ಬೆಂಗಳೂರು : ಈ ಸರ್ಕಾರ ಕೆಡವಲು ನಾವು ಆಪರೇಷನ್ ಕಮಲ ನಡೆಸಬೇಕಿಲ್ಲ, ಅದೇ ನಾರ್ಮಲ್ ಡೆಲಿವರಿಯಾಗುತ್ತದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಡಿಸಿಎಂ ಡಿ.ಕೆ.ಶಿವಕುಮಾರ್‌ಗೆ ತಿರುಗೇಟು ನೀಡಿದ್ದಾರೆ.
ದೆಹಲಿಯಲ್ಲಿ ಡಿ.ಕೆ.ಶಿವಕುಮಾರ್ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯೆ ನೀಡಿ, ಅವರು ಬಹುಶಃ ಹಳೆ ಗುಂಗಿನಲ್ಲಿ ಇರಬೇಕು. ಮುಂಬಯಿ ಗುಂಗು ಅವರನ್ನು ಕಾಡುತ್ತಿರಬೇಕು. ಅವರ ಶಾಸಕರನ್ನು ಉಳಿಸಿಕೊಂಡರೆ ಸಾಕು ಎಂಬ ಪರಿಸ್ಥಿತಿ ಇದೆ. ಮೊದಲು ನಿಮ್ಮ ಪಕ್ಷದ ಶಾಸಕರನ್ನು ಗೌರವಯುತವಾಗಿ ನಡೆಸಿಕೊಳ್ಳಿ. ಸಚಿವರು ಕರೆ ಸ್ವೀಕರಿಸುವುದಿಲ್ಲ, ಉದ್ದಟತನದಿಂದ ಮಾತನಾಡುತ್ತಾರೆ ಎಂದು ಅವರ ಶಾಸಕರೇ ಆರೋಪಿಸುತ್ತಿದ್ದಾರೆ. ಹೀಗಾಗಿ ನಾವು ಆಪರೇಷನ್ ನಡೆಸಬೇಕಾದ ಅಗತ್ಯವಿಲ್ಲ. ಅದಾಗಿಯೇ ಬಿದ್ದು ಹೋಗುತ್ತದೆ ಎಂದು ಟೀಕಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ, ವಿಪಕ್ಷದ ನಾಯಕ ಸ್ಥಾನಕ್ಕೆ ಆಯ್ಕೆಗೆ ಕುಮಾರಸ್ವಾಮಿ ಸಲಹೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಅವರೀಗ ನಮ್ಮ ಮಿತ್ರ ಪಕ್ಷದವರು. ನಮಗೆ ಸಲಹೆ ನೀಡುವುದಕ್ಕೆ ಕುಮಾರಸ್ವಾಮಿಯವರಿಗೆ ಅಧಿಕಾರವಿದೆ. ನಾವು ಜೆಡಿಎಸ್‌ಗೆ ಸಲಹೆ ನೀಡಬಹುದು. ನಾವು ಹೊಂದಾಣಿಕೆಯಲ್ಲಿ ಇದ್ದೇವೆ. ಕುಮಾರಸ್ವಾಮಿಗೆ ಸಲಹೆ ಕೊಡುವ ಸ್ಥಿತಿ ಈಗ ಇಲ್ಲ. ಆ ಸಂದರ್ಭ ಬಂದಾಗ ಕೊಡುತ್ತೇನೆ. ಅವರು ಬಹಳ ಅನುಭವಿ, ಎರಡು ಬಾರಿ ಮುಖ್ಯಮಂತ್ರಿಯಾದವರು ಎಂದರು.
ರಾಜ್ಯಾಧ್ಯಕ್ಷ ಮತ್ತು ವಿಪಕ್ಷ ನಾಯಕರ ಆಯ್ಕೆ ವಿಳಂಬದ ಬಗ್ಗೆ ನಾನು ಮಾತನಾಡುವುದನ್ನೇ ಬಿಟ್ಟಿದ್ದೇನೆ. ಹೇಳಿ ಹೇಳಿ ಸಾಕಾಗಿದೆ. ಎಲ್ಲ ಸಮಸ್ಯೆ ಬಗೆಹರಿಸಿ ಅದಷ್ಟು ಬೇಗ ನೇಮಕ ಮಾಡುತ್ತಾರೆಂಬ ನಂಬಿಕೆ ಇದೆ ಎಂದರು.