Advertisement
ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಜತೆಗೆ ಭಾನುವಾರ ಬೆಳಗ್ಗೆವರೆಗೆ ಜಿಲ್ಲೆಯಲ್ಲಿ ಮದ್ಯ ಮಾರಾಟ ನಿಷೇಧ ಹಾಗೂ ಮದುವೆ, ಪುಸ್ತಕ ಬಿಡುಗಡೆ, ಉದ್ಘಾಟನೆ ಸಮಾರಂಭ ಹೊರತುಪಡಿಸಿ, ವಿಜಯೋತ್ಸವ ಹಾಗೂ ಪ್ರತಿಭಟನೆ ಸೇರಿದಂತೆ ಯಾವುದೇ ರೀತಿಯ ಮೆರವಣಿಗೆ ನಡೆಸದಂತೆ ಜಿಲ್ಲಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಆದೇಶ ಹೊರಡಿಸಿದ್ದರು.
Related Articles
Advertisement
ಬಂದ್ ವಾತಾವರಣ: ಕಳೆದ ಕೆಲ ದಿನಗಳಿಂದ ಸುದ್ದಿ ಮಾಧ್ಯಮಗಳಲ್ಲಿ ಬರುತ್ತಿದ್ದ ವರದಿ, ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಹಾಗೂ ಎರಡನೇ ಶನಿವಾರವಾದ್ದರಿಂದ ಬಹುತೇಕ ಸರ್ಕಾರಿ ಕಚೇರಿಗಳಿಗೆ ರಜೆ ಇದ್ದುದರಿಂದ ಮಧ್ಯಾಹ್ನದ ವರೆಗೆ ನಗರದ ರಸ್ತೆಗಳಲ್ಲಿ ಜನ ಸಂಚಾರ ವಿರಳವಾಗಿತ್ತು. ಕೋಮು ಸೂಕ್ಷ್ಮಪ್ರದೇಶಗಳಲ್ಲಂತೂ ಜನರಿಗಿಂತ ಪೊಲೀಸರ ಸಂಖ್ಯೆಯೇ ಹೆಚ್ಚಿತ್ತು.
ಶತಮಾನದ ವಿವಾದ ಕುರಿತು ಸುಪ್ರೀಂ ತೀರ್ಪು ಹೊರಬೀಳಲಿದ್ದರಿಂದ ಸಹಜ ಕುತೂಹಲದಿಂದ ಜನರು ಮನೆಯಲ್ಲೇ ಟೀವಿ ಮುಂದೆ ಕುಳಿತು ಮಾಧ್ಯಮಗಳ ವಾರ್ತೆಗಳತ್ತ ದೃಷ್ಟಿನೆಟ್ಟಿದ್ದರಿಂದ ಸದಾ ಜನರಿಂದ ತುಂಬಿ ತುಳುಕುತ್ತಿದ್ದ ಪ್ರಮುಖ ರಸ್ತೆಗಳಲ್ಲಿ ಜನ ಸಂಚಾರವಿಲ್ಲದೆ ಬಿಕೋ ಎನ್ನುತ್ತಿದ್ದವು. ಮಧ್ಯಾಹ್ನದ ನಂತರ ಜನ ಮನೆಯಿಂದ ಹೊರಬಂದು ಎಂದಿನಂತೆ ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರಿಂದ ಮೈಸೂರು ನಗರದ ವಾತಾವರಣ ಸಹಜ ಸ್ಥಿತಿಗೆ ಮರಳಿತು.
ಬಸ್‌ಗಳಲ್ಲೂ ಜನರಿಲ್ಲ: ತೀರ್ಪು ಯಾವ ರೀತಿ ಬರುತ್ತೋ, ಮುಂದೇನಾಗುತ್ತೋ ಎಂಬ ಆತಂಕದಲ್ಲೇ ಬಹುತೇಕ ಜನರು ತಮ್ಮ ಕೆಲಸ ಕಾರ್ಯಗಳನ್ನು ಮುಂದುಡಿದ್ದು, ಹಾಗೂ ಶಾಲಾ-ಕಾಲೇಜುಗಳ ರಜೆ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲೂ ಜನರ ಸಂಖ್ಯೆ ಕಡಿಮೆ ಇತ್ತು.
ಪೂಜೆ, ಪುನಸ್ಕಾರ: ಆಯೋಧ್ಯೆ ವಿವಾದವನ್ನು ಸರ್ವೋತ್ಛ ನ್ಯಾಯಾಲಯ ತನ್ನ ತೀರ್ಪಿನಿಂದ ಸುಖಾಂತ್ಯಗೊಳಿಸಿದ ಸಂತಸದಲ್ಲಿ ಹಿಂದೂಪರ ಕಾರ್ಯಕರ್ತರು ರಾಮಮಂದಿರಗಳಲ್ಲಿ ಪೂಜೆ ಸಲ್ಲಿಸಿ, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಹಾಗೂ ಮುಂದೆ ಯಾವುದೇ ವಿಘ್ನಗಳು ಎದುರಾಗದೆ ಶೀಘ್ರ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣವಾಗಲಿ ಎಂದು ಪ್ರಾರ್ಥನೆ ಸಲ್ಲಿಸಿದರು.
ಹಿಂದೂ-ಮುಸ್ಲಿಮರು ಸೇರಿ ಅಯೋಧ್ಯೆ ತೀರ್ಪಿನ ಬಗ್ಗೆ ಸಂತಸ ವ್ಯಕ್ತಪಡಿಸಿ ವಿದ್ಯಾರಣ್ಯಪುರಂನಲ್ಲಿರುವ ಶಾಸಕ ಎಸ್.ಎ.ರಾಮದಾಸ್ ಕಚೇರಿ ಮುಂಭಾಗ ಶ್ರೀರಾಮಚಂದ್ರನ ಫೋಟೋಗೆ ಪುಷ್ಪ ನಮನ ಸಲ್ಲಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು. ಸಂಭ್ರಮಾಚಣೆಯಲ್ಲಿ ಮುಸ್ಲಿಮ್ ಮಹಿಳೆಯರೂ ಭಾಗವಹಿಸಿ ಹಿಂದೂ-ಮುಸ್ಲಿಮ್ ಭಾಯಿ ಭಾಯಿ ಎಂದು ಘೋಷಣೆ ಕೂಗಿ ಭಾವೈಕ್ಯತೆಯ ಸಂದೇಶ ಸಾರಿದರು.
ಅಯೋಧ್ಯೆ ತೀರ್ಪನ್ನು ಸ್ವಾಗತಿಸಿ ಜಿಲ್ಲಾ ಬ್ರಾಹ್ಮಣ ಸಂಘದಿಂದ ಕೃಷ್ಣಮೂರ್ತಿಪುರಂನಲ್ಲಿರುವ ಶ್ರೀರಾಮಮಂದಿರದಲ್ಲಿ ರಾಮಚಂದ್ರನಿಗೆ ವಿಶೇಷ ಅಭಿಷೇಕ, ಪೂಜೆ ಸಲ್ಲಿಸಿ, ಭಕ್ತರಿಗೆ ಪ್ರಸಾದ ವಿತರಿಸಲಾಯಿತು.
ರಾಮಮಂದಿರ-ಬಾಬ್ರಿ ಮಸೀದಿಯ ವಿವಾದಕ್ಕೆ ಸರ್ವೋತ್ಛ ನ್ಯಾಯಾಲಯ ಅಂತಿಮ ತೆರೆ ಎಳೆದಿದೆ. ಕಾಂಗ್ರೆಸ್ ಈ ತೀರ್ಪನ್ನು ಗೌರವಿಸಿ, ಸ್ವಾಗತಿಸುತ್ತದೆ. ಎರಡೂ ಧರ್ಮದವರು ಈ ತೀರ್ಪನ್ನು ಸ್ವಾಗತಿಸಬೇಕು ಎಂದು ಮನವಿ ಮಾಡುತ್ತೇನೆ. ಸಮಾಜದಲ್ಲಿ ಶಾಂತಿ-ಸೌಹಾರ್ದತೆ ಕಾಪಾಡಬೇಕು ಎಂದು ಕೇಳಿಕೊಳ್ಳುತ್ತೇನೆ. ಎಲ್ಲರಿಗೂ ಸ್ವಧರ್ಮ ನಿಷ್ಠೆ, ಪರ ಧರ್ಮ ಸಹಿಷ್ಣುತೆ ಇರಬೇಕು. ಸಂವಿಧಾನಕ್ಕೆ ಗೌರವ ಕೊಡಬೇಕು.-ಸಿದ್ದರಾಮಯ್ಯ, ವಿರೋಧಪಕ್ಷದ ನಾಯಕ ಭಾರತದ ಇತಿಹಾಸದಲ್ಲಿ ಇಂದಿನ ದಿನವನ್ನು ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾಗಿದೆ. ಐದೂವರೆ ಶತಮಾನಗಳ ಹೋರಾಟಕ್ಕೆ ಕಡೆಗೂ ಜಯ ಸಿಕ್ಕಿದೆ. ರಾಮಜನ್ಮ ಭೂಮಿಗಾಗಿ ಪ್ರಾಣತೆತ್ತಿರುವ ರಾಮ ಭಕ್ತರ ಆತ್ಮಕ್ಕೆ ಈಗ ಶಾಂತಿ ಸಿಕ್ಕಿದೆ. ರಾಮಮಂದಿರ ನಿರ್ಮಾಣವನ್ನು ಅಲ್ಪಸಂಖ್ಯಾತರು ವಿರೋಧಿಸಿಲ್ಲ. ಕೆಲ ರಾಜಕೀಯ ಪಕ್ಷಗಳು ವಿರೋಧ ವ್ಯಕ್ತಪಡಿಸಿದ್ದವು. ಎಲ್ಲರೂ ಈ ತೀರ್ಪನ್ನು ಸ್ವಾಗತಿಸಿರುವಂತೆ ನಾನೂ ಸಹ ಈ ತೀರ್ಪನ್ನು ಆತ್ಮೀಯವಾಗಿ ಸ್ವಾಗತಿಸುತ್ತೇನೆ.
-ಗೋ.ಮಧುಸೂದನ್, ರಾಜ್ಯ ಬಿಜೆಪಿ ವಕ್ತಾರ ಅಯೋಧ್ಯೆ ತೀರ್ಪು ನಿರೀಕ್ಷಿತ. ನಾವೆಲ್ಲ ಈ ತೀರ್ಪು ಇದೆ ರೀತಿ ಬರುತ್ತೆ ಎಂದು ನಿರೀಕ್ಷೆ ಮಾಡಿದ್ದೆವು. ಸಾಕ್ಷ್ಯ ಹಾಗೂ ಪುರಾತತ್ವ ಇಲಾಖೆ ನೀಡಿದ ವರದಿ ಆಧಾರದ ಮೇಲೆ ಈ ತೀರ್ಪು ಬಂದಿದೆ. ಭಾರತೀಯನಾಗಿ ನನಗೆ ಈ ತೀರ್ಪು ಸಮಾಧಾನ ತಂದಿದೆ. ನೂರಾರು ವರ್ಷಗಳ ವ್ಯಾಜ್ಯಕ್ಕೆ ತೆರೆಬಿದ್ದಿದೆ ಅನ್ನುವ ಸಮಾಧಾನ ಇದೆ. ಅಯೋಧ್ಯೆಯಲ್ಲಿನ ವಾತಾವರಣವನ್ನು ಇಲ್ಲಿ ಕುಳಿತು ವಿಶ್ಲೇಷಣೆ ಮಾಡಲಾಗಲ್ಲ. ಇನ್ನು ಮುಂದೆ ಅಯೋಧ್ಯೆ ವಿಚಾರ ಆಜಕೀಯ ಅಸ್ತ್ರ ಆಗಲ್ಲ. ರಾಮನ ಹೆಸರಲ್ಲಿ ಮತಗಳನ್ನು ಪಡೆಯುವ ನಿದರ್ಶನಗಳು ಇನ್ನು ಮುಂದೆ ಸಿಗಲ್ಲ. ಧರ್ಮ-ರಾಜಕೀಯ ಬೇರ್ಪಟ್ಟ ಐತಿಹಾಸಿಕ ದಿನ ಇದೆ. ಈ ತೀರ್ಪಿನಿಂದ ಧರ್ಮದ ರಾಜಕೀಯ ಮುಗಿದಿದೆ.
-ತನ್ವೀರ್ ಸೇಠ್, ಶಾಸಕರು ಸರ್ವೋತ್ಛ ನ್ಯಾಯಾಲಯದ ತೀರ್ಪು ಸರ್ವ ಸಮ್ಮತವಾಗಿದೆ. ಹಿಂದೆ ಏನಾಯ್ತು ಅನ್ನುವುದರ ವಿಶ್ಲೇಷಣೆ ಈಗ ಮಾಡದೆ ತೀರ್ಪನ್ನು ಸ್ವಾಗತಿಸಬೇಕು. ಭೂಮಿ ಸಂಬಂಧ ಹಲವಾರು ವರ್ಷಗಳಿಂದಲೂ ವಿವಾದ ಇತ್ತು. ಹಲವಾರು ಸಾವು-ನೋವುಗಳಿಗೂ ಕಾರಣವಾಗಿತ್ತು. ಈಗ ಒಳ್ಳೆಯ ತೀರ್ಪು ಬಂದಿದೆ. ದೇಶದ ಜನತೆ ಸರ್ವಾನುಮತದಿಂದ ಈ ಐತಿಹಾಸಿಕ ತೀರ್ಪನ್ನು ಸ್ವಾಗತಿಸಿದ್ದಾರೆ. ನ್ಯಾಯಪೀಠಕ್ಕೆ ಅಭಿನಂದನೆಗಳನ್ನು ಹೇಳಲು ಬಯಸುತ್ತೇನೆ. ಈ ತೀರ್ಪನ್ನು ಸೌಹಾರ್ದಯುತವಾಗಿ ಎಲ್ಲವೂ ಸ್ವಾಗತಿಸೋಣ.
-ವಿ.ಶ್ರೀನಿವಾಸಪ್ರಸಾದ್, ಲೋಕಸಭಾ ಸದಸ್ಯರು ಅಯೋಧ್ಯೆ ರಾಮಜನ್ಮ ವಿವಾದದ ಕುರಿತ ಸುಪ್ರೀಂಕೋರ್ಟ್ ತೀರ್ಪು ಐತಿಹಾಸಿಕವಾಗಿದೆ. ನೂರಾರು ವರ್ಷಗಳ ಇತಿಹಾಸವುಳ್ಳ ಬಾಬರಿ ಮಸೀದಿ-ರಾಮಮಂದಿರ ವಿವಾದ ಇಂದಿಗೆ ಇತ್ಯರ್ಥವಾಗಿರುವುದು ಅತೀವ ಸಂತೋಷ ಉಂಟುಮಾಡಿದೆ.
-ನಾರಾಯಣ ಗೌಡ ಸಿ., ಅಧ್ಯಕ್ಷರು, ಮೈಸೂರು ಹೋಟೆಲ್ ಮಾಲೀಕರ ಸಂಘ