Advertisement

ಬದುಕು ಆಚೆಗೂ ಈಚೆಗೂ ವ್ಯಾಪಿಸಿದ ಅನಂತ ಚೇತನ

12:50 AM Dec 11, 2020 | mahesh |

ಝೆನ್‌ ಗುರು ಇಕ್ಯುನ ಅಂತ್ಯಕಾಲ ಸನ್ನಿಹಿತವಾಗಿತ್ತು. ಅವನೋ, ಇಡೀ ಬದುಕನ್ನು ತುಂಟಾಟವಾಗಿ ಕಂಡವ. ಈಗ ತನ್ನ ಶಿಷ್ಯರನ್ನು ಹತ್ತಿರ ಕರೆದು, “ಸಾಯುವ ಹೊಸ ವಿಧಾನ ಇದ್ದರೆ ಹೇಳಿ. ಬಹುತೇಕ ಎಲ್ಲರೂ ಹಾಸಿಗೆಯ ಮೇಲೆ ಮಲಗಿದ್ದು ಸಾವನ್ನಪ್ಪುತ್ತಾರೆ. ಅಂಥದ್ದೆಲ್ಲ ಆಗಲಿಕ್ಕಿಲ್ಲ. ಹೊಸ ವಿಧಾನ ಆಗಬೇಕು, ಹೇಳಿ’ ಎಂದ.

Advertisement

ಶಿಷ್ಯರಿಗೆ ಇಕ್ಯುನ ಹುಚ್ಚಾಟಗಳು, ತುಂಟಾಟಗಳೆಲ್ಲ ಗೊತ್ತಿದ್ದವು. ಹೊಸ ರೀತಿ ಯಲ್ಲಿ ಸಾಯುವುದು ಎಂದರೇನಪ್ಪಾ. ಮರಣ ಅಂದರೆ ಮರಣ, ಹೇಗೆ ಮರಣ ಎಂಬುದರಿಂದ ಪುರುಷಾರ್ಥವೇನಾದರೂ ಸಾಧನೆಯಾಗಲುಂಟೆ ಎಂದು ಆಲೋಚಿಸಿ ದರು. ಆದರೆ ಉತ್ತರಿಸಲೇ ಬೇಕು, ಗುರುವಲ್ಲವೇ!

“ಸಲಹೆಗಳು ಇವೆಯೇ?’ ಇಕ್ಯು ಕೇಳಿದ. ಒಬ್ಬ ಶಿಷ್ಯ ಹೇಳಿದ, “ಪದ್ಮಾಸನ ಹಾಕಿ ಕುಳಿತ ಮುದ್ರೆಯಲ್ಲಿ ಸಾವನ್ನಪ್ಪು ವುದು ಪ್ರಾಯಃ ಹೊಸ ಭಂಗಿ!'”ಹೇ ಇಲ್ಲ ಇಲ್ಲ, ಅದೇ ಭಂಗಿಯಲ್ಲಿ ಮರಣಿಸಿದ ಹಲವು ಗುರುಗಳು ನನಗೆ ಗೊತ್ತು. ವಿನೂತನ ವಿಧಾನ ಆಗಬೇಕು’ ಇಕ್ಯು ಆ ಸಲಹೆಯನ್ನು ನಿರಾಕರಿಸಿದ.

“ನಿಂತುಕೊಂಡು ಮರಣಿಸುವ ವಿಧಾನ ವನ್ನು ಅನುಸರಿಸಬಹುದೇನೋ’ ಇನ್ನೊಬ್ಬ ಶಿಷ್ಯನ ಸಲಹೆ ತೂರಿಬಂತು. ಆದರೆ ಶಿಷ್ಯರಲ್ಲೇ ಒಬ್ಬ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ. “ನಿಂತು ಮರಣವನ್ನಪ್ಪಿದ ಗುರುಗಳೊಬ್ಬರನ್ನು ನನಗೆ ಗೊತ್ತಿದೆ, ಅದೇನೂ ಹೊಸತಲ್ಲ. ಹಾಗೆ ಸತ್ತರೆ ನೀವು ಎರಡನೆಯವರಾಗುತ್ತೀರಿ’. ಹಾಗಾಗಿ ಇಕ್ಯು ಆ ಸಲಹೆಯನ್ನೂ ನಿರಾಕರಿಸಿದ.

ಇಷ್ಟಾದ ಬಳಿಕ ಇನ್ನೊಬ್ಬನ ಸಲಹೆ ಬಂತು, “ಗುರುಗಳೇ, ಶೀರ್ಷಾಸನ ಭಂಗಿಯಲ್ಲಿ ಸಾಯುವುದು ಇಷ್ಟರ ವರೆಗೆ ಎಲ್ಲೂ ಆಗಿರಲಿಕ್ಕಿಲ್ಲ. ಅದನ್ನು ಪ್ರಯೋಗಿಸಿ ನೋಡಬಹುದು.’

Advertisement

ಇಕ್ಯುವಿಗೆ ಅದು ಸರಿ ಎನಿಸಿತು. “ಸಲಹೆ ಎಂದರೆ ಇದು! ನಿನಗೆ ಬಹಳ ಕೃತಜ್ಞತೆಗಳು’ ಎಂದು ಹೇಳಿದ ಇಕ್ಯು ತಲೆ ಕೆಳಗಾಗಿ ನಿಂತುಕೊಂಡು ಸತ್ತೇ ಹೋದ!

ಇಕ್ಯು ಹಾಗೆಯೇ ಸತ್ತನೇನೋ ನಿಜ. ಆದರೆ ಪೀಕಲಾಟಕ್ಕಿಟ್ಟುಕೊಂಡದ್ದು ಶಿಷ್ಯರಿಗೆ. ಹಾಸಿಗೆಯಲ್ಲಿ ಮಲಗಿದ್ದು ಗತಿಸಿದವರು, ಪದ್ಮಾಸನ ಭಂಗಿಯಲ್ಲಿ ಕುಳಿತು ಮರಣಿಸಿದವರಿಗೆ ಹೇಗೆ ಅಂತಿಮ ವಿಧಿವಿಧಾನ ನೆರವೇರಿಸಬೇಕು ಎಂಬುದು ಎಲ್ಲರಿಗೂ ತಿಳಿದಿತ್ತು. ಆದರೆ ತಲೆಕೆಳಗಾಗಿ ನಿಂತು ಸತ್ತವರಿಗೆ ಹೇಗೆ ಎಂಬುದು ಯಾರಿಗೂ ಗೊತ್ತಿರಲಿಲ್ಲ. ಯಾರಿಗೂ ಪರಿಹಾರ ಸಿಗಲಿಲ್ಲ. ಗುರು ಇಕ್ಯುವನ್ನೇ ಕೇಳಬಹುದು ಎಂದುಕೊಂಡು ಆತ ಸತ್ತಿದ್ದಾನೆಯೋ ಇಲ್ಲವೋ ಎಂದು ತಿಳಿಯಲು ಹಲವು ರೀತಿಗಳಲ್ಲಿ ಪರೀಕ್ಷಿಸಿದರು. ಮೂಗಿನ ಬಳಿ ಕನ್ನಡಿ ಇರಿಸಿದರು, ನಾಡಿ ಮಿಡಿತ ಪರೀಕ್ಷಿಸಿದರು… ಆತ ಸತ್ತು ಹೋಗಿದ್ದ!

ಅಷ್ಟರಲ್ಲಿ ಅಲ್ಲಿ ಸೇರಿದ್ದ ಒಬ್ಬ ಹೇಳಿದ, “ಹತ್ತಿರದ ಬೆಟ್ಟದ ಮೇಲಿನ ಗುರುಮಠದಲ್ಲಿ ಈ ಇಕ್ಯುವಿನ ಹಿರಿಯಕ್ಕ ಇದ್ದಾಳೆ. ಆಕೆಗೆ ಇಂಥದ್ದರ ಬಗ್ಗೆ ತಿಳಿದಿರಲಿಕ್ಕೂ ಸಾಕು’. ಸರಿ, ಆ ಸನ್ಯಾಸಿನಿಗೆ ಕರೆ ಹೋಯಿತು.

ಆಕೆ ಧಾವಿಸಿ ಬಂದವಳೇ ಇಕ್ಯುವನ್ನು ಗದರಿದಳು, “ಬದುಕಿಡೀ ತುಂಟಾಟ, ಈಗಲೂ ಅದೇ ಬುದ್ಧಿ ಬೇಡ. ಹಾಸಿಗೆಯಲ್ಲಿ ಮಲಗುತ್ತೀಯಾ ಇಲ್ಲವಾ’. ಆಕೆ ಇಷ್ಟು ಹೇಳಿದ್ದೇ ತಡ, ಇಕ್ಯು ವಿಧೇಯ ಮಗುವಿನ ಹಾಗೆ ಶೀರ್ಷಾಸನ ಭಂಗಿಯಿಂದ ಹೊರ ಬಂದ, ಹಾಸಿಗೆಯಲ್ಲಿ ಮಲಗಿ ಸತ್ತ!
ಬದುಕು ಅನಂತ ಎಂಬುದನ್ನು ತಿಳಿದವ ರಿಗೆ ಮರಣ ಎಂದರೆ ಏನೂ ಅಲ್ಲ. ಅದು ದೇಹದ ಅಂತ್ಯ ಮಾತ್ರ, ಚೇತನದ್ದಲ್ಲ. ನಿರ್ದಿಷ್ಟವಾಗಿ ಇಕ್ಯುನಂಥವರು ಇನ್ನೊಮ್ಮೆ ಜೀವನ್ಮರಣಗಳ ಚಕ್ರವನ್ನು ಪ್ರವೇಶಿಸದೆ ವಿಶ್ವಚೇತನದಲ್ಲಿ ಶಾಶ್ವತವಾಗಿ ಐಕ್ಯವಾಗು ತ್ತಾರೆ, ಹಾಗಾಗಿ ಅವರಿಗೆ ಅದೊಂದು ಸಂಭ್ರಮ.

(ಸಾರ ಸಂಗ್ರಹ)

Advertisement

Udayavani is now on Telegram. Click here to join our channel and stay updated with the latest news.

Next