ನವದೆಹಲಿ: ಒಡಿಶಾ ಸೇರಿದಂತೆ ಹಲವು ರಾಜ್ಯಗಳಲ್ಲಿ ಸೋಮವಾರ ಮಳೆ ಮುಂದುವರಿದಿದೆ.
ಒಡಿಶಾದ ಉತ್ತರ ಭಾಗದಲ್ಲಿ ಭಾರೀ ಮಳೆ ಸುರಿದಿದ್ದು, ಹಲವು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಸುಬ್ರನೇಖಾ ನದಿಯು ಉಕ್ಕಿ ಹರಿಯುತ್ತಿರುವುದರಿಂದಾಗಿ ನದಿ ತೀರದ ಸುಮಾರು 100 ಗ್ರಾಮಗಳು ಸಂಕಷ್ಟದಲ್ಲಿವೆ.
ಅನೇಕ ಗ್ರಾಮಗಳ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ ಎಂದು ರಾಜ್ಯದ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ರಾಜಸ್ಥಾನದಲ್ಲಿಯೂ ಶನಿವಾರದಿಂದ ಬಿಟ್ಟು ಬಿಡದಂತೆ ಮಳೆ ಸುರಿಯುತ್ತಿದೆ. ಕೋಟಾ, ಝಲಾವರ ಮತ್ತು ಸುತ್ತಲಿನ ಜಿಲ್ಲೆಗಳಲ್ಲಿ ಹೆಚ್ಚಿನ ನಷ್ಟವುಂಟಾಗಿದೆ. ಹಲವೆಡೆ ಕಾಲೇಜುಗಳಿಗೆ ಸೋಮವಾರ ರಜೆ ಘೋಷಿಸಲಾಗಿತ್ತು. ಕೋಟಾ ಆಣೆಕಟ್ಟಿನಿಂದ ಭಾರೀ ಪ್ರಮಾಣದಲ್ಲಿ ನೀರನ್ನು ಹೊರಹಾಕಲಾಗುತ್ತಿದೆ. ಕೋಟಾದ ಪ್ರಗತಿ ನಗರದಲ್ಲಿ ಮೊಸಳೆಯೊಂದು ಜನವಸತಿ ಕೇಂದ್ರಗಳಿಗೆ ನುಗ್ಗಿದ್ದು, ಜನರ ಆತಂಕಕ್ಕೆ ಕಾರಣವಾಗಿತ್ತು.
ಮಧ್ಯ ಪ್ರದೇಶದ ಅನೇಕ ಸ್ಥಳಗಳು ಸೋಮವಾರ ಭಾರೀ ಮಳೆಗೆ ಸಾಕ್ಷಿಯಾದವು. ಮೂರು ದಿನಗಳಿಂದ ಸುರಿದ ಮಳೆಯಿಂದಾಗಿ ಅನೇಕ ನದಿಗಳು ಉಕ್ಕಿ ಹರಿಯಲಾರಂಭಿಸಿದ್ದು, ಪ್ರವಾಹ ಸ್ಥಿತಿ ಉಂಟಾಗಿದೆ. ಮಳೆಯಿಂದಾಗಿ ರಸ್ತೆಗಳೂ ಕಾಣದಂತಾಗಿದ್ದರಿಂದಾಗಿ ವಾಹನ ಓಡಾಟವೂ ಸಂಪೂರ್ಣವಾಗಿ ತಗ್ಗಿತ್ತು.