Advertisement
ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ ಮತ್ತು ಭೌಗೋಳಿಕವಾಗಿ ನಮ್ಮೂರು ನನಗೆ ಬಹು ವಿಶೇಷ. ಸುಮಾರು 200 ಮನೆಗಳಿರುವ ನಮ್ಮೂರು ಸರಿಸುಮಾರು 13 ವಿವಿಧ ಸಮುದಾಯದವರನ್ನು ಒಳಗೊಂಡಿದೆ. ನಮ್ಮೂರು ನನಗಷ್ಟೇ ಅಲ್ಲ ಬಹುಷಃ ಅಲ್ಲಿ ಬದುಕಿ ಹೋದ ಎಲ್ಲರಿಗೂ ಸ್ವರ್ಗವೇ. ಅಲ್ಲದೇ ಅಲ್ಲಿ ಜಗಳ, ಗಲಾಟೆಗಳು ನಡೆದಿಲ್ಲ. ಎಲ್ಲರೂ ಒಟ್ಟಿಗೆ ಚಹಾ ಕುಡಿಯುತ್ತಾ, ಮಾತನಾಡಿಕೊಳ್ಳುತ್ತಾ, ಅಬ್ಬಾ !! ನಮ್ಮೂರು ಜೇನುಗೂಡು ಎನಿಸುತ್ತದೆ. ಇಲ್ಲಿ 13 ಸಮುದಾಯಗಳಿದ್ದಾಗ್ಯೂ ಕೋಮುಗಲಭೆಗಳಾಗಲೀ, ಜಾತೀಯವಾದ ಗಲಾಟೆಗಳಾಗಲೀ ಬಹುತೇಕ ನಡೆದೇ ಇಲ್ಲ. ನನ್ನೂರಿನಲ್ಲಿ ಹೆಚ್ಚು ಗೌರವಿಸುವುದು ವಿದ್ಯಾವಂತರನ್ನು ಮತ್ತು ಗುಣವಂತರನ್ನು. ಇದು ಎಲ್ಲರನ್ನೂ ಸಮಾನವಾಗಿ ಕಾಣುವ ಒಂದು ಪದ್ಧತಿಯನ್ನೇ ಹುಟ್ಟುಹಾಕಿದೆ.
ನಮ್ಮೂರು ಪುಟ್ಟದಾದರೂ ಅಲ್ಲಿ 3 ಪ್ರಮುಖ ದೇವಸ್ಥಾನಗಳಿವೆ. ಅವುಗಳಲ್ಲಿ ಶ್ರೀ ರಂಗನಾಥ ಸ್ವಾಮಿಯವರಿಗೆ ಪ್ರತೀ ವರ್ಷ ಯುಗಾದಿಯ 15 ದಿನಕ್ಕೆ ಮೊದಲು 5 ದಿನಗಳ ಕಾಲ ಜಾತ್ರೆ ನಡೆಯುತ್ತದೆ. ಊರೆಲ್ಲ ಸೇರಿ ತಮಗಾದಷ್ಟು ದವಸ-ಧಾನ್ಯಗಳನ್ನು ಒಂದು ಕಡೆ ಸೇರಿಸಿ ಜಾತ್ರೆಗೆ ಬಂದ ಭಕ್ತರಿಗೂ ಸಲ್ಲುವ ಹಾಗೆ ಊರಿನ ಎಲ್ಲರೂ ದೇವಸ್ಥಾನದಲ್ಲಿ ಹರಿಪ್ರಸಾದವನ್ನು ಸೇವಿಸುತ್ತಾರೆ. ನಾನಂತೂ ಈ ದಿನಕ್ಕಾಗಿ ಕಾಯುತ್ತಿರುತ್ತಿದ್ದೆ. ಅಡುಗೆ ಮಾಡದೇ ಊಟ ಸಿಕ್ಕುವು ದೆಂದರೆ ಯಾರಿಗೆ ತಾನೆ ಬೇಡ? ಅದರಲ್ಲೂ ನನ್ನ ಸ್ನೇಹಿತರೊಟ್ಟಿಗೆ ಹೊಸ ಬಟ್ಟೆ ಧರಿಸಿ, ಊರಿನ ಎಲ್ಲರೂ ಒಂದು ಕಡೆ ಸೇರಿ ಮಾತನಾಡುತ್ತಾ, ಊಟ ಮಾಡುವ ಕಲ್ಪನೆಯೇ ಆನಂದ ಉಂಟು ಮಾಡುತ್ತದೆ. ಅದರಲ್ಲೂ ಎಲ್ಲ ಜಾತಿಯ, ಸಮುದಾಯದವರೂ, ಎಲ್ಲ ವರ್ಗದವರೂ ಒಟ್ಟಿಗೆ ಕೂತು ಭಕ್ತಿಯಿಂದ ಊಟ ಸೇವಿಸಿ ಜತೆಗೆ ತಮ್ಮ ಪಾಲಿನ ಎಲ್ಲ ಕರ್ತವ್ಯಗಳನ್ನೂ ನಿಭಾಯಿಸುತ್ತಾರೆಂದರೆ ನನ್ನೂರು ಅನೇಕ ಸಮುದಾಯಗಳ ಸಾಂಸ್ಕೃತಿಕತೆಯನ್ನು ಒಳಗೊಂಡು ಏಕತೆಯಲ್ಲಿ ಬೆರೆತಂತಹದ್ದು. ಇನ್ನು ಶ್ರೀರಾಮ ನವಮಿಯಲ್ಲಿ 3 ದಿನಗಳ ಕಾಲ ದೇವಸ್ಥಾನದಲ್ಲಿ ರಘುರಾಮನ ಭಜನೆಯನ್ನು ಮಾಡುತ್ತಾರೆ. ಜನರು ತಮಗೆ ಸಮಯ ಸಿಕ್ಕಾಗ ಭಜನ ಗುಂಪಿನಲ್ಲಿ ಸೇರಿಕೊಳ್ಳುತ್ತಾರೆ. 3 ದಿನಗಳ ಅನಂತರ ರಾಮನ ಹೆಸರಲ್ಲಿ ಕೆಂಡ ತುಳಿದು ಎಲ್ಲರೂ ಒಂದು ಕಡೆ ಮತ್ತೂಮ್ಮೆ ದವಸ-ಧಾನ್ಯಗಳನ್ನು ಸೇರಿಸಿ ಅರೆಬೆಳದಿಂಗಳ ಊಟ ಮಾಡುತ್ತಾರೆ. ಮೊದಲೆಲ್ಲ ನಮ್ಮೂರಿನಲ್ಲಿ ಅಷ್ಟು ಬೀದಿ ದೀಪಗಳು ಇರಲಿಲ್ಲ. ಹಾಗಾಗಿ ದೇವಸ್ಥಾನದ ಒಂದು ಭಾಗಕ್ಕೆ ಮಾತ್ರ ಬೆಳಕು ಇರುತ್ತಿತ್ತು. ಉಳಿದ ಭಾಗಕ್ಕೆ ಚಂದ್ರ ಬೆಳಕಿನ ದೀವಿಗೆ ಹಿಡಿಯುತ್ತಿದ್ದ. ಮುಂದಿನ ವರ್ಷದ ಈ ದಿನದವರೆಗೆ ನಾನು ಊಟದ ಸವಿಯನ್ನೇ ನೆನಪಿಸಿಕೊಳ್ಳುತ್ತಿದ್ದೆ. ಊಟದ ರುಚಿ ಎಷ್ಟಿತ್ತೋ ಎಲ್ಲರೊಟ್ಟಿಗೆ ತಿನ್ನುವ ಮಜವೂ ಅಷ್ಟೇ ಇರುತ್ತಿತ್ತು. ಇಂದಿಗೂ ನನ್ನೂರು ಈ ಸಂಪ್ರದಾಯಗಳನ್ನು ಕಾಯ್ದುಕೊಂಡು ಬಂದಿದೆ. ಜಾತಿ, ಸಮುದಾಯ, ನಾನು ಹೆಚ್ಚು – ನೀನು ಹೆಚ್ಚು ಎನ್ನುವ ಈ ಜಗತ್ತಿನಲ್ಲಿ ನಮ್ಮೂರು ಎಷ್ಟು ಭಿನ್ನ ಅಲ್ಲವೇ ?
Related Articles
Advertisement
ಇನ್ನೇನು ಸಾಕ್ಷಿ ಬೇಕಿದೆ ನನ್ನ ಊರನ್ನು ಸ್ವರ್ಗ ಎಂದು ಹೇಳಲು ? ನನಗೆ ಬೇರೆ ಬೇರೆ ಮನೆಗಳ, ಸಮುದಾಯದ ದೊಡ್ಡಮ್ಮ – ದೊಡ್ಡಪ್ಪ , ಅಕ್ಕ , ಅಜ್ಜಿ-ತಾತ, ಅತ್ತೆ-ಮಾಮರು ಇದ್ದಾರೆ. ಅಷ್ಟೇ ಏಕೆ ಯುಗಾದಿಯ ಅನಂತರ ಮೂಡುವ ಮೊದಲ ಚಂದ್ರನ ದರ್ಶನ ಪಡೆದ ನಾವು ಹಿರಿಯರೆನಿಸಿದ ಎಲ್ಲರೂ ಆಶೀರ್ವಾದ ಪಡೆಯುತ್ತೇವೆ. ಇಲ್ಲಿಯೂ ಯಾವುದೇ ಜಾತಿಗಳೂ ನಮ್ಮೂರಿನವರನ್ನು ಕಾಡುವುದಿಲ್ಲ. ನಮ್ಮೂರು ಹೆಣ್ಣು ಮಕ್ಕಳನ್ನು ತುಂಬಾ ಗೌರವಯುತವಾಗಿ ನಡೆಸಿಕೊಳ್ಳುತ್ತದೆ. ಯಾವ ಮನೆಯ ಹೆಣ್ಣುಮಗುವಿಗೂ ಸುಖಾ ಸುಮ್ಮನೆ ಅಗೌರವ ತರುವಂತಹ ಮಾತುಗಳನ್ನು ಆಡಿಕೊಳ್ಳುವ ಜಾಯಮಾನ ಮುಚ್ಚಿಸುತ್ತಾರೆ. ನಮ್ಮೂರಿನ ಜನರ ಮನಸ್ಸನ್ನು ಅಳೆಯುವ ಮಾಪನ ಯಾವುದು ಎಂದು ಯಾರಾದರೂ ನನ್ನನ್ನು ಕೇಳಿದರೆ, ಅದಕ್ಕೆ ನಾನು ವಜ್ರ ಎಂದು ಹೇಳುತ್ತೇನೆ. ಏಕೆಂದರೆ ಇಡಿಯಾಗಿ ಈ ಪ್ರಪಂಚವನ್ನು ಸಾಮಾಜಿಕ ಜಾಲತಾಣಗಳು ಅಳುತ್ತಿವೆ. ಹೊಸ ಆಲೋಚನೆಗಳು, ಕೆಟ್ಟ ಮನಸ್ಥಿತಿಗಳು ತಮಗೆ ಬೇಕಾದ ಹಾಗೆ ಜನರ ಮನಸ್ಸನ್ನು ಕೆಡಿಸುತ್ತಿವೆ. ಆದರೆ ನಮ್ಮೂರಿನ ಜನರ ಸಂತೋಷ, ಅವರ ಗುಣಗಳನ್ನು ಅವು ನಾಶಪಡಿಸಲು ಆಗಿಲ್ಲ. ಇಲ್ಲಿಯವರೆಗೂ ನಮ್ಮೂರಿನ ಜನರ ಪಾರಂಪರಿಕವಾಗಿ ಬಂದ ಯಾವುದೇ ಆಚರಣೆ, ಉಳಿಸಿಕೊಂಡು ಬಂದ ಸಂಬಂಧಗಳು, ಮತ್ತೂಬ್ಬರೊಟ್ಟಿಗೆ ಇರುವ ಉತ್ತಮ ಭಾವನೆಗಳು ಪ್ರಾಪಂಚೀಕರಣದ ಹೊಡೆತಕ್ಕೆ ನಲುಗಿಲ್ಲ. ಅದಕ್ಕೆ ನಮ್ಮೂರಿನ ಜನರು ವಜ್ರದಷ್ಟೇ ಕಠಿನವಾದರೂ ಹೂವಿನಷ್ಟೇ ಕೋಮಲ ಮನಸ್ಕರು.
ನಮ್ಮೂರು 2 ದಿಕ್ಕುಗಳಲ್ಲಿ ಹಳ್ಳದಿಂದಲೂ ಒಂದು ದಿಕ್ಕು ಕೆರೆಯಿಂದಲೂ ಸುತ್ತುವರೆಯಲ್ಪಟ್ಟಿದೆ. ವ್ಯವಸಾಯವೇ ಮುಖ್ಯವಾಗಿರುವ ನಮ್ಮೂರಿನಲ್ಲಿ ಬೆಳೆಯದವರ ಮನೆಯಲ್ಲಿ ಮಕ್ಕಳಿದ್ದರೆ ಅಥವಾ ಬೆಳೆಯಲಾರದ ಸಂದರ್ಭವಿರುವ ಜನರೊಟ್ಟಿಗ ಸಾಧ್ಯವಾದಷ್ಟು ಹಂಚಿಕೊಂಡು ತಿನ್ನುತ್ತಾರೆ. ನನ್ನೂರು ಸುಂದರ, ನಿಷ್ಕಲ್ಮಶ ಮನಸ್ಸುಗಳಿರುವ ಶುದ್ಧವಾದ ಊರು. ಅಲ್ಲಿರುವುದು ಪ್ರೀತಿ ಮತ್ತು ಸಂಯಮಗಳೇ ಅವರನ್ನು ಸದಾ ಕಾಪಾಡಲೀ. ಇದು ಮುಂದಿನ ಪೀಳಿಗೆಗಳೂ ಮುಂದುವರೆಸಲಿ ಎಂಬುದು ನನ್ನ ಆಶಯ.
-ಡಾ| ಜಲದರ್ಶಿನಿ ಜಲರಾಜು, ಮಾಂಟ್ರಿಯಲ್