Advertisement

ಸುಳ್ಯ: ಕೈ ಪಾಳಯದಲ್ಲಿ ಶಮನವಾಗದ ಮುನಿಸು

12:25 AM Apr 05, 2023 | Team Udayavani |

ಸುಳ್ಯ: ಮೂರು ದಶಕಗಳಿಂದ ಸುಳ್ಯ ಕ್ಷೇತ್ರದಲ್ಲಿ ಗೆಲುವನ್ನೇ ಕಾಣದ ಕಾಂಗ್ರೆಸ್‌ ಈ ಬಾರಿ ಗೆಲ್ಲಬೇಕೆಂದು ನಿರ್ಧರಿಸಿರುವಾಗಲೇ ಹೈಕಮಾಂಡ್‌ ಆಯ್ಕೆ ಮಾಡಿದ ಅಭ್ಯರ್ಥಿಯ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನಲ್ಲಿ ಎರಡು ಬಣಗಳು ಸೃಷ್ಟಿಯಾಗಿವೆ.

Advertisement

ಒಂದು ವಾರದಿಂದ ಅಭ್ಯರ್ಥಿ ಆಯ್ಕೆ ಸಂಬಂಧ ವಾಕ್ಸಮರ ತಾರಕಕ್ಕೇರಿದೆ. ಘೋಷಿತ ಅಭ್ಯರ್ಥಿ ಹಾಗೂ ಆಕಾಂಕ್ಷಿಗಳ ನಡುವಿನ ಸಮರ ಜೋರಾಗಿ ಸದ್ದು ಮಾಡುತ್ತಿದೆ.

ಕೈ ಶಾಸಕರಿಲ್ಲ
1989ರಲ್ಲಿ ಕೆ.ಕುಶಲ ಅವರು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಗೆದ್ದ ಬಳಿಕ ಇದುವರೆಗೂ ಕ್ಷೇತ್ರವನ್ನು ಪ್ರತಿ ನಿಧಿಸುವ ಅವಕಾಶ ಲಭಿಸಿಲ್ಲ. ಬಿಜೆಪಿ ನಿರಂತರವಾಗಿ ಕ್ಷೇತ್ರದಲ್ಲಿ ಹಿಡಿತ ಸಾಧಿ ಸುತ್ತ ಬಂದಿದ್ದು ಕಾಂಗ್ರೆಸ್‌ಗೆ ಗೆಲುವು ಮರೀಚಿಕೆಯಾಗಿದೆ. ಈ ಬಾರಿ ಆರಂಭದಿಂದಲೇ ಬಿಜೆಪಿ ಯಲ್ಲಿನ ಅಭ್ಯರ್ಥಿ ಆಯ್ಕೆಯ ಗೊಂದಲದ ಲಾಭ ಪಡೆಯಲು ಕಾಂಗ್ರೆಸ್‌ ತಂತ್ರಗಾರಿಕೆ ರೂಪಿಸಿತ್ತು. ಆದರೆ ಅಭ್ಯರ್ಥಿ ಆಯ್ಕೆ ವಿಷಯದಲ್ಲಿ ಗೊಂದಲ ಸೃಷ್ಟಿಯಾಗಿದ್ದು ಎಲ್ಲ ಲೆಕ್ಕಾ ಚಾರವನ್ನೂ ತಲೆಕೆಳಗಾಗಿಸಿದೆ.

ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿ ಸುಳ್ಯ ಬ್ಲಾಕ್‌ಗೆ ಉಸ್ತುವಾರಿ ಯನ್ನಾಗಿ ಮಡಿಕೇರಿ ನಗರಸಭೆ ಮಾಜಿ ಅಧ್ಯಕ್ಷ ನಂದಕುಮಾರ್‌ ಹಾಗೂ ಕಡಬ ಬ್ಲಾಕ್‌ಗೆ ಕೆಪಿಸಿಸಿ ಸಂಯೋಜಕ ಜಿ.ಕೃಷ್ಣಪ್ಪ ಅವರನ್ನು ನಿಯೋಜಿಸಲಾಗಿತ್ತು. ಈ ಇಬ್ಬರೂ ಎರಡು ಅವಧಿಯಿಂದ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಗಳಾಗಿದ್ದರು. ನಂದಕುಮಾರ್‌ ಅವರೇ ಅಭ್ಯರ್ಥಿಯಾಗುತ್ತಾರೆ ಎಂಬ ಅಭಿಪ್ರಾಯವಿತ್ತು. ಆದರೆ ಹೈಕಮಾಂಡ್‌ ಕೃಷ್ಣಪ್ಪ ಅವರಿಗೆ ಅವಕಾಶ ನೀಡಿತು. ಇದು ನಂದ ಕುಮಾರ್‌ ಬೆಂಬಲಿಗರ ಆಕ್ರೋಶಕ್ಕೆ ಕಾರಣ ವಾಗಿದೆ. ಹೀಗಾಗಿ ಪ್ರತಿ ಭಟನೆ, ನಾಯಕರ ಭೇಟಿ ಸಹಿತ ನಂದಕುಮಾರ್‌ ಬೆಂಬಲಿಗರು ವಿವಿಧ ರೀತಿಯಲ್ಲಿ ಆಕ್ರೋಶ ವ್ಯಕ್ತಪಡಿಸ ತೊಡಗಿದ್ದಾರೆ. ಪದೇಪದೆ ಕ್ಷೇತ್ರದ ಹಲವೆಡೆ ಸಭೆಗಳನ್ನು ನಡೆಸಿ ನಾಯಕರ ಮೇಲೆ ಒತ್ತಡ ಹಾಕುವ ತಂತ್ರವನ್ನೂ ಅನುಸರಿಸುತ್ತಿದ್ದಾರೆ.

ನಂದಕುಮಾರ್‌ ಅವರನ್ನು ಬಿಜೆಪಿಗೆ ಕರೆ ತರುವ ಪ್ರಯತ್ನ ನಡೆಯುತ್ತಿದೆ ಎನ್ನಲಾಗಿದೆ. ಆದರೆ ಬಿಜೆಪಿಯಲ್ಲೂ ಆಕಾಂಕ್ಷಿಗಳ ಸಂಖ್ಯೆಯೇ ಹೆಚ್ಚಿದ್ದು, ನಂದಕುಮಾರ್‌ಗೆ ಅವಕಾಶ ಸಾಧ್ಯತೆ ಕಡಿಮೆ. ಹಾಗಾಗಿ ನಂದಕುಮಾರ್‌ ಬಿಜೆಪಿಗೆ ಹೋಗಲಾರರು ಎಂದು ವಿಶ್ಲೇಷಿಸಲಾಗುತ್ತಿದೆ.

Advertisement

ಒಂದೇ ಕಲ್ಲಿಗೆ ಎರಡು ಹಕ್ಕಿ?
ಒಂದುವೇಳೆ ಕಾಂಗ್ರೆಸ್‌ ಹೈಕಮಾಂಡ್‌ ನಿರ್ಧಾರವನ್ನು ಬದಲಿಸದಿದ್ದರೆ, ನಂದಕುಮಾರ್‌ ಅವರನ್ನು ಪಕ್ಷೇತರರನ್ನಾಗಿ ಕಣಕ್ಕಿಳಿಸಲು ಬೆಂಬಲಿಗರು ನಿರ್ಧರಿಸಿದ್ದಾರೆ. ಅದರ ಪೂರ್ವಭಾವಿಯಾಗಿ ನಿಂತಿಕಲ್‌ನಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎನ್ನಲಾಗಿದೆ. ಒಂದು ವೇಳೆ ಬಿಜೆಪಿಯು ಎಸ್‌.ಅಂಗಾರ ಅವರನ್ನು ಕಣಕ್ಕಿಳಿಸಿದಲ್ಲಿ ಅವರ ವಿರುದ್ಧ ಅಸಮಾಧಾನ ಹೊಂದಿರುವ ಗುಂಪಿನ ಲಾಭ ಹಾಗೂ ತಮ್ಮ ಪರವಾಗಿ ಇರುವ ಕಾಂಗ್ರೆಸ್‌ನಲ್ಲಿನ ಗುಂಪಿನ ಸಹಕಾರದಿಂದ ನಂದಕುಮಾರ್‌ ಪಕ್ಷೇತರರಾಗಿ ಸ್ಪರ್ಧಿಸಿದರೆ ಹೆಚ್ಚು ಅನುಕೂಲ. ಎರಡೂ ಪಕ್ಷಗಳ ಅಸಮಾಧಾನಿತರ ಮತಗಳನ್ನು ಪಡೆಯುವಲ್ಲಿ ನಂದಕುಮಾರ್‌ ಯಶಸ್ವಿಯಾದರೆ ಕಣ ಚಿತ್ರಣ ಬದಲಾದೀತು ಎಂಬುದು ಅವರ ಬೆಂಬಲಿಗರ ಲೆಕ್ಕಾಚಾರ.

–  ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next