ಮುಳಬಾಗಿಲು: ತಾಲೂಕಿನ ಕೆ.ಬೈಯಪಲ್ಲಿ ಮತ್ತು ತಾಯಲೂರು ಹೋಬಳಿಗಳ ವಿವಿಧ ಗ್ರಾಮಗಳ ಬಳಿ ಹಲವಾರು ವರ್ಷಗಳ ಹಿಂದೆ ನಿರ್ಮಿಸಿರುವ ತಂಗುದಾಣಗಳು ಶಿಥಿಲಗೊಂಡು ಪುಂಡಪೋಕರಿಗಳ ಅನೈತಿಕ ಚಟುವಟಿಕೆಗಳ ತಾಣವಾಗಿವೆ ಎಂಬ ಕೂಗು ವ್ಯಾಪಕವಾಗಿ ಕೇಳಿಬರುತ್ತಿದೆ.
ಮುಳಬಾಗಿಲು ಕೇಂದ್ರದಿಂದ ಕೆ.ಬಯ್ಯಪಲ್ಲಿ ಮತ್ತು ತಾಯಲೂರು ರಸ್ತೆಗಳಲ್ಲಿ ಸಾಕಷ್ಟು ಗ್ರಾಮಗಳು ಮುಖ್ಯ ರಸ್ತೆಗೆ ಹೊಂದಿಕೊಂಡಿದ್ದು, ಸರ್ಕಾರ ಹಲವಾರು ವರ್ಷಗಳ ಹಿಂದೆ ಪ್ರತಿಯೊಂದು ಗೇಟ್‌ಗಳಲ್ಲಿ ಪ್ರಯಾಣಿಕರು ಗಾಳಿ, ಮಳೆ, ಬಿಸಿಲಿ ನಿಂದ ಯಾವುದೇ ತೊಂದರೆಗೆ ಈಡಾಗದಿರಲೆಂಬ ಉದ್ದೇಶ ದಿಂದ ತಂಗುದಾಣಗಳನ್ನು ನಿರ್ಮಿಸಿದೆ.
ತಂಗುದಾಣದಲ್ಲಿ ಮದ್ಯದ ಬಾಟಲಿ: ತಾಲೂಕಿನ ನೆರ್ನೆಹಳ್ಳಿ, ಮಿಟ್ಟಹಳ್ಳಿ, ಅಗ್ರಹಾರ, ಶೆಟ್ಟಿಕಲ್ಲು ಗ್ರಾಮಗಳಿಗೆ ಸಂಪರ್ಕಕಲ್ಪಿಸುವ ಗೇಟ್‌ನಲ್ಲಿ ನಿರ್ಮಿಸಲಾಗಿರುವ ತಂಗುದಾಣಗಳು ಶಿಥಿಲಾವಸ್ಥೆ ತಲುಪಿದ್ದು, ತಂಗುದಾಣದಲ್ಲಿ ಗಿಡಗಂಟಿಗಳು ಬೆಳೆದಿವೆ. ಗೋಡೆಗಳಲ್ಲಿನ ಸಿಮೆಂಟ್ ಕಿತ್ತು ಬಂದು ಬೀಳುವ ಸ್ಥಿತಿಯನ್ನು ತಲುಪಿದೆ. ಮತ್ತೂಂದು ತಂಗುದಾಣದಲ್ಲಿ ಕೆಲವರು ಮದ್ಯದ ಬಾಟಲಿಗಳ ಚೂರುಗಳನ್ನು ಬಿಸಾಕಿದ್ದಾರೆ. ಇದರಿಂದ ಜನರು ತಂಗುದಾಣದ ಬಳಿ ಹೋಗಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣ ವಾಗಿದೆ.
ಭಯದ ನೆರಳು: ರಾತ್ರಿ ವೇಳೆ ಪುಂಡಪೋಕರಿಗಳು ಇದೇ ತಂಗುದಾಣದಲ್ಲಿ ಕುಳಿತು ಮದ್ಯಪಾನ ಮಾಡಿ ಮದ್ಯದ ಬಾಟಲಿ, ತಿಂಡಿ ತಿನಿಸುಗಳ ಪೊಟ್ಟ ಣಗಳ ಪ್ಲಾಸಿಕ್ಟ್ ಕವರ್‌ಗಳನ್ನು ಬಿಸಾಡಿರುವುದರಿಂದ ದುರ್ವಾಸನೆ ಬೀರುತ್ತಿದೆ. ಕುಳಿತುಕೊಳ್ಳಲು ಹಾಕಲಾದ ಕಲ್ಲಿನ ಚಪ್ಪಡಿಗಳನ್ನು ಮುರಿದು ಹಾಕಿರುವು ದರಿಂದ ಪ್ರಯಾಣಿಕರು, ವಾಹನ ಸವಾರರಿಗೆ ಯಾವುದೇ ರೀತಿಯ ಪ್ರಯೋಜನ ಇಲ್ಲದಂತಾಗಿದೆ.
ಅಲ್ಲದೇ, ಇಲ್ಲಿನ ಮುಖ್ಯ ರಸ್ತೆಯಿಂದ ಗ್ರಾಮಗಳಿಗೆ ಹೋಗಲು ಸುಮಾರು 1 ರಿಂದ 2 ಕಿ.ಮೀ. ದೂರ ಆಗುತ್ತದೆ. ರಾತ್ರಿ ಸಮಯದಲ್ಲಿ ಗೇಟ್ ಬಳಿ ವಿದ್ಯುದ್ಧೀಪ ಇಲ್ಲದಿರುವುದರಿಂದ ವಿಷ ಜಂತುಗಳು, ಕಳ್ಳರು ಮತ್ತು ಕಿಡಿಗೇಡಿಗಳ ಕಾಟದಿಂದ ಪ್ರಯಾಣಿಕರು ಒಂಟಿಯಾಗಿ ತಮ್ಮ ಗ್ರಾಮಗಳಿಗೆ ಭಯದಿಂದ ತೆರಳುವಂತಾಗಿದೆ.
ವಿದ್ಯುದ್ದೀಪವಿಲ್ಲದ ತಂಗುದಾಣ: ತಾಯಲೂರು ರಸ್ತೆಯ ಕನ್ನತ್ತ ಗೇಟ್ ಬಳಿಯ ಮೇಲಾಗಾಣಿ ಮತ್ತು ಕನ್ನತ್ತ ಗ್ರಾಮಗಳ ಪ್ರಯಾಣಿಕರಿಗಾಗಿ ನಿರ್ಮಿಸಿರುವ ತಂಗುದಾಣ ಸಹ ಶಿಥಿಲಾವ್ಯವಸ್ಥೆ ತಲುಪಿದ್ದು, ಪುಂಡ ಪೋಕರಿಗಳ ಅನೈತಿಕ ಚಟು ವಟಿಕೆ ತಾಣವಾಗಿದೆ. ರಾತ್ರಿ ಸಮಯದಲ್ಲಿ ಗೇಟ್‌ನಲ್ಲಿ ವಿದ್ಯುದ್ದೀಪ ಇಲ್ಲದ ಕಾರಣ ಈ ಗ್ರಾಮಗಳಿಗೆ ತೆರಳಲು ಪ್ರಯಾಣಿಕರು ತೊಂದರೆ ಅನುಭವಿಸಬೇಕಾಗಿದೆ ಎಂದು ಗ್ರಾಮದ ರಮೇಶ್ ಅಳಲು ತೋಡಿಕೊಂಡಿದ್ದಾರೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ತಂಗುದಾಣಗಳನ್ನು ನಿರ್ಮಾಣ ಮಾಡಬೇಕೆಂಬುದು ಸ್ಥಳೀಯರ ಒತ್ತಾಯವಾಗಿದೆ.
ಮುಳಬಾಗಿಲು ತಾಲೂಕಿನ ವಿವಿಧ ಗ್ರಾಮಗಳ ಬಸ್ ನಿಲ್ದಾಣಗಳಲ್ಲಿ ಶಿಥಿಲಾವಸ್ಥೆಯಲ್ಲಿರುವ ತಂಗುದಾಣಗಳ ಕುರಿತು ಲೋಕೋಪಯೋಗಿ ಅಧಿಕಾರಿಗಳಿಂದ ಮಾಹಿತಿ ಪಡೆದು ವಿಶೇಷ ಅನುದಾನದಲ್ಲಿ ಹೊಸ ತಂಗುದಾಣಗಳನ್ನು ನಿರ್ಮಿಸಲಾಗುವುದು.
ಹೆಚ್.ನಾಗೇಶ್, ಶಾಸಕ