Advertisement

ಹೊಸ ಮನೆಗಾಗಿ ಕನವರಿಸುತ್ತಿರುವ ವೃದ್ಧೆ

10:05 AM Sep 18, 2017 | Team Udayavani |

ಕಿನ್ನಿಗೋಳಿ: ಸುಮಾರು 40 ವರ್ಷಗಳಿಂದ ಕಿನ್ನಿಗೋಳಿ ಮುಖ್ಯ ರಸ್ತೆಯ ರಾಜಾಂಗಣ ಮುಂಭಾಗದಲ್ಲಿ (ಅಂದಿನ ಅಶೋಕ ಚಿತ್ರಮಂದಿರ) ಪ್ಲಾಸ್ಟಿಕ್‌ ಛಾವಣಿಯಿರುವ ಸುಬ್ಬಮ್ಮನ ಚಿಕ್ಕ ಗುಡಿಸಲು ಕುಸಿದು ಬೀಳುವ ಸ್ಥಿತಿಯಲ್ಲಿದೆ.

Advertisement

ಮತದಾರರ ಗುರುತು ಚೀಟಿ ಇದೆ, ಆಧಾರ್‌ ಕಾರ್ಡ್‌ ಕೂಡ ಮಾಡಿಸಿದ್ದಾರೆ. ಈ “ಮನೆ’ಗೆ ಸಂಖ್ಯೆಯೂ ಇದೆ, ಪಡಿತರ ಚೀಟಿ ಇದೆ, ವೃದ್ಧಾಪ್ಯ ವೇತನವೂ ಬರುತ್ತದೆ. ಆದರೆ, ಪುಟ್ಟದೊಂದು ಹೊಸ ಮನೆ ಕಟ್ಟಿಕೊಳ್ಳುವ ಅವರ ಕನಸು ನನಸಾಗಲೇ ಇಲ್ಲ. ಸುಮಾರು 45 ವರ್ಷಗಳ ಹಿಂದೆ ದೂರದ ತಮಿಳುನಾಡಿನಿಂದ ಕೆಲಸ ಅರಸಿ ಮಂಗಳೂರಿಗೆ ಬಂದಿದ್ದ ಸುಬ್ಬಮ್ಮ ಹಾಗೂ ಪೊನ್ನಯ್ಯ ದಂಪತಿ, ಬಂಗಾರದ ಅಂಗಡಿಯವರ ಅಂಗಳದ ಕಸದಿಂದ ಬಂಗಾರ ಆರಿಸುವ ಕುಲ ಕಸುಬು ಮಾಡುತ್ತಿದ್ದರು. ಕಿನ್ನಿಗೋಳಿ ರಾಜಾಂಗಣದ ಮುಂಭಾಗದಲ್ಲಿ ಡೇರೆ ಹಾಕಿ ಠಿಕಾಣಿ ಹೂಡಿದ್ದರು. ಸಂಸಾರ ಶುರುವಾಯಿತು. ಸುಮಾರು 15 ವರ್ಷಗಳ ಹಿಂದೆ ಗಂಡನನ್ನು ಕಳೆದುಕೊಂಡ ಸುಬ್ಬಮ್ಮನಿಂದ ಮಕ್ಕಳೂ ದೂರವಾದರು. ಈಗ ಆಕೆಗೆ ಈ ಡೇರೆಯೇ ಸರ್ವಸ್ವ.

ಮನವಿ ಮಾಡಿದರೂ ಪ್ರಯೋಜನ ಇಲ್ಲ
ಇಂದಿರಾ ಗಾಂಧಿ, ರಾಮಕೃಷ್ಣ ಹೆಗಡೆ ಕಾಲದಿಂದ ಚುನಾವಣೆಯಲ್ಲಿ ಮತ ಕೇಳಲು ಬರುವವರೆಲ್ಲ ಮನೆ ಕಟ್ಟಿಕೊಡುವುದಾಗಿ ಹೇಳುತ್ತಿದ್ದರೂ ಈವರೆಗೂ ಈ ವೃದ್ಧೆಯ ನೋವಿಗೆ ಸ್ಪಂದಿಸಿದವರಿಲ್ಲ.  ಮನೆಯ ಬಗ್ಗೆ ಮಂಡಲ   ಪಂಚಾ ಯತ್‌ ಇದ್ದ ಸಂದರ್ಭದಿಂದಲೂ ಮನವಿ ಮಾಡಲಾಗಿದೆ. ಪಕ್ಕದವರು ಜಾಗದ ವಿಷಯದಲ್ಲಿ ತಕರಾರು ತೆಗೆದಿದ್ದರಿಂದ ನ್ಯಾಯಾಲಯಕ್ಕೆ ಅಲೆದಾಡಿ ಅವರ ಮುಪ್ಪು ಇನ್ನಷ್ಟು ಹೆಚ್ಚಿದೆ. ಈಗ ಗುಡಿಸಲಿಗೆ ಹೊದಿಸಿರುವ ಪ್ಲಾಸ್ಟಿಕ್‌ ಹಾಳೆ ಹರಿದಿದೆ. ಹೊಸ ಹಾಳೆ ಹಾಕಿಸುವಂತೆ ಹೇಳಿ ಪಂಚಾಯತ್‌ನಿಂದ ಹಣ ಕೊಟ್ಟು ಒಂದು ತಿಂಗಳು ಕಳೆಯಿತು. 
ಪ್ಲಾಸ್ಟಿಕ್‌ ಹೊದಿಸಲು ಜನ ಸಿಗದ ಕಾರಣ ಮಳೆ ನೀರೆಲ್ಲ ಗುಡಿಸಲಿನೊಳಗೆ ಸೋರುತ್ತಿದೆ. ಇರುವ ಈ ಮುರುಕಲು ಆಸರೆಯೂ ಯಾವಾಗ ಕುಸಿದು ಬೀಳುವುದೋ ಎಂಬ ಆತಂಕದಲ್ಲಿದ್ದಾರೆ ಸುಬ್ಬಮ್ಮ.

ಮನೆ ಕೊಡಲು ವ್ಯವಸ್ಥೆ
ಪ್ರಸ್ತುತ ಸುಬ್ಬಮ್ಮ ವಾಸ ಮಾಡುತ್ತಿರುವ ಸ್ಥಳ ರಾಜ್ಯ ಹೆದ್ದಾರಿ ವ್ಯಾಪ್ತಿಗೆ ಬರುತ್ತಿದ್ದು, ಅಲ್ಲಿ ಮನೆ ಕಟ್ಟಲು ಅವಕಾಶ ನೀಡುವಂತಿಲ್ಲ. ಅದಕ್ಕಾಗಿ ಗ್ರಾ.ಪಂ. ವ್ಯಾಪ್ತಿಯ ಕೆಮ್ಮಡೆಯಲ್ಲಿ ಸರಕಾರಿ ಜಾಗವಿದ್ದು, ಅದನ್ನು ನಿವೇಶನ ರಹಿತರಿಗೆ ಕಾದಿರಿಸಲಾಗಿದೆ. ಅದರಲ್ಲಿ ಆದ್ಯತೆಯ ಮೇರೆಗೆ ಮನೆ ಕೊಡಲು ವ್ಯವಸ್ಥೆ ಮಾಡಲಾಗುವುದು.
ರಮ್ಯಾ,  ಪಿಡಿಒ, ಮೆನ್ನಬೆಟ್ಟು ಗ್ರಾ.ಪಂ.

ರಘುನಾಥ ಕಾಮತ್‌ ಕೆಂಚನಕೆರೆ

Advertisement
Advertisement

Udayavani is now on Telegram. Click here to join our channel and stay updated with the latest news.

Next