Advertisement

ರೈತರಿಗೆ ದುಬಾರಿಯಾದ ಭತ್ತ ಕಟಾವು ಯಂತ್ರ

12:55 PM Dec 13, 2021 | Team Udayavani |

ಮೈಸೂರು: ಸತತ ಮಳೆಯಿಂದ ಈಗಾಗಲೇ ನಷ್ಟ ಅನುಭವಿಸಿರುವ ರೈತರಿಗೆ ಭತ್ತ ಕಟಾವು ಯಂತ್ರಗಳ ಅವೈಜ್ಞಾನಿಕ ಬಾಡಿಗೆ ಮತ್ತಷ್ಟು ಹೊರೆಯಾಗಿ ಪರಿಣಮಿಸಿದ್ದು, ಗಾಯದ ಮೆಲೆ ಬರೆ ಎಳೆದಂತಾಗಿದೆ. ಜಿಲ್ಲೆಯ ವಿವಿಧ ಭಾಗಗಳಲ್ಲಿ ಲಕ್ಷಕ್ಕೂ ಹೆಚ್ಚು ಮಂದಿ ರೈತರು ಭತ್ತ ಬೆಳೆದಿದ್ದು, ಎಲ್ಲೆಡೆ ಕಟಾವಿಗೆ ಬಂದಿದೆ.

Advertisement

ಇದನ್ನೇ ಬಂಡವಾಳ ಮಾಡಿಕೊಂಡ ಜಿಲ್ಲೆಯ ದಲ್ಲಾಳಿಗಳು ಹೊರ ರಾಜ್ಯದಿಂದ ಭತ್ತ ಕಟಾವು ಯಂತ್ರಗಳನ್ನು ತಂದು, ತಮಗಿಷ್ಟ ಬಂದಂತೆ ಮನಸೋ ಇಚ್ಛೆ ಬಾಡಿಗೆ ದರ ನಿಗದಿ ಮಾಡುತ್ತಿರುವುದು ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಈಗಾಗಲೇ ನಿರಂತರ ಮಳೆಯಿಂದ ಅರ್ಧದಷ್ಟು ಬೆಳೆ ಹಾನಿಯಾಗಿ ನಷ್ಟದಲ್ಲಿರುವ ರೈತರು ಉಳಿದ ಅಲ್ಪ-ಸ್ವಲ್ಪ ಭತ್ತವನ್ನಾದರೂ ಮನೆಗೆ ಕೊಂಡೊಯ್ಯುವ ನಿರೀಕ್ಷೆಯಲ್ಲಿದ್ದರು.

ಆದರೆ, ಕಳೆದ ನಾಲ್ಕೈದು ದಿನಗಳಿಂದ ಜಿಲ್ಲೆಯಲ್ಲಿ ಮತ್ತೆ ಮೋಡ ಮುಸುಕಿದ ವಾತಾವರಣ ಸೃಷ್ಟಿಯಾಗಿರುವುದರಿಂದ ಭತ್ತವನ್ನು ಆದಷ್ಟು ಬೇಗ ಕಟಾವು ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ಮಧ್ಯವರ್ತಿಗಳ ಹಾವಳಿ: ಬೇಡಿಕೆ ಹೆಚ್ಚಿದಂತೆ ಸುಲಿಗೆಯೂ ಹೆಚ್ಚು: ಮತ್ತೆ ಮಳೆ ಬಂದರೆ ಈಗ ಉಳಿದಿರುವ ಬೆಳೆಯೂ ಕೈಗೆ ಸಿಗುವುದಿಲ್ಲ ಎಂಬ ಆತಂಕದಲ್ಲಿರುವ ರೈತರು ಆದಷ್ಟು ಬೇಗ ಭತ್ತ ಕಟಾವು ಮಾಡಿಸಲು ಮುಂದಾಗಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಮಧ್ಯವರ್ತಿಗಳು ತಮಗೆ ತೋಚಿದಷ್ಟು ಬಾಡಿಗೆ ನಿಗದಿ ಮಾಡುತ್ತಿದ್ದಾರೆ. ಹಣ ಇದ್ದವರು ಮಧ್ಯವರ್ತಿಗಳು ಹೇಳಿದಷ್ಟು ಹಣ ನೀಡಿ ಭತ್ತ ಕಟಾವು ಮಾಡಿಸಿದರೆ ಬಡ, ರೈತರು ಸಾಲ ಮಾಡಿ ಭತ್ತ ಕಟಾವು ಮಾಡಿಸುವಂತ ಪರಿಸ್ಥಿತಿ ನಿರ್ಮಾಣ ವಾಗಿದೆ.

ಇದನ್ನೂ ಓದಿ;- ಮತಾಂತರ ನಿಷೇಧ ಕಾಯ್ದೆ ಕುರಿತು ಸಚಿವ ಸುನೀಲ್ ಕುಮಾರ್ ಹೇಳಿದ್ದೇನು

Advertisement

ಮಧ್ಯವರ್ತಿಗಳ ಹಾವಳಿಯಿಂದ ರೈತ ಕಂಗಾಲಾಗಿದ್ದಾನೆ. ಜಿಲ್ಲೆಗೆ ಲಗ್ಗೆ ಇಟ್ಟ ಯಂತ್ರಗಳು ಈಗಾಗಲೇ ಉತ್ತರ ಕರ್ನಾಟಕ ಮತ್ತು ನೆರೆಯ ತಮಿಳುನಾಡಿನಿಂದ ನೂರಕ್ಕೂ ಹೆಚ್ಚು ಭತ್ತ ಕಟಾವು ಯಂತ್ರಗಳು ಮಧ್ಯವರ್ತಿಗಳ ಮೂಲಕ ಜಿಲ್ಲೆಗೆ ಲಗ್ಗೆ ಇಟ್ಟಿದ್ದು, ಭತ್ತ ಕಟಾವು ಮಾಡುವಲ್ಲಿ ನಿರತವಾಗಿವೆ. ಯಂತ್ರದ ಮಾಲಿಕ ದಿನಕ್ಕೆ ಇಂತಿಷ್ಟು ಬಾಡಿಗೆ ನೀಡುವಂತೆ ಮಧ್ಯವರ್ತಿಗೆ ಯಂತ್ರಗಳನ್ನು ನೀಡಿ ಸುಮ್ಮನಾದರೆ, ಇತ್ತ ಮಧ್ಯವರ್ತಿಗಳು ಭತ್ತ ಕಟಾವು ಮಾಡಲು ಪ್ರತಿ ಗಂಟೆಗೆ 2700 ರೂ. ನಿಂದ 3 ಸಾವಿರ ರೂವರೆಗೆ ಬಾಡಿಗೆ ನಿಗದಿ ಮಾಡಿ ರೈತರಿಂದ ಸುಲಿಗೆಗಿಳಿದಿದ್ದಾರೆ ಎಂದು ರೈತರು ಗೋಳಾಡುತ್ತಿದ್ದಾರೆ.

ಇನ್ನೂ ನಡೆಯದ ಜಿಲ್ಲಾಧಿಕಾರಿ ನೇತೃತ್ವದ ಸಭೆ

ಭತ್ತ ಕಟಾವು ಯಂತ್ರಗಳ ಮಾಲಿಕರು ಮತ್ತು ಮಧ್ಯವರ್ತಿಗಳು ಹೆಚ್ಚು ಬಾಡಿಗೆ ನಿಗದಿ ಮಾಡಿ ರೈತರನ್ನು ಶೋಷಣೆ ಮಾಡುವುದನ್ನು ತಪ್ಪಿಸುವ ಸಲುವಾಗಿ ಪ್ರತಿ ವರ್ಷ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ಆರ್‌ಟಿಒ ಅಧಿಕಾರಿ, ಕೃಷಿ ಇಲಾಖೆ ಜಂಟಿ ಆಯುಕ್ತರು, ತೂಕ ಮತ್ತು ಅಳತೆ ಇಲಾಖೆ ಅಧಿಕಾರಿಗಳು ಹಾಗೂ ಎಲ್ಲಾ ತಾಲೂಕುಗಳ ತಹಶೀಲ್ದಾರ್‌ಗಳೊಂದಿಗೆ ಸಭೆ ನಡೆಸಿ ಗಂಟೆ ಅಥವಾ ಎಕರೆಗೆ ಇಂತಿಷ್ಟು ಬಾಡಿಗೆ ಎಂದು ನಿಗದಿ ಮಾಡಲಾಗುತ್ತಿತ್ತು.

ಆದರೆ ಈ ವರ್ಷ ಭತ್ತ ಕಟಾವಿಗೆ ಬಂದು ಒಂದು ತಿಂಗಳಾದರೂ ಜಿಲ್ಲೆಯಲ್ಲಿ ಭತ್ತ ಕಟಾವು ಮಾಡುವ ಯಂತ್ರಗಳ ಬಾಡಿಗೆ ನಿಗದಿ ಮಾಡಲು ಸಭೆಯೇ ನಡೆದಿಲ್ಲ. ಜಿಲ್ಲೆಯಲ್ಲಿ ಒಂದು ಲಕ್ಷ ಹೆಕ್ಟೇರ್‌ನಲ್ಲಿ ಸುಮಾರು 1.50 ಲಕ್ಷ ಮಂದಿ ರೈತರು ಭತ್ತ ಬೆಳೆದಿದ್ದು, ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ಅಂದಾಜು 124.66 ಹೆಕ್ಟೇರ್‌ನಷ್ಟು ಭತ್ತ ಹಾನಿಯಾಗಿದೆ. ಉಳಿದ ಅಲ್ಪ-ಸ್ವಲ್ಪ ಭತ್ತವನ್ನು ಕಟಾವು ಮಾಡಲು ರೈತರು ಮುಂದಾದರೆ ಮಧ್ಯವರ್ತಿಗಳ ಅವೈಜ್ಞಾನಿಕ ಬಾಡಿಗೆ ದರ ನಿಗದಿ ಗಾಯದ ಮೇಲೆ ಬರೆ ಎಳೆದಂತಾಗಿದೆ.

“ಈಗಾಗಲೇ ಜಿಲ್ಲೆಯಲ್ಲಿ ಭತ್ತ ಕಟಾವಿಗೆ ಬಂದಿದೆ. ಕೆಲವೆಡೆ ಯಂತ್ರಗಳ ಮೂಲಕ ಭತ್ತ ಕಟಾವು ಮಾಡಲು ದುಬಾರಿ ಬಾಡಿಗೆ ಕೇಳುತ್ತಿರುವ ಬಗ್ಗೆ ದೂರು ಬಂದಿದೆ. ಚುನಾವಣೆ ಹಿನ್ನೆಲೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆದಿಲ್ಲ. ಶೀಘ್ರವೇ ಸಭೆ ನಡೆಯಲಿದ್ದು, ಯಂತ್ರಗಳಿಗೆ ಇಂತಿಷ್ಟು ಬಾಡಿಗೆ ಎಂದು ನಿಗದಿ ಮಾಡಲಾಗುತ್ತದೆ.” ಮಹಂತೇಶಪ್ಪ, ಜಂಟಿ ಆಯುಕ್ತರು

ಕೃಷಿ ಇಲಾಖೆ

“ಜಿಲ್ಲೆಯಲ್ಲಿ ಮಧ್ಯವರ್ತಿಗಳ ಹಾವಳಿಯಿಂದಾಗಿ ಯಂತ್ರಗಳ ಮೂಲಕ ಭತ್ತ ಕಟಾವು ಮಾಡಿಸಲು ರೈತರು ಕಷ್ಟ ಪಡಬೇಕಾಗಿದೆ. ಭತ್ತ ಕಟಾವಿಗೆ ಬಂದು ಒಂದು ತಿಂಗಳಾದರೂ ಇನ್ನೂ ಬಾಡಿಗೆ ನಿಗದಿಯಾಗಿಲ್ಲ. ಜಿಲ್ಲಾಧಿಕಾರಿಗಳು ಶೀಘ್ರವೇ ಅಧಿಕಾರಿಗಳ ಸಭೆ ಕರೆದು ಬಾಡಿಗೆ ದರ ನಿಗದಿ ಮಾಡಬೇಕು.” ಅತ್ತಹಳ್ಳಿ ದೇವರಾಜು, ರಾಜ್ಯ ಕಬ್ಬು ಬೆಳೆಗಾರರ ಸಂಘ.

Advertisement

Udayavani is now on Telegram. Click here to join our channel and stay updated with the latest news.

Next