Advertisement

ಅನಂತ್ ಕುಮಾರ್ ಹೆಗಡೆ ಸಾಯಲಿ ಎಂದು ಎಲ್ಲೂ ಹೇಳಿಲ್ಲ: ಆನಂದ್ ಅಸ್ನೋಟಿಕರ್ ಸ್ಪಷ್ಟನೆ

03:09 PM Apr 07, 2021 | Team Udayavani |

ಕಾರವಾರ: ಉತ್ತರ ಕನ್ನಡ ಸಂಸದ ಅನಂತ ಕುಮಾರ್ ಹೆಗಡೆ ಸಾಯಲಿ ಎಂದು ಎಲ್ಲೂ ಹೇಳಿಲ್ಲ ಎಂದು ಮಾಜಿ‌ ಸಚಿವ ಆನಂದ್ ಅಸ್ನೋಟಿಕರ್ ಸ್ಪಷ್ಟನೆ ನೀಡಿದರು.

Advertisement

ಬುಧವಾರ ಕಾರವಾರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಸಂಸದ ಅನಂತ ಕುಮಾರ ಹೆಗಡೆ, ಇದ್ದರೂ ಒಂದೆ ಇಲ್ಲದಿದ್ದರೂ ಒಂದೇ ಎಂದು ಹೇಳಿದ್ದೆ. ಅವರು ಸಾಯಲಿ ಎಂದು ಎಲ್ಲೂ ಹೇಳಿಲ್ಲ. 25 ವರ್ಷದಲ್ಲಿ ಅನಂತಕುಮಾರ ಒಂದೇ ಒಂದು ಅಭಿವೃದ್ಧಿ ಕಾರ್ಯ ಮಾಡಿಲ್ಲ ಎಂದಿದ್ದೆ. ಅದನ್ನು ಪುಡಾರಿಗಳು ತಪ್ಪಾಗಿ ಅರ್ಥ ಮಾಡಿಕೊಂಡಿದ್ದಾರೆ ಎಂದು ಅಸ್ನೋಟಿಕರ್ ಹೇಳಿದರು.

ನಾನು ನರೇಂದ್ರ ಮೋದಿ ಅವರ ಅಭಿಮಾನಿ. ಅವರ ಮಟ್ಟದಲ್ಲಿ ಯಾರೂ ಬೆಳೆದಿಲ್ಲ. ಅನಂತಕುಮಾರ ಪಕ್ಷಕ್ಕೆ‌ ಮುಜುಗರ ಮಾಡಿದ್ದಾರೆ. ಅಂಬೇಡ್ಕರ್ ಮಾಡಿರುವ ಸಂವಿಧಾನ ಬದಲು ಮಾಡುವ ಹೇಳಿಕೆ ನೀಡಿ, ನರೇಂದ್ರ ಮೋದಿ ಸಂಸತ್ ನಲ್ಲಿ ಕ್ಷಮೆ ಕೇಳುವಂತೆ ಮಾಡಿದ್ದಾರೆ. ಅವರಿಗೆ ಮುಂದಿನ ಸಂಸತ್ ಚುನಾವಣೆಯಲ್ಲಿ ಟಿಕೆಟ್ ಸಿಗುವುದಿಲ್ಲ ಎಂದು ಮಾಜಿ‌ ಸಚಿವ ಅಸ್ನೋಟಿಕರ್ ಭವಿಷ್ಯ ನುಡಿದರು.

ಇದನ್ನೂ ಓದಿ:ವಿಜಯೇಂದ್ರನ ಸೂಟು ಬೂಟು ಬಿಚ್ಚಿಸಿ ‘ಇಡಿ’ಯವರು ತನಿಖೆ ಮಾಡಿದ್ದಾರೆ: ಯತ್ನಾಳ್

ನನ್ನ ವಿರುದ್ಧ ಅನಂತ್ ಕುಮಾರ್ ಗೆದ್ದಿಲ್ಲ.ಮೋದಿ ಗೆದ್ದಿದ್ದಾರೆ. ಮೋದಿ ಅಲೆಯಲ್ಲಿ ಅನಂತಕುಮಾರ್ ಹೆಗಡೆ ತೇಲಿದರು ಅಷ್ಟೇ ಎಂದರು.

Advertisement

ನನ್ನ ವಿರುದ್ಧ ಮಾತನಾಡುವ ಬಿಜೆಪಿ ಮುಖಂಡರು ಅನಂತ್ ಕುಮಾರ ಏನು ಮಾಡಿದ್ದಾರೆ ಎಂದು ಮನಸ್ಪೂರ್ವಕವಾಗಿ ಹೇಳಲಿ ನೋಡೋಣ ಎಂದು ಸವಾಲು ಹಾಕಿದರು.

ನಾನು ಹೇಳಿದ್ದನ್ನು ಅನ್ಯತಾ ಭಾವಿಸಬಾರದು. ದೇವರ ದಯೆಯಿಂದ ಅನಂತ್ ಕುಮಾರ್ ನೂರು ವರ್ಷ ಬಾಳಲಿ. ಇನ್ನಾದರೂ ಬುದ್ಧಿ ಕಲಿತುಕೊಳ್ಳಲಿ. ನಾನು ಲಾಜಿಕ್ ಇಲ್ಲದೇ ಮಾತನಾಡಿಲ್ಲ. ಅನಂತ್ ಕುಮಾರ್ ಈಗ ಸಚಿವರಾಗಿರುವ ಶಿವರಾಮ್ ಹೆಬ್ಬಾರ್, ಬಿಜೆಪಿ ಜಿಲ್ಲಾಧ್ಯಕ್ಷರಾಗಿದ್ದಾಗ, ಅವರ ಕಾಲರ್ ಹಿಡಿದಿದ್ದರು. ಬಿಜೆಪಿ ಪಕ್ಷದ ಮುಖಂಡ ಜಗದೀಶ ಬಿರ್ಕೋಡಿಕರ್ ಗೆ ಹೊಡೆದಿದ್ದರು. ಟಿಎಸ್ ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಕ್ಕಿಲ್ಲ ಎಂದು ವೈದ್ಯರಿಗೆ ಹೊಡೆದಿದ್ದರು. ನನ್ನ ವರ್ತನೆ ಅವರ ವರ್ತನೆಗೆ ಹೋಲಿಸಲು ಹೋಗಬೇಡಿ ಎಂದು ಅಸ್ನೋಟಿಕರ್ ಹೇಳಿದರು.

ರಾಜಕೀಯದಿಂದ ಜೀವನ ನಡೆಯಬೇಕಿಲ್ಲ: ನನಗೆ ರಾಜಕಾರಣದಲ್ಲಿ ಜೀವನ ಮಾಡಬೇಕು ಎಂದು ಅವಶ್ಯಕತೆ ಇಲ್ಲ. ಕ್ಷೇತ್ರ ನನಗೆ ಬಹಳಷ್ಟು ಕೊಟ್ಟಿದೆ. ಕ್ಷೇತ್ರದ ಅಭಿವೃದ್ಧಿಗಾಗಿ ರಾಜಕೀಯದಲ್ಲಿದ್ದೇನೆ. ಬಿಜೆಪಿಯಂತ ಬಲಿಷ್ಠ ಪಕ್ಷ ಇಡೀ ಜಿಲ್ಲೆಯಲ್ಲೇ ಇಲ್ಲ. ಬಿಜೆಪಿಯಲ್ಲಿ ತೇಜಸ್ವಿ ಸೂರ್ಯ, ಶಿವಕುಮಾರ ಉದಾಸಿ, ಬಿ.ವೈ.ರಾಘವೇಂದ್ರರಂಥ ಉತ್ತಮ ಸಂಸದರಿದ್ದಾರೆ ಎಂದರು.

ಇದನ್ನೂ ಓದಿ: ಕಲಬುರಗಿ: ಬಸ್ ಡಿಪೋ- ಬಸ್ ನಿಲ್ದಾಣಗಳ ಬಳಿ ನಿಷೇಧಾಜ್ಞೆ ಜಾರಿ

ಕಾರ್ಯಕ್ಕೆ ಒತ್ತು ನೀಡಲಿ: ಭಾಷಣಕ್ಕಿಂತ ಕಾರ್ಯಕ್ಕೆ ಹೆಚ್ಚು ಒತ್ತು ನೀಡುತ್ತೇನೆ. ಭಾಷಣಕ್ಕಿಂತ ಕಾರ್ಯ ಮಾಡಲು ಬರಬೇಕು. ಹುಬ್ಬಳ್ಳಿ- ಅಂಕೋಲಾ ರೈಲು ಆಗಬೇಕು. ಬಂದರು ಅಭಿವೃದ್ಧಿಯಾಗಬೇಕು. ಐಆರ್ ಬಿ ಕಂಪನಿ ರಸ್ತೆ ಪೂರ್ಣ ಮಾಡದೇ ಟೋಲ್ ವಸೂಲಿ ಮಾಡುತ್ತಿದೆ. ಇಂಥ ಸಮಸ್ಯೆಗಳಿಗೆ ಸಂಸದರು ಸ್ಪಂದಿಸಬೇಕು. ಆದರೆ ಸಂಸದರು ಸ್ಪಂದಿಸಿದ್ದಾರಾ? ಸೀಬರ್ಡ್ ನೌಕಾ ಯೋಜನೆಯಲ್ಲಿ ಜನರಿಗೆ ಅನ್ಯಾಯವಾಗುತ್ತಿದೆ. ಅದರ ಬಗ್ಗೆ ಸಂಸದರುಮಾತೇ ಆಡುತ್ತಿಲ್ಲ. ಇದು ನಿಜ ತಾನೇ‌ ಎಂದು ಬಿಜೆಪಿ ಜಿಲ್ಲಾ ಮುಖಂಡರನ್ನು ಅಸ್ನೋಟಿಕರ್ ಪ್ರಶ್ನಿಸಿದರು‌ ‌.

ನಾನು ಕೊಟ್ಟಿರುವ ಹೇಳಿಕೆಗೆ ಅರ್ಥವಿದೆ. ನಾನು ಯಾರಿಗೂ ಹೆದರುವ ಮನುಷ್ಯ ಅಲ್ಲ. ಯಡಿಯೂರಪ್ಪ ವಿರುದ್ಧ ಹೋರಾಟ ಮಾಡಿದವನು ನಾನು. ಸಾಮಾನ್ಯ ಜನರಿಗೆ ಸಂಸದ ಅನಂತ‌್ ಕುಮಾರ್ ಯಾಕೆ ಸಿಗುವುದಿಲ್ಲ. ಅಭಿವೃದ್ಧಿ ಬೇಡವೇ ಎಂಬ ಪ್ರಶ್ನೆಯನ್ನು ಬಿಜೆಪಿಯವರಿಗೆ ಹಾಗೂ  ಜಿಲ್ಲೆಯ ಜನರಿಗೆ ಕೇಳುತ್ತೇನೆ ಎಂದು ಮಾಜಿ ಸಚಿವ‌ರು ಪ್ರಶ್ನಿಸಿದರು.

ಮರಿ ಪುಡಾರಿಗಳ ಸ್ಟೇಟ್ ಮೆಂಟ್ ನಿಂದ ನನಗೇನೂ ಹಾನಿಯಾಗದು.  ಬಿಜೆಪಿ ಉನ್ನತ ನಾಯಕರ ಜತೆ ನನ್ನ ಸಂಬಂಧ ಉತ್ತಮವಾಗಿದೆ ಎಂದರು‌.

Advertisement

Udayavani is now on Telegram. Click here to join our channel and stay updated with the latest news.

Next