Advertisement

ಪ್ರಭಾವಿಗಳ ಭವಿಷ್ಯ ಇಂದು ನಿರ್ಧಾರ

03:18 PM May 12, 2019 | Team Udayavani |

ಚನ್ನಪಟ್ಟಣ: ಕಳೆದ ಹದಿನೈದು ದಿನಗಳಿಂದ ತೀವ್ರ ಕುತೂಹಲ ಕೆರಳಿಸಿದ್ದ ಬೆಂಗಳೂರು ಹಾಲು ಒಕ್ಕೂಟದ ಚುನಾವಣೆ ಭಾನುವಾರ ನಡೆಯಲಿದೆ. ಶತಾಯ ಗತಾಯ ಗೆಲ್ಲಬೇಕೆಂದು ಜಿದ್ದಿಗೆ ಬಿದ್ದಿರುವ ತಾಲೂಕು ಜೆಡಿಎಸ್‌ ಪಕ್ಷದ ಇಬ್ಬರು ಪ್ರಭಾವಿ ಮುಖಂಡರ ಭವಿಷ್ಯವನ್ನು ಮತದಾರರು ನಿರ್ಧಾರಿಸಲಿದ್ದಾರೆ.

Advertisement

ಹಾಲಿ ನಿರ್ದೇಶಕ ಎಸ್‌.ಲಿಂಗೇಶ್‌ಕುಮಾರ್‌ ಹಾಗೂ ಮಾಜಿ ನಿರ್ದೇಶಕ ಜಯಮುತ್ತು ಅವರು ಸ್ಪರ್ಧಾಕಣದಲ್ಲಿದ್ದು, ಕಳೆದ ಬಾರಿಯೂ ಈ ಇಬ್ಬರೇ ನೇರ ಸ್ಪರ್ಧಿಗಳಾಗಿದ್ದರು. ತಾಲೂಕಿನ 147 ಹಾಲು ಉತ್ಪಾದಕರ ಸಂಘಗಳ ಅಧ್ಯಕ್ಷರುಗಳು ಮತದಾನದ ಅವಕಾಶ ಪಡೆದುಕೊಂಡಿದ್ದಾರೆ. ಇವರೆಲ್ಲರೂ ನೂತನ ನಿರ್ದೇಶಕರನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ. ಸಂಜೆ 4 ಗಂಟೆಯ ವರೆಗೆ ಮತದಾನ ನಡೆಯಲಿದ್ದು, 4ರ ನಂತರ ಎಣಿಕೆ ನಡೆದು, ಫಲಿತಾಂಶವೂ ಸಹ ಪ್ರಕಟವಾಗಲಿದೆ.

ಎರಡು ಅವಧಿಯಲ್ಲೂ ಆಯ್ಕೆ: ಎರಡು ಅವಧಿಯಲ್ಲಿ ಎಸ್‌.ಲಿಂಗೇಶ್‌ಕುಮಾರ್‌ ನಿರ್ದೇಶಕರಾಗಿ ಆಯ್ಕೆಯಾಗಿದ್ದರು. ಜಯಮುತ್ತು ಕಳೆದ ಅವಧಿಯಲ್ಲಿ ಆಯ್ಕೆಯಾಗಿ, ಆಯ್ಕೆಯಾಗಲು ಬೇಕಿರುವ ಹಾಲು ಉತ್ಪಾದಕರ ಸಂಘಗಳ ನಿಯಮಗಳನ್ನು ಪಾಲಿಸದ ಹಿನ್ನೆಲೆಯಲ್ಲಿ ಕೆಲವೇ ತಿಂಗಳು ನಿರ್ದೇಶಕ ಸ್ಥಾನದಿಂದ ವಂಚಿತರಾಗಬೇಕಾಯಿತು. ನ್ಯಾಯಾಲಯ ಅವರ ಆಯ್ಕೆಯನ್ನು ವಜಾಗೊಳಿಸಿ ಮತ್ತೂಮ್ಮೆ ಮರುಚುನಾವಣೆ ನಡೆಸುವಂತೆ ಚುನಾವಣಾಧಿಕಾರಿಗಳಿಗೆ ಸೂಚಿಸಿತ್ತು. ನಂತರ ನಡೆದ ಚುನಾವಣೆಯಲ್ಲಿ ಎಸ್‌.ಲಿಂಗೇಶ್‌ ಕುಮಾರ್‌ ಆಯ್ಕೆಗೊಂಡಿದ್ದರು.

ಮುಂದುವರಿದ ಜಿದ್ದಾಜಿದ್ದಿ: ಕಳೆದ ಬಾರಿಯ ಚುನಾವಣೆಯಲ್ಲಿ ಆರಂಭವಾದ ಜಿದ್ದಾಜಿದ್ದಿ, ಈ ಬಾರಿಯೂ ಮುಂದುವರಿದಿದೆ. ತಾಲೂಕು ಜೆಡಿಎಸ್‌ನಲ್ಲಿ ಬಣ ರಾಜಕಾರಣ ಸೃಷ್ಟಿಸುತ್ತಿರುವ ಬಮೂಲ್ ವಿಚಾರವನ್ನು ಸರಿಪಡಿಸಲು ವರಿಷ್ಠರಿಗೆ ಮನಸ್ಸಿಲ್ಲ. ಶಕ್ತಿ ಇದ್ದವರು ಗೆದ್ದುಬನ್ನಿ ಎನ್ನುವ ಮೂಲಕ ಭಿನ್ನಮತಕ್ಕೆ ಪರೋಕ್ಷವಾಗಿ ಅವರೇ ಕಾರಣರಾಗುತ್ತಿದ್ದಾರೆ ಎನ್ನುವ ಮಾತುಗಳು ಕಳೆದ ಬಾರಿಯಿಂದಲೂ ಇವೆ, ಆದು ಈ ಬಾರಿಯೂ ಮರುಕಳಿಸಿದೆ.

ಈ ಬಾರಿಯೂ ಎರಡು ಬಣಗಳ ಸೃಷ್ಟಿ: ಸ್ಪರ್ಧಿಗಳಿಬ್ಬರನ್ನೂ ಕರೆಸಿ ಯಾರಿಗೆ ಟಿಕೆಟ್ ನೀಡಬೇಕು ಎನ್ನುವ ವಿಚಾರದಲ್ಲಿಯೂ ಸಹ ವರಿಷ್ಠರು ಸ್ಪಷ್ಟಪಡಿಸುವ ಗೋಜಿಗೆ ಹೋಗಿಲ್ಲ. ಪರಿಣಾಮ ತಾಲೂಕು ಜೆಡಿಎಸ್‌ನಲ್ಲಿ ಈ ಬಾರಿಯೂ ಎರಡು ಬಣಗಳ ಸೃಷ್ಟಿಯಾಗಿದೆ. ಜಿದ್ದಾಜಿದ್ದಿಗೆ ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಲು ಟೊಂಕಕಟ್ಟಿ ನಿಂತಿವೆ. ಮತದಾನ ಹೊಂದಿರುವ ಗ್ರಾಮಗಳಲ್ಲಿ ಎರಡೂ ಅಭ್ಯರ್ಥಿಗಳ ಪರ ಗುಂಪುಗಳು ಸೃಷ್ಪಿಸಯಾಗಿ ಮತಯಾಚನೆ ಮಾಡಿವೆ. ನೆರೆಯ ಕನಕಪುರ ಕ್ಷೇತ್ರದಲ್ಲಿ ಡಿಕೆ ಸಹೋದರರು ಅವಿರೋಧವಾಗಿ ನಿರ್ದೇಶಕರನ್ನು ಆಯ್ಕೆ ಮಾಡಿದ್ದಾರೆ. ಆದರೆ, ಸಿಎಂ ಕುಮಾರಸ್ವಾಮಿ ಕ್ಷೇತ್ರದಲ್ಲಿ ಮಾತ್ರ ಜಿದ್ದಾಜಿದ್ದಿ ಏರ್ಪಟ್ಟಿದೆ.

Advertisement

ಮತದಾರರಿಗೆ ಪ್ರವಾಸ ಭಾಗ್ಯ: ವಿಧಾನಸಭೆ ಚುನಾವಣೆಯನ್ನೂ ಮೀರಿಸುವಂತೆ ಬಮೂಲ್ ಚುನಾವಣೆಯಲ್ಲಿ ಕಾಂಚಾಣ ಸದ್ದುಮಾಡಿದೆ. ಹಣ, ಪ್ರವಾಸ ಭಾಗ್ಯ ಈಗಾಗಲೇ ಪ್ರಾಪ್ತಿಯಾಗಿವೆ. ಚುನಾವಣೆ ಹಕ್ಕನ್ನು ಅಧ್ಯಕ್ಷರಿಗೆ ನೀಡುವ ಸಭೆಯಿಂದ ಹಿಡಿದು, ಮತದಾನ ಆಗುವವರೆಗೂ ಸಂಪೂರ್ಣ ಖರ್ಚು ವೆಚ್ಚಗಳನ್ನು ಅಭ್ಯರ್ಥಿಗಳೇ ನೋಡಿಕೊಂಡಿದ್ದಾರೆ. ಯಾವುದೇ ಅದ್ಧೂರಿ, ಸದ್ದುಗದ್ದಲಿಲ್ಲದೇ ನಡೆಯುತ್ತಿದ್ದ ಚುನಾವಣೆ ಅಖಾಡದಲ್ಲಿ ಈ ಬಾರಿ ಲಕ್ಷಾಂತರ ರೂ.ಹಣ ಹರಿಯಲು ಅಭ್ಯರ್ಥಿಗಳ ಪ್ರತಿಷ್ಠೆಯೇ ಕಾರಣ ಎನ್ನಬಹುದಾಗಿದೆ. ಪ್ರತಿ ಮತಕ್ಕೆ 1.5 ಲಕ್ಷ ರೂ.ಗಳಿಂದ 2 ಲಕ್ಷ ರೂ.ವರೆಗೆ ದುಬಾರಿಯಾಗಿದೆ. ಮತದಾರರಿಗಿಂತ ಅಭ್ಯರ್ಥಿಗಳೇ ಈ ಹಣ ನಿಗದಿಪಡಿಸಿದ್ದಾರೆ ಎನ್ನುವುದು ಇಲ್ಲಿ ಗಮನಾರ್ಹ. ಅಲ್ಲದೆ, ಈ ಹಣದ ಪ್ರಮಾಣ ದುಪ್ಪಟ್ಟಾಗುವ ಮಾತುಗಳೂ ಸಹ ಈ ಹಿಂದೆ ಕೇಳಿ ಬಂದಿದ್ದವು.

ಬಮೂಲ್ ರಾಜಕಾರಣ ಇಂದು ಅಂತ್ಯ: ಕಳೆದ ಹದಿನೈದು ದಿನಗಳಿಂದ ನಡೆಯುತ್ತಿದ್ದ ಬಮೂಲ್ ರಾಜಕಾರಣ ಇದೀಗ ಅಂತ್ಯಗೊಳ್ಳುವ ಸಂದರ್ಭ ಎದುರಾಗಿದೆ. ಭಾನುವಾರ ಅಭ್ಯರ್ಥಿಗಳು ನಡೆಸಿದ ಶ್ರಮಕ್ಕೆ ಮತದಾರರು ಉತ್ತರ ನೀಡಲಿದ್ದಾರೆ. ಇಬ್ಬರೂ ಅಭ್ಯರ್ಥಿಗಳು ಸಮನಾಗಿ ಅಖಾಡವನ್ನು ರಂಗುಗೊಳಿಸಿದ್ದಾರೆ. ಎಲ್ಲ ಪಟ್ಟುಗಳನ್ನೂ ಹಾಕಿದ್ದಾರೆ. ಮತದಾರರು ಯಾರ ಬೆಂಬಲಿಸಲಿದ್ದಾರೆ ಎಂಬುದು ನಿಗೂಢವಾಗಿದೆ.

● ಎಂ.ಶಿವಮಾದು

 

Advertisement

Udayavani is now on Telegram. Click here to join our channel and stay updated with the latest news.

Next