Advertisement
ದೊಡ್ಡಕೆರೆ ಅಂಗಳದಲ್ಲಿ ಹೊಸ ಬಸ್ ನಿಲ್ದಾಣ ಸ್ಥಾಪನೆಯಾದ ನಂತರ ದಶಕಗಳಿಂದಲೂ ಹಳೇ ಬಸ್ ನಿಲ್ದಾಣ ಜಾಗ ಸಂಪೂರ್ಣ ರೋಗಗ್ರಸ್ಥವಾಗಿ ಕಸದ ಗೂಡಾಗಿದೆ. ನಿರ್ಗತಿಕರು, ನಿರಾಶ್ರಿತರು, ವಯಸ್ಸಾದ ಅಲೆಮಾರಿಗಳು ಕಸದ ರಾಶಿ ದುರ್ವಾಸನೆ ನಡುವೆಯೇ ನೆಲೆಸಿದ್ದು, ಅಲ್ಲಿಯೇ ಅಡುಗೆ ಮಾಡಿ ಊಟ ಮಾಡಿ ಮಲಗುತ್ತಿದ್ದಾರೆ.
Related Articles
Advertisement
ಹಳೇ ಬಸ್ ನಿಲ್ದಾಣ ಪ್ರದೇಶದ ಅವ್ಯವಸ್ಥೆ ಸ್ಥಳೀಯ ಪಟ್ಟಣ ಪಂಚಾಯಿತಿಗೂ ತಲೆನೋವಾಗಿದೆ. ನಿಲ್ದಾಣ ಜಾಗವನ್ನು ಪಟ್ಟಣ ಪಂಚಾಯಿತಿ ವಶಕ್ಕೆ ತೆಗೆದುಕೊಳ್ಳಲು ಈ ಹಿಂದೆ ಅಧಿಕಾರಿಗಳು ನಡೆಸಿದ ಪ್ರಯತ್ನ ಕೂಡ ವಿಫಲವಾಗಿ ಕೈಚೆಲ್ಲಿದ್ದಾರೆ. ಕೆಎಸ್‌ಆರ್‌ಟಿಸಿ ನಿಗಮಕ್ಕೆ ಸೇರಿರುವ ಜಾಗವನ್ನು ಪಪಂಗೆ ಬಿಟ್ಟುಕೊಡಲು ಸಾಧ್ಯವಾಗದ ಕಾರಣ ಸ್ವತ್ಛತೆ ನಿರ್ವಹಣೆ ಸಹ ಸರಿಯಾಗಿ ನಡೆಯುತ್ತಿಲ್ಲ. ಹೀಗಾಗಿ ದಿನೇ ದಿನೆ ತ್ಯಾಜ್ಯದ ರಾಶಿ ಹರಡಿ ಅನೈರ್ಮಲ್ಯತೆ ತಾಂಡವಾಡುತ್ತಿದೆ.
ಮಲಮೂತ್ರ ವಿಸರ್ಜನೆ ಸ್ಥಳ: ಪ್ರತಿನಿತ್ಯ ದಿನವಹಿ ಮಾರುಕಟ್ಟೆಗೆ ವ್ಯಾಪಾರಕ್ಕಾಗಿ ಹಾಗೂ ಪಟ್ಟಣಕ್ಕೆ ವ್ಯವಹಾರಗಳಿಗಾಗಿ ಬರುವ ಜನರು ತಮ್ಮ ವಾಹನಗಳ ನಿಲುಗಡೆ ಮಾಡುತ್ತಾರೆ. ಮಲ ಮೂತ್ರ ವಿಸರ್ಜನೆಯಿಂದಾಗಿ ನಿಲ್ದಾಣ ತಾಣದ ಆವರಣದ ಪಕ್ಕದಲ್ಲಿರುವ ಅಂಗಡಿಗಳ ವ್ಯಾಪಾರಕ್ಕೆ ಬರುವ ಜನರು ಮುಜುಗರಪಡುವಂತಾಗಿದೆ. ನಿಲ್ದಾಣ ಆವರಣದಲ್ಲಿರುವ ಶೌಚಾಗೃಹ ಕೂಡ ನಿರ್ವಹಣೆ ಇಲ್ಲದೆ ಸಾರ್ವಜನಿಕರ ಬಯಲು ಮೂತ್ರಾಲಯವಾಗಿ ಪರಿರ್ವತೆನೆಯಾಗಿದೆ.
ಅಲ್ಲಲ್ಲಿ ಮುಚ್ಚಿರುವ ರಾಜಕಾಲುವೆ: ಹಳೇ ಬಸ್ ನಿಲ್ದಾಣ ಪಕ್ಕದಲ್ಲಿ ರಾಜಕಾಲುವೆ ಕೂಡ ಹಾದು ಹೋಗಿದೆ. ದುಸ್ಥಿತಿಯಿಂದ ಕೂಡಿರುವ ರಾಜಕಾಲುವೆ ಅಲ್ಲಲ್ಲಿ ಮುಚ್ಚಿ ಹೋಗಿದೆ. ಮಳೆಗಾಲದಲ್ಲಿ ಹಳೆ ಬಸ್ ನಿಲ್ದಾಣ ತ್ಯಾಜ್ಯದ ಕೊಳಕು ನೀರು ರಾಜಕಾಲುವೆಗೆ ಕಟ್ಟಿಕೊಂಡು ಹರಿಯುತ್ತದೆ. ಇದು ಕೆಳಭಾಗದ ಬೈಪಾಸ್ ರಸ್ತೆವರೆಗೂ ಹರಿದು ಅಲ್ಲಿ ತಲೆಎತ್ತಿರುವ ವಾಸದ ಮನೆಗಳು, ವಾಣಿಜ್ಯ ಕಟ್ಟಡಗಳತ್ತ ಕೊಳಚೆ ನೀರು ನುಗ್ಗಿ ಮಲೀನಗೊಳ್ಳುತ್ತಿದೆ. ಮಳೆಗಾಲದಲ್ಲಿ ಅಲ್ಲಿನ ನಿವಾಸಿಗಳ ಫಜೀತಿ ಹೇಳತೀರದಾಗಿದೆ.
ರಾಜಕೀಯ ಇಚ್ಚಾಶಕ್ತಿ ಕೊರತೆ: ಹಳೇ ಬಸ್ ನಿಲ್ದಾಣ ಜಾಗ ಅಭಿವೃದ್ಧಿಪಡಿಸಿ ದೊಡ್ಡ ದೊಡ್ಡ ಕಾಂಪ್ಲೆಕ್ಸ್, ಮಳಿಗೆಗಳನ್ನು ನಿರ್ಮಿಸಿ ಬಾಡಿಗೆ ನೀಡಿದರೆ ಲಕ್ಷಾಂತರ ರೂ. ಆದಾಯ ಬರುತ್ತಿತ್ತು. ಕಳೆದ ಹತ್ತು ವರ್ಷಗಳಿಂದ ಕೋಟಿಗಟ್ಟಲೆ ಆದಾಯ ಸಿಗುತ್ತಿತ್ತು. ಬಸ್‌ಗಳ ಓಡಾಟವಿಲ್ಲದೆ ಕೆ.ಎಸ್. ಆರ್.ಟಿ.ಸಿ.ಗೆ ಉಂಟಾಗುವ ನಷ್ಟ ಭರಿಸಲು ಅನುಕೂಲ ಸಾಧ್ಯವಾಗುತ್ತಿತ್ತು. ಅನೈರ್ಮಲ್ಯತೆ ಹೋಗಲಾಡಿಸುವ ದೃಷ್ಟಿಯಿಂದ ಕೆಎಸ್‌ಆರ್‌ಟಿಸಿ ನಿಗಮದ ವಿರುದ್ಧ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಬಿಗಿ ಕ್ರಮ ಕೈಗೊಳ್ಳಲು ಮುಂದಾಗಿಲ್ಲ. ಸಂಬಂಧಪಟ್ಟ ಕ್ಷೇತ್ರದ ಜನಪ್ರತಿನಿಧಿ ಹಾಗೂ ಅಧಿಕಾರಿಗಳ ಇಚ್ಚಾಶಕ್ತಿ ಕೊರತೆಯಿಂದಾಗಿ ಹಲವಾರು ವರ್ಷಗಳಿಂದ ಲಾಭ ಕಾಣಬೇಕಿದ್ದ ಜಾಗ ಪಾಳುಬಿದ್ದಿರುವುದು ದುರಂತವೇ ಸರಿ.
ಈ ಹಿಂದೆ ಪಟ್ಟಣದ ಬಸ್ ನಿಲ್ದಾಣದ ಜಾಗ ಚಿಕ್ಕದಾಗಿದ್ದ ಪರಿಣಾಮ ನಮ್ಮ ಕುಟುಂಬದ ಆಸ್ತಿಯನ್ನು ನೀಡಲಾಗಿತ್ತು. ಕೆಎಸ್‌ಆರ್‌ಟಿಸಿಯವರು ಹಳೆ ಬಸ್ ನಿಲ್ದಾಣ ಜಾಗವನ್ನು ಅಭಿವೃದ್ಧಿಪಡಿಸಿ ಸಾರ್ವಜನಿಕ ಬಳಕೆಗೆ ಮುಂದಾಗಿಲ್ಲ. ಮುಂಭಾಗದ ಜಾಗವನ್ನು ಅವೈಜ್ಞಾನಿಕವಾಗಿ ಖಾಸಗಿ ವ್ಯಕ್ತಿಗಳಿಗೆ ಲೀಸ್ ನೀಡಿರುವುದು ಹಿಂಬದಿಯ ಜಾಗದಲ್ಲಿ ತ್ಯಾಜ್ಯ ಹರಡಲು ಕಾರಣವಾಗಿದೆ. ಕೂಡಲೇ ಹಳೆ ಬಸ್ ನಿಲ್ದಾಣ ಜಾಗ ಬಳಕೆ ಕುರಿತು ಕ್ರಮ ಕೈಗೊಳ್ಳಲಾಗುವುದು.– ಎ.ಮಂಜು, ಶಾಸಕರು
ಹಳೇ ಬಸ್ ನಿಲ್ದಾಣ ಜಾಗ ಅಭಿವೃದ್ಧಿಪಡಿಸಿ ವ್ಯಾಪಾರಿ ಮಳಿಗೆ ಸ್ಥಾಪಿಸಲು ಉದ್ದೇಶಿಸಲಾಗಿದೆ. ಈಗಾಗಲೇ ಹಳೆ ಬಸ್ ನಿಲ್ದಾಣ ಮುಂಭಾಗದ ಜಾಗ ಖಾಸಗಿ ವ್ಯಕ್ತಿಗಳಿಗೆ ಲೀಸ್ ನೀಡಲಾಗಿದೆ. ಇಲ್ಲಿನ ವಾಣಿಜ್ಯ ಮಳಿಗೆಗಳಿಂದಲೂ ಅನಗತ್ಯ ತ್ಯಾಜ್ಯ ಖಾಲಿ ಜಾಗದಲ್ಲಿ ಹಾಕುತ್ತಿರುವುದು ತ್ಯಾಜ್ಯ ಹರಡಲು ಕಾರಣವಾಗಿದೆ. ನೋಟಿಸ್ ನೀಡಿ ಸ್ವತ್ಛತೆಗೆ ಕೈಗೊಳ್ಳಲಾಗುವುದು.– ಹನುಮಂತಪ್ಪ, ಕೆಎಸ್‌ಆರ್‌ಟಿಸಿ ಡಿಪೋ ವ್ಯವಸ್ಥಾಪಕ,ಅರಕಲಗೂಡು
– ವಿಜಯ್‌ಕುಮಾರ್