Advertisement

ಅತಿವೃಷ್ಟಿ-ಅನಾವೃಷ್ಟಿಗೆ ಸಿಲುಕಿ ಬಾಡಿದ ಬೆಳೆ

06:07 PM Aug 25, 2021 | Team Udayavani |

ಶಹಾಬಾದ: ಸಾಲ-ಸೋಲ ಮಾಡಿ ಉತ್ತಮ ಬೆಳೆಬೆಳೆದು ಅಭಿವೃದ್ಧಿ ಹೊಂದಬೇಕೆಂಬ ನಂಬಿಕೆಯಿಂದ ಮುಂಗಾರು ಬಿತ್ತನೆ ಮಾಡಿದ್ದ ರೈತರಿಗೆ ಕಳೆದ ಜುಲೈ ತಿಂಗಳಲ್ಲಿ ಅತಿಯಾದ ಮಳೆಯಾಗಿದ್ದರಿಂದ ಹೆಸರು, ಉದ್ದು ಬೆಳೆ ಹಾಳಾದರೆ, ಈಗ ಮಳೆ ಕಡಿಮೆಯಾಗಿ ತೊಗರಿ, ಹತ್ತಿ ಬಾಡುವ ಹಂತದಲ್ಲಿದೆ.

Advertisement

ಕಳೆದ ಜೂನ್‌ ತಿಂಗಳ ಮೊದಲ ವಾರದಲ್ಲಿ ಬಿದ್ದ ಮೊದಲ ಮಳೆಯಿಂದ ಹರ್ಷಗೊಂಡ ರೈತರು ಹೊಲ ಹದ ಮಾಡಿ, ಬಿತ್ತನೆ ಮಾಡಿದ್ದರು. ಬಿತ್ತನೆ ಮಾಡಿದ ನಂತರ ಹೆಸರು, ಉದ್ದು ಉತ್ತಮವಾಗಿ ಬೆಳೆದಿದ್ದವು. ಆಗ ಸುಮಾರು ಐದಾರು ದಿನಗಳ ಕಾಲ ಮಳೆ ಬಂದು, ಹೊಲದಲ್ಲಿ ನೀರು ನಿಂತ ಪರಿಣಾಮ, ಅತಿಯಾದ ತೇವಾಂಶದಿಂದ ಬೆಳೆ ಕೊಳೆತು ಹೋಗಿದೆ. ಇದರಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ.

ಕೆಲವೊಂದು ಗ್ರಾಮದಲ್ಲಿ ಹೆಸರು, ಉದ್ದಿನ ಬೆಳೆ ಸಮೃದ್ಧವಾಗಿದೆ. ಆದರೆ ಹೂವು ಮತ್ತು ಕಾಯಿ ಬಾರದೇ ರೈತ ಕಂಗಾಲಾಗಿದ್ದಾನೆ. ಆದ್ದರಿಂದ ಸಂಪೂರ್ಣ ಹೊಲವನ್ನೇ ಹರಗಿದ್ದಾನೆ. ಕಳೆದ ವರ್ಷ ಮುಂಗಾರು ಹಾಗೂ ಹಿಂಗಾರಿನಲ್ಲಿ ಉತ್ತಮ ಮಳೆಯಾಗಿತ್ತು. ಅಲ್ಲದೇ ಹೆಚ್ಚಿನ ಮಳೆಯಾಗಿದ್ದರಿಂದ ತಗ್ಗು ಪ್ರದೇಶದ ಹೊಲ ಗದ್ದೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣ ಬೆಳೆ ಹಾನಿಯಾಗಿತ್ತು.

ಈ ಬಾರಿ ಜುಲೈ ತಿಂಗಳಲ್ಲಿ ಮಾತ್ರ ಮಳೆ ಬಂದಿದ್ದು, ತದನಂತರ ಮಳೆ ಬಾರದಿರುವುದರಿಂದ ಬೆಳೆಗಳು ಬಾಡುವ ಹಂತ ತಲುಪಿವೆ. ಆಗೊಮ್ಮೆ-ಈಗೊಮ್ಮೆ ಎನ್ನುವಂತೆ ಐದಾರು ನಿಮಿಷ ಮಳೆ ಹನಿಗಳು ಉದುರಿ ನಿಲ್ಲುತ್ತಿವೆ. ಮೋಡ ಕಟ್ಟುತ್ತಿದೆ. ಆದರೆ ಮಳೆಬಾರದೇ ಹೋಗುತ್ತಿದೆ. ಕಣ್ಣ ಮುಂದೆಯೇ ಬೆಳೆದ ಬೆಳೆ ತೇವಾಂಶದ ಕೊರತೆಯಿಂದ ಬಾಡುವ ಹಂತಕ್ಕೆ ತಲುಪುತ್ತಿರುವುದರಿಂದ ರೈತರು ನಿರಾಶೆಯಾಗಿದ್ದಾರೆ.

ಸಾಲ ಮಾಡಿ ಬೀಜ, ಗೊಬ್ಬರ ಖರೀದಿ ಮಾಡಿದ ರೈತರು ಸಾಲ ತೀರಿಸಲಾಗದೇ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಹವಾಮಾನ ಇಲಾಖೆ ವರದಿಯಂತೆ ಈ ಬಾರಿ
ಉತ್ತಮ ಮಳೆಯಾಗುತ್ತದೆ ಎನ್ನುವ ಆಶಾಭಾವನೆಯಿಂದ ರೈತರು ಬಿತ್ತನೆ ಮಾಡಿದ್ದರು. ಆದರೆ ಆಗೊಮ್ಮ-ಈಗೊಮ್ಮೆ ಸುರಿದ ಮಳೆಯಿಂದ ಹೇಗೋ ಚೇತರಿಸಿಕೊಂಡಿವೆ. ಈಗ ಮಳೆಯಾದರೆ ಚೇತರಿಸಿಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ರೈತರು ಒಳ್ಳೆಯ ಮಳೆ ಬರುವ ಆಶಾಭಾವನೆ ಇಟ್ಟುಕೊಂಡಿದ್ದಾರೆ. ಹೀಗಿದ್ದರೂ ರಾಜ್ಯ-ಕೇಂದ್ರ ಸರ್ಕಾರ ಸಂಪೂರ್ಣ ಸಾಲ ಮಾಡಲು ಹಿಂದೇಟು ಹಾಕುತ್ತಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

Advertisement

ತಾಲೂಕಿನ ಸುತ್ತಮುತ್ತಲಿನ ಪ್ರದೇಶದಲ್ಲಿ ಜುಲೈ ತಿಂಗಳ ಕೊನೆಯಲ್ಲಿ ಸತತವಾಗಿ ಸುರಿದ ಮಳೆಯಿಂದ ಉದ್ದು ಹಾಗೂ ಹೆಸರು ಬೆಳೆ ಅತಿಯಾದ ತೇವಾಂಶದಿಂದ ಹಾಳಾಗಿತ್ತು. ಸದ್ಯ ತೊಗರಿ, ಹತ್ತಿ ಬೆಳೆಗೆ ಮಳೆ ಕೊರತೆಯಾಗಿ ರೈತರು ಸಂಕಷ್ಟದಲ್ಲಿದ್ದಾರೆ. ಸದ್ಯ ಮಳೆ ಅವಶ್ಯಕತೆಯಿದೆ. ವಾರದಲ್ಲಿ ಮಳೆ ಬಾರದೇ ಇದ್ದರೆ ತೇವಾಂಶದ ಕೊರತೆಯಿಂದ ಬೆಳೆ ಒಣಗುವ ಲಕ್ಷಣಗಳಿವೆ. ಹಿಂಗಾರಿನಲ್ಲಾದರೂ ಮಳೆಯಾಗುವ ಆಶಾಭಾವನೆಯನ್ನು ರೈತರು ಇಟ್ಟುಕೊಂಡಿದ್ದಾರೆ.
ರವಿ ನರೋಣಿ, ಅಧ್ಯಕ್ಷ, ಕೃಷಿ ಪತ್ತಿನ ಸಹಕಾರ ಸಂಘ, ಮರತೂರ

ಸತತ ಮಳೆ ಮತ್ತು ಮಳೆಯಿಲ್ಲದೇ ಬೆಳೆ ಹಾಳಾಗುತ್ತಿರುವುದನ್ನು ಕಂಡು ರೈತರು ಮರಗುತ್ತಿದ್ದಾರೆ. ಸರಿಯಾದ ಸಮಯಕ್ಕೆ ಮಳೆ ಬಂದರೆ ನಿರೀಕ್ಷಿತ ಮಟ್ಟದಲ್ಲಿ ಇಳುವರಿ ಪಡೆಯಬಹುದು. ಆದರೆ ಅತಿವೃಷ್ಟಿ ಹಾಗೂ ಅನಾವೃಷ್ಟಿಗೆ ಒಳಗಾಗಿ ರೈತರು ಸಾಲ ಮಾಡಿ ಸಂಕಷ್ಟದಲ್ಲಿ ಇದ್ದಾರೆ. ಹೀಗಾಗಿ ರೈತರ ನೆರವಿಗೆ ಸರ್ಕಾರ ಮುಂದೆ ಬರಬೇಕು.
ನಾಗಣ್ಣ ರಾಂಪೂರೆ, ಕಾಂಗ್ರೆಸ್‌ ಮುಖಂಡ

*ಎಂ.ಜಿ. ಪಾಟೀಲ

Advertisement

Udayavani is now on Telegram. Click here to join our channel and stay updated with the latest news.

Next