ಸವದತ್ತಿ: ನಾಲ್ಕು ಬಾರಿ ಸಂಸದರಾಗಿ ರೈಲ್ವೆ ಸಚಿವರಾಗಿದ್ದ ದಿ| ಸುರೇಶ ಅಂಗಡಿ ಅವರು ಕ್ಷೇತ್ರದ ಜನರ ಮತ್ತು ಕಾರ್ಯಕರ್ತರ ಮೇಲೆ ತುಂಬಾ ಪ್ರೀತಿಯಿಂದಿದ್ದರು. ರೈಲ್ವೆ ಯೋಜನೆ, ಬೆಳಗಾವಿ ನಗರವನ್ನು ಸ್ಮಾರ್ಟ್‌ಸಿಟಿ ಮಾಡುವಲ್ಲಿ ಅಂಗಡಿ ಅವರ ಪಾತ್ರ ದೊಡ್ಡದು. ಅವರು ಕೆಳಹಂತದಿಂದ ಪಕ್ಷ ಕಟ್ಟುವಲ್ಲಿ ಯಶಸ್ವಿಯಾಗಿದ್ದರು ಎಂದು ವಿಧಾನಸಭಾ ಉಪಸಭಾಧ್ಯಕ್ಷ ಆನಂದ ಮಾಮನಿ ಹೇಳಿದರು.
ಪಟ್ಟಣದ ಮಾಮನಿ ಕಲ್ಯಾಣ ಮಂಟಪದಲ್ಲಿ ಲೋಕಸಭಾ ಉಪ ಚುನಾವಣೆ ಪ್ರಚಾರಾರ್ಥ ಸಭೆಯಲ್ಲಿ ಮಾತನಾಡಿದ ಅವರು, ಅವರ ಅಕಾಲಿಕ ಮರಣದಿಂದ ತೆರವಾದ ಸ್ಥಾನಕ್ಕೆ ಪಕ್ಷದ ಒಮ್ಮತದಿಂದ ಸಹೋದರಿ ಮಂಗಲಾ ಅಂಗಡಿ ಅವರು ಆಯ್ಕೆಯಾಗಿದ್ದು, ಮತ ನೀಡುವ ಮೂಲಕ ಕ್ಷೇತ್ರದ ಅಭಿವೃದ್ಧಿಗಾಗಿ ಕೈಜೋಡಿಸಬೇಕಿದೆ. ಅಂಗಡಿ ಅವರ ಅಪೂರ್ಣ ಕೆಲಸಗಳನ್ನು ಪೂರ್ಣಗೊಳಿಸಲು ಮಂಗಲಾ ಅಂಗಡಿ ಅವರಿಗೆ ಮತ ಚಲಾಯಿಸಿ. ಕಾರ್ಯಕರ್ತರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನಪರ ಯೋಜನೆಗಳನ್ನು ಹಳ್ಳಿ ಹಳ್ಳಿಗೂ ತಲುಪಿಸಿ ಬಿಜೆಪಿ ಪಕ್ಷವನ್ನು ಅಭೂತಪೂರ್ವವಾಗಿ ಗೆಲ್ಲಿಸುವಲ್ಲಿ ಶ್ರಮಿಸಬೇಕಿದೆ ಎಂದರು.
ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಮಾತನಾಡಿ, ಸುರೇಶ್ ಅಂಗಡಿ ಅವರ ಅಪೂರ್ಣ ಕೆಲಸಗಳನ್ನು ಪೂರ್ಣಗೊಳಿಸಲು ಪಕ್ಷದ ವರಿಷ್ಠರೆಲ್ಲಾ ಸೇರಿ ಮಂಗಲಾ ಅಂಗಡಿಯವರನ್ನು ಆಯ್ಕೆ ಮಾಡಿದ್ದಾರೆ. ಅಂಗಡಿಯವರನ್ನು ಗೆಲ್ಲಿಸುವಲ್ಲಿ ಕಾರ್ಯಕರ್ತರು ಪ್ರತಿ ಮನೆ ಮನೆಗೆ ತೆರಳಿ ಸರ್ಕಾರಗಳ ಯೋಜನೆಗಳ ಬಗ್ಗೆ ಅರಿವು ಮೂಡಿಸಿ ಪಕ್ಷ ಗೆಲ್ಲಿಸುವಲ್ಲಿ ಶ್ರಮಿಸಬೇಕಿದೆ ಎಂದರು.
ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಮಾತನಾಡಿ, ಸುರೇಶ್ ಅಂಗಡಿ ಅವರು ಕೇವಲ ಒಂದೇ ವರ್ಷದಲ್ಲಿ ರೈಲ್ವೆ ಸಮಸ್ಯೆ ಇರುವ ರಾಜ್ಯಗಳಿಗೆ ಭೇಟಿ ನೀಡಿ ಸಮಸ್ಯೆ ನಿವಾರಿಸುವಲ್ಲಿ ಮಹತ್ವದ ಹೆಜ್ಜೆ ಇಟ್ಟಿದ್ದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರಾಮಮಂದಿರ ನಿರ್ಮಾಣ, ಉಜ್ವಲ ಯೋಜನೆ, ಕಿಸಾನ್ ಸಮ್ಮಾನ ಯೋಜನೆಗಳ ಮೂಲಕ ಜನಪರ ಸರ್ಕಾರ ನಡೆಸಿ ನುಡಿದಂತೆ ನಡೆದಿದೆ ಎಂದರು.
ಮಂಗಲಾ ಅಂಗಡಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಡವರ, ಮಹಿಳೆಯರ, ರೈತರ, ಯುವಕರ ಕಲ್ಯಾಣಕ್ಕಾಗಿ ಶ್ರಮಿಸುತ್ತಿದೆ. ನನ್ನ ಪತಿಯಾದ ಸುರೇಶ್ ಅಂಗಡಿ ಅವರು ಕಾರ್ಯಕರ್ತರ ಮತ್ತು ಕ್ಷೇತ್ರದ ಜನರ ಮೇಲೆ ಅಪಾರ ಪ್ರೀತಿ ಹೊಂದಿದ್ದರು. ಕ್ಷೇತ್ರದ ಅಭಿವೃದ್ಧಿಗಾಗಿ ಪ್ರೀತಿ-ವಿಶ್ವಾಸದಿಂದ ನನಗೆ ಮತ ಚಲಾಯಿಸಿ ಒಂದು ಅವಕಾಶ ನೀಡಬೇಕು ಎಂದು ಸುರೇಶ್ ಅಂಗಡಿ ಅವರನ್ನು ನೆನೆದು ಭಾವುಕರಾದರು. ಸಚಿವ ಉಮೇಶ ಕತ್ತಿ, ಶ್ರೀಮಂತ ಪಾಟೀಲ, ಸಂಸದ ಈರಣ್ಣಾ ಕಡಾಡಿ, ಅಣ್ಣಾಸಾಹೇಬ ಜೊಲ್ಲೆ, ಮಹೇಶ ಟೆಂಗಿನಕಾಯಿ, ಮಹಾಂತೇಶ ಕವಟಗಿಮಠ, ಸಂಜಯ ಪಾಟೀಲ ಇತರರಿದ್ದರು.