Advertisement

Karnataka: ಮೇಲ್ಮನೆಯಲ್ಲೂ ನಡೆಯದ ಕಲಾಪ

11:00 PM Jul 04, 2023 | Team Udayavani |

ಬೆಂಗಳೂರು: ಸರಕಾರದ ಗ್ಯಾರಂಟಿ ಯೋಜನೆಗಳ ಸಮರ್ಪಕ ಜಾರಿಗೆ ಸಂಬಂಧಿಸಿದಂತೆ ನಿಲುವಳಿ ಸೂಚಿಸುವ ವಿಚಾರಕ್ಕೆ ವಿಪಕ್ಷ ಮತ್ತು ಆಡಳಿತ ಪಕ್ಷದ ಸದಸ್ಯರ ನಡುವಿನ ಹಗ್ಗಜಗ್ಗಾಟದಿಂದ ಇಡೀ ದಿನದ ಸದನ ಬಲಿಯಾಯಿತು.

Advertisement

ಬೆಳಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ ವಿಪಕ್ಷ ಬಿಜೆಪಿ ಸದಸ್ಯರು ಸರಕಾರವು ಘೋಷಿಸಿದ ಗ್ಯಾರಂಟಿ ಯೋಜನೆಗಳನ್ನು ಷರತ್ತುಗಳನ್ನು ವಿಧಿಸದೆ ಯಥಾವತ್ತಾಗಿ ಜಾರಿಗೊಳಿಸುವ ಸಂಬಂಧ ನಿಲುವಳಿ ಸೂಚನೆ ಮಂಡಿಸಲು ಅವಕಾಶ ಕೋರಿದರು. ಇದಕ್ಕೆ ಆಕ್ಷೇಪಿಸಿದ ಆಡಳಿತ ಪಕ್ಷದ ಸದಸ್ಯರು, ನಿಯಮದ ಪ್ರಕಾರ ಪ್ರಶ್ನೋತ್ತರ ಮತ್ತು ಶೂನ್ಯ ವೇಳೆ ನಂತರವೇ ಕೈಗೆತ್ತಿಕೊಳ್ಳಬೇಕೆಂದು ಪಟ್ಟುಹಿಡಿದರು. ಇದು ತೀವ್ರ ವಾಗ್ವಾದಕ್ಕೆ ಎಡೆಮಾಡಿಕೊಟ್ಟಿತು. ನಂತರ ಇಬ್ಬರೂ ಪಟ್ಟು ಸಡಿಲಿಸದ ಹಿನ್ನೆಲೆಯಲ್ಲಿ ಉಪಸಭಾಪತಿ ಪ್ರಾಣೇಶ್‌ ಸದನವನ್ನು ಸತತ ಐದು ಬಾರಿ ಮುಂದೂಡಿದ ಪ್ರಸಂಗ ನಡೆಯಿತು.

ಇದಕ್ಕೂ ಮುನ್ನ ನೂತನ ಸಚಿವರ ಪರಿಚಯ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಪ್ರಶ್ನೋತ್ತರ ತೆಗೆದುಕೊಳ್ಳಲು ಉಪಸಭಾಪತಿಗಳು ಮುಂದಾದರು. ಆಗ ಬಿಜೆಪಿ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಐದು ಗ್ಯಾರಂಟಿಗಳಿಗೆ ಸಂಬಂಧಿಸಿದಂತೆ ನಿಲುವಳಿ ಸೂಚನೆಗೆ ಅವಕಾಶ ಕೋರಿದರು. ಇದನ್ನು ಆಕ್ಷೇಪಿಸಿದ ಸಚಿವ ಕೃಷ್ಣ ಬೈರೇಗೌಡ, ವಿಧಾನ ಪರಿಷತ್ತಿನ ಕಾರ್ಯವಿಧಾನ ಮತ್ತು ನಡಾವಳಿ ಪ್ರಕಾರ ಪ್ರಶ್ನೋತ್ತರ ಮತ್ತು ಶೂನ್ಯ ವೇಳೆ ನಂತರವಷ್ಟೇ ನಿಲುವಳಿ ಸೂಚನೆಗೆ ಅವಕಾಶ ಇದೆ. ನಿಯಮಗಳನ್ನು ಗಾಳಿಗೆ ತೂರಬಾರದು.

ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಬಾರದು’ ಎಂದು ಪೀಠಕ್ಕೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಉಪ ಸಭಾಪತಿಗಳು, ಪ್ರಶ್ನೋತ್ತರ ಮತ್ತು ಶೂನ್ಯವೇಳೆ ನಂತರವಷ್ಟೇ ನಿಲುವಳಿ ಸೂಚನೆ ಮಂಡಿಸಬಹುದು. ಅಷ್ಟಕ್ಕೂ ಪ್ರಸ್ತಾವನೆಯಲ್ಲಿ ಒಂದಕ್ಕೆ ಅವಕಾಶ ಇರುತ್ತದೆ. ಆದರೆ, ಐದು ಅಂಶಗಳನ್ನು ಪ್ರಸ್ತಾಪಿಸಲಾಗಿದೆ’ ಎಂದರು.

ಮೋಸ ನಿಲ್ಲಿಸಿ… ಬಿಜೆಪಿ ಪ್ರತಿಭಟನೆ
ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಜನರು ಅನುಭವಿಸುತ್ತಿರುವ ತೊಂದರೆಗಳಿಗೆ ನೇರವಾಗಿ ಸಂಬಂಧಿಸಿದ ತುರ್ತು ವಿಷಯ ಇದಾಗಿರುವುದರಿಂದ ಪ್ರಸ್ತಾಪಿಸಲು ಅವಕಾಶ ಕಲ್ಪಿಸಬೇಕು. ಈ ಕುರಿತು ಪ್ರತಿಭಟನೆಗಳು ಕೂಡ ನಡೆಯುತ್ತಿವೆ. ವಿಶೇಷ ಪ್ರಕರಣವೆಂದು ಪರಿಗಣಿಸುವಂತೆ’ ಮನವಿ ಮಾಡಿದರು. ಇದಕ್ಕೆ ಅವಕಾಶ ನೀಡದಿದ್ದಾಗ, ಬಿಜೆಪಿ ಸದಸ್ಯರು ಬಾವಿಗಿಳಿದು ಸರಕಾರದ ವಿರುದ್ಧ ನಿಲ್ಲಿಸಿ ನಿಲ್ಲಿಸಿ…ಮೋಸ ನಿಲ್ಲಿಸಿ….’ ಎಂದು ಘೋಷಣೆ ಕೂಗಿದರು.

Advertisement

ಸದನ ಮುಂದೂಡಿಕೆ
ಈ ವೇಳೆ ಆಡಳಿತ ಪಕ್ಷದ ಸದಸ್ಯರು, ವಿಪಕ್ಷದ ನಾಯಕನನ್ನು ಆಯ್ಕೆ ಮಾಡುವ ಅರ್ಹತೆ ಇಲ್ಲದ ನಿಮಗೆ ಪ್ರತಿಭಟನೆ ಮಾಡುವ ನೈತಿಕತೆಯೂ ಇಲ್ಲ’ ಎಂದು ತಿರುಗೇಟು ನೀಡಿದರು. ಆಗ ಗೊಂದಲ ಸೃಷ್ಟಿಯಾಯಿತು. ಮನವೊಲಿಕೆಗೆ ಯತ್ನಿಸಿದರೂ ವಾಗ್ವಾದ ಮಂದುವರಿಯಿತು. ಅನಿವಾರ್ಯವಾಗಿ ಸದನವನ್ನು ಮುಂದೂಡಲಾಯಿತು.

ಮುನ್ಸಿಪಾಲಿಟಿ ಮಾಡಿದರೆ ಹೇಗೆ?
ಬಿಜೆಪಿ ಸದಸ್ಯರು ಸದನದ ಬಾವಿಯೊಳಗಿದ್ದುಕೊಂಡೆ ಮಾತನಾಡುವುದು, ಘೋಷಣೆ ಕೂಗುವುದನ್ನು ಮಾಡುತ್ತಿದ್ದರೆ, ಕೆಲವು ಕಾಂಗ್ರೆಸ್‌ ಸದಸ್ಯರೂ ಸಹ ಅದಕ್ಕೆ ತಿರುಗೇಟು ನೀಡುತ್ತಿದ್ದರು. ಇದನ್ನು ಗಮನಿಸಿದ ಸಭಾಪತಿ ಬಸವರಾಜ ಹೊರಟ್ಟಿ, ಇದು ಹಿರಿಯರ ಮನೆ, ಚಿಂತಕರ ಚಾವಡಿ, ಇದನ್ನು ಮುನ್ಸಿಪಾಲಿಟಿ ಮಾಡಿದರೆ ಹೇಗೇ ಎಂದು ಸದಸ್ಯರಿಗೆ ಚಾಟಿ ಬೀಸಿದರು.

Advertisement

Udayavani is now on Telegram. Click here to join our channel and stay updated with the latest news.

Next