ವಿಜಯಪುರ: ವಿಜಯಪುರ ಸೈನಿಕ ಶಾಲೆ ಹಳೆಯ ವಿದ್ಯಾರ್ಥಿ ವಿಜಯಮಹಾಂತೇಶ ದಾನಮ್ಮವರ ತಾವು ಶಿಕ್ಷಣ ಪಡೆದ ಜಿಲ್ಲೆಗೆ ಜಿಲ್ಲಾಧಿಕಾರಿಯಾಗಿ ವರ್ಗವಾಗಿದ್ದಾರೆ. ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಐಎಎಸ್ ಅಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಶುಕ್ರವಾರ ನಿರ್ಗಮಿತ ಜಿಲ್ಲಾಧಿಕಾರಿ ಸುನೀಲಕುಮಾರ ಅವರಿಂದ ಅಧಿಕಾರ ಸ್ವೀಕರಿಸಿದರು.
ನಿರ್ಗಮಿತ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ಹುಗೂತ್ಛ ನೀಡುವ ಮೂಲಕ ವಿಜಯಮಹಾಂತೇಶ ಅವರಿಗೆ ಅಧಿಕಾರ ಹಸ್ತಾಂತರಿಸಿ ಬರಮಾಡಿಕೊಂಡರು. ವಿಜಯಮಹಾಂತೇಶ ದಾನಮ್ಮನವರ ಅವರು ತಮ್ಮ ಪತ್ನಿ ಶ್ವೇತಾ ಮತ್ತು ಮಕ್ಕಳಾದ ತನ್ವಿ ಹಾಗೂ ವಿಹಾನ್ ಅವರೊಂದಿಗೆ ಬೆಳಗ್ಗೆ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿ ಅವರ ಸಮ್ಮುಖದಲ್ಲಿ ಅಧಿಕಾರ ಸ್ವೀಕರಿಸಿದ್ದು ವಿಶೇಷವಾಗಿತ್ತು.
ಇತ್ತೀಚಿಗಷ್ಟೇ ನಡೆದ ಕಾರು ಪಲ್ಟಿ ಅವಘಡದಿಂದ ಪಾರಾಗಿ ಬಂದ ವಿಜಯ ಮಹಾಂತೇಶ ಅವರು, ಚಿಕಿತ್ಸೆ ಪಡೆದುಕೊಂಡು, ವಿಜಯಪುರಕ್ಕೆ ಆಗಮಿಸಿ ಜಿಲ್ಲಾಧಿಕಾರಿಯವರ ಆಸನದಲ್ಲಿ ಕೂಡುತ್ತಿದ್ದಂತೆ ಅವರ ಪತ್ನಿ ಮತ್ತು ಮಕ್ಕಳು ಸಂಭ್ರಮ ಕ್ಷಣಗಳನ್ನು ಅನುಭವಿಸಿದರು.
ಸೈನಿಕ ಶಾಲೆ ವಿದ್ಯಾರ್ಥಿ: ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ದಾನಮ್ಮನವರ, 1989ರಲ್ಲಿ ವಿಜಯಪುರ ಸೈನಿಕ ಶಾಲೆಯಲ್ಲಿ ಶಿಕ್ಷಣ ಪಡೆದಿದ್ದಾರೆ. ಸೈನಿಕ ಶಾಲೆಯ ಶಿಕ್ಷಣ ಪಡೆದ ಹಳೆಯ ವಿದ್ಯಾರ್ಥಿಯೊಬ್ಬರು ಕಳೆದ ಒಂದು ದಶಕದಲ್ಲಿ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸುತ್ತಿರುವುದು ಇದು ಎರಡನೇ ಬಾರಿ. 10 ವರ್ಷಗಳ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಶಿವಯೋಗಿ ಕಳಸದ ಅವರು ಕೂಡ ಸೈನಿಕ ಶಾಲೆಯ ಹಳೆಯ ವಿದ್ಯಾರ್ಥಿಯಾಗಿದ್ದರು.
ಬೀದರ ಪಶು, ಪಶು ವೈದ್ಯಕೀಯ ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದಿಂದ ಪದವಿ ಪಡೆದ ಬಳಿಕ ಕೇಂದ್ರ ಸರ್ಕಾರದ ಮಾಹಿತಿ-ಪ್ರಸಾರ ಇಲಾಖೆಯಲ್ಲಿ 10 ತಿಂಗಳ ಸೇವೆ ಸಲ್ಲಿಸಿದ್ದರು. ಬಳಿಕ 2004ರಲ್ಲಿ ಕರ್ನಾಟಕ ಆಡಳಿತ ಸೇವೆಗೆ ಆಯ್ಕೆಯಾಗಿ, 2013ನೇ ಬ್ಯಾಚಿನ ಐಎಎಸ್ ಅಧಿಕಾರಿಯಾದವರು. ಬಿ. ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ವಿಶೇಷ ಕರ್ತವ್ಯಾಧಿಕಾರಿಯಾಗಿದ್ದ ವಿಜಯಮಹಾಂತೇಶ, ದಾವಣಗೆರೆ ಜಿಪಂ ಸಿಇಒ ಆಗಿಯೂ ಸೇವೆ ಸಲ್ಲಿಸಿದ್ದಾರೆ. ಇದಕ್ಕೂ ಮೊದಲು ಕಾರವಾರ, ಬಾಗಲಕೋಟೆ, ಬಳ್ಳಾರಿ ಜಿಲ್ಲೆಗಳಲ್ಲಿ ಅಪರ ಜಿಲ್ಲಾಧಿಕಾರಿಯಾಗಿ, ಬೆಳಗಾವಿ ಜಿಲ್ಲೆಯಲ್ಲಿ ಸಹಾಯಕ ಆಯುಕ್ತರಾಗಿ, ಹೆಸ್ಕಾಂ ಜನರಲ್ ಮ್ಯಾನೇಜರ್ ಆಗಿ, ರಾಜ್ಯ ಶಿಷ್ಟಾಚಾರ ಇಲಾಖೆ ಉಪ ಕಾರ್ಯದರ್ಶಿ ಸೇರಿದಂತೆ ಸರ್ಕಾರದ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ಉತ್ತಮ ಸೇವೆಗೆ ಯತ್ನ: ಅಧಿಕಾರ ಸ್ವೀಕಾರದ ಬಳಿಕ ತುರ್ತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನೂತನ ಜಿಲ್ಲಾಧಿಕಾರಿ ವಿಜಯಮಹಾಂತೇಶ, ನಾನು ಶಿಕ್ಷಣ ಪಡೆದ ಜಿಲ್ಲೆಗೆ ಜಿಲ್ಲಾಧಿಕಾರಿಯಾಗಿ ಬಂದಿದ್ದು ಸಂತಸವಾಗಿದೆ. ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಬೇಕೆಂಬ ನನ್ನ ಕನಸು ವಿಜಯಪುರ ಜಿಲ್ಲೆಯಿಂದಲೇ ಆರಂಭಗೊಂಡಿರುವುದು ಸಂತಸ ತಂದಿದೆ ಎಂದರು.
ಜಿಲ್ಲೆಯ ಶಿಕ್ಷಣ ಹಾಗೂ ಆರೋಗ್ಯ ಸೇವೆಗೆ ಆದ್ಯತೆ ನೀಡುತ್ತೇನೆ. ಸರ್ಕಾರದ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಸುನೀಲಕುಮಾರ ಸೇರಿದಂತೆ ಜಿಲ್ಲೆಯಲ್ಲಿ ಈ ಹಿಂದೆ ಅಧಿಕಾರ ನಡೆಸಿದ ಜಿಲ್ಲಾಧಿಕಾರಿಗಳು ಅತ್ಯುತ್ತಮ ಆಡಳಿತ ನೀಡಿದ್ದು, ನಾನು ಇತರೆ ಜಿಲ್ಲೆಗಳಲ್ಲಿ ಇದ್ದಾಗ ಈ ಜಿಲ್ಲೆಯ ಆಡಳಿತದ ಸಾಧನೆಗಳು ಅನುಕರಣೀಯವಾಗಿದ್ದವು. ಹಿಂದಿನ ಅಧಿಕಾರಿಗಳು ಜಿಲ್ಲೆಯಲ್ಲಿ ಮೂಡಿಸಿರುವ ಅಭಿವೃದ್ಧಿ ಪರ ಉತ್ತಮ ಕಾಯಕ್ರಮಗಳನ್ನು ನಾನು ಮುಂದುವರಿಸುವ ಜೊತೆಗೆ ಜನರ ಭಾವನೆಗಳಿಗೆ ಸ್ಪಂದಿಸುತ್ತೇನೆ ಎಂದರು.