ಕೊಡಿಯಾಲಬೈಲ್: ಈಗಾಗಲೇ ನಗರದ ಹಲವು ಮರಗಳ ಸ್ಥಳಾಂತರ ಕಾರ್ಯ ನಡೆದಿದೆ. ಆದರೆ ಇದೀಗ ವಿಶೇಷ ಎಂಬಂತೆ ಮೀನುಗಳನ್ನು ಕೂಡ ಒಂದು ಕಡೆಯಿಂದ ಸಂರಕ್ಷಿಸಿ ಮತ್ತೂಂದು ಕಡೆ ಬಿಡುವ ಮಾದರಿ ಕೆಲಸ ನಡೆಯುತ್ತಿದೆ.
ಕೊಡಿಯಾಲಬೈಲ್ ಬಳಿಯ ಟಿಎಂಎ ಪೈ ಕನ್ವೆನ್ಷನ್ ಸೆಂಟರ್ ಮುಂಭಾಗದ ನಿರ್ಮಾಣ ಹಂತದ ಕಟ್ಟಡದ ತಳಭಾಗ ತುಂಬಿಕೊಂಡಿದ್ದ ನೀರಿನಲ್ಲಿದ್ದ ಸಾವಿರಾರು ಮೀನು ಮತ್ತು ಮೀನಿನ ಮರಿಗಳನ್ನು ಸಂರಕ್ಷಣೆ ಮಾಡಿ ನಗರದ ವಿವಿಧ ಕೆರೆಗಳಿಗೆ ಬಿಡುವ ನಿಟ್ಟಿನಲ್ಲಿ ಕೆಲಸಗಳು ಸಾಗುತ್ತಿದೆ. ಈಗಾಗಲೇ ಸುಮಾರು 6ರಿಂದ 7 ಸಾವಿರ ಮೀನುಗಳನ್ನು ರಕ್ಷಿಸಿ ನಗರದ ಗುಜ್ಜರಕೆರೆಗೆ ಬಿಡಲಾಗಿದೆ. ಇನ್ನೂ ಸುಮಾರು 6 ಸಾವಿರಕ್ಕೂ ಹೆಚ್ಚಿನ ಮೀನುಗಳು ಅಲ್ಲಿವೆ. ಅವುಗಳನ್ನು ಗುಜ್ಜರಕೆರೆ, ಕಾವೂರು ಕೆರೆಗಳಿಗೆ ಬಿಡಲು ನಿರ್ಧರಿಸಲಾಗಿದೆ.
ಮಂಗಳೂರಿನ ಪರಿಸರ ಪ್ರೇಮಿಗಳಾದ ಜೀತ್ ಮಿಲನ್ ರೋಚ್, ಭುವನ್, ಅತಿಕ್, ಸೆಲ್ಮಾ ಮತ್ತು ನಿಧಿ ಅವರು ಈ ಕಾರ್ಯಾ ಚರಣೆಯಲ್ಲಿ ಭಾಗಿಯಾಗಿದ್ದಾರೆ. ಕೆಲವು ದಿನಗಳಿಂದ ಬೆಳಗ್ಗೆಯಿಂದ ಸಂಜೆಯವರೆಗೆ ಈ ಕೆಲಸ ನಿರಂತರವಾಗಿ ಸಾಗುತ್ತಿದೆ.
ಎಲ್ಲಿತ್ತು ಇಷ್ಟು ಮೀನು? ಕೆಲವು ವರ್ಷಗಳಿಂದ ಅರ್ಧದಲ್ಲೇ ಕಾಮಗಾರಿ ಸ್ಥಗಿತಗೊಂಡ ಈ ಕಟ್ಟಡದಲ್ಲಿ ಮಳೆಗಾಲ ಪೂರ್ತಿ ನೀರು ನಿಲ್ಲುತ್ತಿತ್ತು. ಸಾಂಕ್ರಾಮಿಕ ರೋಗ ತಪ್ಪಿಸಲು, ಸೊಳ್ಳೆ ಉತ್ಪತ್ತಿಯಾಗಬಾರದು ಎಂಬ ನಿಟ್ಟಿನಲ್ಲಿ ಮಂಗಳೂರು ಪಾಲಿಕೆಯಿಂದ ಗಪ್ಪಿ ಮೀನಿನ ಮರಿಗಳನ್ನು ಹಾಕಿದ್ದರು. ಅವುಗಳು ಈಗ ದೊಡ್ಡದಾಗಿದೆ. ಅಲ್ಲಿ ಸುಮಾರು 10,000ಕ್ಕೂ ಹೆಚ್ಚಿನ ಮೀನುಗಳಿವೆ. ಇದೀಗ ಆ ಭಾಗದಲ್ಲಿ ಶೇಖರಣೆಯಾಗಿದ್ದ ನೀರು ಖಾಲಿ ಮಾಡಲಾಗುತ್ತಿದೆ. ಬಲೆಯನ್ನು ಉಪ ಯೋಗಿಸಿ ನೀರಿನಲ್ಲಿದ್ದ ಮೀನುಗಳನ್ನು ಹಿಡಿಯ ಲಾಗಿದೆ. ಹಿಡಿದ ಮೀನನ್ನು ನೀರು ತುಂಬಿದ ಟ್ರೇಗೆ ಹಾಕಲಾಗುತ್ತದೆ. ಹೀಗೆ ಕೆಲವು ಟ್ರೇ ತುಂಬಿದ ಕೂಡಲೇ ಕೆಲವು ನಿಮಿಷಗಳ ಅವಧಿಯಲ್ಲಿ ಆ ಮೀನನ್ನು ಕಾರಿನಲ್ಲಿ ಸಾಗಿಸಿ, ಕೆರೆಗೆ ಹಾಕಲಾಗುತ್ತಿದೆ.
ಉದ್ಯಮಿ ಧೀರಜ್ ಅವರು “ಉದಯವಾಣಿ ಸುದಿನ’ಕ್ಕೆ ಪ್ರತಿಕ್ರಿಯಿಸಿ, “ಪ್ರತಿಯೊಂದರ ಜೀವವೂ ಮುಖ್ಯ. ಹೀಗಿರುವಾಗ ಮೀನುಗಳನ್ನು ಸಂರಕ್ಷಿಸ ಬೇಕು ಎಂಬ ಯೋಚನೆ ನನಗೆ ಬಂತು. ಆ ಹಿನ್ನೆಲೆಯಲ್ಲಿ ಜೀತ್ ಅವರ ಬಳಿ ಕೇಳಿಕೊಂಡಾಗ ಅವರೂ ಒಪ್ಪಿದರು. ಇದೊಂದು ಪುಣ್ಯ ಕಾರ್ಯವಾಗಿದ್ದು, ಇದೇ ರೀತಿ, ಸಣ್ಣ ಸಣ್ಣ ಕೆಲಸವೇ ಖುಷಿ ಸಿಗುತ್ತದೆ’ ಎನ್ನುತ್ತಾರೆ.
ಮೀನುಗಳ ಸಂರಕ್ಷಣೆ: ನಿರ್ಮಾಣ ಹಂತದ ಕಟ್ಟಡದಲ್ಲಿ ಸುಮಾರು 10,000ಕ್ಕೂ ಹೆಚ್ಚಿನ ಮೀನುಗಳಿವೆ. ಅವುಗಳನ್ನು ಅಲ್ಲಿಂದ ಸಂರಕ್ಷಿಸಲಾಗುತ್ತಿದೆ. ಎರಡು ದಿನಗಳಿಂದ ಈ ಕೆಲಸ ನಡೆಯುತ್ತಿದೆ. ಸಂರಕ್ಷಿಸಿದ ಮೀನುಗಳನ್ನು ನಗರದ ಕಾವೂರು, ಗುಜ್ಜರಕೆರೆಗಳಿಗೆ ಬಿಡಲಾಗುತ್ತಿದೆ. –
ಭುವನ್, ಪರಿಸರ ಪ್ರೇಮಿ
-ನವೀನ್ ಭಟ್ ಇಳಂತಿಲ