Advertisement

ವಾಣಿವಿಲಾಸ್‌ ಆಸ್ಪತ್ರೆಯಲ್ಲಿ 5.9 ಕೆ.ಜಿ. ತೂಕದ ಶಿಶು ಜನನ

12:45 AM Jan 22, 2020 | Lakshmi GovindaRaj |

ಬೆಂಗಳೂರು: ನಗರದ ವಾಣಿವಿಲಾಸ ಆಸ್ಪತ್ರೆ ಯಲ್ಲಿ ಮೊದಲ ಬಾರಿಗೆ 5.9 ಕೆ.ಜಿ. ತೂಕದ ಶಿಶು ಜನಿಸಿದ್ದು, ಎಲ್ಲರನ್ನು ಅಚ್ಚರಿಗೊಳಿಸಿದೆ. ಪಶ್ಚಿಮ ಬಂಗಾಳದ ಡಾರ್ಜಲಿಂಗ್‌ ಮೂಲದ ಸರಸ್ವತಿ ಮಂಗೂರ್‌ ಮತ್ತು ಯೋಗೇಶ್‌ ಮಂಗೂರ್‌ ದಂಪತಿಗಳಿಗೆ ಜನಿಸಿದ ಮಗು ಇದಾಗಿದ್ದು, ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಿದ್ದು, ತಾಯಿ ಮತ್ತ ಮಗು ಇಬ್ಬರು ಆರೋಗ್ಯವಾಗಿದ್ದಾರೆ.

Advertisement

ಈ ದಂಪತಿ ಯಲಹಂಕ ಬಳಿ ವಾಸಿಸುತ್ತಿದ್ದರಿಂದ ಸರಸ್ವತಿಯು ಅಲ್ಲಿನ ಯಲಹಂಕ ಓಲ್ಡ್‌ ಟೌನ್‌ ಬಳಿಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮಗು ದಪ್ಪ ಇರುವುದರಿಂದ ಹೆರಿಗೆ ಕಷ್ಟ ಎಂದು ವೈದ್ಯರು ಜ. 17ರಂದು ವಾಣಿವಿಲಾಸ ಆಸ್ಪತ್ರೆಗೆ ವರ್ಗಾಹಿಸಿದ್ದರು. ಮಗು ದಪ್ಪ ಇದ್ದ ಕಾರಣ ಸಹಜ ಹೆರಿಗೆ ಸಾಧ್ಯವಾಗದೇ ವೈದ್ಯರು 18ರಂದು ಬೆಳಗ್ಗೆ 7.46ಕ್ಕೆ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ. ಗೀತಾ ಶಿವ ಮೂರ್ತಿ, ಸಾಮಾನ್ಯವಾಗಿ ಆರೋಗ್ಯಕರವಾಗಿ ಜನಿಸುವ ಯಾವುದೇ ಶಿಶು 2.5 ರಿಂದ 3 ಕೆ.ಜಿ. ತೂಕ ಹೊಂದಿರುತ್ತದೆ. ಅಪರೂಪಕ್ಕೊಮ್ಮೆ 3.5ರಿಂದ 4 ಕೆ.ಜಿ. ತೂಕದ ಶಿಶುಗಳು ಜನಿಸಿ ರು ವುದೂ ಉಂಟು. ಆದರೆ ವಾಣಿವಿಲಾಸ ಆಸ್ಪತ್ರೆಯಲ್ಲಿ ಇದೇ ಮೊದಲ ಬಾರಿಗೆ 5.9 ಕೆ.ಜಿ. ತೂಕದ ಗಂಡು ಶಿಶು ಜನಿಸಿದೆ.

ತಾಯಿಗೆ ಮಧುಮೇಹ, ರಕ್ತದೊತ್ತಡ ಇತರೆ ಸಮಸ್ಯೆ ಇದ್ದಾಗ ಈ ರೀತಿಯ ಮಗು ಜನಿಸುವ ಸಾಧ್ಯತೆಗಳು ಹೆಚ್ಚು. ಆದರೆ ಈ ಪ್ರಕರಣದಲ್ಲಿ ತಾಯಿ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ಮಗುವಿನ ತೂಕ ಹೆಚ್ಚಿರುವುದರಿಂದ ಮುಂದೆ ಯಾವುದೇ ಸಮಸ್ಯೆ ಎದುರಾಗದಿರಲಿ ಎಂಬ ಕಾರಣಕ್ಕೆ ಕೆಲ ಪರೀಕ್ಷೆಗಳನ್ನು ಮಾಡಬೇಕಿದೆ ಎಂದು ತಿಳಿಸಿದ್ದಾರೆ. ಇನ್ನು ಈ ಮಗುವನ್ನು ನೋಡಲು ಆಸ್ಪತ್ರೆ ಸಿಬ್ಬಂದಿ ಹಾಗೂ ವಿಕ್ಟೋರಿಯಾ ಆಸ್ಪತ್ರೆ ರೋಗಿಗಳ ಸಂಬಂಧಿಕರು ಮುಗಿಬೀಳುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next