Advertisement

ಪ್ರಾಮಾಣಿಕ ಇಚ್ಛಾಶಕ್ತಿ ಅಗತ್ಯ

06:00 AM Nov 05, 2018 | |

ಕರಾವಳಿ ಸೇರಿದಂತೆ ರಾಜ್ಯಾದ್ಯಂತ ಮರಳಿನ ಕೊರತೆ ಹಾಹಾಕಾರ ಸೃಷ್ಟಿಸಿದೆ. ಇದು ಆಡಳಿತಾರೂಢರಿಗೆ ಎಷ್ಟು ನಿದ್ದೆಗೆಡಿಸಬೇಕಿತ್ತೋ ಅಷ್ಟನ್ನು ಕೆಡಿಸಿಲ್ಲ, ಕಾರ್ಮಿಕರು, ಮರಳು ಬಳಕೆದಾರರಿಗೆ ಮಾತ್ರ ಸಾಕಷ್ಟು ನಿದ್ದೆಗೆಡಿಸಿದೆ ಎನ್ನುವುದು ಕಂಡುಬರುತ್ತಿದೆ.
 
ಕೆಲವು ವರ್ಷಗಳಿಂದ ಎದ್ದಿರುವ ಮರಳು ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸಲು ಸರಕಾರ ವಿಫ‌ಲವಾಗಿದೆ ಎಂದು ಹೇಳಬಹುದು. ಬಡವರು, ಮಧ್ಯಮ ವರ್ಗದವರು ಮನೆ ಕಟ್ಟಲು ಹೊರಟರೆ ಅವರಿಗೆ ಮರಳು ಸಿಗುತ್ತಿಲ್ಲ, ಒಂದು ವೇಳೆ ಮರಳುಗಾರಿಕೆಗೆ ಅವಕಾಶ ನೀಡಿದರೆ ಅವ್ಯಾಹತವಾಗಿ ಮರಳು ತೆಗೆದು ಪ್ರಾಕೃತಿಕ ಸಂಪತ್ತನ್ನು ಲೂಟಿ ಮಾಡುವವರೂ ಸಾಕಷ್ಟಿದ್ದಾರೆ. ಅಗತ್ಯವಿದ್ದ ವರಿಗೆ ಅಗತ್ಯದಷ್ಟು ಮರಳು ಸಿಗಬೇಕಾಗುವಂತೆ ನೋಡಿಕೊಳ್ಳುವುದು, ಕಾನೂನುಬಾಹಿರವಾಗಿ ಮರಳು ಖಾಲಿ ಮಾಡುವವರನ್ನು ದಂಡಿಸುವುದು ಎರಡೂ ಸರಕಾರದ ಮುಖ್ಯ ಕರ್ತವ್ಯ. ಈಗ ಇವೆರಡೂ ಆಗಬೇಕಾದ ಪ್ರಮಾಣದಲ್ಲಿ ಆಗುತ್ತಿಲ್ಲ. ಇದಕ್ಕೆ ನೇರ ಹೊಣೆ ಸರಕಾರ. 

Advertisement

ಕಾನೂನುಬಾಹಿರವಾಗಿ ಮರಳುಗಾರಿಕೆ ಮಾಡುತ್ತಿದ್ದವರನ್ನು ಪತ್ತೆ ಹಚ್ಚಲು ಹೋದಾಗ ಜಿಲ್ಲಾಧಿಕಾರಿಯವರ ಮೇಲೆಯೇ ಹಲ್ಲೆ ನಡೆಸಿದ ಘಟನೆ ವರ್ಷದ ಹಿಂದೆ ಉಡುಪಿ ಜಿಲ್ಲೆಯಲ್ಲಿ ನಡೆದಿತ್ತು. ಅಕ್ರಮಗಳ ವಿರುದ್ಧ ಮಾತನಾಡಲು ಹೋದಾಗ ಅಕ್ರಮ ಚಟುವಟಿಕೆ ನಡೆಸುವವರು ಯಾವ ರೀತಿ ವರ್ತಿಸುತ್ತಿದ್ದಾರೆ? ಎಷ್ಟೋ ಬಾರಿ ಪ್ರಭಾವೀ ಜನಪ್ರತಿನಿಧಿಗಳು ಇಂತಹ ಲಾಬಿಗಳ ಹಿಂದೆ ಇರುತ್ತಾರೆನ್ನುವುದೂ ಜಗಜ್ಜಾಹೀರು ವಿಷಯ. ಹೀಗಾದರೆ ಸಾಮಾನ್ಯ ಮನುಷ್ಯರ ಪಾಡು ಏನು ಎಂಬುದಕ್ಕೆ ಈ ಘಟನೆ ಸಾಕ್ಷಿ. 

ಅವ್ಯಾಹತವಾಗಿ ನಡೆಯುತ್ತಿದ್ದ ಮರಳುಗಾರಿಕೆ ವಿರುದ್ಧ ಚೆನ್ನೈ ಹಸಿರು ಪೀಠದಲ್ಲಿ ಮೇಲ್ಮನವಿ ಸಲ್ಲಿಸಿದಾಗ ಅದನ್ನು ಸಮರ್ಥವಾಗಿ ಇದಿರಿಸುವಲ್ಲಿಯೂ ಮರಳು ಗುತ್ತಿಗೆದಾರರು ಹಿಂದೆ ಬಿದ್ದಿದ್ದಾರೆಂದರೆ ತಪ್ಪಾಗದು. ಜಿಲ್ಲಾಡಳಿತದ ಪಾತ್ರವೂ ಇಲ್ಲಿದೆ. ಇವರೆಲ್ಲರೂ ಒಟ್ಟಾರೆ ಅವರವರ ಪಾತ್ರಗಳನ್ನು ನಿರ್ವಹಿಸಲು ವಿಫ‌ಲವಾದ ಪರಿಣಾಮವೇ ಉಡುಪಿಯಲ್ಲಿ ವಾರ ಕಾಲ ಮರಳಿಗಾಗಿ ಪ್ರತಿಭಟನೆ ನಡೆಸುವಂತಾಯಿತು. ಜನಪ್ರತಿನಿಧಿಗಳು ಸತ್ಯಾಗ್ರಹ ಕಟ್ಟೆಯಲ್ಲಿಯೇ ಮಲಗಿ, ಊಟ ಮಾಡಿದರು. ಅಕ್ರಮ ಮರಳುಗಾರಿಕೆ ತಡೆಯಬೇಕೆಂಬ ಕಾರಣಕ್ಕೆ ಅಗತ್ಯದವರಿಗೆ ಮರಳು ಸಿಗದಂತಾಗುವುದು ಎಷ್ಟು ಸರಿ? 

ಮರಳನ್ನು ಅವ್ಯಾಹತವಾಗಿ ಲೂಟಿ ಮಾಡಿದರೆ ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂಬುದು ಸತ್ಯವಾದರೂ ಮರಳನ್ನು ತೆಗೆಯದೆ ಇದ್ದರೆ ಅದೂ ಸಹ ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂಬುದೂ ಸತ್ಯವೇ. ಕೇರಳದಲ್ಲಿ ಪ್ರಾಕೃತಿಕ ವಿಕೋಪ ಇತ್ತೀಚಿಗೆ ನಡೆಯಲು ನದಿ ಪಾತ್ರಗಳಲ್ಲಿ ಹೂಳು ತುಂಬಿದ್ದೇ ಕಾರಣ ಎನ್ನಲಾಗುತ್ತಿದೆ. ನದಿ ಪಾತ್ರಗಳಲ್ಲಿ ಹೂಳು ತುಂಬಿದರೆ ನೀರು ಸಂಗ್ರಹವಾಗಲು ತಡೆಯಾಗಿ ನೀರು ಇಂಗದೆ, ಹೊರಗೆ ಹರಿದುದು ದುಷ್ಪರಿಣಾಮ ಬೀರಿತು. ಹೀಗಾಗಿ ಎರಡೂ ರೀತಿಯ ಅಸಮತೋಲನವನ್ನು ಸಮದೃಷ್ಟಿಯಿಂದ ಕಂಡುಕೊಂಡು ಸರಕಾರ ಸುಸ್ಥಿರ ಅಭಿವೃದ್ಧಿಗೆ ಬೇಕಾದ ಕ್ರಮ ವಹಿಸಬೇಕು. 

ಕರಾವಳಿ ಪ್ರದೇಶದಲ್ಲಿ ನಾನ್‌ ಸಿಆರ್‌ಝೆಡ್‌ ಪ್ರದೇಶಗಳ ಮರಳಿಗಿಂತ ಸಿಆರ್‌ಝೆಡ್‌ ಪ್ರದೇಶದಲ್ಲಿ ಸಿಗುವ ಮರಳೇ ಅಧಿಕ. ನಾನ್‌ ಸಿಆರ್‌ಝೆಡ್‌ ಪ್ರದೇಶದಲ್ಲಿರುವ ಸಮಸ್ಯೆಯನ್ನು ಬಗೆಹರಿಸುವುದಾಗಿ ರಾಜ್ಯ ಗಣಿ ಇಲಾಖೆ ಭರವಸೆ ನೀಡಿದೆ. ನಾನ್‌ಸಿಆರ್‌ಝೆಡ್‌ ಪ್ರದೇಶದ ವ್ಯಾಪ್ತಿ ರಾಜ್ಯ ಸರಕಾರದ ಸುಪರ್ದಿಯಲ್ಲಿದ್ದರೆ ಸಿಆರ್‌ಝೆಡ್‌ ಪ್ರದೇಶ ಕೇಂದ್ರ ಸರಕಾರದ ಅಂಗಣದಲ್ಲಿದೆ. ಸಿಆರ್‌ಝೆಡ್‌ ಪ್ರದೇಶದಲ್ಲಿ ಮರಳುಗಾರಿಕೆ ನಡೆಸಲು ಬೇಕಾದ ಕ್ರಮಗಳ ಬಗ್ಗೆ ಜನಪ್ರತಿನಿಧಿಗಳು ಕೇಂದ್ರವನ್ನು ಸಂಪರ್ಕಿಸಿದ್ದಾರೆ. ಸಿಆರ್‌ಝೆಡ್‌ ಪ್ರದೇಶದ ಸಮಸ್ಯೆ ಬಗೆಹರಿಯಲು ಇನ್ನಷ್ಟು ಕಾಲಾವಕಾಶದ ಅವಶ್ಯಕತೆ ಇದೆ. ಈಗ ಹಿಂದಿನ ಗುತ್ತಿಗೆದಾರರಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಕಾನೂನಿನ ಪ್ರಕ್ರಿಯೆಗಳನ್ನು ತುರ್ತಾಗಿ ಬಗೆಹರಿಸಿ  ಕೈಗೆಟಕುವ ದರದಲ್ಲಿ ಮರಳು ದೊರಕುವಂತೆ ಮಾಡಿ ಅಕ್ರಮಕ್ಕೆ ಕಡಿವಾಣ ಹಾಕಬೇಕು.
 
ಇತ್ತೀಚಿಗೆ ರಾಷ್ಟ್ರೀಯ ಹೆದ್ದಾರಿಗಿಂತ 500 ಮೀ. ವರೆಗೆ ಮದ್ಯದಂಗಡಿ ಇರಬಾರದು ಎಂದು ಸರ್ವೋಚ್ಚ ನ್ಯಾಯಾಲಯ ತೀರ್ಪು ನೀಡಿತು. ಆದರೆ ಕೆಲವೇ ತಿಂಗಳುಗಳಲ್ಲಿ ಹಿಂದಿನ ಸ್ಥಿತಿಯೇ ಸೃಷ್ಟಿಯಾಯಿತು. ರಾ.ಹೆ. ಬದಿಯ ಮದ್ಯದಂಗಡಿಗಳಿಂದ ಹಾನಿ ಇದೆಯೋ ಇಲ್ಲವೋ ಎನ್ನುವುದು ಪ್ರತ್ಯೇಕ ವಿಷಯ. ಆದರೆ ಮದ್ಯ ಮಾರಾಟಗಾರರ ಸಂಘದವರು ಸೂಕ್ತ ನ್ಯಾಯವಾದಿಗಳ ಮೂಲಕ ಸಮರ್ಥವಾಗಿ ವಾದ ಮಂಡಿಸಿದ್ದು ಯಥಾಸ್ಥಿತಿಗೆ ಬರಲು ಮುಖ್ಯ ಕಾರಣ. ಇದೇ ವೇಳೆ ನ್ಯಾಯಾಲಯದ ತೀರ್ಪು ಹೊರಬಂದು, ಮತ್ತೆ ಯಥಾಸ್ಥಿತಿ ಬರುವವರೆಗೆ ಇರುವ ಕಾನೂನಿನ ವ್ಯಾಪ್ತಿಯಲ್ಲಿಯೇ ಎಷ್ಟೋ ಮದ್ಯದಂಗಡಿಗಳು ವ್ಯಾಪಾರ ನಡೆಸಿದ್ದನ್ನು ನೋಡಿದರೆ ಜಿಲ್ಲಾಡಳಿತಕ್ಕೆ ಮನಸ್ಸಿದ್ದರೆ ಏನೂ ಮಾಡಬಹುದು ಎಂಬುದಕ್ಕೆ ಉದಾಹರಣೆಯಷ್ಟೆ. ಕಾನೂನು ನಮಗೆ ಬೇಕಾದರೆ ಒಂದು ರೀತಿಯಲ್ಲಿ, ಬೇಡವಾದರೆ ಮತ್ತೂಂದು ರೀತಿ ಕಾಣುತ್ತದೆ. ಮರಳು ವಿಚಾರದಲ್ಲಿಯೂ ಸಾಮಾನ್ಯ ಜನರಿಗೆ ಮರಳು ದೊರಕುವಂತೆ ಮಾಡಲು ಮತ್ತು ದುರುಪಯೋಗವಾಗದಂತೆ ಮಾಡಲು ಇರುವ ಕಾನೂನು ವ್ಯಾಪ್ತಿಯಲ್ಲಿಯೇ ಜಿಲ್ಲಾಡಳಿತ ವ್ಯವಹರಿಸಬಹುದು. ಆ ದೃಷ್ಟಿ ಅಗತ್ಯ. 

Advertisement
Advertisement

Udayavani is now on Telegram. Click here to join our channel and stay updated with the latest news.

Next