ಬೆಳಗಾವಿ: ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಸೇರಿರುವ 48ರ ಹರೆಯದ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಎಲ್ಲ ಸಮಾಜದವರನ್ನು ಒಗ್ಗೂಡಿಸಿಕೊಂಡು ಬಂದಿರುವ ಪ್ರಭಾವಿ ನಾಯಕಿ. ರಾಜ್ಯಶಾಸ್ತ್ರದಲ್ಲಿ ಎಂ.ಎ. ಮುಗಿಸಿ ತಮ್ಮ ಕ್ಷೇತ್ರದಲ್ಲಿ ‘ಅಕ್ಕ’ ಎಂದು ಹೆಸರುವಾಸಿಯಾಗಿರುವ ಹೆಬ್ಬಾಳಕರ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗುವ ಮೂಲಕ ತಮ್ಮದೇ ಆದ ವರ್ಚಸ್ಸು ಹೊಂದಿದ್ದಾರೆ. ಮೊದಲ ಬಾರಿಗೆ ಸಂಪುಟದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಬಿಜೆಪಿಯ ಭದ್ರಕೋಟೆಯಾಗಿದ್ದ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ 2018ರಲ್ಲಿ ಗೆಲುವು ಸಾಧಿಸುವ ಮೂಲಕ ಪ್ರಬಲ ನಾಯಕಿಯಾಗಿ ಬೆಳೆದಿದ್ದಾರೆ. 2023ರಲ್ಲಿಯೂ ಅತ್ಯಧಿಕ ಮತಗಳಿಂದ ಗೆದ್ದು ಶಾಸಕರಾಗಿ ಆಯ್ಕೆಯಾಗಿದ್ದಾರೆ. ಪಂಚಮಸಾಲಿ ಸಮಾಜದ ಪ್ರಬಲ ನಾಯಕಿಯಾಗಿಯೂ ಮುಂಚೂಣಿಯಲ್ಲಿದ್ದಾರೆ. ಅನೇಕ ವಿರೋಧಗಳನ್ನು ಮೆಟ್ಟಿ ರಾಜಕೀಯವಾಗಿ ಬೆಳೆದು ನಿಂತಿದ್ದಾರೆ. ಈಗ ಸಚಿವ ಸಂಪುಟದಲ್ಲಿ ಸ್ಥಾನ ಪಡೆದಿರುವ ಲಕ್ಷ್ಮೀ ಏಕೈಕ ಮಹಿಳಾ ಶಾಸಕಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ಲಕ್ಷ್ಮೀ ಹೆಬ್ಬಾಳಕರ ಬೆಳಗಾವಿ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ಪಕ್ಷವನ್ನು ಮುನ್ನಡೆಸಿದ್ದರು. ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷರಾಗಿಯೂ ಪಕ್ಷ ಸಂಘಟಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. 2018ರಲ್ಲಿ ಮೈಸೂರು ಮಿನರಲ್ಸ್ ಅಧ್ಯಕ್ಷೆ ಹಾಗೂ 2021ರಲ್ಲಿ ಕಾಂಗ್ರೆಸ್ ರಾಜ್ಯ ವಕ್ತಾರೆ ಆಗಿದ್ದಾರೆ.
2013ರಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ವಿಧಾನಸಭೆ ಹಾಗೂ 2014ರಲ್ಲಿ ಬೆಳಗಾವಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಪರಾಭವಗೊಂಡಿದ್ದರು. ಆದರೆ ಸೋಲುಗಳಿಂದ ಧೃತಿಗೆಡದೆ ಛಲ ಬಿಡದೆ ಕ್ಷೇತ್ರದಲ್ಲಿ ಇದ್ದುಕೊಂಡು ಜನರೊಂದಿಗೆ ಬೆರೆತು 2018-2023ರಲ್ಲಿ ಎರಡು ಸಲ ಗೆದ್ದಿದ್ದಾರೆ.
ವಿಧಾನ ಪರಿಷತ್ ಚುನಾವಣೆಯಲ್ಲಿ ಸಹೋದರ ಚನ್ನರಾಜ ಹಟ್ಟಿಹೊಳಿ ಅವರನ್ನು ಗೆಲ್ಲಿಸುವ ಮೂಲಕ ಜಿಲ್ಲೆಯಲ್ಲಿ ತಮ್ಮದೇ ಆದ ಹಿಡಿತ ಸಾಧಿಸಿದ್ದಾರೆ. ಪಕ್ಷದಲ್ಲಿ ದೇಶದ ದೆಹಲಿವರೆಗೂ ತಮ್ಮ ಪ್ರಭಾವ ಬೆಳೆಸಿಕೊಂಡಿದ್ದಾರೆ.