Advertisement

ಕಿರಾಣಿ ಅಂಗಡಿಯಾತ ನೀಡಿದ ಐಡಿಯಾಗೆ ಈಗ ಕೋಟಿ ಬೆಲೆ…: ಇದು ಮೀಶೋ ಕಥೆ

05:07 PM Aug 11, 2022 | ಕೀರ್ತನ್ ಶೆಟ್ಟಿ ಬೋಳ |

2015ರ ಡಿಸೆಂಬರ್ ತಿಂಗಳ ಅದೊಂದು ದಿನ ಬೆಂಗಳೂರಿನ ಕಂಪನಿಯೊಂದರ ತಂಪಗಿನ ಎಸಿ ಕೋಣೆಯಲ್ಲಿ ಬೆಚ್ಚಗೆ ಕುಳಿತಿದ್ದ ಆ ಇಬ್ಬರು ಯುವಕರ ತಲೆಯಲ್ಲಿ ಹೊಸ ಯೋಜನೆಯೊಂದು ರೂಪುಗೊಂಡಿತ್ತು. ಇನ್ನು ಈ ಕಂಪನಿಯಲ್ಲಿ ದುಡಿದಿದ್ದು ಸಾಕು ಎಂದು ನಿರ್ಧರಿಸಿದ್ದ ಇಬ್ಬರೂ, ರಾಜೀನಾಮೆ ಪತ್ರ ನೀಡಿ ಹೊರ ಬಂದಿದ್ದರು. ಹಾಗೆ ಬಂದವರ ಕಣ್ಣಲ್ಲಿ ಸಾವಿರ ಕನಸಿತ್ತು. ದೊಡ್ಡದೇನೋ ಸಾಧಿಸುವ ಛಲವಿತ್ತು. ಅಂದುಕೊಂಡದ್ದನ್ನು ಮಾಡುತ್ತೇವೆಂಬ ಹಠವಿತ್ತು. ಹಾಗೆ ಅಂದು ಉತ್ತಮ ಸಂಬಳದ ಕೆಲಸವನ್ನು ಬಿಟ್ಟು ಸಾಹಸಕ್ಕೆ ಕೈ ಹಾಕಲು ಬಂದವರು ವಿದಿತ್ ಆತ್ರೇಯ್ ಮತ್ತು ಸಂಜೀವ್ ಬರ್ನ್ವಾಲ್. ಹಾಗೆ ಬಂದ ಇವರು ಆರಂಭಿಸಿದ್ದೇ ಇಂದು ಪ್ರಸಿದ್ದ ಪಡೆದಿರುವ ಶಾಪಿಂಗ್ ಆ್ಯಪ್ ಮೀಶೋ.

Advertisement

ಅಂದ ಹಾಗೆ ವಿದಿತ್ ಮತ್ತು ಸಂಜೀವ್ ಅಂದು ಮೊದಲು ಆರಂಭಿಸಿದ್ದು ಮೀಶೋ ಅಲ್ಲ. ಅದು ಫಶ್ ನಿಯರ್ ಎಂಬ ಆ್ಯಪ್. ಸ್ವಿಗ್ಗಿ, ಗ್ರೋಫರ್ಸ್ ರೀತಿಯ ಆ್ಯಪ್ ಇದು. ಈ ಅಪ್ಲಿಕೇಶನ್‌ ನಲ್ಲಿ ವಿವಿಧ ಸ್ಥಳಗಳಿಂದ ವಿವಿಧ ಮಳಿಗೆಗಳಿಗೆ ಸೈನ್ ಅಪ್ ಮಾಡುವುದು ಅವರ ಯೋಜನೆಯಾಗಿತ್ತು. ಇದರಲ್ಲಿ ಗ್ರಾಹಕರು ಈ ಅಂಗಡಿಗಳಿಂದ ಮೂರು ವಸ್ತುಗಳನ್ನು ಆಯ್ಕೆ ಮಾಡಬಹುದು. ಡೆಲಿವರಿ ಬಾಯ್ ಅವುಗಳನ್ನು ಮನೆಗೆ ತೆಗೆದುಕೊಂಡು ಹೋಗುತ್ತಾರೆ. ಗ್ರಾಹಕರು ತಮಗೆ ಬೇಕಾದ ವಸ್ತುವನ್ನು ಆರಿಸಿಕೊಳ್ಳಬಹುದು, ಉಳಿದದ್ದನ್ನು ಹಿಂತಿರುಗಿಸಬಹುದು. ಇದು ಫಶ್ ನಿಯರ್ ನ ಯೋಜನೆ.

ಆರಂಭದಲ್ಲಿ ವಿದಿತ್ ಮತ್ತು ಸಂಜೀವ್ ಎಲ್ಲಾ ಕೆಲಸ ಮಾಡುತ್ತಿದ್ದರು. ಪಟ್ಟಿ ಮಾಡಿದ ಅಂಗಡಿಗಳಿಗೆ ಹೋಗಿ ಅಲ್ಲಿ ಸಾಮಾಗ್ರಿಗಳ ಫೋಟೊ ತೆಗೆದು ತಮ್ಮ ಆ್ಯಪ್ ನಲ್ಲಿ ಅಪ್ಲೋಡ್ ಮಾಡಬೇಕಿತ್ತು. ಅಲ್ಲದೆ ಆರಂಭಿಕ ದಿನಗಳಲ್ಲಿ ವಿದಿತ್ ಅವರೇ ಡೆಲಿವರಿ ಹುಡುಗನ ಕೆಲಸವನ್ನೂ ಮಾಡುತ್ತಿದ್ದರು.

ಆದರೆ ಇಷ್ಟೆಲ್ಲಾ ಮಾಡಿದರೂ ಈ ಹುಡುಗರಿಗೆ ವ್ಯವಹಾರ ಕೈ ಹಿಡಿಯಲಿಲ್ಲ. ಜನರಿಗೆ ಇವರ ಆ್ಯಪ್ ಹಿಡಿಸಲಿಲ್ಲ. ದೊಡ್ಡ ದೊಡ್ಡ ಆ್ಯಪ್ ಗಳ ಭರಾಟೆಯಲ್ಲಿ ಲೋಕಲ್ ವಸ್ತುಗಳ ಈ ಫಶ್ ನಿಯರ್ ಕೆಲಸ ಮಾಡಲಿಲ್ಲ.

ಬದುಕು ಬದಲಾಯಿಸಿದ ಐಡಿಯಾ

Advertisement

ಹೀಗೆ ಒಂದು ದಿನ ಕೋರಮಂಗಲದ ಅಂಗಡಿಯೊಂದಕ್ಕೆ ತೆರಳಿದ ವಿದಿತ್ ಮತ್ತು ಸಂಜೀವ್ ಗೆ ಆ ಕಿರಾಣಿ ಅಂಗಡಿಯಾತ ಬಿಲಿಯನ್ ಡಾಲರ್ ಐಡಿಯವೊಂದನ್ನು ಆತನಿಗೆ ಗೊತ್ತಿಲ್ಲದೇ ನೀಡಿದ್ದ.

ಆ ಅಂಗಡಿಯಾತ ಈಗಾಗಲೇ ತಮ್ಮ ಉತ್ಪನ್ನಗಳನ್ನು ಸಾಮಾಜಿಕ ಮಾಧ್ಯಮ ವೇದಿಕೆ‌ಗಳಾದ ಫೇಸ್‌ಬುಕ್ ಮತ್ತು ವಾಟ್ಸಾಪ್ ಗುಂಪುಗಳ ಮೂಲಕ ಆನ್‌ಲೈನ್‌ನಲ್ಲಿ ಮಾರಾಟ ಮಾಡುತ್ತಿದ್ದರು, ಆ ಗ್ರೂಪ್ ಗಳಲ್ಲಿ ಅವರು ನಿಯಮಿತವಾಗಿ ಫೋಟೋಗಳನ್ನು ಅಪ್‌ಲೋಡ್ ಮಾಡಿ ಜನರಿಗೆ ಮಾಹಿತಿ ನೀಡುತ್ತಿದ್ದರು. ಗ್ರಾಹಕರು ಅಲ್ಲಿಂದಲೇ ಆರ್ಡರ್ ಮಾಡುತ್ತಾರೆ. ಅವರ ಉದ್ಯೋಗಿಗಳಲ್ಲಿ ಒಬ್ಬರು ವಿತರಣೆಯನ್ನು ಮಾಡುತ್ತಾರೆ, ಬಳಿಕ ಹಣವನ್ನು ಸಂಗ್ರಹಿಸುತ್ತಾರೆ. ಈ ರೀತಿ ಮಾಡಿದ್ದ ಅಂಗಡಿಯಾತ ತನ್ನ ವ್ಯವಹಾರದಲ್ಲಿ ಯಶಸ್ಸು ಕಂಡಿದ್ದ.

ಕಿರಾಣಿ ಅಂಗಡಿಯವನಿಂದ ಹೊಸ ಬ್ಯುಸಿನೆಸ್ ಐಡಿಯಾ ಪಡೆದ ಐಐಟಿ ಡೆಲ್ಲಿಯ ಪದವೀಧರರಾದ ವಿದಿತ್ ಮತ್ತು ಸಂಜೀವ್ ಹೊಸ ಸಾಫ್ಟೇವರ್ ತಯಾರಿಯಲ್ಲಿ ತೊಡಗಿದರು. ಹೀಗೆ ಫಶ್ ನಿಯರ್ ಎಂಬ ಆ್ಯಪ್ ಮೀಶೋ ಆಗಿ ಬದಲಾಯಿತು. ಮಾರಾಟಗಾರರಿಗೆ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ವಾಟ್ಸಾಪ್‌ ನಂತಹ ಸಾಮಾಜಿಕ ವೇದಿಕೆಗಳ ಮೂಲಕ ಸ್ವಂತ ಆನ್‌ಲೈನ್ ಸ್ಟೋರ್ ಅನ್ನು ರಚಿಸಲು ಇದು ಅವಕಾಶ ನೀಡಿತು. ಇವರಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತಾದರೂ ಆದಾಯ ಬರುತ್ತಿರಲಿಲ್ಲ. ಅವರು ಮೀಶೋಗೆ ಲಾಗ್ ಇನ್ ಮಾಡಲು ಯಾವುದೇ ಅಂಗಡಿಯವರು ತಮ್ಮ ಫೇಸ್‌ಬುಕ್ ಲಾಗ್-ಇನ್ ವಿವರಗಳನ್ನು ಬಳಸಬಹುದಾದ ವೇದಿಕೆಯನ್ನು ರಚಿಸಿದರು. ಕೆಲವು ಅಂಗಡಿಯವರು ಬಳಸುತ್ತಿದ್ದ ವಾಟ್ಸಾಪ್ ಮಾದರಿ ವ್ಯವಹಾರಕ್ಕಿಂತ ಭಿನ್ನವಾಗಿ, ಆಟೋ ಸ್ಟಾಕಿಂಗ್ ಮತ್ತು ದಾಸ್ತಾನು ನಿರ್ವಹಣೆಗೆ ಮೀಶೋ ಸಹಾಯ ಮಾಡಿತು. ಹೀಗಾಗಿ ಆರು ತಿಂಗಳ ಅವಧಿಯಲ್ಲಿ ಅವರು ಹತ್ತು ಸಾವಿರಕ್ಕೂ ಹೆಚ್ಚು ಅಂಗಡಿಗಳನ್ನು ನೋಂದಾಯಿಸಿ ಕೊಂಡಿದ್ದಾರೆ.

ತಮ್ಮ ಆ್ಯಪ್ ನಲ್ಲಿ ನೋಂದಾಯಿಸಿಕೊಂಡ ಹೆಚ್ಚಿನ ಅಂಗಡಿಗಳನ್ನು ಮಹಿಳೆಯರು ನಡೆಸುತ್ತಿದ್ದಾರೆಂದು ಅರಿತ ಮೀಶೋ ಸಂಸ್ಥಾಪಕರು, ಈ ಮಹಿಳೆಯರು ಮನೆಯಲ್ಲೇ ಕುಳಿತು ಮರು ಮಾರಾಟ (ರಿಸೆಲ್ಲರ್) ನಡೆಸುತ್ತಿರುವುದನ್ನೂ ಗಮನಿಸಿದರು. ಅದಲ್ಲದೆ ಅಂಗಡಿಯವರು ತಮ್ಮ ಸಾಮಾಗ್ರಿಗಳ ಬಗ್ಗೆ ಮೂರು ತಿಂಗಳಿಗೊಮ್ಮೆ ಅಪ್ಡೇಟ್ ಮಾಡಿದರೆ, ಈ ರಿಸೆಲ್ಲರ್ಸ್ ಪ್ರತಿದಿನ ತಮ್ಮ ಕ್ಯಾಟಲಾಗ್ ಬದಲಾಯಿಸುತ್ತಿದ್ದರು. ಹಲವು ಈ ಮರು ಮಾರಾಟಗಾರರು ತಮ್ಮಲ್ಲಿ ಗೋಡೌನ್ ಹೊಂದಿರಲಿಲ್ಲ. ಹೀಗಾಗಿ ಮೀಶೋ ಮೂಲಕ ಆನ್ ಲೈನ್ ಗೋಡೌನ್ ಮಾಡಿಕೊಂಡು ಯಶಸ್ವಿಯಾಗಿದ್ದರು. ಸಣ್ಣ ಉದ್ಯಮಗಳ ಕ್ಷೇತ್ರದಲ್ಲಿ ಮೀಶೋ ಪ್ರಸಿದ್ದಿ ಪಡೆಯಲು ಇದೂ ಒಂದು ಕಾರಣವಾಯಿತು.

ಟೈಯರ್ 2 ನಗರಗಳಲ್ಲಿ ಉತ್ತಮ ಪ್ರಸಿದ್ದಿ ಪಡೆದ ಮೀಶೋ 2021ರಲ್ಲಿ ಯುನಿಕಾರ್ನ್ ಕ್ಲಬ್ ಸೇರಿತು. (ಯುನಿಕಾರ್ನ್ ಕ್ಲಬ್ ಅಂದರೆ ಒಂದು ಬಿಲಿಯನ್ ಡಾಲರ್ ಗಿಂತ ಹೆಚ್ಚಿನ ಮೌಲ್ಯ ಹೊಂದಿದ ಸ್ಟಾರ್ಟಪ್ ಗಳು) ಸದ್ಯ ತನ್ನೊಳಗೆ ನೂರು ಮಿಲಿಯನ್ ಸಣ್ಣ ವ್ಯವಹಾರಗಳಿಗೆ ಜಾಗ ನೀಡಲು ಯೋಚಿಸುತ್ತಿರುವ ಮೀಶೋ ಕೋಟ್ಯಾಂತ ರೂಪಾಯಿ ವ್ಯವಹಾರ ನಡೆಸುತ್ತಿದೆ. 2015ರ ಅದೊಂದು ದಿನ ಹುಟ್ಟಿದ ಆಕಾಂಕ್ಷೆಯಿಂದ ಫಶ್ ನಿಯರ್ ಆರಂಭವಾಯ್ತು. ಅಲ್ಲಿಂದ ಅಂಗಡಿಯಾತನ ಮಾತು ಕೇಳಿ ಅದರ ದಿಕ್ಕೇ ಬದಲಾಯಿತು. ಒಂದು ಐಡಿಯಾ ಇಂದು ಕೋಟ್ಯಾಂತರ ರೂಪಾಯಿ ಬೆಲೆಬಾಳುತ್ತಿದೆ.

ಕೀರ್ತನ್ ಶೆಟ್ಟಿ ಬೋಳ

Advertisement

Udayavani is now on Telegram. Click here to join our channel and stay updated with the latest news.

Next