ಕುಂದಾಪುರ: ಮಳೆಗಾಲ ಬಂತೆಂದರೆ ಬೈಂದೂರು ಕ್ಷೇತ್ರದ ಹಲವೆಡೆ ಸಂಪರ್ಕವೇ ಸವಾಲು. ಇದನ್ನು ಪರಿಹರಿಸುವ ನಿಟ್ಟಿನಲ್ಲಿ ಶಾಸಕ ಗುರುರಾಜ್ ಗಂಟಿಹೊಳೆ ಆರಂಭಿಕ ಹೆಜ್ಜೆಯಿಟ್ಟಿದ್ದಾರೆ. ಸಮೃದ್ಧ ಬೈಂದೂರು ಟ್ರಸ್ಟ್ ಮತ್ತು ಬೆಂಗಳೂರು ಮೂಲದ ಅರುಣಾಚಲಂ ಟ್ರಸ್ಟ್ ಸಹಯೋಗ, ವಿವಿಧ ಸಂಘ – ಸಂಸ್ಥೆಗಳ ನೆರವಿನೊಂದಿಗೆ ಲಾರಿ, ಹಳೆಯ ಲಾರಿ, ಬಸ್ ಇನ್ನಿತರ ವಾಹನಗಳ ಚಾಸಿಸ್ ಬಳಸಿ ಕಡಿಮೆ ಖರ್ಚಿನಲ್ಲಿ ಕಾಲುಸಂಕಗಳನ್ನು ನಿರ್ಮಿಸುವ ಯೋಜನೆ ಇದಾಗಿದೆ.
50 ಕಡೆಗಳಲ್ಲಿ ಇಂತಹ ಕಾಲುಸಂಕಗಳ ನಿರ್ಮಾಣಕ್ಕೆ ಯೋಜನೆ ರೂಪಿಸಿದ್ದು, ಈ ಮಳೆಗಾಲಕ್ಕೂ ಮೊದಲು ಪ್ರಾಯೋಗಿಕವಾಗಿ 3 ಕಡೆ (ಯಡ ಮೊಗೆಯ ರಾಂಪೈಜೆಡ್ಡು, ವಂಡ್ಸೆಯ ಅಬ್ಬಿ ಹಾಗೂ ತೊಂಬಟ್ಟು -ಕಬ್ಬಿನಾಲೆ ಬಳಿ) ಕಾಮಗಾರಿ ನಡೆಯಲಿದೆ. ಯೋಜನೆಯಡಿ 35ರಿಂದ 72 ಅಡಿ ಉದ್ದದ ಕಾಲುಸಂಕ ನಿರ್ಮಿಸಲಾಗುವುದು.
ಹಳ್ಳಿಗರಿಗೆ ವರದಾನ:ಬೈಂದೂರು ಕ್ಷೇತ್ರದ ಬಹುತೇಕ ಹಳ್ಳಿಗಳಲ್ಲಿ ಅಪಾಯಕಾರಿ ಮರದ ಕಾಲುಸಂಕಗಳಲ್ಲಿ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ತುಂಬಿ ಹರಿಯುವ ನದಿ, ಹಳ್ಳ, ತೊರೆ, ಹೊಳೆ ದಾಟುವ ಪರಿಸ್ಥಿತಿಯಿದೆ. 260ಕ್ಕೂ ಅಧಿಕ ಕಡೆಗಳಲ್ಲಿ ಶಾಶ್ವತ ಕಾಲುಸಂಕದ ಅಗತ್ಯವಿದೆ. ಹಲವು ವರ್ಷಗಳಿಂದ ಜನರು ಬೇಡಿಕೆ ಸಲ್ಲಿಸುತ್ತಿದ್ದರೂ ಈವರೆಗೆ ಆಗಿರುವುದು ಬೆರಳೆಣಿಕೆ ಯಷ್ಟೇ. ಶಾಸಕರ ಹೊಸ ಯೋಜನೆ ಜಾರಿಯಾದರೆ ನದಿ, ತೊರೆ, ಹೊಳೆ ಬದಿಯ ವಾಸಿಗಳಿಗೆ ವರದಾನವಾಗಲಿದೆ.
ರಾಂಪೈಜೆಡ್ಡಿನಲ್ಲಿ ಮೊದಲ ಕಾಲುಸಂಕ
ಯಡಮೊಗೆಯ ಹತ್ತಿರದ ರಾಂಪೈಜೆಡ್ಡುವಿನಲ್ಲಿ ಕುಬ್ಜಾ ನದಿಗೆ ಬಸ್ಸಿನ ಚಾಸಿಸ್ ಬಳಸಿ ಮೊದಲ ಕಾಲು ಸಂಕ ನಿರ್ಮಾಣವಾಗುತ್ತಿದ್ದು, ಬಹುತೇಕ ಪೂರ್ಣಗೊಂಡಿದೆ. ಇದರೊಂದಿಗೆ 30ಕ್ಕೂ ಮಿಕ್ಕಿ ಮನೆಯವರು ಮಳೆಗಾಲದಲ್ಲಿ ಅನುಭವಿಸುತ್ತಿದ್ದ ಬವಣೆ ಬಗೆಹರಿಯಲಿದೆ.
ಈ ಕಾಲು ಸಂಕದಿಂದಾಗಿ ಯಡಮೊಗೆ – ಹೊಸಂಗಡಿ ಗ್ರಾಮಗಳ ಸಂಪರ್ಕ ಹತ್ತಿರವಾಗಲಿದೆ. ಇದಲ್ಲದೆ ರಾಂಪೈಜೆಡ್ಡು ಜನರು ಪಡಿತರ, ಪಂಚಾಯತ್, ಪೇಟೆಗೆ 6 ಕಿ.ಮೀ. ದೂರ ಸಂಚರಿಸುತ್ತಿದ್ದು, ಈಗ ಇದು ಕೇವಲ 1 ಕಿ.ಮೀ. ಅಷ್ಟೇ ದೂರವಾಗಲಿದೆ. ಹೊಸಂಗಡಿಗೆ ಬಸ್ಸಿಗೆ ತೆರಳಲು ಹತ್ತಿರವಾಗಲಿದೆ. ಈ ಕಾಲು ಸಂಕದಲ್ಲಿ ಬೈಕ್, ರಿಕ್ಷಾ, ಆಮ್ನಿ ಸಂಚರಿಸಬಹುದು. ಅನಾರೋಗ್ಯ ಪೀಡಿತರನ್ನು ತುರ್ತಾಗಿ ಆಸ್ಪತ್ರೆಗೆ ಕರೆದೊಯ್ಯಲು ಸಹಕಾರಿ. ಮಳೆಗಾಲದಲ್ಲಿ ಶಾಲೆ ಮಕ್ಕಳಿಗೂ ಅನುಕೂಲ ಎಂದು ಸ್ಥಳೀಯರಾದ ರಮೇಶ್ ನಾಯ್ಕ ಹೇಳಿದರು.
ಕಾಲುಸಂಕ ಇಲ್ಲದ ಕಡೆ ಮಳೆಗಾಲದಲ್ಲಿ ಜನರಿಗೆ ನೆರವಾಗಲಿ ಅನ್ನುವ ಕಾರಣಕ್ಕೆ ಎರಡು ಟ್ರಸ್ಟ್ ಗಳ ವತಿಯಿಂದ ಈ ಕಾರ್ಯ ಕೈಗೊಂಡಿದ್ದೇವೆ. ದಾನಿಗಳು ಕೈಜೋಡಿಸಲು ಮುಂದೆ ಬಂದಿದ್ದಾರೆ. 50 ಕಡೆ ಮಾಡುವ ಯೋಚನೆಯಿದೆ.ಸದ್ಯ 3 ಕಡೆ ನಿರ್ಮಾಣ ವಾಗಲಿದೆ. ಬಳಿಕ ಅದರ ಗುಣಮಟ್ಟ ನೋಡಿಕೊಂಡು ಮುಂದುವರಿ ಯಲಾಗುವುದು. ಇದಕ್ಕೆ ತಲಾ ಅಂದಾಜು 2 ಲಕ್ಷ ರೂ. ವೆಚ್ಚವಾಗಲಿದೆ.
– ಗುರುರಾಜ್ ಗಂಟಿಹೊಳೆ,
ಬೈಂದೂರು ಶಾಸಕ
-ಪ್ರಶಾಂತ್ ಪಾದೆ