ವರ್ಷಪೂರ್ತಿ ನಾಲ್ಕು ಗೋಡೆಗಳ ಮಧ್ಯೆ ಕೂತು ಕೇಳುವ ಪಾಠಗಳನ್ನು ಎಷ್ಟರಮಟ್ಟಿಗೆ ಅರ್ಥಮಾಡಿಕೊಳ್ಳುತ್ತೇವೆ ಎಂಬುದು ವಿದ್ಯಾರ್ಥಿಗಳಾದ ನಮಗೇ ಗೊತ್ತೇ ಇದೆ. ಕಾಲೇಜಿಗೆ ರಜೆ ಸಿಕ್ಕಿ ಒಂದು ವಾರವಾಗುವಾಗ “ಅಯ್ಯೋ, ಕಾಲೇಜು ಬೇಗ ಶುರುವಾಗಬಾರದೇ’ ಅನ್ನಿಸಿಬಿಡುತ್ತದೆ. ಆದರೆ, ಈ ಬಾರಿಯ ರಜೆಯಲ್ಲಿ ನನಗೆ ಹಾಗೇ ಅನ್ನಿಸಲೇ ಇಲ್ಲ. ಯಾಕೆಂದರೆ, ಒಂದು ತಿಂಗಳ ರಜೆ ಪ್ರಯೋಜನ ಆಗಬೇಕೆಂದು ಮೊದಲೇ ನಿರ್ಧಾರ ಮಾಡಿಕೊಂಡಿದ್ದೆ. ತೆಪ್ಪಗೆ ಮನೆಯಲ್ಲೇ ಕೂತು ಅಡ್ಡಾಡುವ ಬದಲು ಏನಾದರೂ ಮಾಡಬೇಕು ಅನ್ನಿಸಿದಾಗ, ನೆನಪಾಗಿದ್ದು ಇಂಟರ್ನ್ ಶಿಪ್. ಹೌದು, ಇದೊಂದು ವಿದ್ಯಾರ್ಥಿಗಳಿಗೆ ಅತ್ಯುತ್ತಮ ಅವಕಾಶ. ನಾವು ಕ್ಲಾಸ್‌ನಲ್ಲಿ ಕುಳಿತು ಕೇಳುವುದನ್ನು ಪ್ರಾಯೋಗಿಕವಾಗಿ ಮಾಡಿದಾಗ ಅದರಿಂದ ನಮ್ಮ ಗುರಿ ತಲುಪಲು ಇನ್ನೂ ಸುಲಭವಾಗುತ್ತದೆ.
ಅಂತೆಯೇ ಒಂದು ತಿಂಗಳುಗಳ ಕಾಲ ಇಂಟರ್ನ್ಶಿಪ್ ಮಾಡಲು ದೂರದ ಬೆಂಗಳೂರಿಗೆ ನನ್ನ ಪ್ರಯಾಣ ಸಾಗಿತು. ಗೊತ್ತಿಲ್ಲದ ಊರಲ್ಲಿ ಒಂದು ತಿಂಗಳು ಕಾಲ ಕಳೆಯುವುದೆಂದರೆ ಸುಲಭದ ವಿಷಯವೇನಲ್ಲ. ಬೆಂಗಳೂರು ನೋಡಿ, ಸುತ್ತಿದ್ದೇವೆಯಾದರೂ ತಿಂಗಳುಗಟ್ಟಲೆ ನಿಂತ ಇತಿಹಾಸ ಇಲ್ಲ.
ಪತ್ರಿಕೋದ್ಯಮದಲ್ಲಿ ಪಳಗಬೇಕೆಂದು ತರಬೇತಿಗಾಗಿ ನಾನು ಆಯ್ದುಕೊಂಡಿದ್ದು ರಾಜ್ಯದ ನ್ಯೂಸ್ ಚಾನಲ್‌ಗಳಲ್ಲಿ ಒಂದಾದ ಸುದ್ದಿ ಟಿವಿಯನ್ನು. ಕಾಲೇಜುಗಳಲ್ಲಿ ಕಲಿತುಕೊಂಡ ವಿಷಯಗಳು ಗೊತ್ತಿದೆಯಾದರೂ, ವೃತ್ತಿಯಲ್ಲಿ ಅಳವಡಿಸಿಕೊಂಡು ನಿರ್ವಹಿಸುವುದರಲ್ಲಿ ವ್ಯತ್ಯಾಸವಿರುತ್ತದೆ. ನಮ್ಮ ಇಂಟರ್ನ್ಶಿಪ್ ಶುರುವಾದಾಗ ನಾವು ಕೂಡಾ ವೃತ್ತಿಪರರಾದೆವು ಅನ್ನಿಸುತ್ತಿತ್ತು. ಅಲ್ಲದೆ, ಅಲ್ಲಿರುವ ಸಿಬ್ಬಂದಿಗಳಲ್ಲಿ ನಾವೂ ಒಬ್ಬರು ಅಂತನ್ನಿಸಲು ಶುರುವಾಯಿತು.
ಮೊದಮೊದಲು ಬೆಂಗಳೂರು ಕಷ್ಟವೆನಿಸಿದರೂ ಒಂದು ವಾರ ಕಳೆಯುಷ್ಟರಲ್ಲಿ ಮಾಮೂಲಿ ಅನ್ನಿಸಿಬಿಟ್ಟಿತು. ಪ್ರತಿದಿನ 9 ಗಂಟೆಯಿಂದ ಸಂಜೆ 5-6 ಗಂಟೆಯವರೆಗೂ ಆಫೀಸ್‌ಗೆ, ತರಬೇತಿ ಕೆಲಸಕ್ಕಾಗಿ ಹಾಜರಾಗುತ್ತ ಇದ್ದೆವು. ಟ್ರಾಫಿಕ್‌ನ ಜಂಗುಳಿಯಲ್ಲಿ ಸಿಲುಕಿಕೊಂಡು ಗಂಟೆಗಟ್ಟಲೆ ಬಿಟಿಎಂಸಿ ಬಸ್ಸಿನಲ್ಲಿ ಕುಳಿತುಕೊಳ್ಳುವ ಹೊಸ ಅನುಭವವೂ ಸಿಗುತ್ತಿತ್ತು.
ಆಫೀಸ್‌ಗೆ ಹೋದ ತಕ್ಷಣ ಮೊದಲು ಪತ್ರಿಕೆಗಳನ್ನು ಓದಿ ನಂತರ ಸಂಬಂಧಿಸಿದ ಕೆಲಸಗಳನ್ನು ಅಸೈನ್ ಮಾಡ್ತಾ ಇದ್ರು. ಒಂದು ನ್ಯೂಸ್ ಚಾನಲ್ ನಡೆಯಬೇಕಿದ್ರೆ, ಅಲ್ಲಿನ ಪ್ರತಿದಿನದ ಕೆಲಸಗಳು ಹೇಗೆ ನಡೆಯುತ್ತದೆ, ಅಲ್ಲಿನ ಸಿಬ್ಬಂದಿಗಳು ಎಷ್ಟು ಸವಾಲುಗಳನ್ನು ಎದುರಿಸಬೇಕಾಗುತ್ತದೆ, ಪ್ರತಿ ಕೆಲಸದ ಹಿಂದೆ ಸಿಬ್ಬಂದಿಗಳ ಪರಿಶ್ರಮ ಎಷ್ಟು ಮುಖ್ಯವಾಗುತ್ತೆ ಎನ್ನುವುದು ತಿಳಿಯುತ್ತದೆ. ಆದರೆ, ಬರೀ ಕ್ಲಾಸಲ್ಲಿ ಕೂತು ನೋಡಿದ್ರೆ ಇದೆಲ್ಲ ಗೊತ್ತಾಗಲ್ಲ.
ಸಮೂಹ ಸಂವಹನ ಎಂದ ಮೇಲೆ ಕೆಲಸ ಮಾಡಲು ಸಮರ್ಥರಾಗಿರಬೇಕಾಗುತ್ತದೆ. ವರದಿಗಾರಿಕೆ, ನ್ಯೂಸ್‌ಡೆಸ್ಕ್, ಆ್ಯಂಕರಿಂಗ್, ಎಡಿಟಿಂಗ್ ಸೆಕ್ಷನ್, ಗ್ರಾಫಿಕ್ಸ್- ಹೀಗೆ ಹಲವು ಭಾಗಗಳಲ್ಲಿ ಕಲಿಯುವ ಅವಕಾಶಗಳು ನಮಗೆ ಇಂಟರ್ನ್ಶಿಪ್‌ನಲ್ಲಿ ದೊರೆಯುತ್ತದೆ. ವರದಿಗಾರರೊಂದಿಗೆ ಹತ್ತಾರು ಕಡೆಗಳಿಗೆ ವರದಿ ಮಾಡಲು ಹೋಗಿ ಪ್ರತಿಯೊಂದು ವರದಿಯೂ ಯಾವ ರೀತಿ ತಯಾರಾಗುತ್ತೆ, ಯಾವ ರೀತಿಯಲ್ಲಿ ಪ್ರಶ್ನೆಗಳು ಕೇಳುತ್ತಾರೆ, ಚಿಟ್‌ಚಾಟ್, ಲೈವ್, ಬೈಟ್‌ಗಳು ಹೇಗೆ ರೂಪುಗೊಳ್ಳುತ್ತವೆ ಎಂಬ ಮಾಹಿತಿಯೂ ನಮಗೆ ದೊರೆಯುತ್ತದೆ.
ದೀಕ್ಷಾ ಬಿ. ಎಸ್‌ಡಿಎಂ ಕಾಲೇಜು, ಉಜಿರೆ