Advertisement

SSLC : ಫ‌ಲಿತಾಂಶ ಸುಧಾರಣೆಗೆ ವಿನೂತನ ಪ್ರಯತ್ನ ; ಎಸೆಸೆಲ್ಸಿ ಟಾರ್ಗೆಟ್‌ ಶೇ. 90+

10:40 AM Sep 22, 2023 | Team Udayavani |

ಉಡುಪಿ: ಎಸೆಸೆಲ್ಸಿ ಫ‌ಲಿತಾಂಶ ಹೆಚ್ಚಿಸಲು ಟಾರ್ಗೆಟ್‌ ಶೇ. 90+ ಕಲ್ಪನೆಯಡಿ ಈಗಿಂದಲೇ ಉಭಯ ಜಿಲ್ಲೆಯಲ್ಲಿ ವಿವಿಧ ಚಟುವಟಿಕೆ ಪ್ರಯೋಗಗಳನ್ನು ಆರಂಭಿಸಲಾಗಿದೆ.

Advertisement

ಉಡುಪಿ ಜಿಲ್ಲೆಯ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ನಿತ್ಯವೂ ಒಂದು ಗಂಟೆ ಹೆಚ್ಚುವರಿ ತರಗತಿ ನಡೆಸಲು ನಿರ್ಧರಿಸಲಾಗಿದೆ. ದ.ಕ. ಜಿಲ್ಲೆಯಲ್ಲಿ ಶೇ. 100ರಷ್ಟು ಫ‌ಲಿತಾಂಶ ತಂದ ವಿಷಯ ಶಿಕ್ಷಕರ ಮೂಲಕ ಫ‌ಲಿತಾಂಶ ವಿಶ್ಲೇಷಣೆಗೆ ಯೋಜನೆ ರೂಪಿಸಲಾಗುತ್ತಿದೆ.

ಉಭಯ ಜಿಲ್ಲೆಯಲ್ಲೂ ಈಗಾಗಲೇ ಎಸೆಸೆಲ್ಸಿ ಪರೀಕ್ಷೆಗೆ ಮಕ್ಕಳನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಪ್ರೌಢಶಾಲೆಯ ಮುಖ್ಯಶಿಕ್ಷಕರ ಸಭೆ ಕರೆಯಲಾಗಿದೆ ಮತ್ತು ಜಿಲ್ಲೆಯ ಒಟ್ಟಾರೆ ಫ‌ಲಿತಾಂಶ ಶೇ. 90ಕ್ಕಿಂತ ಹೆಚ್ಚು ಮಾಡುವ ನಿಟ್ಟಿನಲ್ಲಿ ಗುರಿ ನಿಗದಿ ಮಾಡಲಾಗಿದೆ.

ವಿಷಯ ಶಿಕ್ಷಕರ ಒಕ್ಕೂಟ ಉಡುಪಿ ಜಿಲ್ಲೆಯ ವಿಷಯ ಶಿಕ್ಷಕರ ಒಕ್ಕೂಟ ರಚಿಸಲಾಗಿದೆ. ಎಲ್ಲ ವಿಷಯಕ್ಕೂ ಪ್ರತ್ಯೇಕ ಒಕ್ಕೂಟ ರಚನೆ ಮಾಡಲಾಗಿದೆ. ವಿಷಯ ಶಿಕ್ಷಕರು ಸಭೆ ಸೇರಿ ತರಗತಿಯಲ್ಲಿ ಕ್ಲಿಷ್ಟಕರ ಅಂಶಗಳ ಬಗ್ಗೆ ಚರ್ಚೆ ಮಾಡಲಿದ್ದಾರೆ. ವಿಷಯ ತಜ್ಞರು ಈ ಸಭೆಯಲ್ಲಿ ಪಾಲ್ಗೊಂಡು ಕಲಿಕೆಯಲ್ಲಿ ಹಿಂದಿರುವ ಮಕ್ಕಳನ್ನು ಸಮರ್ಪಕವಾಗಿ ಸಜ್ಜುಗೊಳಿಸುವ ನಿಟ್ಟಿನಲ್ಲಿ ವಿಷಯ ಮಂಥನ ಮಾಡಲಿದ್ದಾರೆ. ಶೇ.100ರಷ್ಟು ಫ‌ಲಿತಾಂಶ ತರಬಲ್ಲ ಶಿಕ್ಷಕರಿಗೆ ಪುಸ್ತಕ ಬಹುಮಾನದ ಜತೆಗೆ ಪ್ರಸಂಶ ಪತ್ರವನ್ನು ನೀಡಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಡಿಡಿಪಿಐ ನಿರ್ಧರಿಸಿದ್ದಾರೆ.

ಫೀಡ್‌ಬ್ಯಾಕ್‌ ತರಗತಿಯಲ್ಲಿ ಪರೀಕ್ಷೆ ನಡೆಸಿ ವಿದ್ಯಾರ್ಥಿಗಳು ಯಾವ ವಿಷಯದಲ್ಲಿ ಕಡಿಮೆ ಅಂಕ ಪಡೆದಿದ್ದಾರೆ ಮತ್ತು ಯಾವ ವಿಷಯದಲ್ಲಿ ಹೆಚ್ಚು ಅಂಕ ಪಡೆದಿದ್ದಾರೆ ಎಂಬುದನ್ನು ವಿಶ್ಲೇಷಣಾತ್ಮಕವಾಗಿ ತಿಳಿಸಲಾಗುತ್ತದೆ. ಕಡಿಮೆ ಬಂದಿರಲು ಕಾರಣ, ತಪ್ಪುಗಳನ್ನು ತಿದ್ದಿಕೊಳ್ಳುವುದು ಹೇಗೆ ಮತ್ತು ಹೆಚ್ಚು ಅಂಕ ಪಡೆದ ವಿಷಯದಲ್ಲಿ ಇನ್ನಷ್ಟು ಸುಧಾರಣೆ ಮಾಡಿಕೊಳ್ಳುವುದು ಹೇಗೆ ಎಂಬ ಬಗ್ಗೆ ಶಿಕ್ಷಕರು ಮಕ್ಕಳಿಗೆ ಫೀಡ್‌ ಬ್ಯಾಕ್‌ ನೀಡಲಿದ್ದಾರೆ ಎಂದು ಡಿಡಿಪಿಐ ಕೆ. ಗಣಪತಿ ಮಾಹಿತಿ ನೀಡಿದರು.

Advertisement

ವಲಯವಾರು ಸಭೆ ದ.ಕ.ದಲ್ಲಿ ಫ‌ಲಿತಾಂಶ ಹೆಚ್ಚಿಸಲು ಈಗಾಗಲೇ ಪ್ರೌಢಶಾಲಾ ಮುಖ್ಯಶಿಕ್ಷಕರ ವಲಯವಾರು ಸಭೆ ನಡೆಸಲಾಗಿದೆ. ಮಧ್ಯವಾರ್ಷಿಕ ಪರೀಕ್ಷೆಯ ಅನಂತರದಲ್ಲಿ ಪ್ರತಿ ವಿದ್ಯಾರ್ಥಿಯ ಫ‌ಲಿತಾಂಶ ವಿಶ್ಲೇಷಣೆ ಮಾಡಲಾಗುವುದು. ಇದಕ್ಕಾಗಿ ವಿಷಯ ತಜ್ಞರ ಅಥವಾ ಶೇ. 100ರಷ್ಟು ಫ‌ಲಿತಾಂಶ ಬಂದಿರುವ ಶಾಲೆಯ ಶಿಕ್ಷಕರ ನಿಯೋಜನೆ ಮಾಡಲಾಗುವುದು. ವಿಷಯ ಶಿಕ್ಷಕರಿಗೆ ಪ್ರತ್ಯೇಕ ಕಾರ್ಯಾಗಾರ ನಡೆಸಲಾಗುವುದು ಮತ್ತು ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೂ ಕಾರ್ಯಾಗಾರ ನಡೆಸಲಾಗುವುದು. ಕಳೆದ ಬಾರಿ ಕಡಿಮೆ ಫ‌ಲಿತಾಂಶ ಬಂದಿರುವ ಶಾಲೆಯ ಮುಖ್ಯಶಿಕ್ಷಕರ ಸಭೆಯನ್ನು ಪ್ರತ್ಯೇಕವಾಗಿ ಕರೆದು ಫ‌ಲಿತಾಂಶ ಸುಧಾರಣೆಗೆ ಅಗತ್ಯ ಸೂಚನೆ ನೀಡಲಾಗುವುದು ಎಂದು ಜಿಲ್ಲಾ ಎಸೆಸೆಲ್ಸಿ ನೋಡಲ್‌ ಅಧಿಕಾರಿ ವೆಂಕಟೇಶ್‌ ನಾಯಕ್‌ ಮಾಹಿತಿ ನೀಡಿದರು.

ಹೆತ್ತವರಿಗೂ ಜವಾಬ್ದಾರಿ ನಿತ್ಯವೂ ಬೆಳಗ್ಗೆ 1 ಗಂಟೆ ಹೆಚ್ಚುವರಿ ತರಗತಿ ನಡೆಸಿ, ಪರೀಕ್ಷೆಗೆ ಸಿದ್ಧಮಾಡುವ ವಿವಿಧ ಚಟುವಟಿಕೆಗಳ ಜತೆಗೆ ಪಠ್ಯದ ಬೋಧನೆಗೆ ಸೂಚನೆಯನ್ನು ನೀಡಲಾಗಿದೆ. ಇದರ ಜತೆಗೆ ಮಕ್ಕಳ ಪಾಲಕ ಪೋಷಕರ ಸಭೆ ಕರೆದು ಅವರಿಗೂ ಒಂದಿಷ್ಟು ಜವಾಬ್ದಾರಿ ಹಂಚಲು ಮುಂದಾಗಿದ್ದಾರೆ. ಮನೆಯಲ್ಲಿ ಮಕ್ಕಳು ಓದುವ ಸಮಯದಲ್ಲಿ ಟಿವಿ ನೋಡದೇ ಇರುವುದು, ಬೆಳಗ್ಗೆ ಬೇಗ ಏಬ್ಬಿಸುವುದು ಇತ್ಯಾದಿ ಜವಾಬ್ದಾರಿಯನ್ನು ತಂದೆ ಅಥವಾ ತಾಯಿಗೆ ಒಪ್ಪಿಸಿ, ಅದರ ಮೇಲ್ವಿಚಾರಣೆಯನ್ನು ತರಗತಿ ಶಿಕ್ಷಕರು ನೋಡಿಕೊಳ್ಳುವಂತೆ ಮಾಡಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next