ಬೆಂಗಳೂರು: ನೃತ್ಯ ಶಾಲೆಗೆ ತೆರಳಿದ ಬಾಲಕಿ ಹೇನಿನ ಔಷಧ ಸೇವಿಸಿ ನಿಗೂಡವಾಗಿ ಸಾವನ್ನಪ್ಪಿರುವ ಘಟನೆ ಯಲಹಂಕ ಉಪನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಯಲಹಂಕ ಉಪನಗರದ ನಿಟ್ಟೂರಿನ ನಿವಾಸಿ ಕುಮಾರ್ ದಂಪತಿ ಪುತ್ರಿ ಚಂದನಾ (12) ಮೃತಳು. ಈ ಸಂಬಂಧ ನತ್ಯ ಶಾಲೆಯ ಸತೀಶ್ ಎಂಬಾತನ ಮೇಲೆ ಬಾಲಕಿಯ ಪೋಷಕರು ಹಲ್ಲೆ ನಡೆಸಿದ್ದಾರೆ.
ವಿದ್ಯಾನಿಕೇತನ ಶಾಲೆಯಲ್ಲಿ 6ನೇ ತರಗತಿ ಓದುತ್ತಿರುವ ಚಂದನಾ ತಂದೆ ಕುಮಾರ್ ಬಾಡಿಗೆ ಆಟೋ ಓಡಿಸುತ್ತಿದ್ದಾರೆ. ನಿಟ್ಟೂರಿನ ನೃತ್ಯ ಶಾಲೆಯಲ್ಲಿ ಚಂದನಾ ಒಂದು ವರ್ಷದಿಂದ ನೃತ್ಯ ತರಬೇತಿ ಪಡೆಯುತ್ತಿದ್ದಳು. ಸೋಮವಾರ ಎಂದಿನಂತೆ ಸಂಜೆ 6 ಗಂಟೆಗೆ ಶಾಲೆಗೆ ಬಂದ ಬಾಲಕಿ ಇದಕ್ಕಿದ್ದಂತೆ ಕುಸಿದು ಬಿದ್ದಿದ್ದಾಳೆ.
ಕೂಡಲೇ ಆಸ್ಪತ್ರೆಗೆ ಕರೆದೊಉದ್ರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ. ಘಟನೆ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಚಂದನಾ ಸ್ನೇಹಿತೆ ರಕ್ಷಿತಾ ತನ್ನ ಮನೆಯಿಂದ ಹೇನಿನ ಔಷಧಿಯನ್ನು ಶಾಲೆಗೆ ತಂದಿದ್ದು, ಇದನ್ನು ಚಂದನಾಗೆ ತೋರಿಸಿ ಹೇನಿನ ಔಷಧಿ ಎಂದು ಹೇಳಿದ್ದರು.
ಈ ಮಧ್ಯೆ ಇತರೆ ವಿದ್ಯಾರ್ಥಿಗಳು ನೃತ್ಯ ತರಬೇತಿ ನಡೆಸುತ್ತಿರುವ ವೇಳೆಯಲ್ಲಿ ಚಂದನಾ ಯಾರಿಗೂ ತಿಳಿಯದ್ದಂತೆ ಔಷಧಿ ಬಾಟಲಿಯನ್ನು ಶೌಚಾಲಯದೊಳಗೆ ಕೊಂಡೊಯ್ದಿದ್ದಾಳೆ. ಇಲ್ಲಿಂದ ಹೊರಬಂದು ಮತ್ತೆ ನೃತ್ಯ ಮಾಡುವಾಗ ಏಕಾಏಕಿ ಕುಸಿದು ಬಿದ್ದಿದ್ದಾಳೆ. ಚಂದನಾ ಶೌಚಾಲಯಕ್ಕೆ ಹೋಗಿದ್ದನ್ನು ಇತರೆ ವಿದ್ಯಾರ್ಥಿಗಳು ಗಮನಿಸಿದ್ದಾರೆ.
ಆದರೆ, ಯಾವ ಕಾರಣಕ್ಕೆ ವಿಷ ಸೇವಿಸಿದ್ದಾರೆ ಎಂದು ತಿಳಿದಿಲ್ಲ. ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಅಂಬೇಡ್ಕರ್ ಆಸ್ಪತ್ರೆಗೆ ರವಾನಿಸಿದ್ದಾರೆ. ಪೊಲೀಸರು ತನಿಖೆ ನಡೆಸಿದಾಗ ನೃತ್ಯ ತರಬೇತಿಯ ಬಾತ್‌ರೂಂನಲ್ಲಿ ಆಕೆಯ ಗೆಳತಿ ರಕ್ಷಿತಾ ತೋರಿಸಿದ ಹೇನಿನ ಔಷದಿ ಬಾಟಲಿ ಪತ್ತೆಯಾಗಿತ್ತು.
ಅಷ್ಟೆ ಅಲ್ಲದೆ, ಬಾಟಲ್‌ನಲ್ಲಿದ್ದ ಅರ್ಧದಷ್ಟು ಔಷಧಿ ಖಾಲಿಯಾಗಿತ್ತು. ಈ ಹಿನ್ನೆಲೆಯಲ್ಲಿ ಈ ಔಷಧಿಯನ್ನು ಸೇವಿಸಿ ಚಂದನ ಮೃತಪಟ್ಟಿರುವ ಸಾಧ್ಯತೆಗಳಿವೆ ಎಂದು ಪೊಲೀಸರು ಶಂಕೆವ್ಯಕ್ತಪಡಿಸಿದ್ದಾರೆ.