ಬೆಂಗಳೂರು: ಕೋವಿಡ್ 19 ವೈರಸ್ ಅಮೆರಿಕ, ಸ್ಪೇನ್, ಬ್ರೆಜಿಲ್ ಸೇರಿದಂತೆ ವಿಶ್ವದ ಹಲವು ದೇಶಗಳನ್ನು ಕಂಗೆಡಿಸಿರುವ ನಡುವೆಯೇ ಇದೀಗ ಭಾರತದಲ್ಲಿಯೂ ಕೋವಿಡ್ ಕ್ಷಿಪ್ರವಾಗಿ ಹರಡತೊಡಗಿದೆ. ಅದರಲ್ಲಿಯೂ ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ದುಪ್ಪಟ್ಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇನ್ಮುಂದೆ ಕೋವಿಡ್ ಚಿಕಿತ್ಸೆ ರೋಗಿಗಳಿಗೆ ದುಬಾರಿಯಾಗುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಇದನ್ನೂ ಓದಿ:Covid19 ವೈರಸ್ ರೋಗಿಯ ಚಿಕಿತ್ಸೆಗೆ ತಗಲುವ ವೆಚ್ಚ ಎಷ್ಟು ಗೊತ್ತಾ? ಬೊಕ್ಕಸಕ್ಕೆ ಎಷ್ಟು ಹೊರೆ!
ರಾಜ್ಯದಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ 700 ದಾಟಿ ಹೋಗಿದೆ. ಇನ್ನು ಕೆಲವೇ ದಿನಗಳಲ್ಲಿ ಸೋಂಕಿತರ ಸಂಖ್ಯೆ ಹೀಗೆ ದ್ವಿಗುಣಗೊಳ್ಳುತ್ತಾ ಹೋದರೆ ಉಚಿತವಾಗಿ ಚಿಕಿತ್ಸೆ ಲಭ್ಯವಾಗುವುದು ಕಷ್ಟವಾಗಬಹುದು. ಇದರಿಂದಾಗಿ ಸರ್ಕಾರ ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡಲಿದೆ ಎಂದು ಮೂಲಗಳು ಹೇಳಿವೆ. ಒಂದು ವೇಳೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲು ರಾಜ್ಯ ಸರ್ಕಾರ ಹಸಿರು ನಿಶಾನೆ ತೋರಿದರೆ ಕೋವಿಡ್ 19 ಸೋಂಕಿತರು ದುಬಾರಿ ಬೆಲೆ ತೆರಬೇಕಾಗಲಿದೆ ಎಂದು ವರದಿ ವಿವರಿಸಿದೆ.
ಈಗಾಗಲೇ ವರದಿಯಾಗಿರುವಂತೆ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗೆ ಚಿಕಿತ್ಸೆ ಪಡೆಯಲು ಅಂದಾಜು 3ರಿಂದ 4 ಲಕ್ಷ ರೂಪಾಯಿ ವ್ಯಯಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಕೋವಿಡ್ ರೋಗಿಗಳ ಸಂಖ್ಯೆ ಹೆಚ್ಚಾಗುವ ಜತೆಗೆ ಚಿಕಿತ್ಸೆಯ ವೆಚ್ಚವೂ ದುಬಾರಿಯಾಗಲಿದೆ ಎಂದು ವರದಿಯೊಂದು ತಿಳಿಸಿದೆ.