ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಮಾದಿಗ ಸಮುದಾಯಕ್ಕೆ ದೊಡ್ಡ ಅನ್ಯಾಯವಾಗಿದೆ. ಕಾಂಗ್ರೆಸ್ ಪಕ್ಷವನ್ನು ನಿರಂತರವಾಗಿ ಬೆಂಬಲಿಸಿಕೊಂಡು ಬರುತ್ತಿರುವ ಸಮುದಾಯಕ್ಕೆ ಸಚಿವ ಸ್ಥಾನ ನೀಡದೆ ಕಡೆಗಣಿಸಿರುವ ಅಕ್ಷಮ್ಯ ಎಂದು ಮಾಜಿ ಸಚಿವ ಎಚ್.ಆಂಜನೇಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿತ್ರದುರ್ಗ ಸಂಸದ ಬಿ.ಎನ್.ಚಂದ್ರಪ್ಪ, ರಾಜ್ಯಸಭೆ ಸದಸ್ಯ ಡಾ.ಎಲ್.ಹನುಮಂತಯ್ಯ, ಮಾಜಿ ಸಂಸದ ಕೆ.ಬಿ.ಕೃಷ್ಣ ಮೂರ್ತಿ, ಪರಿಷತ್ ಸದಸ್ಯ ಆರ್.ಧರ್ಮಸೇನಾ ಅವರೊಂದಿಗೆ ತಮ್ಮ ನಿವಾಸದಲ್ಲಿ ಸಭೆ ನಡೆಸಿದ ನಂತರ ಮಾತನಾಡಿದ ಅವರು, ನಮ್ಮ ಸಮುದಾಯವು 120 ವಿಧಾನಸಭೆ ಕ್ಷೇತ್ರಗಳಲ್ಲಿ ಗೆಲುವಿನ ನಿರ್ಣಾಯಕ ಪಾತ್ರ ವಹಿಸುತ್ತದೆ. ಆದರೆ, ಸಂಪುಟದಲ್ಲಿ ನಮ್ಮನ್ನು ದೂರ ಇಟ್ಟಿದ್ದು ಪ್ರಜಾಪ್ರಭುತ್ವಕ್ಕೆ ಶೋಭೆ ತರುವುದಿಲ್ಲ ಎಂದು ಹೇಳಿದರು.
ಕಾಂಗ್ರೆಸ್‌ನಲ್ಲಿ ನಮ್ಮ ಸಮುದಾಯದಿಂದ ರೂಪಾ ಶಶಿಧರ್ ಗೆಲುವು ಸಾಧಿಸಿದ್ದಾರೆ. ವಿಧಾನಪರಿಷತ್‌ನಲ್ಲಿ ನಮ್ಮ ಸಮುದಾಯದ ಆರ್.ಬಿ.ತಿಮ್ಮಾಪುರ, ಆರ್.ಧರ್ಮಸೇನಾ ಇದ್ದಾರೆ. ಇವರ ಪೈಕಿ ಯಾರನ್ನೂ ಸಚಿವ ಸ್ಥಾನಕ್ಕೆ ಪರಿಗಣಿಸದಿರುವುದು ಮಾದಿಗ ಸಮುದಾಯದಲ್ಲಿ ಅಸಮಾಧಾನ ಹಾಗೂ ಕಳವಳಕ್ಕೆ ಕಾರಣವಾಗಿದೆ ಎಂದು ತಿಳಿಸಿದರು.
ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಅವರನ್ನು ಭೇಟಿ ಮಾಡಿ ಸಮುದಾಯದ ವತಿಯಿಂದ ಮನವಿ ಸಹ ಸಲ್ಲಿಸಲು ಇಂದಿನ ಸಭೆಯಲ್ಲಿ ನಿರ್ಧರಿಸಲಾಗಿದೆ. ಕಾಂಗ್ರೆಸ್ ವರಿಷ್ಠ ಮಂಡಳಿ ಹಾಗೂ ರಾಜ್ಯ ನಾಯಕರು ತಕ್ಷಣ ಗಮನಹರಿಸಿ ಅನ್ಯಾಯ ಸರಿಪಡಿಸಬೇಕು ಎಂದು ಆಗ್ರಹಿಸಿದರು.
ಸ್ವಾತಂತ್ರ್ಯ ಬಂದಾಗಿನಿಂದಲೂ ಮಾದಿಗ ಸಮುದಾಯವಿಲ್ಲದೆ ಯಾವುದೇ ಸಚಿವ ಸಂಪುಟ ಇರಲಿಲ್ಲ.ಆದರೆ, ಸಮ್ಮಿಶ್ರ ಸರ್ಕಾರದಲ್ಲಿ ಮಾದಿಗ ಸಮುದಾಯದ ಒಬ್ಬೇ ಒಬ್ಬ ಪ್ರತಿನಿಧಿ ಇಲ್ಲ. ಇದು ಸಮುದಾಯಕ್ಕೆ ಮಾಡಿರುವ ದೊಡ್ಡ ಅನ್ಯಾಯ ಎಂದು ದೂರಿದರು.
ನೆಲಮಂಗಲ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ನಾರಾಯಣಸ್ವಾಮಿ, ಔರಾದ್ ಕ್ಷೇತ್ರದ ವಿಜಯಕುಮಾರ್ ಕೌಡಾಳ್, ಮಾಯಕೊಂಡ ಅಭ್ಯರ್ಥಿಯಾಗಿದ್ದ ಕೆ.ಎಸ್.ಬಸವರಾಜ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ಗೌತಮ್, ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮಾರೆಪ್ಪ ಉಪಸ್ಥಿತರಿದ್ದರು.