Advertisement

ಮೈಸೂರು ದಸರಾಗೆ ಸಿಎಂಗೆ ಆಹ್ವಾನ

11:39 PM Sep 14, 2019 | Lakshmi GovindaRaju |

ಬೆಂಗಳೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಶನಿವಾರ ಆಹ್ವಾನ ನೀಡಲಾಯಿತು. ಉಸ್ತುವಾರಿ ಸಚಿವ ವಿ.ಸೋಮಣ್ಣ, ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್‌ ಶಾಸಕ ಜಿ.ಟಿ.ದೇವೇಗೌಡ, ನರಸಿಂಹರಾಜ ಕ್ಷೇತ್ರದ ಕಾಂಗ್ರೆಸ್‌ ಶಾಸಕ ತನ್ವೀರ್‌ ಸೇಠ್ ನೇತೃತ್ವದ ದಸರಾ ಸಮಿತಿ, ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಅವರಿಗೆ ಆಹ್ವಾನ ನೀಡಿತು.

Advertisement

ರಾಮದಾಸ್‌ ಗೈರು: ಸಾಂಪ್ರದಾಯಿಕ ಮೈಸೂರು ಪೇಟ ತೊಡಿಸಿ ದಸರಾಗೆ ಆಹ್ವಾನ ನೀಡಿದ ನಿಯೋಗ, ಮೈಸೂರು ದಸರಾ ಹಿನ್ನೆಲೆಯಲ್ಲಿ ಕೈಗೊಂಡಿರುವ ಸಿದ್ಧತೆಗಳ ಬಗ್ಗೆಯೂ ಸಿಎಂಗೆ ಮಾಹಿತಿ ನೀಡಿತು. ನಿಯೋಗದಲ್ಲಿ ಸಚಿವ ಸ್ಥಾನ ವಂಚಿತ ರಾಮದಾಸ್‌ ಗೈರಾಗಿದ್ದರು.

ಜಿಟಿಡಿ ಹಾಜರು: ಇದಕ್ಕೂ ಮುನ್ನ ಜಿ.ಟಿ.ದೇವೇಗೌಡರು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜತೆ ಒಂದೇ ಕಾರಿನಲ್ಲಿ ಡಾಲರ್ಸ್‌ ಕಾಲೋನಿ ನಿವಾಸದಿಂದ ಗೃಹ ಕಚೇರಿ ಕೃಷ್ಣಾಗೆ ಆಗಮಿಸಿದ್ದು ವಿಶೇಷವಾಗಿತ್ತು.

ನಮ್ಮ ಜತೆಯಲ್ಲೇ ಇದ್ದಾರೆ: ರಾಮದಾಸ್‌ ನಮ್ಮ ಜತೆಯಲ್ಲೇ ಇದ್ದಾರೆ. ದಸರಾ ಉಪ ಸಮಿತಿಗಳಲ್ಲಿ ಅವರಿಗೆ ಜವಾಬ್ದಾರಿಯಿದ್ದು ಅದನ್ನು ಮೈಸೂರಿನಲ್ಲಿ ನಿಭಾಯಿಸುತ್ತಿದ್ದಾರೆ. ಜಿ.ಟಿ.ದೇವೇಗೌಡರು ಹಿರಿಯರು. ಅವರಿಗೆ ಮೈಸೂರು ದಸರಾ ಬಗ್ಗೆ ಅನುಭವವಿದೆ. ಹೀಗಾಗಿ ನಮಗೆ ಮಾರ್ಗದರ್ಶನ ನೀಡುತ್ತಿದ್ದಾರೆಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ತಿಳಿಸಿದರು.

29ರಂದು ಚಾಮುಂಡೇಶ್ವರಿಗೆ ಪೂಜೆ: ನಂತರ ಸುದ್ದಿಗಾರರ ಜತೆ ಮಾತನಾಡಿದ ವಿ.ಸೋಮಣ್ಣ, ಸೆ.29 ರಂದು ದಸರಾ ಮಹೋತ್ಸವ ಪ್ರಾರಂಭವಾಗಲಿದೆ. ಅಂದು ಬೆಳಗ್ಗೆ 9ಕ್ಕೆ ಚಾಮುಂಡಿ ದೇವಿಗೆ ಪೂಜೆ ಸಲ್ಲಿಸಿ ಚಾಲನೆ ನೀಡಲಾಗುವುದು. ಅ.8 ರವರೆಗೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ ಎಂದು ಹೇಳಿದರು.

Advertisement

ಮಾವುತರ ಮಕ್ಕಳಿಗೆ ಟೆಂಟ್‌ ಶಾಲೆ ಆರಂಭ
ಮೈಸೂರು: ಜಂಬೂಸವಾರಿ ಮೆರವಣಿಗೆಗಾಗಿ ಕರೆ ತರಲಾಗಿರುವ ಅಂಬಾರಿ ಆನೆ ಅರ್ಜುನ ನೇತೃತ್ವದ ಗಜಪಡೆಯ ಜತೆ ಆಗಮಿಸಿ ಅರಮನೆ ಆವರಣದಲ್ಲಿ ವಾಸ್ತವ್ಯ ಹೂಡಿರುವ ಮಾವುತರು ಹಾಗೂ ಕಾವಾಡಿಗಳ ಮಕ್ಕಳಿಗಾಗಿ ಅರಮನೆ ಆವರಣದಲ್ಲಿ ಟೆಂಟ್‌ ಶಾಲೆ ಆರಂಭಿಸಲಾಗಿದ್ದು, ಶಾಸಕ ಎಸ್‌.ಎ.ರಾಮದಾಸ್‌ ಉದ್ಘಾಟಿಸಿದರು.

ಮಾವುತರು, ಕಾವಾಡಿಗಳ 40 ಕುಟುಂಬಗಳು ಮೈಸೂರಿಗೆ ಬಂದಿದ್ದು, ದಸರೆಗೆ ತೆರೆ ಬೀಳುವವರೆಗೂ ಮೈಸೂರಿನಲ್ಲೇ ವಾಸ್ತವ್ಯ ಹೂಡುತ್ತಾರೆ. ಇವರ ಮಕ್ಕಳು ಕಲಿಕೆಯಿಂದ ವಂಚಿತರಾಗಬಾರದೆಂಬ ಕಾರಣಕ್ಕೆ ಟೆಂಟ್‌ ಶಾಲೆ ತೆರೆದು ಶಿಕ್ಷಣ ನೀಡಲಾಗುತ್ತಿದೆ. 1 ರಿಂದ 8ನೇ ತರಗತಿವರೆಗೆ ಇಲ್ಲಿ ಕಲಿಯಲು ಅವಕಾಶ ಕಲ್ಪಿಸಲಾಗಿದ್ದು, ನಾಲ್ವರು ಶಿಕ್ಷಕರನ್ನು ನಿಯೋಜಿಸಲಾಗಿದೆ. ಮಧ್ಯಾಹ್ನದ ಬಿಸಿಯೂಟದ ವ್ಯವಸ್ಥೆಯನ್ನು ಒದಗಿಸಲಾಗಿದೆ. ಗಿರಿಜನರ 18 ಮಕ್ಕಳು ಈ ಟೆಂಟ್‌ ಶಾಲೆಯ ಪ್ರಯೋಜನ ಪಡೆಯಲಿದ್ದಾರೆ.

ಲೋಗೊಗೆ ಆಹ್ವಾನ: ಈ ಮಧ್ಯೆ, ದಸರಾ ಕ್ರೀಡೆಗೆ ಮಾನ್ಯತೆ ನೀಡಲು ದಸರಾ ಕ್ರೀಡಾಕೂಟ ಮುಖ್ಯಮಂತ್ರಿ ಕಪ್‌ ಎಂಬ ನಾಮಶೀರ್ಷಿಕೆಯಲ್ಲಿ ನಾಡಿನ ಕಲೆ, ಕ್ರೀಡೆ ಮತ್ತು ಸಂಸ್ಕೃತಿಯನ್ನು ಒಳಗೊಂಡ ಪ್ರತ್ಯೇಕ ಲೋಗೋವನ್ನು ಸಿದ್ಧಪಡಿಸಲು ತೀರ್ಮಾನಿಸಲಾಗಿದೆ.

ಜಿಲ್ಲೆ ಮತ್ತು ರಾಜ್ಯದ ಪ್ರಗತಿಪರ ಚಿಂತಕರು, ಸಂಘ ಸಂಸ್ಥೆಗಳು, ಶಾಲಾ-ಕಾಲೇಜಿನ ವಿದ್ಯಾರ್ಥಿಗಳು, ವೃತ್ತಿಪರರು ಲೋಗೋ ತಯಾರಿಸಿ ಸೆ.17ರೊಳಗೆ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಚಾಮುಂಡಿ ವಿಹಾರ ಕ್ರೀಡಾಂಗಣ, ನಜರ್‌ಬಾದ್‌, ಮೈಸೂರು ಇಲ್ಲಿಗೆ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ದೂ.0821-2564179 ಸಂಪರ್ಕಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next