ಮುಂಬಯಿ: ಸತತ 6ನೇ ದಿನವೂ ಮಾರಾಟದ ಬಿಸಿಗೆ ಷೇರುಪೇಟೆ ಮಂಡಿಯೂರಿದೆ. ಸಂಸತ್ನಲ್ಲಿ ಮಂಡನೆಯಾದ ಬಜೆಟ್ ಪೂರ್ವ ಆರ್ಥಿಕ ಸಮೀಕ್ಷೆಯು ಷೇರುಪೇಟೆ ಹೂಡಿಕೆದಾರರ ಮೊಗದಲ್ಲಿ ಸಂತಸ ಮೂಡಿಸಲು ವಿಫಲವಾಗಿದ್ದು, ವಿದೇಶಿ ಸಾಂಸ್ಥಿಕ ಹೂಡಿಕೆಗಳ ಹೊರಹರಿವು ಹೂಡಿಕೆದಾರರ ಆತಂಕವನ್ನು ಹೆಚ್ಚಿಸಿದೆ. ಪರಿಣಾಮ ಹೂಡಿಕೆದಾರರು ಷೇರುಗಳ ಭಾರೀ ಮಾರಾಟದಲ್ಲಿ ತೊಡಗಿದ್ದು, ಶುಕ್ರವಾರ ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ 588.59 ಅಂಕಗಳಷ್ಟು ಕುಸಿದು, 46,285.77ರಲ್ಲಿ ವಹಿವಾಟು ಅಂತ್ಯಗೊಳಿಸಿತು.
ನಿಫ್ಟಿ ಕೂಡ 182.95 ಅಂಕಗಳ ಕುಸಿತ ದಾಖಲಿಸಿ, ದಿನದ ಅಂತ್ಯಕ್ಕೆ 13,634ರಲ್ಲಿ ಕೊನೆಗೊಂಡಿತು. ಕಳೆದ 6 ದಿನಗಳಲ್ಲಿ ನಿಫ್ಟಿ ಒಟ್ಟಾರೆ 1,010.10 ಅಂಕಗಳಷ್ಟು ಕುಸಿದಿದೆ.
ಸೆನ್ಸೆಕ್ಸ್ ಚಾರ್ಟ್‌ನಲ್ಲಿ 26ಕ್ಕೂ ಹೆಚ್ಚು ಷೇರುಗಳು ನಷ್ಟ ಅನುಭವಿಸಿವೆ. ಡಾ| ರೆಡ್ಡೀಸ್, ಮಾರುತಿ, ಭಾರ್ತಿ ಏರ್‌ಟೆಲ್, ಬಜಾಜ್ ಆಟೋ, ಇನ್ಫೋಸಿಸ್, ಟಿಸಿಎಸ್, ಎನ್‌ಟಿಪಿಸಿ ಮತ್ತು ಬಜಾಜ್ ಫಿನ್‌ಸರ್ವ್ ಶೇ.5.69ರಷ್ಟು ನಷ್ಟ ಕಡಿವೆ. ಇಂಡಸ್ ಇಂಡ್ ಬ್ಯಾಂಕ್, ಸನ್ ಫಾರ್ಮಾ, ಐಸಿಐಸಿಐ ಬ್ಯಾಂಕ್ ಮತ್ತು ಎಚ್‌ಡಿಎಫ್ಸಿ ಬ್ಯಾಂಕ್‌ಗಳು ಲಾಭ ಗಳಿಸಿವೆ.
ಬೆಳ್ಳಿ ದರದಲ್ಲಿ ಭಾರೀ ಏರಿಕೆ: ಬೆಳ್ಳಿ ದರದಲ್ಲಿ ಶುಕ್ರವಾರ ಭಾರೀ ಏರಿಕೆಯಾಗಿದ್ದು, ದಿಲ್ಲಿಯ ಮಾರುಕಟ್ಟೆಯಲ್ಲಿ 2,916 ರೂ. ಹೆಚ್ಚಳವಾಗಿ, ಕೆಜಿಗೆ 68,410 ರೂ. ಆಗಿದೆ. ಗುರುವಾರ ಇದು 65,244 ರೂ. ಆಗಿತ್ತು. ಇದೇ ವೇಳೆ, ಚಿನ್ನದ ದರ 132 ರೂ.ಗಳಷ್ಟು ಹೆಚ್ಚಳವಾಗಿ, 10 ಗ್ರಾಂಗೆ 48,376 ರೂ.ಗೆ ತಲುಪಿದೆ. ಡಾಲರ್ ಎದುರು ರೂಪಾಯಿ ಮೌಲ್ಯ 9 ಪೈಸೆ ಏರಿಕೆಯಾಗಿ, 72.96ಕ್ಕೇರಿದೆ.