ಮೈಸೂರು: ಅಂಚೆ ನೌಕರರ ಅನುಕೂಲಕ್ಕಾಗಿ ಕೇಂದ್ರ ಸರ್ಕಾರ ಶೀಘ್ರವೇ 7ನೇ ವೇತನ ಆಯೋಗದ ವರದಿಯನ್ನು ಜಾರಿಗೊಳಿಸಬೇಕೆಂದು ಆಗ್ರಹಿಸಿ ಅಖೀಲ ಭಾರತ ಗ್ರಾಮೀಣ ಅಂಚೆ ಸೇವಕರ ಸಂಘದ ಸದಸ್ಯರು ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ.
ನಗರದ ಯಾದವಗಿರಿ ಅಂಚೆ ಕಚೇರಿ ಎದುರು ಜಮಾಯಿಸಿರುವ ಸಂಘದ ಸದಸ್ಯರು, ಕೇಂದ್ರ ಸರ್ಕಾರ ಅಂಚೆ ನೌಕರರ ಅನುಕೂಲಕ್ಕಾಗಿ ಕಮಲೇಶ್ಚಂದ್ರ ನೇತೃತ್ವದ ಸಮಿತಿ 7ನೇ ವೇತನ ಆಯೋಗ ನೀಡಿರುವ ವರದಿಯನ್ನು ಜಾರಿಗೊಳಿಸದೆ ತಾರತಮ್ಯ ನೀತಿ ಅನುಸರಿಸುತ್ತಿದೆ.
ಗ್ರಾಮೀಣ ಅಂಚೆ ಇಲಾಖೆ ನೌಕರರಿಗೆ 7ನೇ ವೇತನ ಆಯೋಗದ ಸವಲತ್ತುಗಳು ದೊರೆತು 20 ತಿಂಗಳ ಕಳೆದಿದ್ದರೂ ಅಂಚೆ ಇಲಾಖೆಗೆ ಬೆನ್ನೆಲುಬಾಗಿರುವ ಅಂಚೆ ಸೇವಕರ ವೇತನ ಮತ್ತು ಸೇವಾ ಸವಲತ್ತುಗಳು ನೀಡದೆ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿ ವಿವಿಧ ಘೋಷಣೆಗಳನ್ನು ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ದೇಶದಲ್ಲಿ ಅಂದಾಜು 2.60 ಲಕ್ಷಕ್ಕಿಂತ ಹೆಚ್ಚು ಜಿಡಿಎಸ್ ನೌಕರರು ಕಳೆದ 40 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದರೂ ಯಾವುದೇ ಸವಲತ್ತುಗಳನ್ನು ನೀಡಿಲ್ಲ. ನೌಕರರ ಸಮಸ್ಯೆಯನ್ನು ಬಗೆಹರಿಸುವ ಬಗ್ಗೆ ಹಲವು ಬಾರಿ ಪ್ರಧಾನ ಮಂತ್ರಿ,
ದೂರ ಸಂಪರ್ಕ ಸಚಿವರು ಸೇರಿದಂತೆ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೂಡಲೇ ಎಚ್ಚೆತ್ತು 7ನೇ ವೇತನ ಆಯೋಗದ ವರದಿಯನ್ನು ಜಾರಿಗೊಳಿಸಿ ನೌಕರರಿಗೆ ಅನುಕೂಲ ಕಲ್ಪಿಸಬೇಕಿದ್ದು, ನಮ್ಮ ಈ ಬೇಡಿಕೆ ಈಡೇರುವವರೆಗೂ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಅನಿರ್ದಿಷ್ಟಾವಧಿ ಮುಷ್ಕರದಲ್ಲಿ ಸಂಘದ ಅಧ್ಯಕ್ಷ ಸೋಮಶೇಖರ್, ಕಾರ್ಯದರ್ಶಿ ರವಿಚಂದ್ರ, ಖಜಾಂಚಿ ರಾಜು, ಗೌರವಾಧ್ಯಕ್ಷ ಮಂಚಯ್ಯ, ಮಂಜುನಾಥ್, ಸುದರ್ಶನ್, ಜಗನ್ನಾಥ್, ರಾಜಕುಮಾರ್, ಪೀರ್ ಪಾಷಾ, ಸಿದ್ದೇಗೌಡ, ಸುನೀತಾ, ಲತಾ, ಲೀಲಾವತಿ, ಚಂದ್ರು ಸೇರಿದಂತೆ ನೂರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.