ಬ್ಯಾಡಗಿ: ಪಟ್ಟಣದಲ್ಲಿ ಹಾದು ಹೋಗಿರುವ ಗಜೇಂದ್ರಗಡ-ಸೊರಬ ರಾಜ್ಯ ಹೆದ್ದಾರಿ (ಮುಖ್ಯ ರಸ್ತೆ) ಅಗಲೀಕರಣ ಮಾಡುವಂತೆ ಆಗ್ರಹಿಸಿ ಅಗಲೀಕರಣ ಸಮಿತಿ ಸದಸ್ಯರು ಹಾಗೂ ಸಾರ್ವಜನಿಕರು ಮುಖ್ಯರಸ್ತೆಯಲ್ಲಿ ಜಮಾವಣೆಗೊಂಡಿದ್ದ ನೀರಿನಲ್ಲಿ ಕಾಗದದ ದೋಣಿ ಬಿಡುವ ಮೂಲಕ ವಿನೂತನ ರೀತಿಯ ಪ್ರತಿಭಟನೆ ನಡೆಸಿದರು.
ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ಮುಖ್ಯರಸ್ತೆ ಸಂಪೂರ್ಣ ಜಲಾವೃತವಾದ ಹಿನ್ನೆಲೆಯಲ್ಲಿ ಮುಖ್ಯ ರಸೆಯಲ್ಲಿ ನಿಂತಿದ್ದ ನೀರಿನಲ್ಲಿ ಕಾಗದದ ದೋಣಿಗಳನ್ನು ಬಿಡುವ ಮೂಲಕ ವಿನೂತವಾಗಿ ಪ್ರತಿಭಟನೆ ನಡೆಸಿ ಸರಕಾರ ಗಮನ ಸೆಳೆದರು.
ಅಭಿವೃದ್ಧಿ ವಿರೋಧಿಗಳಿಂದ ಹಿನ್ನಡೆ: ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯ ರಸ್ತೆ ಅಗಲೀಕರಣ ಸಮಿತಿ ಅಧ್ಯಕ್ಷ ಸುರೇಶ ಚಲವಾದಿ, ಕಳೆದ ಹನ್ನೆರಡು ವರ್ಷಗಳಿಂದ ನಿರಂತರವಾಗಿ ಮುಖ್ಯರಸ್ತೆ ಅಗಲೀಕರಣಕ್ಕಾಗಿ ಹೋರಾಟ ನಡೆಸುತ್ತಲೇ ಬಂದಿದ್ದೇವೆ. ಆದರೆ, ಇಲ್ಲಿಯವರೆಗೂ ನಮ್ಮ ಮನವಿಗೆ ಪುರಸ್ಕಾರ ಸಿಕ್ಕಿಲ್ಲ. ಪಟ್ಟಣದ ಮುಖ್ಯರಸ್ತೆಯಲ್ಲಿ ಮೂಲ ಸೌಲಭ್ಯಗಳು ಸಹ ಇಲ್ಲದಂತಾಗಿದ್ದು, ನೀರು ಹರಿದು ಹೋಗಲು ಜಾಗವಿಲ್ಲದೇ ರಸ್ತೆ ಮೇಲೆ ನೀರು ನಿಲ್ಲುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಪಟ್ಟಣದ ಕೆಲ ಅಭಿವೃದ್ಧಿ ವಿರೋಧಿ ಶಕ್ತಿಗಳಿಂದ ಮುಖ್ಯರಸ್ತೆ ಅಗಲೀಕರಣಕ್ಕೆ ಹಿನ್ನಡೆಯಾ ಗುತ್ತಿದೆ ಎಂದು ಆರೋಪಿಸಿದರು.
ಯಾವ ಸರಕಾರ ಬಂದರೂ ಅಷ್ಟೇ: ಪಾಂಡುರಂಗ ಸುತಾರ ಮಾತನಾಡಿ, ಪ್ರತಿ ಬಾರಿ ಮಳೆಯಾದಾಗಲೂ ಮುಖ್ಯ ರಸ್ತೆ ಕೆರೆಯಂತಾಗಿ ಮತ್ತು ಸಂಚಾರ ದುಸ್ತರವಾಗಿ ಪರಿಣಮಿಸುತ್ತದೆ. ಕಳೆದ 12 ವರ್ಷಗಳಲ್ಲಿ ಕ್ಷೇತ್ರದಲ್ಲಿ ಮೂವರು ಶಾಸಕರು ಬದಲಾವಣೆ ಯಾದರೂ ಅಗಲೀಕರಣಕ್ಕೆ ಚಾಲನೆ ಸಿಕ್ಕಿಲ್ಲ. ಶೀಘ್ರದಲ್ಲಿಯೇ ಅಗಲೀಕರಣ ಮಾಡದಿದ್ದಲ್ಲಿ ಮುಂದಿನ ದಿನಗಳಲ್ಲಿ ನಿಜವಾದ ದೋಣಿಗಳನ್ನು ತಂದು ಮುಖ್ಯರಸ್ತೆಯಲ್ಲಿ ಬಿಟ್ಟು ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಮುಖ್ಯರಸ್ತೆ ಅಗಲೀಕರಣ ಸಮಿತಿ ಸದಸ್ಯರಾದ ಪ್ರದೀಪ ಜಾಧವ, ಹರೀಶ್ ಕಲ್ಯಾಣಿ ಇನ್ನಿತರರು ಉಪಸ್ಥಿತರಿದ್ದರು.
ಪಟ್ಟಣದ ಮುಖ್ಯ ರಸ್ತೆ ಮೂಲಕ ಹಾದು ಹೋಗಿರುವ ಗಜೇಂದ್ರಗಡ-ಸೊರಬ ರಾಜ್ಯ ಹೆದ್ದಾರಿಯಲ್ಲಿ ತಗ್ಗು ಗುಂಡಿಗಳು ಬಿದ್ದಿದ್ದರು ಸಹ ಯಾವುದೇ ಕ್ರಮಕ್ಕೆ ಸರಕಾರ ಮುಂದಾಗಿಲ್ಲ. ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸದೇ ಇರುವ ಪ್ರತಿನಿಧಿ ಗಳು ಇದ್ದೂ ಪ್ರಯೋಜನವಿಲ್ಲದಂತಾಗಿದೆ. –
ಮಂಜುನಾಥ ಪೂಜಾರ, ಸಾರ್ವಜನಿಕರು