Advertisement
ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮ ವ್ಯಾಪ್ತಿಯ ಬಸವನಪಾದೆ- ಮುಳ್ಯ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಈ ಭಾಗದಲ್ಲಿ ಸುಮಾರು 250 ರಿಂದ 300 ಮನೆಗಳಿವೆ. ಹೆಚ್ಚು ಕಡಿಮೆ 2,000 ಜನಸಂಖ್ಯೆ ಹೊಂದಿದ್ದು, ದಿನನಿತ್ಯ ವಾಹನಗಳ ಸಂಚಾರ ಅಧಿಕವಾಗಿದ್ದರೂ, ಯೋಗ್ಯ ರಸ್ತೆ ಮಾತ್ರ ನಿರ್ಮಾಣವಾಗಿಲ್ಲ.
ಸುಮಾರು 5 ಕಿ.ಮೀ. ಉದ್ದವಿರುವ ಮುಳ್ಯ ರಸ್ತೆ ನಿರ್ಮಾಣವಾಗಿ ಕೆಲವು ವರ್ಷಗಳೇ ಸಂದಿವೆ. ಇದೇ ರಸ್ತೆಗೆ 150 ಮೀ. ಕಾಂಕ್ರೀಟ್ ಕಾಮಗಾರಿ, ಅನಿಯಡ್ಕ ಭಾಗದಲ್ಲಿ ಹದಗೆಟ್ಟ ರಸ್ತೆಗೆ ಕೆಲವು ಕಡೆ ಪ್ಯಾಚ್ ವರ್ಕ್ ಮಾಡಲಾಗಿದೆ. ಉಳಿದಂತೆ ಬಸವನಪಾದೆಯಿಂದ ಮುಳ್ಯ ಭಜನ ಮಂದಿರದವರೆಗಿನ ರಸ್ತೆ ಸಂಪೂರ್ಣ ಹಾಳಾಗಿದ್ದು, ದಾರಿಯುದ್ದಕ್ಕೂ ದೊಡ್ಡ ಗುಂಡಿಗಳು ನಿರ್ಮಾಣವಾಗಿವೆ. ರಸ್ತೆ ದುರಸ್ತಿ ಮಾಡದೇ ಇರುವುದು ರಸ್ತೆ ಇಷ್ಟು ಪ್ರಮಾಣದಲ್ಲಿ ಹದಗೆಡಲು ಕಾರಣ ಎಂಬುದು ಗ್ರಾಮಸ್ಥರ ಆರೋಪ. ಗ್ರಾ.ಪಂ. ಚುನಾವಣೆ ಹಿನ್ನೆಲೆಯಲ್ಲಿ ಮಹತ್ವ
ಬಸವನಪಾದೆ- ಮುಳ್ಯ ರಸ್ತೆ ಅಭಿವೃದ್ಧಿ ಗೊಳಿಸಬೇಕೆಂಬ ಒತ್ತಾಯ ಕೆಲವು ವರ್ಷಗಳಿಂದಲೇ ಕೇಳಿ ಬಂದಿತ್ತು. ಕಳೆದ ಲೋಕಸಭೆ ಹಾಗೂ ವಿಧಾನಸಭೆ ಚುನಾ ವಣೆ ಸಂದರ್ಭದಲ್ಲಿ ಕೂಡ ಈ ವಿಷಯ ಮಹತ್ವ ಪಡೆದುಕೊಂಡಿತ್ತು. ಪ್ರಬಲ ಬೇಡಿಕೆಯಿಟ್ಟಿದ್ದರೂ ಭರವಸೆ ಮಾತ್ರ ಈಡೇರಿಲ್ಲ. ಈ ಭಾಗದ ಗ್ರಾಮಸ್ಥರೆಲ್ಲ ಸಭೆ ಸೇರಿ ಮತದಾನ ಬಹಿಷ್ಕಾರಕ್ಕೂ ಮುಂದಾಗಿದ್ದರು. ಇದೀಗ ಗ್ರಾ.ಪಂ. ಚುನಾವಣೆ ಸಮೀಪಿಸುತ್ತಿದ್ದಂತೆ, ಮತ್ತೆ ಈ ವಿಷಯ ಮಹತ್ವ ಪಡೆದುಕೊಂಡಿದೆ. ಗ್ರಾಮದ ಪ್ರಮುಖರು ಮತ್ತೆ ಸಭೆ ಸೇರಿ ಬೇಡಿಕೆ ಮುಂದಿಟ್ಟಿದ್ದಾರೆ. ಈ ಬಾರಿ ಹೊಸ ನಿರ್ಣಯ ತೆಗೆದುಕೊಂಡಿದ್ದಾರೆ. ಯಾವುದೇ ಪಕ್ಷವನ್ನು ಬೆಂಬಲಿಸದೆ ಸ್ವತಂತ್ರ ಅಭ್ಯರ್ಥಿಯನ್ನು ಕಣಕ್ಕಿಸುವ ಮೂಲಕ ರಸ್ತೆ ಅಭಿವೃದ್ಧಿಗೆ ಹೋರಾಟ ನಡೆಸುವ ಬಗ್ಗೆ ತೀರ್ಮಾನಿಸಲಾಗಿದೆ.
Related Articles
ರಸ್ತೆ ದುರಸ್ತಿಗೊಂಡು ಸಂಚಾರಕ್ಕೆ ಯೋಗ್ಯ ವಾಗಿಸಲು ಪಣತೊಟ್ಟಿರುವ ಗ್ರಾಮಸ್ಥರು, ಬ್ಯಾನರ್‌ಗಳ ಮೂಲಕ ಅರಿವು ಮೂಡಿಸುತ್ತಿದ್ದಾರೆ.
Advertisement
“ಮತದಾನ ಚಲಾಯಿಸುವಾಗ ಪಕ್ಷಗಳ ಕಟ್ಟು ಪಾಡುಗಳಿಲ್ಲದೆ ಪಕ್ಷೇತರ ಅಭ್ಯರ್ಥಿಯನ್ನು ಗೆಲ್ಲಿಸೋಣ’ ಎಂಬ ಅರ್ಥದ ಬರಹದೊಂದಿಗೆ ಮುಳ್ಯ ಪರಿಸರದ ಹಲವು ಕಡೆಗಳಲ್ಲಿ ಚುನಾ ವಣೆ ಕುರಿತಾದ ಬ್ಯಾನರ್‌ಗಳನ್ನು ಅಳವಡಿಸಲಾಗಿದೆ. ಇನ್ನೊಂದೆಡೆ ಬಿಜೆಪಿ ವತಿಯಿಂದ ಮುಳ್ಯ ವಾರ್ಡ್‌ನಲ್ಲಿ ಕೈಗೊಳ್ಳಲಾದ ಅಭಿವೃದ್ಧಿ ಕಾಮಗಾರಿಗಳ ವಿವರವನ್ನು ನೀಡಲಾಗಿದೆ.
ಸರಕಾರಿ ಬಸ್ ಸಂಚಾರಕ್ಕೆ ಆಗ್ರಹಮುಳ್ಯದಿಂದ ಸುಳ್ಯಕ್ಕೆ ಸಂಚರಿಸಲು ಯಾವುದೇ ಬಸ್‌ಗಳಿಲ್ಲ. ಕೆಲವು ವರ್ಷಗಳ ಹಿಂದೆ ಸುಳ್ಯ-ಮುಳ್ಯ-ಅಟೂರು ಮಾರ್ಗವಾಗಿ ಖಾಸಗಿ ಬಸ್ಸೊಂದು ಓಡಾಡಲು ಪ್ರಾರಂಭಿಸಿದ್ದರೂ ಒಂದೇ ತಿಂಗಳಲ್ಲಿ ಸ್ಥಗಿತಗೊಂಡಿತ್ತು. ಹೀಗಾಗಿ ಜನರು ಅನಿವಾರ್ಯವಾಗಿ ಆಟೋ, ಜೀಪುಗಳನ್ನು ಅವಲಂಬಿಸಿದ್ದಾರೆ. ಪ್ರತಿನಿತ್ಯ ಪ್ರಯಾಣಿಸಲು ಇದು ಜೇಬಿಗೆ ಕತ್ತರಿಯೂ ಆಗುತ್ತಿದೆ. ಈ ಭಾಗದಲ್ಲಿ ಒಂದಾದರೂ ಸರಕಾರಿ ಬಸ್ ಸಂಚಾರಕ್ಕಾಗಿ ಜನರ ಆಗ್ರಹವಿದೆ. ತಕ್ಕ ಪಾಠ ಕಲಿಸಲಿದ್ದೇವೆ
ಹೊಂಡಗುಂಡಿಯಿಂದ ಕೂಡಿದ ನಮ್ಮ ಕಾಂತಮಂಗಲದ ಬಸವನಪಾದೆ- ಮುಳ್ಯ ರಸ್ತೆಯಲ್ಲಿ ದಿನ ನಿತ್ಯ ಓಡಾಡುವ ಜನರು ಪಡುವಂತಹ ಕಷ್ಟ ಜನಪ್ರತಿನಿಧಿಗಳಿಗೆ ಕಾಣುತ್ತಿಲ್ಲ. ಗ್ರಾ.ಪಂ. ಚುನಾವಣೆ ಮುನ್ನ ಈ ರಸ್ತೆಯನ್ನು ಅಭಿವೃದ್ಧಿ ಪಡಿಸಿ. ಇಲ್ಲವೆಂದರೆ ನಿಮ್ಮ ನಿರ್ಲಕ್ಷ್ಯಕ್ಕೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದೇವೆ.
-ಸತೀಶ್ ಬೂಡುಮಕ್ಕಿ ಅಧ್ಯಕ್ಷರು, ಅಂಬೇಡ್ಕರ್ ಸೇವಾ ಸಮಿತಿ ಸುಳ್ಯ ತಾಲೂಕು ಶಿವಪ್ರಸಾದ್ ಮಣಿಯೂರು