ಹೊಸದಿಲ್ಲಿ: ಇತ್ತೀಚೆಗೆ ನಡೆದ ದಿಲ್ಲಿ ಚುನಾವಣೆಯ ಪ್ರಚಾರದ ವೇಳೆ, ಕೃತಕ ಬುದ್ಧಿಮತ್ತೆ ಆಧಾರಿತ ಡೀಪ್ ಫೇಕ್ ಎಂಬ ತಂತ್ರಜ್ಞಾನಾಧಾರಿತ ವೀಡಿಯೋಗಳನ್ನು ಬಿಜೆಪಿಯು ಹರಿಬಿಟ್ಟಿರುವುದು ಭವಿಷ್ಯದಲ್ಲಿ ಈ ತಂತ್ರಜ್ಞಾನ ದುರ್ಬಳಕೆಯಾಗುವ ಭೀತಿಯನ್ನು ತಂದಿತ್ತಿದೆ.
ಈ ತಂತ್ರಜ್ಞಾನದ ಮೂಲಕ, ಯಾವುದೇ ವ್ಯಕ್ತಿಯ ಮುಖಚಹರೆ, ಧ್ವನಿಯನ್ನು ದಾಖಲಿಸಿಕೊಂಡು ಆತ ಮಾಡದೇ ಇರುವ ಚಟುವಟಿಕೆಗಳನ್ನು ಅಥವಾ ಆತ ಹೇಳದೇ ಇರುವ ಮಾತುಗಳನ್ನು ಆಡಿರುವಂಥ ವೀಡಿಯೋ ತುಣುಕುಗಳನ್ನು ಸೃಷ್ಟಿಸಬಹುದಾಗಿದೆ.
ದಿಲ್ಲಿಯ ಚುನಾವಣೆ ವೇಳೆ ದಿಲ್ಲಿ ಬಿಜೆಪಿ ಅಧ್ಯಕ್ಷ ಮನೀಶ್ ತಿವಾರಿ ಅವರ ಎರಡು ವೀಡಿಯೋಗಳು ಬಿಡುಗಡೆಯಾಗಿದ್ದವು. ಒಂದರಲ್ಲಿ ಮನೀಶ್ ಅವರು, ಹರ್ಯಾಣೀ ಭಾಷೆಯಲ್ಲಿ ಮಾತನಾಡಿದ್ದರೆ, ಮತ್ತೂಂದರಲ್ಲಿ ಅವರು ಇಂಗ್ಲೀಷ್‌ನಲ್ಲಿ ಮಾತನಾಡಿದ್ದರು. ಆದರೆ, ಇವೆರಡೂ ‘ಬದಲಾಯಿಸಲ್ಪಟ್ಟ’ ವೀಡಿಯೋಗಳು ಎಂದು ‘ವೈಸ್’ ಎಂಬ ವೀಡಿಯೋ ಅನಾಲಿಸಿಸ್ ಸಂಸ್ಥೆ ತಿಳಿಸಿದೆ.
ಕಂಪನಿ ಹೇಳುವ ಪ್ರಕಾರ, ಮನೀಶ್ ತಿವಾರಿ ಮಾತನಾಡಿದ್ದು ಕೇವಲ ಹಿಂದಿಯಲ್ಲಿ ಮಾತ್ರ. ಆ ಮೂಲ ವೀಡಿಯೋವನ್ನಿಟ್ಟುಕೊಂಡು ಡೀಪ್ ಫೇಕ್ ತಂತ್ರಜ್ಞಾನ ಬಳಸಿ ಅವರು ಹರ್ಯಾಣೀ ಹಾಗೂ ಇಂಗ್ಲೀಷ್‌ನಲ್ಲಿ ಮಾತನಾಡಿದ ರೀತಿಯಲ್ಲಿ ವೀಡಿಯೋವನ್ನು ಬದಲಾಯಿಸಲಾಗಿದೆ. ಈ ತಂತ್ರಜ್ಞಾನದ ಮತ್ತೂಂದು ವಿಶೇಷತೆಯೆಂದರೆ, ಇದರ ಸಾಚಾತನವನ್ನು ಸುಲಭವಾಗಿ ಪತ್ತೆ ಹಚ್ಚಲಾಗದು.
ಇದೇ ಈಗ ಹೊಸ ಆತಂಕಕ್ಕೆ ಕಾರಣವಾಗಿದೆ. ಈ ತಂತ್ರಜ್ಞಾನ ಹೆಚ್ಚಾಗಿ ಚಾಲ್ತಿಗೆ ಬಂದರೆ, ಭವಿಷ್ಯದಲ್ಲಿ ಇದು ತಮಗಾಗದವರನ್ನು ವಿವಾದಾತ್ಮಕ ಘಟನೆ ಅಥವಾ ಹೇಳಿಕೆಗಳಲ್ಲಿ ಸಿಲುಕಿಸಲು ಬಳಸಬಹುದಾದ ಅಪಾಯವೂ ಇದೆ ಎಂಬ ಕಳವಳವನ್ನು ಆ್ಯಮ್‌ಸ್ಟರ್ ಡ್ಯಾಂನಲ್ಲಿರುವ ಸೈಬರ್ ಸೆಕ್ಯೂರಿಟಿ ಸಂಸ್ಥೆಯಾದ ಹೆನ್ರಿ ಅಜ್ಧರ್ ವ್ಯಕ್ತಪಡಿಸಿದ್ದಾರೆ.