ಬೆಂಗಳೂರು: ಕಾರ್ಮಿಕರಿಗೆ ಕನಿಷ್ಠ ವೇತನ 18 ಸಾವಿರ ರೂ. ನಿಗದಿಪಡಿಸುವುದು, ಅಸಂಘಟಿತ ಕಾರ್ಮಿಕರಿಗೆ ಭವಿಷ್ಯನಿಧಿ ಜಾರಿಗೊಳಿಸುವುದು ಸೇರಿ ಹಲವು ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಸಿಐಟಿಯು ಕಾರ್ಯಕರ್ತರು ಮಂಗಳವಾರ ಸ್ವಾತಂತ್ರ್ಯ ಉದ್ಯಾನದಲ್ಲಿ ಅಹೋರಾತ್ರಿ ಧರಣಿ ಆರಂಭಿಸಿದರು.
ಅಂಗನವಾಡಿ ನೌಕರರು, ಬಿಸಿಯೂಟ ನೌಕರರು, ಗ್ರಾಮ ಪಂಚಾಯಿತಿ ನೌಕರರು ಸೇರಿ ಸುಮಾರು 25 ರಿಂದ 30 ಸಾವಿರಕ್ಕೂ ಹೆಚ್ಚು ಕಾರ್ಮಿಕರು ಧರಣಿಯಲ್ಲಿ ಪಾಲ್ಗೊಂಡಿದ್ದು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ ಸ್ಥಳಕ್ಕೆ ಆಗಮಿಸಿ ಮನವಿ ಪತ್ರ ಸ್ವೀಕರಿಸಿದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಸ್ಥಳಕ್ಕೆ ಬರಬೇಕು ಎಂದು ಪ್ರತಿಭಟನಾಕಾರರು ಪಟ್ಟುಹಿಡಿದಿದ್ದಾರೆ.
ಇದಕ್ಕೂ ಮುನ್ನ ಮಂಗಳವಾರ ಬೆಳಗ್ಗೆ 10 ಗಂಟೆಗೆ ಬೆಂಗಳೂರು ಸಿಟಿ ರೈಲು ನಿಲ್ದಾಣದಲ್ಲಿ ಜಮಾವಣೆಗೊಂಡ ಕಾರ್ಮಿಕರು ಅಲ್ಲಿಂದ ಆನಂದರಾವ್ ವೃತ್ತದ ಮಾರ್ಗವಾಗಿ ಮೆರವಣಿಗೆಯಲ್ಲಿ ಬಂದು ಮಧ್ಯಾಹ್ನ 12ರ ಹೊತ್ತಿಗೆ ಸ್ವಾತಂತ್ರ್ಯ ಉದ್ಯಾನ ತಲುಪಿದರು.
ಈ ಸಂದರ್ಭದಲ್ಲಿ ರ್ಯಾಲಿ ಉದ್ದೇಶಿಸಿ ಮಾತನಾಡಿದ ಸಿಐಟಿಯು ಅಧ್ಯಕ್ಷೆ ಎಸ್. ವರಲಕ್ಷ್ಮಿ, “ಏಳನೇ ವೇತನ ಆಯೋಗದ ಶಿಫಾರಸ್ಸಿನಂತೆ ರಾಜ್ಯವ್ಯಾಪಿ ಎಲ್ಲಾ ಉದ್ದಿಮೆಗಳಿಗೆ 18 ಸಾವಿರ ಸಮಾನ ಕನಿಷ್ಠ ವೇತನ ನಿಗದಿಮಾಡುವ ಬದಲಿಗೆ ಕೌಶಲ್ಯರಹಿತ ಕಾರ್ಮಿಕರಿಗೆ ಕೇವಲ 9,100 ರೂ. ಕನಿಷ್ಠ ವೇತನವನ್ನು ರಾಜ್ಯ ಸರಕಾರ ನಿಗದಿಪಡಿಸಿದೆ.
ರಾಜ್ಯದ ಕಾರ್ಖಾನೆಗಳ ವಿಭಾಗದ ವಾರ್ಷಿಕ ಕೈಗಾರಿಕಾ ಸರ್ವೇಕ್ಷಣೆ ವರದಿಗಳ ಪ್ರಕಾರ 2009-10 ರಿಂದ 2012-13ರವರೆಗಿನ ನಾಲ್ಕು ವರ್ಷಗಳ ನಿವ್ವಳ ಮೌಲ್ಯ ವರ್ಧನೆಯಲ್ಲಿ ಮಾಲೀಕರ ಲಾಭದ ಪಲು ಶೇ.60.40ರಷ್ಟಿದ್ದರೆ, ಕಾರ್ಮಿಕರ ವೇತನ ಪಾಲು ಶೇ.16.45ರಷ್ಟಿದೆ. ಹೀಗಾಗಿ ಏಳನೇ ವೇತನ ಆಯೋಗದ ಶಿಫಾರಸ್ಸಿನಂತೆ ರಾಜ್ಯವ್ಯಾಪಿ ಎಲ್ಲಾ ಕಾರ್ಮಿಕರಿಗೆ ಕನಿಷ್ಠ ವೇತನ 18 ಸಾವಿರ ರೂ. ನೀಡಲು ಕ್ರಮ ಕೈಗೊಳ್ಳಬೇಕು,” ಎಂದು ಕಾರ್ಮಿಕರು ಒಕ್ಕೊರಲಿನಿಂದ ಒತ್ತಾಯಿಸಿದರು.
ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಸಚಿವೆ ಉಮಾಶ್ರೀಯವರು, ಕಾರ್ಮಿಕರ ಬೇಡಿಕೆಗಳನ್ನು ಆಲಿಸಿದರು. ತಮ್ಮ ಬೇಡಿಕೆಗಳ ಮನವಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು. ಇದಕ್ಕೆ ಒಪ್ಪದ ಸಿಐಟಿಯು ಅಧ್ಯಕ್ಷೆ ಎಸ್. ವರಲಕ್ಷ್ಮಿ, ಮುಖ್ಯಮಂತ್ರಿಯವರು ಸ್ಥಳಕ್ಕೆ ಬರುವವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಹೇಳಿ ಪ್ರತಿಭಟನಾಕಾರರೊಂದಿಗೆ ಧರಣಿ ಮುಂದುವರಿಸಿದರು.