಡಿದ್ದಾರೆ. ಒಂದು ವಾರದಲ್ಲಿ ಸೂಕ್ತ ಮಾರ್ಗಸೂಚಿ ಹೊರ ಬರಲಿದೆ ಎಂದರು.
ಇನ್ನು ಧಾರ್ಮಿಕ ಕೇಂದ್ರಗಳು ಅನುಮತಿ ಪಡೆದು ಧ್ವನಿ ವರ್ಧಕಗಳ ಬಳಕೆ ಮಾಡಬೇಕು. ಕಮಿಷನರೇಟ್ ವ್ಯಾಪ್ತಿಯಲಿ ಸಹಾಯಕ ಪೊಲೀಸ್ ಆಯುಕ್ತರು, ಕಾರ್ಯಕಾರಿ ಅಭಿಯಂತರರು ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯರೊಬ್ಬರನ್ನು ಸೇರಿಸಿ ಮೂವರನ್ನೊಳಗೊಂಡ ಸಮಿತಿ ಇರಲಿದೆ. ಕಮಿಷನರೇಟ್ ಇಲ್ಲದ ಕಡೆ ತಹಶೀಲ್ದಾರ್, ಡಿವೈಎಸ್ಪಿ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯರೊಬ್ಬರನ್ನು ಸೇರಿಸಿ ಸಮಿತಿ ರಚಿಸಲಾಗಿರುತ್ತದೆ. ಸಮಿತಿಯ ಬಳಿ ಅನುಮತಿ ಪಡೆದು ಧ್ವನಿ ವರ್ಧಕ ಅಳವಡಿಸಬೇಕು. ಅದರಂತೆ ಪ್ರತಿಯೊಬ್ಬರು ಆದೇಶವನ್ನು ಪಾಲನೆ ಮಾಡಬೇಕು. ಬೆಳಗ್ಗೆ 6 ಗಂಟೆಗೆ ಆಜಾನ್ ಮೈಕ್ ಬಳಕೆ, ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ನಿಯಮ ಉಲ್ಲಂಘನೆ. ಇದರ ವಿರುದ್ಧ ಯಾವುದೇ ಮುಲಾಜಿಲ್ಲದೆ, ಕ್ರಮ ತೆಗೆದು ಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ : ವರ್ಗಾವಣೆಗೆ ಬೇಸರ: ಡಿಜಿಪಿ ಸ್ಥಾನಕ್ಕೆ ಡಾ.ಪಿ ರವೀಂದ್ರನಾಥ್ ದಿಢೀರ್ ರಾಜೀನಾಮೆ
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮಾನ್ಯ ಉಚ್ಚ ನ್ಯಾಯಲಯದ ಅನ್ವಯ ಶಬ್ದ ಮಾಪನ ಉಪಕರಣಗಳನ್ನು ಖರೀದಿಸಿ ಪೊಲೀಸ್ ಇಲಾಖೆಗೆ ನೀಡಿದ್ದು, ಉಪಕರಣಗಳ ಉಪಯೋಗಿಸುವ ಕುರಿತು ತಾಂತ್ರಿಕ ತರಬೇತಿ ನೀಡಲಾಗಿರುತ್ತದೆ. ಶಬ್ದ ಮಾಲಿನ್ಯ ದೂರುಗಳ ಕುರಿತಾಗಿ ಪೊಲೀಸ್ ಇಲಾಖೆಯಿಂದ ಕೋರಿಕೆ ಬಂದ ಸಂದರ್ಭಗಳಲ್ಲಿ ಮಂಡಳಿಯು ಜಂಟಿಯಾಗಿ ಸ್ಥಳ ಪರಿವೀಕ್ಷಣೆ ಹಾಗೂ ಶಬ್ದ ಮಾಪನ ಮಾಡಿ, ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ಕ್ರಮಕೈಗೊಳ್ಳಲಾಗುವುದು. ಅಲ್ಲದೆ, ಸ್ಥಳೀಯರು ಬಂದು ದೂರು ನೀಡಿದರೂ ಈ ಬಗ್ಗೆ ಕ್ರಮಕೈಗೊಳ್ಳಲಾಗುತ್ತದೆ ಎಂದು ವಿವರಿಸಿದರು.
ದೂರು ನೀಡದಿದ್ರು ಕ್ರಮ: ಕೆಲವು ಕಡೆ ಸಾರ್ವಜನಿಕರು ದೂರು ನೀಡಿದರೆ ಕ್ರಮಕೈಗೊಳ್ಳುತ್ತೇವೆ. ಸರ‍್ವಜನಿಕರು ದೂರು ನೀಡದೆ ಬಾರದ ಸ್ಥಳದಲ್ಲಿ ಶಬ್ದ ಮಾಲಿನ್ಯ ಆಗುತ್ತಿದ್ದರೆ ಅಂತಹ ಧರ‍್ಮಿಕ ಕೇಂದ್ರದ ಆಡಳಿತ ಮಂಡಳಿ ವಿರುದ್ಧ ಕ್ರಮಕೈಗೊಳ್ಳುತ್ತೇವೆ ಎಂದು ಸುದ್ದಿಗಾರ ಪ್ರಶ್ನೆಗೆ ಉತ್ತರಿಸಿದರು.
ಎಲ್ಲಿ ಎಷ್ಟು ಪ್ರಮಾಣ ಇರಬೇಕು!
– ಕೈಗಾರಿಕಾ ಪ್ರದೇಶ – ಹಗಲು ವೇಳೆ 75 ಡೆಸಿಬಲ್, ರಾತ್ರಿ 7೦ ಡೆಸಿಬಲ್ ಇರಬೇಕು.
– ವಾಣಿಜ್ಯ ಪ್ರದೇಶ – ಹಗಲು 65 ಡೆಸಿಬಲ್, ರಾತ್ರಿ 6೦ ಡೆಸಿಬಲ್
– ಜನವಸತಿ ಪ್ರದೇಶ – ಹಗಲು 55 ಡೆಸಿಬಲ್, ರಾತ್ರಿ 45 ಡೆಸಿಬಲ್
– ಸೈಲೆಂಟ್ ಝೋನ್- ಹಗಲು 50 ಡೆಸಿಬಲ್, ರಾತ್ರಿ 4೦ ಡೆಸಿಬಲ್